Monday, December 9, 2019

ದೆಹಲಿ ಅನಾಜ್ ಮಂಡಿ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅನಾಹುತ: ೪೩ ಸಾವು

ದೆಹಲಿ ಅನಾಜ್ ಮಂಡಿ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅನಾಹುತ: ೪೩ ಸಾವು
ನವದೆಹಲಿ: ರಾಜಧಾನಿ ದೆಹಲಿಯ ರಾಣಿ ಝಾನ್ಸಿ ರಸ್ತೆಯ ಅನಾಜ್ ಮಂಡಿಯಲ್ಲಿ ಅಕ್ರಮ ಕಾರ್ಖಾನೆಗಳು ಇದ್ದ  ನಾಲ್ಕಂತಸ್ತಿನ ಕಟ್ಟಡದಲ್ಲಿ 2019 ಡಿಸೆಂಬರ್ 08ರ ಭಾನುವಾರ ನಸುಕಿನಲ್ಲಿ ಸಂಭವಿಸಿದ ಭಾರೀ ಅಗ್ನಿ ದುರಂತದಲ್ಲಿ ಕನಿಷ್ಠ ೪೩ ಮಂದಿ ಸಾವನ್ನಪ್ಪಿದ್ದು, ಇತರ ಹಲವರು ಗಾಯಗೊಂಡರು.

೧೯೯೭ರಲ್ಲಿ ದೆಹಲಿಯ ಉಪಾಹಾರ ಥಿಯೇಟರಿನಲ್ಲಿ ಬಾಲಿವುಡ್ ಚಿತ್ರ ಪದರ್ಶನ ಕಾಲದಲ್ಲಿ ೫೯ ಮಂದಿಯನ್ನು ಬಲಿತೆಗೆದುಕೊಂಡು ೧೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದ ಭೀಕರ ಅಗ್ನಿ ದುರಂತದ ಬಳಿಕ ದೆಹಲಿಯಲ್ಲಿ ಸಂಭವಿಸಿದ ಎರಡನೇ ಭಾರೀ ಅಗ್ನಿ ದುರಂತ ಇದಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ರಾಷ್ಟ್ರೀಯ ದುರಂತ ಸ್ಪಂದನಾ ಪಡೆ ಕೂಡಾ ಸ್ಥಳಕ್ಕೆ ನೆರವಿಗಾಗಿ ಧಾವಿಸಿತು.

ಉತ್ತರ ದೆಹಲಿಯಲ್ಲಿ ದುರಂತ ಸಂಭವಿಸಿದ ಕೆಲವು ಗಂಟೆಗಳ ಬಳಿಕ ದೆಹಲಿ ಸರ್ಕಾರವು ಅಗ್ನಿ ದುರಂತದ ಬಗ್ಗೆ ತನಿಖೆಗೆ ಆಜ್ಞಾಪಿಸಿದ್ದು ಏಳು ದಿನಗಳ ಒಳಗಾಗಿ ವಿಸ್ತೃತ ವರದಿ ಸಲ್ಲಿಸುವಂತೆ ಸೂಚಿಸಿದೆ. ಶಾರ್ಟ್ ಸರ್ಕಿಟ್ ನಿಂದ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ಹೇಳಿದವು.

ಇದು ಅತ್ಯಂತ ದುಃಖದ ಘಟನೆ. ನಾನು ಮ್ಯಾಜಿಸ್ಟ್ರೇಟ್ ತನಿಖೆಗೆ ಆಜ್ಞಾಪಿಸಿದ್ದೇನೆ. ಮೃತರ ಕುಟುಂಬಗಳಿಗೆ ತಲಾ ೧೦ ಲಕ್ಷ ರೂಪಾಯಿಗಳ ಪರಿಹಾರ ನೀಡಲಾಗುವುದು ಮತ್ತು ಗಾಯಾಳುಗಳು ತಲಾ ಲಕ್ಷ ರೂಪಾಯಿಗಳ ಪರಿಹಾರ ನೀಡಲಾಗುವುದು. ಗಾಯಾಳುಗಳ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದುರಂತ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಹೇಳಿದರು.

ಪ್ರಧಾನಿ ಮೋದಿ ಸಂತಾಪ: ಅಗ್ನಿ ದುರಂತವನ್ನು ಪ್ರಧಾನಿ ನರೇಂದ್ರ ಮೋದಿಭಯಾನಕಎಂಬುದಾಗಿ ಬಣ್ಣಿಸಿದ್ದಾರೆ. ’ದೆಹಲಿಯ ರಾಣಿ ಝಾನ್ಸಿ ರಸ್ತೆಯ ಅನಾಜ್ ಮಂಡಿಯಲ್ಲಿ ಸಂಭವಿಸಿದ ಅಗ್ನಿ ದುರಂತ ಅತ್ಯಂತ ಭಯಾನಕ. ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳ ಜೊತೆಗೆ ನಾನು ಇದ್ದೇನೆ. ಗಾಯಾಳುಗಳು ಶೀಘ್ರ ಚೇತರಿಸಲಿ ಎಂದು ಹಾರೈಸುವೆ. ಅಧಿಕಾರಿಗಳು ಸಾಧ್ಯವಿರುವ ಎಲ್ಲ ನೆರವುಗಳನ್ನೂ ನೀಡುತ್ತಿದ್ದಾರೆಎಂದು ಟ್ವೀಟ್ ಮಾಡಿದರು.

ಎಲ್ಲ ಅಗತ್ಯ ನೆರವನ್ನು ತ್ವರಿತವಾಗಿ ನೀಡುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ದುರಂತದಲ್ಲಿ ಮೃತರಾದವರ ಕುಟುಂಬಕ್ಕೆ ತಲಾ ಲಕ್ಷ ರೂಪಾಯಿಗಳ ಎಕ್ಸ್ಗ್ರೇಷಿಯಾ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ೫೦,೦೦೦ ರೂಪಾಯಿಗಳ ನೆರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಪರಿಹಾರ ನಿಧಿಯಿಂದ  ಮಂಜೂರು ಮಾಡಿದ್ದಾರೆ ಎಂದು ಪ್ರಧಾನ ಮಂತ್ರಿಯವರ ಕಚೇರಿಯ ಟ್ವೀಟ್ ತಿಳಿಸಿತು.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ದುರಂತದಲ್ಲಿ ಮೃತರಾದ ರಾಜ್ಯದ ವ್ಯಕ್ತಿಗಳ ಕುಟುಂಬಗಳಿಗೆ ತಲಾ ಲಕ್ಷ ರೂಪಾಯಿಗಳ  ಎಕ್ಸ್ ಗ್ರೇಷಿಯಾ ಪ್ರಕಟಿಸಿದರು.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ, ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್  ಅವರು ದುರಂತದಲ್ಲಿ ಸಂಭವಿಸಿದ ಪ್ರಾಣಹಾನಿಗಾಗಿ ಸಂತಾಪ ವ್ಯಕ್ತ ಪಡಿಸಿದರು. ಕೇಂದ್ರ ಸಚಿವರಾದ ಹರದೀಪ್ ಸಿಂಗ್ ಪುರಿ, ಅನುರಾಗ್ ಠಾಕೂರ್, ಬಿಜೆಪಿ ಸಂಸದರಾದ ಮನೋಜ್ ತಿವಾರಿ ಮತ್ತು ವಿಜಯ್ ಗೋಯೆಲ್ ದುರಂತ ಸ್ಥಳಕ್ಕೆ ಭೇಟಿ ನೀಡಿದವರಲ್ಲಿ ಸೇರಿದ್ದರು.


ಅಗ್ನಿ ಅನಾಹುತದಲ್ಲಿ ಕಟ್ಟಡದ ಮೂರನೇ ಮಹಡಿ ಸಂಪೂರ್ಣ ಭಸ್ಮವಾಗಿದೆ. ಎರಡನೇ ಮಹಡಿಗೂ ತೀವ್ರವಾಗಿ ಹಾನಿಗೊಂಡಿದೆ. ಮೇಲಿನ ಮಹಡಿಗಳ ಹಾನಿಗೆ ಹೋಲಿಸಿದರೆ, ಮೊದಲ ಮಹಡಿಗೆ ಕಡಿಮೆ ಹಾನಿಯಾಗಿದೆ.

ಪ್ರತಿಯೊಂದು ಮಹಡಿಯಲ್ಲೂ - ಕೊಠಡಿಗಳಿದ್ದವು. ನೆಲಮಹಡಿಯಲ್ಲಿ ಪ್ಲಾಸ್ಟಿಕ್ ಆಟಿಕೆಗಳನ್ನು ತಯಾರಿಸುವ ಕಾರ್ಖಾನೆ ಇದ್ದರೆ, ಮೊದಲ ಮಹಡಿಯಲ್ಲಿ ಕಾರ್ಡ್ಬೋರ್ಡ್ ತಯಾರಿ ಘಟಕ ಇತ್ತು. ಎರಡನೇ ಮಹಡಿಯಲ್ಲಿ ಉಡುಪು ತಯಾರಿ ಘಟಕವಿತ್ತು. ಮೂರನೇ ಮಹಡಿಯಲ್ಲಿ ಜಾಕೆಟ್ ತಯಾರಿಸುವ ಕಾರ್ಖಾನೆ ಮತ್ತು ಮುದ್ರಣ ಘಟಕ ಇತ್ತು.

ಶಾರ್ಟ್ ಸರ್ಕಿಟ್ ಅಗ್ನಿ ಅನಾಹುತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಗೆಳು ಸೂಚಿಸುತ್ತಿವೆ. ಕಟ್ಟಡದಲ್ಲಿ ಯಾವುದೇ ಸುರಕ್ಷಾ ಸಾಧನಗಳು ಇರಲಿಲ್ಲ, ಅಥವಾ ಅಗ್ನಿಶಾಮಕ ಉಪಕರಣಗಳು ಇರಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಕಟ್ಟಡದ ಎರಡನೇ ಮಹಡಿಯಲ್ಲಿ ನಸುಕಿನ ಗಂಟೆ ಸುಮಾರಿಗೆ ಅಗ್ನಿ ದುರಂತ ಸಂಭವಿಸಿದಾಗ ಬಹುತೇಕ ಮಂದಿ ಉತ್ಪಾದನಾ ಘಟಕಗಳಲ್ಲಿ ಗಾಢ ನಿದ್ರೆಯಲ್ಲಿದ್ದರು. ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ೩೦ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಗೆ ಇಳಿದವು ಎಂದು ಅಧಿಕಾರಿಗಳು ಹೇಳಿದರು.

ರಕ್ಷಣಾ ಕಾರ್ಯಾಚರಣೆಗೆ ಇಳಿದ ಸುಮಾರು ೧೫೦ ಮಂದಿ ಅಗ್ನಿಶಾಮಕ ಸಿಬ್ಬಂದಿ ೬೩ ಮಂದಿಯನ್ನು ಕಟ್ಟಡದಿಂದ ಹೊರಕ್ಕೆ ತಂದರು. ಅವರ ಪೈಕಿ ೪೩ ಮಂದಿ ಕಾರ್ಮಿಕರು ಸಾವನ್ನಪ್ಪಿದ್ದರು. ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಇತರ ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ನುಡಿದರು.

ಇಕ್ಕಟ್ಟಾದ ಪ್ರದೇಶವಾದ್ದರಿಂದ ರಕ್ಷಣಾ ಕಾರ್ಯಾಚರಣೆ ಅತ್ಯಂತ ಕಷ್ಟದ ಕೆಲಸವಾಗಿತ್ತು. ಅಗ್ನಿಶಾಮಕ ಸಿಬ್ಬಂದಿ ಕಟ್ಟಡದ ಕಿಟಕಿಯ ಸರಳುಗಳನ್ನು ಕತ್ತರಿಸಿ ಒಳಕ್ಕೆ ಪ್ರವೇಶಿಸಬೇಕಾಯಿತು.
೬೦ ಮಂದಿ ನಿದ್ರಿಸುತ್ತಿದ್ದ ಅಂತಸ್ತಿನ ಕಟ್ಟಡದಲ್ಲಿ ನಸುಕಿನ ಗಂಟೆಗೆ ಬೆಂಕಿ ಹೊತ್ತಿಕೊಂಡಿತು. ನಿದ್ರಿಸುತ್ತಿದ್ದ ಬಹುತೇಕ ಮಂದಿ ಕಾಂಟ್ರಾಕ್ಟ್ ಕಾರ್ಮಿಕರು ಮತ್ತು  ಕಾರ್ಖಾನೆ ಕಾರ್ಮಿಕರು . ಎಲ್ಲ ಸಂತ್ರಸ್ಥರೂ ಪುರುಷರುಎಂದು ದೆಹಲಿ ಅಗ್ನಿಶಾಮಕ ಸೇವಾ ನಿರ್ದೇಶಕ ಅತುಲ್ ಗಾರ್ಗ್ ಹೇಳಿದರು.

ಬೆಂಕಿ ಬೃಹತ್ ಗಾತ್ರದಲ್ಲಿತ್ತು. ಅದನ್ನು ನಿಯಂತ್ರಿಲು ೫೦ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಬೇಕಾಯಿತು. ಬಹುತೇಕ ಮಂದಿ ಹೊಗೆಯಿಂದಾಗಿ ಉಸಿರು ಕಟ್ಟಿ ಸಾವನ್ನಪ್ಪಿದ್ದಾರೆ. ಕಟ್ಟಡದ ಒಳಗಿನಿಂದ ಒಟ್ಟು ೬೩ ಮಂದಿಯನ್ನು ನಿರ್ಜೀವ ಅಥವಾ ಸಜೀವ ಸ್ಥಿತಿಯಲ್ಲಿ ಹೊರತರಲಾಯಿತುಎಂದು ಗಾರ್ಗ್ ನುಡಿದರು.

ಬೆಂಕಿಗೆ
ನಿರ್ದಿಷ್ಟ ಕಾರಣ ಏನು ಎಂಬುದನ್ನು ನಾವು ಇನ್ನೂ ಪತ್ತೆ ಹಚ್ಚಬೇಕಾಗಿದೆ. ಕಟ್ಟಡದಲ್ಲಿ ಅಗ್ನಿ ಶಾಮಕ ಸಲಕರಣೆಗಳು ಇದ್ದವೇ ಎಂಬುದು ತನಿಖೆಯ ವಿಷಯ. ಇದು ಅತ್ಯಂತ ಹಳೆಯ ಕಟ್ಟಡವಾಗಿದ್ದು, ಯಾವ ಅನುಮತಿಗಳು ಇರಲಿಲ್ಲ ಎಂದು ಅವರು ಹೇಳಿದರು.

ಕಟ್ಟಡದ ಎರಡು ಮೆಟ್ಟಿಲುಗಳ ಪೈಕಿ ಒಂದನ್ನು ಸಾಮಾನು ಸರಂಜಾಮುಗಳಿಂದ ಬಂದ್ ಮಾಡಲಾಗಿತ್ತು. ಕಟ್ಟದ ಒಳಗೆ ಕೂಡಾ ಬೇಗನೇ ಬೆಂಕಿ ಹೊತ್ತಿಕೊಂಡು ಉರಿಯುವಂತಹ ವಸ್ತುಗಳಿದ್ದವು. ಗಾಳಿಯಾಡಲು ಜಾಗವೇ ಇಲ್ಲದ್ದರಿಂದ ಕಟ್ಟಡಅಗ್ನಿಕೂಪವಾಯಿತು ಎಂದು ಅಧಿಕಾರಿ ಹೇಳಿದರು.

ಸಾವನ್ನಪ್ಪಿದ ಬಹುತೇಕ ಮಂದಿಯನ್ನು ಆಸ್ಪತ್ರೆಗೆ ಒಯ್ದ ಬಳಿಕ ಅಲ್ಲಿ ಮೃತರಾಗಿದ್ದಾರೆ ಎಂದು ಘೋಷಿಸಲಾಯಿತು. ಬಹುತೇಕ ಶವಗಳು ಸುಟ್ಟು ಕರಕಲಾಗಿದ್ದು, ಇನ್ನೂ ಗುರುತು ಪತ್ತೆ ಹಚ್ಚಲಾಗಿಲ್ಲ ಎಂದು ಪೊಲೀಸರು ನುಡಿದರು.

ಸತ್ತವರಲ್ಲಿ ಬಹುತೇಕ ಮಂದಿ ಹೊಗೆ ಸೇವನೆಯಿಂದ  ಮತು ಉಸಿರು ಕಟ್ಟಿ ಸಾವನ್ನಪ್ಪಿದ್ದಾರೆ. ಗಾಯಾಳುಗಳ ಪೈಕಿ ಒಬ್ಬನ ಸ್ಥಿತಿ ಮಾತ್ರ ಗಂಭೀರವಾಗಿದೆ. ಉಳಿದವರ ಮೇಲೆ ನಿಗಾ ಇರಿಸಲಾಗಿದೆ ಎಂದು ಲೋಕನಾಯಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಕಿಶೋರ್ ಸಿಂಗ್ ಹೇಳಿದರು.

ಲೋಕನಾಯಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾದ ೧೫ ಮಂದಿಯ ಪೈಕಿ ಒಬ್ಬ ವ್ಯಕ್ತಿ ಶೇಕಡಾ ೫೦ರಷ್ಟು ಸುಟ್ಟು ಗಾಯಗಳಿಗೆ ಒಳಗಾಗಿದಾನೆ. ಆತನ ಸ್ಥಿತಿ ಚಿಂತಾಜನಕವಾಗಿದೆ. ಇತರರಲ್ಲಿ ಒಂಬತ್ತು ಮಂದಿ ಸುಟ್ಟ ಗಾಯಗಳ ವಾರ್ಡಿನಲ್ಲಿ ಇದ್ದಾರೆ. ಉಳಿದವರಿಗೆ ಹೊಗೆ ಸೇವನೆಯಿಂದ ಗಾಯಗಳಾಗಿದ್ದು, ಸ್ಥಿತಿ ಗಂಭೀರವಿದ್ದರೂ ಆರೋಗ್ಯ ಸ್ಥಿರವಾಗಿದೆ ಎಂದು ಅವರು ನುಡಿದರು.

ಲೇಡಿ ಹಾರ್ಡಿಂಗ್ ಆಸ್ಪತ್ರೆಯಲ್ಲಿ ಮೃತರಾದ ಮಂದಿ ಹೊಗೆ ಸೇವನೆಯಿಂದಾದ ಒಳಗಾಯಗಳ ಪರಿಣಾಮವಾಗಿ ಸಾವನ್ನಪ್ಪಿದ್ದು, ಇಬ್ಬರು ಸುಟ್ಟ ಗಾಯಗಳಿಗೆ ಬಲಿಯಾಗಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಟ್ಟಡ ಮಾಲೀಕನನ್ನು ಬಂಧಿಸಲಾಯಿತು.

No comments:

Advertisement