ಕೇರಳದ ನರ್ಸ್ ಲಿನಿಗೆ ಮರಣೋತ್ತರ
'ಫ್ಲೋರೆನ್ಸ್ ನೈಟಿಂಗೇಲ್ ಪ್ರಶಸ್ತಿ'
'ಫ್ಲೋರೆನ್ಸ್ ನೈಟಿಂಗೇಲ್ ಪ್ರಶಸ್ತಿ'
ನವದೆಹಲಿ: ಕಳೆದ ವರ್ಷ ನಿಪಾಹ್ ಬಾಧಿತ ರೋಗಿಯೊಬ್ಬರ ಆರೈಕೆ ಸಂದರ್ಭ ಅಕಸ್ಮಾತ್ ಸೋಂಕು ತಗುಲಿ ಮೃತರಾದ ಕೇರಳದ 30 ವರ್ಷದ ನರ್ಸ್ ಲಿನಿ ಪಿಎನ್ಗೆ 2019 ಡಿಸೆಂಬರ್ 05ರ ಗುರುವಾರ 'ಫ್ಲೋರೆನ್ಸ್ ನೈಟಿಂಗೇಲ್ ಪುರಸ್ಕಾರ'ವನ್ನು ಮರಣೋತ್ತರವಾಗಿ ಪ್ರದಾನ ಮಾಡಲಾಯಿತು.
ಶ್ರೇಷ್ಠ ಸೇವೆ ಸಲ್ಲಿಸಿದ ನರ್ಸ್ಗಳ ಕಾರ್ಯವನ್ನು ಗುರುತಿಸಿ ಗೌರವಿಸುವ ನಿಟ್ಟಿನಲ್ಲಿ 1973ರಲ್ಲಿ ಭಾರತ ಸರ್ಕಾರವು ‘ಫ್ಲೋರೆನ್ಸ್ ನೈಟಿಂಗೇಲ್ ಪ್ರಶಸ್ತಿ'ಯನ್ನು ಸ್ಥಾಪಿಸಿದ್ದು ದೆಹಲಿಯಲ್ಲಿ ಈದಿನ ನಡೆದ ಕಾರ್ಯಕ್ರಮದಲ್ಲಿ ಲಿಲಿಯ ಪತಿ ಸಜೀಶ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪುರಸ್ಕಾರ ಪ್ರದಾನ ಮಾಡಿದರು. ಜೊತೆಗೆ, ಇತರ 35 ನರ್ಸ್ಗಳಿಗೂ ಪುರಸ್ಕಾರ ಪ್ರದಾನ ಮಾಡಲಾಯಿತು.
ಗುಣಮಟ್ಟದ ಆರೋಗ್ಯ ಸೇವೆ ಜನರಿಗೆ ತಲುಪುವ ನಿಟ್ಟಿನಲ್ಲಿ ನರ್ಸ್ಗಳು ನಿರ್ವಹಿಸುತ್ತಿರುವ ಕಾರ್ಯ ಶ್ಲಾಘನಾರ್ಹವಾಗಿದೆ.ಆರೋಗ್ಯ ಸೇವೆಯ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸುತ್ತಿರುವ ನರ್ಸ್ಗಳು ಹಾಗೂ ಇಂದಿನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದ ಎಲ್ಲಾ ನರ್ಸ್ಗಳೂ ಅಭಿನಂದನೆಗೆ ಅರ್ಹರಾಗಿದ್ದಾರೆ ಎಂದು ರಾಷ್ಟ್ರಪತಿ ಕೋವಿಂದ್ ಶ್ಲಾಘಿಸಿದರು.
2018ರಲ್ಲಿ
ನಿಫಾ ಕಾಯಿಲೆ ಉಲ್ಬಣಗೊಂಡಿದ್ದ ಸಂದರ್ಭ ಕೇರಳದ ಪೆರಂಬ್ರದಲ್ಲಿನ ಇಎಂಎಸ್ ಸ್ಮಾರಕ ಸಹಕಾರಿ ಆಸ್ಪತ್ರೆಯಲ್ಲಿ ನಿಪಾಹ್ ವೈರಸ್ ಸೋಂಕು ಹೊಂದಿದ್ದ ರೋಗಿಯೊಬ್ಬರ ಆರೈಕೆ ಸಂದರ್ಭ ನರ್ಸ್ ಲಿನಿಗೆ ಸೋಂಕು ತಗುಲಿತ್ತು. ಬಳಿಕ ಅವರನ್ನು ಕೋಯಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಮೇ 21ರಂದು ಮೃತರಾಗಿದ್ದರು. ನರ್ಸ್ ಲಿನಿಯ ಸ್ಮರಣಾರ್ಥ ಕೇರಳ ಸರ್ಕಾರ ಅವರ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ಸ್ಥಾಪಿಸಿದೆ.
No comments:
Post a Comment