Friday, December 13, 2019

ಪೌರತ್ವ ವಿವಾದ: ಸುಪ್ರೀಂ ಮೆಟ್ಟಿಲೇರಿದ ಐಯುಎಂಎಲ್

ಪೌರತ್ವ ವಿವಾದ: ಸುಪ್ರೀಂ ಮೆಟ್ಟಿಲೇರಿದ ಐಯುಎಂಎಲ್
ಬಾಂಗ್ಲಾದೇಶದ ಗೃಹ, ವಿದೇಶಾಂಗ ಸಚಿವರ ಭಾರತ ಭೇಟಿ ರದ್ದು
ನವದೆಹಲಿ: ಮುಸ್ಲಿಂ ಬಾಹುಳ್ಯವಿರುವ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನ ದೇಶಗಳಿಂದ ಕಿರುಕುಳದ ಕಾರಣಕ್ಕಾಗಿ ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತೀಯ ಪೌರತ್ವ ಒದಗಿಸುವಪೌರತ್ವ (ತಿದ್ದುಪಡಿ) ಮಸೂದೆಯನ್ನು ಪ್ರಶ್ನಿಸಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್)  2019 ಡಿಸೆಂಬರ್  12ರ ಗುರುವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತು.

ಇದೇ
ವೇಳೆಗೆ ಬಾಂಗ್ಲಾದೇಶದ ಗೃಹ ಸಚಿವ ಆಸಾದುಜ್ಜಾಮಾನ್ ಖಾನ್ ಮತ್ತು  ವಿದೇಶಾಂಗ ಸಚಿವ .ಕೆ.ಅಬ್ದುಲ್ ಮೊಮೆನ್ ತಮ್ಮ ಭಾರತ ಭೇಟಿಯನ್ನು ರದ್ದು ಪಡಿಸಿದರು.
ಪೌರತ್ವ (ತಿದ್ದುಪಡಿ) ಮಸೂದೆಗೆ ಲೋಕಸಭೆಯು ವಿಪಕ್ಷಗಳ ಭಾರೀ ಪ್ರತಿಭಟನೆಯ ಸೋಮವಾರ ತನ್ನ ಅನುಮೋದನೆ ನೀಡಿದ್ದರೆ, ರಾಜ್ಯಸಭೆಯು ಬುಧವಾರ ತನ್ನ ಒಪ್ಪಿಗೆ ನೀಡಿದ್ದು, ಇದರೊಂದಿಗೆ ಸಂಸತ್ತಿನ ಉಭಯ ಸದನಗಳ ಒಪ್ಪಿಗೆ ಲಭಿಸಿದೆ. ರಾಷ್ಟ್ರಪತಿಗಳ ಅಂಕಿತದೊಂದಿಗೆ ಮಸೂದೆ ಶಾಸನವಾಗಿ ಜಾರಿಗೆ ಬರಲಿದೆ.

ಸಂವಿಧಾನವು ನೀಡಿರುವ ಸಮಾನತೆಯ ಮೂಲಭೂತ ಹಕ್ಕನ್ನು ಮಸೂದೆಯು ಉಲ್ಲಂಘಿಸಿದೆ ಎಂದು ಐಯುಎಂಎಲ್ ಸುಪ್ರೀಂಕೋರ್ಟಿಗೆ ಸಲ್ಲಿಸಿದ ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿತು.
ಬಾಂಗ್ಲಾದೇಶದ ವಿದೇಶಾಂಗ ಸಚಿವ ಎಕೆ ಅಬ್ದುಲ್ ಮೊಮೆನ್ ಅವರು ಭಾರತದ ವಿದೇಶಾಂಗ ಸಚಿವಾಲಯವು ಆಯೋಜಿಸಿದ್ದ ದೆಹಲಿ ಮಾತುಕತೆಗೆ ಕೆಲವೇ ಗಂಟೆಗಳ ಮುನ್ನ ಗುರುವಾರ ತಮ್ಮ ಭಾರತ ಭೇಟಿಯನ್ನು ರದ್ದು ಪಡಿಸಿದರು. ಅದಾದ ಕೆಲವು ಗಂಟೆಗಳ ಬಳಿಕ ಬಾಂಗ್ಲಾದೇಶದ ಗೃಹ ಸಚಿವ ಅಸಾದುಜ್ಜಾಮಾನ್ ಖಾನ್ ಅವರು ತಮ್ಮ ಶಿಲ್ಲಾಂಗ್ ಶುಕ್ರವಾರದ ಖಾಸಗಿ ಭೇಟಿಯನ್ನು ರದ್ದು ಪಡಿಸಿರುವುದಾಗಿ ಪ್ರಕಟಿಸಿದರು.

ಕಿರುಕುಳಕ್ಕೆ ಒಳಗಾದ ನೆಲೆಯಲ್ಲಿ ಭಾರತಕ್ಕೆ ವಲಸೆ ಬಂದ ಮೂರು ರಾಷ್ಟ್ರಗಳ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ಕಲ್ಪಿಸುವ ಮಸೂದೆಗೆ ಭಾರತದ ಸಂಸತ್ತು ದಾರಿ ಸುಗಮಗೊಳಿಸಿದ ಒಂದು ದಿನದ ಬಳಿಕ ಬೆಳವಣಿಗೆ ನಡೆದಿದೆ.

ಭೇಟಿಯನ್ನು ಸಧ್ಯಕ್ಕೆ ಮುಂದೂಡಲಾಗಿದೆ. ಭೇಟಿಯ ಹೊಸ ದಿನಾಂಕಗಳನ್ನು ಪ್ರಕಟಿಸಲಾಗಿಲ್ಲಎಂದು ಸುದ್ದಿ ಮೂಲಗಳು ತಿಳಿಸಿದವು.
ವಿದೇಶಾಂಗ ಸಚಿವರ ಯೋಜನೆಗಳ ದಿಢೀರ್ ಬದಲಾವಣೆಗೆ ಕಾರಣವೇನು ಎಂಬದನ್ನು ಬಾಂಗ್ಲಾದೇಶ ಬಹಿರಂಗ ಪಡಿಸಿಲ್ಲ. ಆದರೆ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನ ದೇಶಗಳ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು ಕಾನೂನು ತಿದ್ದುಪಡಿ ಮಾಡುವುದರ ಬಗೆಗಿನ ಸರ್ಕಾರದ ಸಮರ್ಥನೆ ಬಗ್ಗೆ ತನ್ನ ಅತೃಪ್ತಿಯ ಸುಳಿವನ್ನು ಬಾಂಗ್ಲಾದೇಶ ಕಳೆದ ಕೆಲವು ದಿನಗಳಿಂದ ನೀಡುತ್ತಾ ಬಂದಿತ್ತು.

ಹಿಂದುಗಳಿಗೆ ಚಿತ್ರಹಿಂಸೆಯಾಗುತ್ತಿದೆ ಎಂಬುದಾಗಿ ಅವರು ಹೇಳುತ್ತಿರುವ ವಿಚಾರ ಅನಗತ್ಯವಾದದ್ದು ಮತ್ತು ಅಸತ್ಯವಾದದ್ದುಎಂದು ವಿದೇಶಾಂಗ ಸಚಿವ ಮೊಮೆನ್ ಮಂಗಳವಾರ ಹೇಳಿದ್ದರು.


ಉತ್ತಮ ಕೋಮ ಸೌಹಾರ್ದ ಇರುವ ಕೆಲವೇ ರಾಷ್ಟ್ರಗಳು ಜಗತ್ತಿನಲ್ಲಿ ಇವೆ, ಅವುಗಳಲ್ಲಿ ಬಾಂಗ್ಲಾದೇಶವೂ ಒಂದು. ನಮ್ಮಲ್ಲಿ ಅಲ್ಪಸಂಖ್ಯಾತರು ಇಲ್ಲ. ನಾವು ಎಲ್ಲರೂ ಸಮಾನರು.  ಅವರು (ಅಮಿತ್ ಶಾ) ಬಾಂಗ್ಲಾದೇಶದಲ್ಲಿ ಒಂದು ತಿಂಗಳು ವಾಸವಿದ್ದರೆ, ನಮ್ಮ ರಾಷ್ಟ್ರದಲ್ಲಿರುವ ಅಪೂರ್ವ ಕೋಮು ಸೌಹಾರ್ದವನ್ನು ಅವರು ನೋಡಬಲ್ಲರುಎಂದು ಮೊಮೆನ್ ಹೇಳಿದ್ದರು.

ಭಾರತದ ರಾಜಕೀಯ ಭಾಷಣಗಳಲ್ಲಿ ನಿರ್ದಿಷ್ಟವಾಗಿ ಅಕ್ರಮ ವಲಸಿಗರ ಪ್ರಶ್ನೆ ಬಂದಾಗಲೆಲ್ಲ ಬಾಂಗ್ಲಾದೇಶದ ಪ್ರಸ್ತಾಪ ಆಗುತ್ತಿರುತ್ತದೆ. ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆ ಆರಂಭವಾದ ಬಳಿಕ, ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಎಲ್ಲ ನುಸುಳುಕೋರರನ್ನು ಉಚ್ಚಾಟಿಸುವುದಾಗಿ ಪ್ರತಿಜ್ಞೆ ಮಾಡಿದೆ. ಪದವನ್ನು ಪಕ್ಷವು ಸಾಮಾನ್ಯವಾಗಿ ಬಾಂಗ್ಲಾದೇಶದ ಅಕ್ರಮ ವಲಸೆಗಾರರನ್ನು ಉಲ್ಲೇಖಿಸಿ ಹೇಳುತ್ತದೆ.

ಜಾರ್ಖಂಡ್ ಬುಡಕಟ್ಟು ಪ್ರದೇಶದ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡುತ್ತಾ ಗೃಹ ಸಚಿವ ಅಮಿತ್ ಶಾ ಅವರುನಾವು ಎಲ್ಲ ನುಸುಳುಕೋರರನ್ನು ಹೊರದಬ್ಬಬೇಕೇ?’ ಎಂದು ಪ್ರಶ್ನಿಸಿ, ೨೦೨೪ರ ಗಡುವಿನ ಒಳಗೆ ಎಲ್ಲ ನುಸುಳುಕೋರರನ್ನು ಹೊರತಳ್ಳುವುದಾಗಿ ಭರವಸೆ ನೀಡಿದ್ದರು.

ಐಯುಎಂಎಲ್ ಅರ್ಜಿ ಏನು ಹೇಳುತ್ತದೆ?
ರಾಜ್ಯಸಭೆಯು ಬುಧವಾರ ಅಂಗೀಕರಿಸಿದ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಸಂವಿಧಾನದ ೩೨ನೇ ವಿಧಿಯ ಅಡಿಯಲ್ಲಿ ಪ್ರಶ್ನಿಸಿ ಐಯುಎಂಎಲ್ ಸಂಸತ್ ಸದಸ್ಯರಾದ ಪಿ.ಕೆ. ಕುನ್ಹಾಲಿಕುಟ್ಟಿ, ಇಟಿ ಮುಹಮ್ಮದ್ ಬಶೀರ್, ಅಬ್ದುಲ್ ವಹಾಬ್ ಮತ್ತು ಕೆ. ನವಾಸ್ ಕನಿ ಅವರು ಸುಪ್ರೀಂಕೋರ್ಟಿಗೆ ಗುರುವಾರ ಅರ್ಜಿ ಸಲ್ಲಿಸಿದರು.

ವಲಸೆಗಾರರಿಗೆ ಪೌರತ್ವ ನೀಡುವುದನ್ನು ತಾವು ವಿರೋಧಿಸುವುದಿಲ್ಲ, ಆದರೆ ಧರ್ಮದ ಆಧಾರದಲ್ಲಿ ಅಕ್ರಮವಾಗಿ ವರ್ಗೀಕರಿಸಿರುವುದನ್ನು ಮತ್ತು ತಾರತಮ್ಯವನ್ನು ವಿರೋಧಿಸುವುದಾಗಿ ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.

ಅಕ್ರಮ ವಲಸೆಗಾರರು ಎಂಬುದು ಒಂದು ವರ್ಗ, ಆದ್ದರಿಂದ ಅವರಿಗೆ ಅನ್ವಯವಾಗುವ ಯಾವುದೇ ಕಾನೂನು ಯಾವುದೇ ಧರ್ಮ, ಜಾತಿ ಅಥವಾ ರಾಷ್ಟ್ರೀಯತೆಯ ನೆಲೆಗೆ ಅತೀತವಾಗಿ ಅವರೆಲ್ಲರಿಗೂ ಅನ್ವಯಿಸಬೇಕುಎಂದು ವಕೀಲರಾದ ಹ್ಯಾರಿಸ್ ಬೀರನ್ ಮತ್ತು ಪಲ್ಲವಿ ಪ್ರತಾಪ್ ಅವರ ಮೂಲಕ ಸಲ್ಲಿಸಲಾದ ಅರ್ಜಿ ಹೇಳಿದೆ.

ಕಾಯ್ದೆಯಲ್ಲಿ ಮಾಡಲಾಗಿರುವ ಧಾರ್ಮಿಕ ವರ್ಗೀಕರಣವನ್ನು ಯಾವುದೇ ತರ್ಕವಿಲ್ಲದೆ ಮಾಡಲಾಗಿದೆ ಮತ್ತು ಇದು ಸಂವಿಧಾನದ ೧೪ನೇ ವಿಧಿಯನ್ನು ಉಲ್ಲಂಘಿಸುತ್ತದೆ. ಅಲ್ಲದೆ ಎಲ್ಲ ಮತನಂಬಿಕೆಗಳನ್ನೂ ಸಮಾನವಾಗಿ ಕಾಣುವ ಭಾರತದ ಕಲ್ಪನೆಯನ್ನೇ ಉಲ್ಲಂಘಿಸುತ್ತದೆ. ಭಾರತೀಯ ಸಂವಿಧಾನವು ಜನನ ಮತ್ತು ನಂಬಿಕೆಗೆ ಅರ್ಹವಾದ ವಾಸ್ತವ್ಯದ ಮೂಲಕ ಪಡೆಯುವ ಪೌರತ್ವವನ್ನು ಮಾನ್ಯ ಮಾಡುತ್ತದೆ.ಆದರೆ ಸದರಿ ಕಾನೂನು ಪೌರತ್ವಕ್ಕೆ ಧರ್ಮವನ್ನು ಮಾನದಂಡವಾಗಿ ಮಾಡಿದೆ. ಪೌರತ್ವಕ್ಕೆ ಧರ್ಮವನ್ನು ಜೋಡಿಸಿರುವುದು ಸಂವಿಧಾನದ ಮೂಲರಚನೆಯ ಭಾಗವಾಗಿರುವ ಜಾತ್ಯತೀತತೆಗೆ ವಿರುದ್ಧವಾಗಿದೆ ಎಂದು ಅರ್ಜಿ ವಾದಿಸಿದೆ.

ಭಾರತದ ಗಡಿಯಲ್ಲಿನ ಧರ್ಮಾಧಾರಿತ ದೇಶಗಳಲ್ಲಿ ಧಾರ್ಮಿಕ ಕಿರುಕುಳ ಎದುರಿಸುತ್ತಿರುವ ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸುವ ಅಗತ್ಯವಿದೆ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರವು ತಿದ್ದುಪಡಿಯನ್ನು ಸಮರ್ಥಿಸಿದೆ. ಸಮರ್ಥನೆಯನ್ನು ಪ್ರಶ್ನಿಸಿದ ಅರ್ಜಿದಾರರು ಅಧಿಕೃತ ಧರ್ಮಗಳನ್ನು ಹೊಂದಿರುವ ಶ್ರೀಲಂಕಾ ಮತ್ತು ಭೂತಾನ್ ದೇಶವನ್ನು ಕಾನೂನಿನ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ತಿದ್ದುಪಡಿ ಕಾಯ್ದೆಯು ಅಹ್ಮದೀಯರು, ಶಿಯಾಗಳು ಮತ್ತು ಹಝಾರಾಗಳಂತಹ ಅಲ್ಪಸಂಖ್ಯಾತರನ್ನು ಹೊರಗಿಟ್ಟಿದೆ. ಪಂಥದವರು ಆಫ್ಘಾನಿಸ್ಥಾನ ಮತ್ತು ಪಾಕಿಸ್ತಾನದಲ್ಲಿ ಕಿರುಕುಳಕ್ಕೆ ಈಡಾಗುತ್ತಿರುವ  ಸುದೀರ್ಘ ಇತಿಹಾಸವೇ ಇದೆಎಂದು ಅರ್ಜಿ ಹೇಳಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ೨೦೧೯ ಬಹಿರಂಗವಾಗಿಯೇ ಸ್ಪಷ್ಟವಾಗಿ ಮುಸ್ಲಿಮರ ವಿರುದ್ಧ ತಾರತಮ್ಯ ಮಾಡಿದೆ. ಕಾಯ್ದೆಯು ಹಿಂದುಗಳು, ಸಿಕ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತ ಮತಗಳಿಗೆ ಸೇರಿದ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಟ್ಟಿದೆ ಆದರೆ ಅದೇ ಅನುಕೂಲಗಳಿಂದ ಇಸ್ಲಾಮ್ ಧರ್ಮಕ್ಕೆ ಸೇರಿದ ವ್ಯಕ್ತಿಗಳನ್ನು ಹೊರಗಿಟ್ಟಿದೆ. ಧರ್ಮ ಮತ್ತು ವ್ಯಕ್ತಿಯನ್ನು ಆಧರಿಸಿ ತಾರತಮ್ಯ ಎಸಗಿರುವುದರಿಂದ ಇದು ನ್ಯಾಯೋಚಿತ ವರ್ಗೀಕರಣ ಆಗುವುದಿಲ್ಲ ಎಂದು ಅರ್ಜಿ ವಾದಿಸಿದೆ.

ರಾಷ್ಟ್ರಗಳು ಮತ್ತು ವ್ಯಕ್ತಿಗಳ ವರ್ಗಗಳನ್ನು ಆಯ್ಕೆಮಾಡಲು ಅಂಗೀಕರಿಸಲಾಗಿರುವ ಮಾನದಂಡಗಳನ್ನು ಸಮಾನವಾಗಿ ಅನ್ವಯಿಸಲಾಗಿಲ್ಲ ಎಂದೂ ಅರ್ಜಿದಾರರು ವಾದಿಸಿದ್ದಾರೆ. ಮ್ಯಾನ್ಮಾರ್ ದೇಶವನ್ನು ಹೊರತುಪಡಿಸಿ, ಆಫ್ಘಾನಿಸ್ಥಾನವನ್ನು ಸೇರ್ಪಡೆ ಮಾಡಿದ್ದರತ್ತ ಅರ್ಜಿ ಬೊಟ್ಟು ಮಾಡಿದೆ. ಶ್ರೀಲಂಕಾ ತಮಿಳು ನಿರಾಶ್ರಿತರು ಮತ್ತು ರೊಹಿಂಗ್ಯಾ ಮುಸ್ಲಿಮರನ್ನು ಕಾಯ್ದೆ ವ್ಯಾಪ್ತಿಯಿಂದ ಹೊರಗಿಟ್ಟದ್ದಕ್ಕೂ ಅರ್ಜಿ ಮಹತ್ವ ನೀಡಿ ಉಲ್ಲೇಖಿಸಿದೆ.

ಉದ್ದೇಶಿತ ರಾಷ್ಟ್ರವ್ಯಾಪಿ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆಯ ವೇಳೆ ಕಾಯ್ದೆಯು ಮುಸ್ಲಿಮರಿಗೆ ಹಾನಿಕಾರಕವಾಗಬಹುದು ಎಂದೂ ಅರ್ಜಿದಾರರು ಹೇಳಿದ್ದಾರೆ.

ಸಂವಿಧಾನದ ೧೪ ಮತ್ತು ೨೧ನೇ ವಿಧಿಗಳನ್ನು ಉಲ್ಲಂಘಿಸಿರುವ ಕಾರಣ ಸಂವಿಧಾನಬಾಹಿರವಾಗಿರುವ ಕಾಯ್ದೆಯನ್ನು ರದ್ದು ಪಡಿಸಬೇಕು. ಪ್ರಕರಣದ ವಿಚಾರಣೆ ಅವಧಿಯಲ್ಲಿ ಕಾಯ್ದೆಯ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡಬೇಕು ಎಂದೂ ಅರ್ಜಿ ಕೋರಿದೆ.

No comments:

Advertisement