ಸಂತಶ್ರೇಷ್ಠ ಯತಿವರೇಣ್ಯ ಪೇಜಾವರ ಶ್ರೀಗಳು ಶ್ರೀಕೃಷ್ಣ ಪಾದದಲ್ಲಿ ಲೀನ
ಉಡುಪಿ: ಮಧ್ವಮತ ಪ್ರತಿಷ್ಠಾಪನಾಚಾರ್ಯ ಆಚಾರ್ಯ ಮಧ್ವರಿಂದ ಸ್ಥಾಪಿಸಲ್ಪಟ್ಟ ಉಡುಪಿಯ
ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಅಧೋಕ್ಷಜ ಮಠದ 32ನೇ ಸ್ವಾಮೀಜಿ – ಸಂತಶ್ರೇಷ್ಠ
, ಮಾಧ್ವಮತಪ್ರಚಾರಕ, ಹಿಂದೂ ಕುಲ ತಿಲಕ, ಅಪ್ರತಿಮ ಜ್ಞಾನಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಕೆಲದಿನಗಳ ತೀವ್ರ ಅನಾರೋಗ್ಯದ ಬಳಿಕ 2019 ಡಿಸೆಂಬರ್ 29ರ ಭಾನುವಾರ ಶ್ರೀಕೃಷ್ಣ ಪಾದವನ್ನು ಸೇರಿದರು.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಈದಿನ ಬೆಳಗ್ಗೆ 9.20ಕ್ಕೆ ಕೊನೆಯುಸಿರೆಳೆದರು. ಧಾರ್ಮಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಾಮಾಜಿಕ, ರಾಜಕೀಯ ಚಟುವಟಿಕೆಗಳಿಗೂ ಪ್ರತಿಕ್ರಿಯಿಸುತ್ತ, ಎಲ್ಲ ರಂಗದಲ್ಲೂ ಸಕ್ರಿಯರಾಗಿದ್ದ ಪೇಜಾವರ ಶ್ರೀಗಳು ದೇಶಾದ್ಯಂತ ಪರಿಚಿತರಾಗಿದ್ದವರು.
ವರ್ಷ ಬದುಕಿದ ಪೇಜಾವರ ಶ್ರೀಗಳು ತಮ್ಮ ಜೀವನದ ಅಂತಿಮ ದಿನಗಳಲ್ಲೂ ಲವಲವಿಕೆಯ ಬದುಕು ನಡೆಸಿದ್ದು ವಿಶೇಷ. ದೈಹಿಕವಾಗಿ ಅವರು ಸಕ್ರಿಯರಾಗಿದ್ದರು. ದಿನನಿತ್ಯ ಪೂಜೆ, ಪ್ರಾರ್ಥನೆ, ಜಪ ತಪಗಳ ಜೊತೆಗೆ ವ್ಯಾಯಾಮ, ಯೋಗ, ಪ್ರಾಣಾಯಾಮಗಳನ್ನೂ ಅವರು ತಪ್ಪದೇ ಮಾಡುತ್ತಿದ್ದರು.
ಮಲೆನಾಡಿನ ನಕ್ಸಲ್ ಪೀಡಿತ ಗ್ರಾಮಗಳು ಹಾಗೂ ಅಭಿವೃದ್ಧಿ ಕಾಣದೇ ಇರುವ ಕುಗ್ರಾಮಗಳ ಅಭಿವೃದ್ಧಿಯ ಕನಸು ಕಂಡಿದ್ದ ಶ್ರೀಗಳು ಮಲೆನಾಡಿನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.
ಕಟ್ಟಾ
ಹಿಂದುತ್ವವಾದಿಯಾಗಿದ್ದ ಶ್ರೀಗಳು ತಮ್ಮ ಕಾರುಚಾಲಕನಾಗಿ ಮುಸ್ಲಿಮ್ ಬಂಧುಗಳನ್ನು
ಇಟ್ಟುಕೊಂಡಿದ್ದರು. ಅವರ ಕುಟುಂಬ ಸದಸ್ಯರ ಕ್ಷೇಮವನ್ನು ಅತ್ಯಂತ ಆತ್ಮೀಯತೆಯಿಂದ
ನೋಡಿಕೊಂಡಿದ್ದರು. ವಿಶ್ವ ಹಿಂದೂ ಪರಿಷತ್ತಿನ ಮಾರ್ಗದರ್ಶಕರಲ್ಲಿ ಒಬ್ಬರಾಗಿದ್ದ ಪೇಜಾವರ
ಶ್ರೀಗಳಿಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂಬುದು ಜೀವಮಾನದ ಕನಸಾಗಿತ್ತು.
ಅಷ್ಟಮಠಗಳ ಯತಿ ಪರಂಪರೆಯಲ್ಲಿ ಸದ್ಯದ ಮಟ್ಟಿಗೆ ಅತ್ಯಂತ ಹಿರಿಯ ಯತಿಯಾಗಿರುವ ವಿಶ್ವೇಶ ತೀರ್ಥರಿಗೆ 89 ವರ್ಷ ವಯಸ್ಸಾಗಿತ್ತು. ಶ್ರೀಗಳ ನಿರ್ಗಮನದೊಂದಿಗೆ ಸುದೀರ್ಘ ಇತಿಹಾಸವನ್ನು ಹೊಂದಿರುವ ಉಡುಪಿ ಅಷ್ಟಮಠಗಳ ಯತಿಪರಂಪರೆಯಲ್ಲಿನ ಮಹಾನ್ ಕೊಂಡಿಯೊಂದು ಕಳಚಿಬಿದ್ದಂತಾಯಿತು. ಅವರು ಐದು ಬಾರಿ ಪರ್ಯಾಯ ಪೀಠವನ್ನು ಏರಿ ಶ್ರೀಕೃಷ್ಣನ ಪೂಜಾ ಕೈಂಕರ್ಯ
ನೆರವೇರಿಸಿದ್ದರು.
ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಪೇಜಾವರ ಹಿರಿಯ ಶ್ರೀಗಳನ್ನು ಡಿಸೆಂಬರ್ 20ರಂದು ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ಶ್ರೀಗಳ ಆರೋಗ್ಯ ಪರಿಸ್ಥಿತಿ ವಿಷಮಿಸಿದ ಕಾರಣ ಕೆ.ಎಂ.ಸಿ.ಯ ಉನ್ನತ ವೈದ್ಯರ ತಂಡ ಅವರ ಆರೈಕೆಗೆ ನಿಂತಿತ್ತು. ತಪಾಸಣೆಯಲ್ಲಿ ಪೇಜಾವರ ಹಿರಿಯ ಶ್ರೀಗಳಿಗೆ ನ್ಯುಮೋನಿಯಾ ಸಮಸ್ಯೆ ಪತ್ತೆಯಾದ ಕಾರಣ ಕೃತಕ ಉಸಿರಾಟ ವ್ಯವಸ್ಥೆ ಹಾಗೂ ಆ್ಯಂಟಿಬಯೋಟಿಕ್ ಚಿಕಿತ್ಸೆ ಪ್ರಾರಂಭಿಸಲಾಗಿತ್ತು.
ಸ್ವಾಮೀಜಿಯವರು ಆಸ್ಪತ್ರೆಗೆ ದಾಖಲುಗೊಂಡ ದಿನದಿಂದ ಇಂದಿನವರೆಗೆ ಕೆ.ಎಂ.ಸಿ. ಆಸ್ಪತ್ರೆಯು ಪ್ರತೀದಿನ ಅವರ ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ ‘ಹೆಲ್ತ್ ಬುಲೆಟಿನ್’ ಪ್ರಕಟಿಸುತ್ತಿತ್ತು.
ಆದರೆ ಶ್ರೀಗಳ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬರದ ಹಿನ್ನಲೆಯಲ್ಲಿ ಅವರ ಇಚ್ಛೆಯಂತೆ ಈದಿನ ಮುಂಜಾನೆ ಮಠಕ್ಕೆ ಸ್ಥಳಾಂತರ ಮಾಡಲಾಗಿತ್ತು. ವೆಂಟಿಲೇಟರ್ ಸಹಿತವಾಗಿ ಆಂಬ್ಯುಲೆನ್ಸ್ ಮೂಲಕ ಬಿಗು ಭದ್ರತೆಯಲ್ಲಿ ಮಠಕ್ಕೆ ಕರೆತರಲಾಗಿತ್ತು. ಮಠದಲ್ಲಿಯೂ ವೆಂಟಿಲೇಟರ್ ಮೂಲಕ ಚಿಕತ್ಸೆ ಮುಂದುವರೆದಿತ್ತು.
ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಶ್ರೀಗಳಿಗೆ ಸುಮಾರು ಒಂದು ತಿಂಗಳುಗಳ ಕಾಲ ಚಿಕಿತ್ಸೆ ನೀಡಬೇಕಾಗುವ ಸಾಧ್ಯತೆಯ ಕುರಿತಾಗಿಯೂ ಸಹ ಕೆಂ.ಎಂ.ಸಿ. ವೈದ್ಯರ ತಂಡ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿತ್ತು. ಬೆಂಗಳೂರಿನ ತಜ್ಞ ವೈದ್ಯರ ತಂಡವೂ ಚಿಕಿತ್ಸೆ ನೀಡಿತ್ತು.ನವದೆಹಲಿಯ ಏಮ್ಸ್ ನ ವೈದ್ಯರ ತಂಡ ನಿರಂತರ ಸಂಪರ್ಕದಲ್ಲಿದ್ದು, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ವೈದ್ಯರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದರು.
ಪೇಜಾವರ ಹಿರಿಯ ಶ್ರೀಗಳು ಆಸ್ಪತ್ರೆಗೆ ದಾಖಲಾಗಿರುವ ವಿಷಯ ತಿಳಿಯುತ್ತಿದ್ದಂತೆಯೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ, ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವಾರು ಗಣ್ಯರು ಕರೆಮಾಡಿ ಶ್ರೀಗಳ ಆರೋಗ್ಯವನ್ನು ವಿಚಾರಿಸಿದ್ದರು.
ಇನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ, ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ, ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೋ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮಾಜೀ ಗೃಹಸಚಿವ ಎಂ.ಬಿ. ಪಾಟೀಲ್, ಶಾಸಕ ಜಮೀರ್ ಅಹಮ್ಮದ್, ಐವನ್ ಡಿಸೋಜಾ, ಯು.ಟಿ, ಖಾದರ್, ಗೋವಿಂದ ಕಾರಜೋಳ, ಆಸ್ಕರ್ ಫೆರ್ನಾಂಡೀಸ್, ಉದ್ಯಮಿ ನೀರಾ ರಾಡಿಯಾ, ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧಿಪತಿಗಳು, ರಾಜಕಾರಣಿಗಳು ಮತ್ತು ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ಕುರಿತಾದ ಖುದ್ದು ಮಾಹಿತಿಯನ್ನು ಪಡೆದುಕೊಂಡಿದ್ದರು.
ವಿಶ್ವೇಶತೀರ್ಥರಿಂದ ಸನ್ಯಾಸ ದೀಕ್ಷೆಯನ್ನು ಪಡೆದುಕೊಂಡಿದ್ದ ಮಧ್ಯಪ್ರದೇಶದ ಮಾಜೀ ಮುಖ್ಯಮಂತ್ರಿ, ಮಾಜೀ ಕೇಂದ್ರ ಸಚಿವೆ ಉಮಾಭಾರತಿ ಅವರು ಆಸ್ಪತ್ರೆಯಲ್ಲಿ ಶ್ರೀಗಳನ್ನು ಭೇಟಿಯಾದ ಬಳಿಕ ಉಡುಪಿಯಲ್ಲೇ ಇದ್ದರು. ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥರು ಉಡುಪಿಯಲ್ಲಿರುವ ತಮ್ಮ ಮಠದಲ್ಲೇ ಮೊಕ್ಕಾ ಹೂಡಿ ಪೇಜಾವರ ಶ್ರೀಗಳ ಆರೋಗ್ಯ ಸುಧಾರಣೆಗಾಗಿ ವಿಶೇಷ ಪೂಜೆ ಪ್ರಾರ್ಥನೆಯಲ್ಲಿ ನಿರತರಾಗಿದ್ದರು.
ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮುಖ್ಯಮಂತ್ರಿ
ಯಡಿಯೂರಪ್ಪ ಸೇರಿದಂತೆ ಸರ್ವ ಕ್ಷೇತ್ರಗಳ ಗಣ್ಯರು ಪೇಜಾವರ ಶ್ರೀಗಳ ಗುಣಗಾನ ಮಾಡಿ ತಮ್ಮ ಶ್ರದ್ಧಾಂಜಲಿ
ಸಲ್ಲಿಸಿದರು.
No comments:
Post a Comment