Sunday, December 8, 2019

’ನ್ಯಾಯವು ಸೇಡಿನ ರೂಪ ಪಡೆಯಬಾರದು: ಸಿಜೆಐ ಎಸ್‌ಎ ಬೋಬ್ಡೆ

ನ್ಯಾಯವು ಸೇಡಿನ ರೂಪ ಪಡೆಯಬಾರದು:
  ಸಿಜೆಐ ಶರತ್ ಅರವಿಂದ ಬೋಬ್ಡೆ
ನವದೆಹಲಿ: ನ್ಯಾಯವು ಎಂದಿಗೂ ಸೇಡಿನ ರೂಪವನ್ನು ಪಡೆಯಬಾರದು. ಪ್ರತೀಕಾರವಾದಾಗ ನ್ಯಾಯ ತನ್ನ ಚಾರಿತ್ರ್ಯವನ್ನು ಕಳೆದುಕೊಳ್ಳುತ್ತದೆ.  ಪ್ರತೀಕಾರವನ್ನು ನ್ಯಾಯ ಎಂಬುದಾಗಿ ತಪ್ಪಾಗಿ ಭಾವಿಸಿಕೊಳ್ಳಬಾರದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಶರತ್ ಅರವಿಂದ ಬೋಬ್ಡೆ ಅವರು 2019 ಡಿಸೆಂಬರ್ 07ರ ಶನಿವಾರ ಹೇಳಿದರು.

ತೆಲಂಗಾಣದಲ್ಲಿ
ಪಶುವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕಿಚ್ಚಿಟ್ಟು ಜೀವಂತ ದಹಿಸಿದ್ದ ನಾಲ್ವರು ಅತ್ಯಾಚಾರ ಆರೋಪಿಗಳನ್ನು ಪೊಲೀಸರು ಶುಕ್ರವಾರ ನಸುಕಿನಲ್ಲಿ ಎನ್ಕೌಂಟರಿನಲ್ಲಿ ಗುಂಡಿಟ್ಟು ಕೊಂದು ಹಾಕಿದ ಒಂದು ದಿನದ ಬಳಿಕ ರಾಜಸ್ಥಾನ ಹೈಕೋರ್ಟಿನ ಸಮಾರಂಭ ಒಂದರಲ್ಲಿ ನ್ಯಾಯಮೂರ್ತಿ ಬೋಬ್ಡೆ ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.

ಕ್ರಿಮಿನಲ್ ವಿಷಯಗಳನ್ನು ಇತ್ಯರ್ಥ ಪಡಿಸುವ ಬಗೆಗಿನ ತನ್ನ ಧೋರಣೆಯಲ್ಲಿನ ಶಿಥಿಲತೆಯನ್ನು ನ್ಯಾಯ ವ್ಯವಸ್ಥೆಯು ಪುನರ್ ಪರಿಶೀಲಿಸಬೇಕು. ಬದಲಾವಣೆಗಳು ಮತ್ತು ಗ್ರಹಿಕೆ ಬಗ್ಗೆ ನ್ಯಾಯಾಂಗ ಅರಿವು ಹೊಂದಿರಬೇಕು ಎಂದು ಸಿಜೆಐ ನುಡಿದರು.

ದೇಶದಲ್ಲಿನ ಇತ್ತೀಚಿನ ಘಟನೆಗಳು ಹಳೆಯ ಚರ್ಚೆಯನ್ನೇ ಹೊಸ ಚೈತನ್ಯದೊಂದಿಗೆ ಮುಂಚೂಣಿಗೆ ತಂದಿವೆ. ಅಪರಾಧ ನ್ಯಾಯ ವ್ಯವಸ್ಥೆಯು ತನ್ನ ಕಟ್ಟುನಿಟ್ಟು ಇಲ್ಲದಿರುವಿಕೆ ಮತ್ತು ವಿಷಯ ಇತ್ಯರ್ಥಗೊಳಿಸುವಲ್ಲಿನ ವಿಳಂಬ ಬಗೆಗಿನ ತನ್ನ ಧೋರಣೆ ಮತ್ತು ಸ್ಥಾನವನ್ನು ಮರುಪರಿಶೀಲಿಸಬೇಕಾಗಿದೆ ಎಂಬುದರಲ್ಲಿ ಸಂಶಯವೇ ಇಲ್ಲಎಂದು ಅವರು ನುಡಿದರು.

ನ್ಯಾಯಾಲಯದಲ್ಲಿ ಇತ್ಯರ್ಥವಾಗದೇ ಬಿದ್ದಿರುವ ಭಾರೀ ಸಂಖ್ಯೆಯ ಪ್ರಕರಣಗಳ ಹಿನ್ನೆಲೆಯಲ್ಲಿ ನ್ಯಾಯಾಂಗವು ಜನರಿಗೆ ನ್ಯಾಯ ಒದಗಿಸಲು ಬದ್ಧವಾಗಬೇಕು, ಅದಕ್ಕಾಗಿ ತನ್ನನ್ನು ತಾನು ಬಲಪಡಿಸಿಕೊಳ್ಳಬೇಕು. ವಿವಾದಗಳನ್ನು ತ್ವರಿತವಾಗಿ, ಸಮಾಧಾನಕರವಾಗಿ ಜನರ ಕೈಗೆ ಎಟಕುವ ರೀತಿಯಲ್ಲಿ ಇತ್ಯರ್ಥ ಪಡಿಸಬೇಕು ಮತ್ತು ಸ್ವಯಂ ಸರಿಪಡಿಸಿಕೊಳ್ಳುವ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ನ್ಯಾಯಮೂರ್ತಿ ಬೋಬ್ಡೆ ಹೇಳಿದರು.

ನ್ಯಾಯವು ಎಂದಿಗೂ ದಿಢೀರ್ ಆಗಿರಲು ಸಾಧ್ಯವಿಲ್ಲ ಮತ್ತು ನ್ಯಾಯವು ಎಂದಿಗೂ ಸೇಡಿನ ರೂಪವನ್ನೂ ಪಡೆಯಬಾರದು. ಪ್ರತೀಕಾರದ ರೂಪ ಪಡೆದಾಗ ನ್ಯಾಯವು ತನ್ನ ವರ್ಚಸ್ಸನ್ನೇ ಕಳೆದುಕೊಳ್ಳುತ್ತದೆ ಎಂಬುದು ನನ್ನ ನಂಬಿಕೆ.  ನ್ಯಾಯಾಂಗವು ಸ್ವಯಂ ಸರಿಪಡಿಸಿಕೊಳ್ಳುವ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ಆದರೆ ಅವುಗಳನ್ನು ಪ್ರಚಾರ ಮಾಡಬೇಕೇ ಎಂಬುದು ಚರ್ಚೆಯ ವಿಷಯಎಂದು ನ್ಯಾಯಮೂರ್ತಿ ಹೇಳಿದರು.

ಖಟ್ಲೆಗೆ ಮುನ್ನ ಸಂಧಾನ ಕಡ್ಡಾಯವಾಗಬೇಕು. ಅದು ಖಟ್ಲೆಗಳನ್ನೇ ನಿವಾರಣೆ ಮಾಡಬಲ್ಲುದು ಎಂದೂ ನ್ಯಾಯಮೂರ್ತಿ ಬೋಬ್ಡೆ ಸಲಹೆ ಮಾಡಿದರು.

ಖಟ್ಲೆಗಳನ್ನು ತ್ವರಿತಗೊಳಿಸುವುದಕ್ಕೆ ಮಾತ್ರವೇ ಅಲ್ಲ ಅದನ್ನು ತಡೆಯಲೂ ನಾವು ಮಾರ್ಗ ಹುಡುಕಬೇಕು. ಖಟ್ಲೆಗೆ ಮೊದಲಿನ ಸಂಧಾನ ಅವಕಾಶ ಕಲ್ಪಿಸುವ ಕಾನೂನುಗಳು ಇವೆಎಂದು ಅವರು ಹೇಳಿದರು.

ಕಳೆದ ತಿಂಗಳು ಸಿಜೆಐ ಆಗಿ ಅಧಿಕಾರ ವಹಿಸಿಕೊಂಡ ನ್ಯಾಯಮೂರ್ತಿ ಬೋಬ್ಡೆ ಅವರು ಕಳೆದ ವರ್ಷ ಸುಪ್ರೀಂಕೋರ್ಟಿನ ಇತರ ನಾಲ್ವರು ಹಿರಿಯ ನ್ಯಾಯಮೂರ್ತಿಗಳ ಜೊತೆಗೆ ಅಭೂತಪೂರ್ವ ಪತ್ರಿಕಾಗೋಷ್ಠಿ ನಡೆಸಿ ಎಲ್ಲರ ಹುಬ್ಬೇರಿಸಿದ್ದರು.  ೨೦೧೮ರ ಜನವರಿ ೧೨ರಂದು ನ್ಯಾಯಮೂರ್ತಿಗಳಾದ ಜೆ. ಚೆಲಮೇಶ್ವರ್, ರಂಜನ್ ಗೊಗೋಯಿ, ಎಂ.ಬಿ. ಲೋಕೂರ್ ಮತ್ತು ಕುರಿಯನ್ ಜೋಸೆಫ್ ಅವರ ಜೊತೆಗೆ ನಡೆಸಿದ್ದ ಪತ್ರಿಕಾಗೋಷ್ಠಿಯನ್ನು ನ್ಯಾಯಮೂರ್ತಿ ಬೋಬ್ಡೆಸ್ವಯಂ ತಿದ್ದಿಕೊಳ್ಳುವ ಕ್ರಮಎಂಬುದಾಗಿ ಬಣ್ಣಿಸಿದರು.

ಸುಪ್ರೀಂಕೋರ್ಟಿನಲ್ಲಿ ಪರಿಸ್ಥಿತಿ ಸುವ್ಯವಸ್ಥಿತವಾಗಿಲ್ಲ. ನಡೆಯಬಾರದಂತಹ ಹಲವಾರು ಘಟನೆಗಳು ನಡೆದಿವೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಬಳಿಕ ಅದೇ ವರ್ಷ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರ ಉತ್ತರಾಧಿಕಾರಿ ಸ್ಥಾನಕ್ಕೆ ಏರಿದ್ದರು.

ಸಂಸ್ಥೆಯು (ನ್ಯಾಯಾಂಗ) ತನ್ನನ್ನು  ತಾನು ತಿದ್ದಿಕೊಳ್ಳಬೇಕು. ಅತ್ಯಂತ ಟೀಕೆಗೆ ಒಳಗಾಗಿದ್ದ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಸಂಸ್ಥೆ ಅದನ್ನು ಮಾಡಿತ್ತು ಎಂಬುದು ನನ್ನ ನಂಬಿಕೆ. ಅದು ಸ್ವಯಂ ತಿದ್ದಿಕೊಳ್ಳುವ ಕ್ರಮಕ್ಕಿಂತ ದೊಡ್ಡದೇನಲ್ಲ. ನಾನು ಅದನ್ನು ಸಮರ್ಥಿಸಿಕೊಳ್ಳಲು ಬಯಸುವುದಿಲ್ಲಎಂದ ನ್ಯಾಯಮೂರ್ತಿ ಬೋಬ್ಡೆ ಹೇಳಿದರು.

ಹೈದರಾಬಾದಿನಿಂದ ೫೦ ಕಿಮೀ ದೂರದ ಛತ್ತನಪಲ್ಲಿಗೆ ೨೦ರಿಂದ ೨೬ರ ಹರೆಯದ ಅತ್ಯಾಚಾರಿ ಕೊಲೆ ಆರೋಪಿಗಳನ್ನು  ತನಿಖೆಯ ಭಾಗವಾಗಿ ಅಪರಾಧದ ಮರುಸೃಷ್ಟಿ ಸಲುವಾಗಿ ಶುಕ್ರವಾರ ನಸುಕಿನಲ್ಲಿ ಕರೆದೊಯ್ದಿದ್ದುದಾಗಿ ಪೊಲೀಸರು ಹೇಳಿದ್ದರು.

ಮುಖ್ಯ ಆರೋಪಿಗಳಾದ ಮೊಹಮ್ಮದ್ ಆರಿಫ್ (೨೬), ಚೆನ್ನಕೇಶವಲು, ಜೊಲ್ಲು ಶಿವ ಮತ್ತು ಜೊಲ್ಲು ನವೀನ್ (ಎಲ್ಲರಿಗೂ ೨೦ ವರ್ಷ) ಅವರ ಕೈಗಳಿಗೆ ಘಟನೆ ಸಂಭವಿಸಿದ ವೇಳೆಯಲ್ಲಿ ಕೋಳ ಹಾಕಿರಲಿಲ್ಲಎಂದು ಪೊಲೀಸರು ಹೇಳಿದ್ದರು.

ಆರೋಪಿಗಳ ಪೈಕಿ ಇಬ್ಬರು ಪೊಲೀಸರ ಶಸ್ತ್ರಾಸ್ತ್ರಗಳನ್ನೇ ಕಸಿದುಕೊಂಡು ಕಲ್ಲೆಸೆತದ ಜೊತೆಗೆ ಗುಂಡನ್ನೂ ಹಾರಿಸಿ, ಸ್ಥಳದಿಂದ ಪರಾರಿಯಾಗಲು ಯತ್ನಿಸಿದಾಗ ತಮ್ಮ ಸಿಬ್ಬಂದಿ ಗುಂಡು ಹಾರಿಸಿದರು ಎಂದು ಸೈಬರಾಬಾದ್ ಪೊಲೀಸ್ ಕಮೀಷನರ್ ಸಿವಿ ಸಜ್ಜನರ ವಿವರಿಸಿದ್ದರು.

ಆರಿಫ್ ಮೊತ್ತ ಮೊದಲಿಗೆ ಗುಂಡು ಹಾರಿಸಿದ, ಬಳಿಕ ಚೆನ್ನಕೇಶವಲು ಆತನನ್ನು ಅನುಸರಿಸಿದ. ಇದರ ಜೊತೆಗೆ ಪೊಲೀಸ್ ತಂಡದ ಮೇಲೆ ಕಲ್ಲು ಮತ್ತು ಬಡಿಗೆಗಳಿಂದ ಹಲ್ಲೆ ನಡೆಸಲಾಯಿತು. ಆರಂಭದಲ್ಲಿ ಸಂಯಮ ವಹಿಸಿ ಶರಣಾಗುವಂತೆ ಮಾಡಿದ ತಮ್ಮ ಆಜ್ಞೆಯನ್ನು ಆರೋಪಿಗಳು ಪಾಲಿಸದೇ ಹಲ್ಲೆ ಮುಂದುವರೆಸಿದಾಗ ಪೊಲೀಸರು ಗುಂಡಿನ ಉತ್ತರ ನೀಡಿದರುಎಂದು ಸಜ್ಜನರ ಹೇಳಿದ್ದರು.

No comments:

Advertisement