Thursday, December 19, 2019

ಶ್ರೀನಗರದ ಜಾಮಿಯಾ ಮಸೀದಿಯಲ್ಲಿ ಮತ್ತೆ ನಮಾಜ್ ಸದ್ದು

                 ಶ್ರೀನಗರದ ಜಾಮಿಯಾ ಮಸೀದಿಯಲ್ಲಿ
ಮತ್ತೆ ನಮಾಜ್ ಸದ್ದು

ನವದೆಹಲಿ: ಕೇಂದ್ರ ಸರ್ಕಾರವು ಆಗಸ್ಟ್ ೫ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನರದ್ದು ಪಡಿಸಿದ ಬಳಿಕ ಇದೇ ಮೊದಲ ಬಾರಿಗೆ 2019 ಡಿಸೆಂಬರ್  18ರ ಬುಧವಾರ ಶ್ರೀನಗರದ ಜಾಮಿಯಾ ಮಸೀದಿ ಬಾಗಿಲನ್ನು ಪುನಃ ತೆರೆಯಲಾಯಿತು. ಕಳೆದ ತಿಂಗಳಲ್ಲಿ ಇದೇ ಪ್ರಥಮ ಬಾರಿಗೆ ಅಧಿಕಾರಿಗಳು ಐತಿಹಾಸಿಕ ಜಾಮಿಯಾ ಮಸೀದಿಯ ಬಾಗಿಲು ತೆರೆದಿದ್ದು, ವಾರ ಪ್ರಾರ್ಥನೆಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿದವು.

ಆಗಸ್ಟ್ ೫ರಂದು ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿ ರದ್ದುಪಡಿಸಿದ ಬಳಿಕ ಮಸೀದಿ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಸತತ ೧೩೬ ದಿನಗಳ ಬಳಿಕ ಈದಿನ  ಮಧ್ಯಾಹ್ನ ಮುಸ್ಲಿಂ ಬಾಂಧವರು ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಸುಮಾರು ೧೦೦ ರಿಂದ೧೫೦ ಜನರು ಮಸೀದಿ ಒಳಗೆ ಕೂತು ಪ್ರಾರ್ಥನೆ ಸಲ್ಲಿಸಿದರು.

"ಭದ್ರತಾ ಪಡೆಯನ್ನು ತೆರವುಗೊಳಿಸಿದ ಬಳಿಕ ಮಸೀದಿಯನ್ನು ಪುನಃ ತೆರೆಯುವ ಬಗ್ಗೆ ಮಂಗಳವಾರ ಸಭೆ ನಡೆಸಲಾಗಿತ್ತು. ಬುಧವಾರ ಮಧ್ಯಾಹ್ನ(ಜುಹರ್) ಮತ್ತು ತಡ ಮಧ್ಯಾಹ್ನ(ಅಸರ್) ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿತ್ತು. ಮಾರುಕಟ್ಟೆಯನ್ನು ಸಹ ತೆರೆಯಲಾಗಿದ್ದು, ಪರಿಸ್ಥಿತಿ ಸಾಮಾನ್ಯವಾಗಿದೆ," ಎಂದು ಮಸೀದಿಯ ವ್ಯವಸ್ಥಾಪಕ ಮಂಡಳಿಯ ಸದಸ್ಯರೊಬ್ಬರು ತಿಳಿಸಿದರು.

ಪ್ರದೇಶದಲ್ಲಿ ಕೆಲವು ವಾರಗಳ ಬಳಿಕ ಭದ್ರತಾ ನಿರ್ಬಂಧವನ್ನು ತೆರವುಗೊಳಿಸಿದ್ದರೂ ಸಹ, ಸ್ಥಳೀಯ ನಿವಾಸಿಗಳು ಜಾಮಿಯಾ ಮಸೀದಿಗೆ ತೆರಳಲು ನಿರಾಕರಿಸಿದ್ದರು.

"ನಾನು ಈದಿನ ನಮಾಜ್ ಮಾಡಿ ಬಂದೆ. ಈಗ ನಾನು ಬಹಳ ಖುಷಿಯಾಗಿದ್ದೇನೆ. ಮುಂದಿನ ಶುಕ್ರವಾರವೂ ನಾನು ಪ್ರಾರ್ಥನೆ ಸಲ್ಲಿಸುತ್ತೇನೆ. ಮತ್ತೆ ಮಸೀದಿ ಬಾಗಿಲನ್ನು ಮುಚ್ಚದಂತೆ ನಾನು ಒಂದು ಮನವಿ ಮಾಡುತ್ತೇನೆ. ಇದು ದೇವರ ಮನೆ. ಇಲ್ಲಿ ನಿಷೇಧಾಜ್ಞೆ ಹೇರಬೇಡಿ," ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದರು.

"ನಾನು ಮನೆಯಲ್ಲಿ ಕುಳಿತಿದ್ದಾಗ ಜಾಮಿಯಾ ಮಸೀದಿಯಿಂದ ಪ್ರಾರ್ಥನಾ ಕರೆ ಕೇಳಿಸಿತು. ನನ್ನ ಕಿವಿಗಳನ್ನು ನಾನೇ ನಂಬಲಾಗಲಿಲ್ಲ. ಕೂಡಲೇ ಓಡಿ ಹೋಗಿ ಪ್ರಾರ್ಥನೆ ಸಲ್ಲಿಸಿದೆ. ನಾಲ್ಕೂವರೆ ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಜನರು ಜಾಮಿಯಾ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು" ಎಂದು ೫೫ ವರ್ಷದ ಮೊಹಮ್ಮದ್ ಇಕ್ಭಾಲ್ ಹೇಳಿದರು.

ನಾಲ್ಕು  ತಿಂಗಳ ಹಿಂದೆ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ೩೭೦ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿ, ಕಣಿವೆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಇಬ್ಭಾಗ ಮಾಡಿತು. ಆಗಿನಿಂದಲೂ ಜಮ್ಮು-ಕಾಶ್ಮೀರ ಪ್ರದೇಶದಲ್ಲಿ ವಿವಿಧ ರೀತಿಯ ನಿರ್ಬಂಧ ಮತ್ತು ನಿಷೇಧಾಜ್ಞೆಗಳು ಜಾರಿಯಲ್ಲಿವೆ. ಅನೇಕ ರಾಜಕೀಯ ಮುಖಂಡರನ್ನು ಗೃಹ ಬಂಧನದಲ್ಲಿರಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.

No comments:

Advertisement