ಸೋನಿಯಾ
ಗಾಂಧಿ ಭೇಟಿ ಮಾಡಿದ ಸಿದ್ದರಾಮಯ್ಯ
ಕೆಪಿಸಿಸಿ
ಅಧ್ಯಕ್ಷ ಸ್ಥಾನಕ್ಕೆ ಎಂಬಿಪಿ ಹೆಸರು ಶಿಫಾರಸು
ನವದೆಹಲಿ:
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2020 ಜನವರಿ 14ರ ಮಂಗಳವಾರ ಪಕ್ಷದ
ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ಸುಮಾರು ೪೫ ನಿಮಿಷಗಳ ಕಾಲ
ಮಾತುಕತೆ ನಡೆಸಿದರು.
ಸೋನಿಯಾ
ಗಾಂಧಿ ಜೊತೆಗಿನ ಮಾತುಕತೆಯ ವೇಳೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಂ.ಬಿ. ಪಾಟೀಲ್
ಅವರ ಹೆಸರನ್ನು ಸಿದ್ದರಾಮಯ್ಯ ಅವರು ಶಿಫಾರಸು ಮಾಡಿದ್ದು, ಎಂಬಿ ಪಾಟೀಲ್ ಅವರಿಗೆ ಏಕೆ ಅಧ್ಯಕ್ಷ ಸ್ಥಾನ ನೀಡಬೇಕು, ಅದರಿಂದ ಪಕ್ಷಕ್ಕೆ ಆಗುವ ಅನುಕೂಲಗಳೇನು ಎಂಬುದನ್ನು ವಿವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯಡಿಯೂರಪ್ಪ
ಅವರನ್ನು ಎದುರಿಸಲು ಲಿಂಗಾಯತ ಅಧ್ಯಕ್ಷರಿದ್ದರೆ ಸೂಕ್ತ. ಅದರಲ್ಲೂ ಉತ್ತರ
ಕರ್ನಾಟಕದವರಾಗಿದ್ದರೆ ಇನ್ನೂ ಒಳ್ಳೆಯದು. ರಾಜ್ಯದಲ್ಲಿ ಬಿಜೆಪಿಯೇ ಕಾಂಗ್ರೆಸ್ ಪಕ್ಷಕ್ಕೆ ವೈರಿ. ಬಿಜೆಪಿಗೆ ಭದ್ರ ನೆಲೆ ಇರುವುದು ಉತ್ತರ ಕರ್ನಾಟಕದಲ್ಲಿ. ಜೊತೆಗೆ ಯಡಿಯೂರಪ್ಪ ಇರುವುದರಿಂದ ಲಿಂಗಾಯತ ಸಮುದಾಯ ಬಿಜೆಪಿ ಪರವಾಗಿ ನಿಂತಿದೆ. ಈ ಎರಡೂ ದೃಷ್ಟಿಯಿಂದ
ಉತ್ತರ ಕರ್ನಾಟಕದ ಲಿಂಗಾಯತರಿಗೆ ಪಕ್ಷದ ಅಧ್ಯಕ್ಷ ಗಾದಿ ಕೊಡಬೇಕು ಎಂದು ಸಿದ್ದರಾಮಯ್ಯ ವಿವರಿಸಿದರು ಎಂದು ಮೂಲಗಳು ಹೇಳಿವೆ.
ಎಂ.ಬಿ. ಪಾಟೀಲ್ಗೆ ಹಿರಿತನ, ಸಂಪನ್ಮೂಲ,
ಜಾತಿ ಬಲಗಳು ಇವೆ. ಇತರೆ ಹಿರಿಯರು ಕೂಡ ಎಂಬಿಪಿಯವರನ್ನು ವಿರೋಧಿಸುವುದಿಲ್ಲ.
ಬೇಕಿದ್ದರೆ ಇನ್ನೊಮ್ಮೆ ಪರಾಮರ್ಶೆ ಮಾಡಿ ತೀರ್ಮಾನ ತೆಗೆದುಕೊಳ್ಳಿ. ನನ್ನ
ಅಭಿಪ್ರಾಯವನ್ನು ಖಚಿತವಾಗಿ ತಿಳಿಸಿದ್ದೇನೆ. ನೀವು ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ಬದ್ದ ಎಂದು ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ ಬಳಿ ಹೇಳಿದ್ದಾರೆ ಎಂದು ಮೂಲಗಳೂ ತಿಳಿಸಿದವು.
ಮಾತುಕತೆಯ
ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕಾಂಗ ನಾಯಕ ಸ್ಥಾನವನ್ನು ಮುಂದುವರಿಸಿಕೊಂಡು ಹೋಗುವಂತೆ ಸಿದ್ದರಾಮಯ್ಯ ಅವರಿಗೆ ಸೋನಿಯಾ ಗಾಂಧಿ ಸೂಚಿಸಿದ್ದಾರೆಂದು ತಿಳಿದುಬಂದಿದೆ. ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಎಂಬಿ ಪಾಟೀಲ್ ಅಥವಾ ಕೃಷ್ಣ ಭೈರೇಗೌಡ ಅವರಿಗೆ ನೀಡಿ ಎಂದೂ ಕೋರಿದ್ದಾರೆ ಎನ್ನಲಾಗಿದೆ.
ಮಾತುಕತೆಯ
ವೇಳೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್
ಸಹ
ಉಪಸ್ಥಿತರಿದ್ದರು.
ಕೆಪಿಸಿಸಿ
ಅಧ್ಯಕ್ಷ ಸ್ಥಾನದ ಮೇಲೆ ಡಿ.ಕೆ.ಶಿವಕುಮಾರ್
ಕಣ್ಣಿಟ್ಟಿದ್ದು, ತಮಗೆ ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಆದರೆ, ಡಿಕೆಶಿಗೆ ಪಟ್ಟ ಕಟ್ಟಲು ಪಕ್ಷದ ಕೆಲ ಹಿರಿಯರಲ್ಲಿ ಅಸಮಾಧಾನ ಇದೆ. ಮುಖ್ಯವಾಗಿ ಸಿದ್ದರಾಮಯ್ಯ ಅವರು ಡಿಕೆಶಿಗೆ ಬೆಂಬಲ ನೀಡದೆ ಎಂ.ಬಿ.ಪಾಟೀಲ್
ಅವರಿಗೆ ಅಧ್ಯಕ್ಷ ಸ್ಥಾನ ಕೊಡಿಸಲು ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಬೀರಿದ್ದಾರೆ.
ಕೆಪಿಸಿಸಿ
ಪಟ್ಟಕ್ಕಾಗಿ ಡಿಕೆಶಿ ಹಾಗೂ ಎಂಬಿಪಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು ಹಿರಿಯ ಮುಖಂಡರು ಡಿಕೆಶಿ ಪರವಾಗಿ ಒಲವು ವ್ಯಕ್ತಪಡಿಸಿದ್ದರೆ ಸಿದ್ದರಾಮಯ್ಯ ಬಣ ಎಂಬಿಪಿಗೆ ಪಟ್ಟಕಟ್ಟುವ
ಉತ್ಸಾಹದಲ್ಲಿದೆ.
ಒಂದು
ವೇಳೆ ಡಿಕೆ ಶಿವಕುಮಾರ್ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಪಕ್ಷದ ಹಿಡಿತ ಸಿದ್ದರಾಮಯ್ಯ ಕೈ ತಪ್ಪಿ ಹೋಗುತ್ತದೆ.
ಈ ಕಾರಣಕ್ಕಾಗಿ ಎಂಬಿ ಪಾಟೀಲ್ ಅವರಿಗೆ ನೀಡಿದರೆ ಸಿದ್ದರಾಮಯ್ಯ ಹಿಡಿತದಲ್ಲೇ ಪಕ್ಷ ಮುಂದುವರಿಯಲಿದ್ದು ಲಿಂಗಾಯತ ಸಮುದಾಯವನ್ನು ಒಳಗೊಂಡಂತೆ ಆಗುತ್ತದೆ ಎಂಬುದು ಸಿದ್ದರಾಮಯ್ಯ ಬಣದ ವಾದ.
ಸಿದ್ದರಾಮಯ್ಯ
ಜೊತೆಗಿನ ಮಾತುಕತೆ ಬಳಿಯ ರಾಜ್ಯದ ಹಿರಿಯ ಕಾಂಗ್ರೆಸ್ ಮುಖಂಡರ ಜೊತೆಗೂ ಸೋನಿಯಾ ಗಾಂಧಿ ಚರ್ಚೆ ನಡೆಸುವ ಸಾಧ್ಯತೆ ಇದೆ. ಇದಾದ ಬಳಿಕವಷ್ಟೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರು ಎಂಬ ಹೆಸರು ಪ್ರಕಟವಾಗುವ ನಿರೀಕ್ಷೆಯಿದೆ.
No comments:
Post a Comment