Wednesday, January 1, 2020

ಮಧ್ಯರಾತ್ರಿಯಿಂದ ರೈಲ್ವೇ ಪಯಣ ದರ ಹೆಚ್ಚಳ

ಮಧ್ಯರಾತ್ರಿಯಿಂದ ರೈಲ್ವೇ ಪಯಣ ದರ ಹೆಚ್ಚಳ
ನವದೆಹಲಿ: 2019 ಡಿಸೆಂಬರ್ 31ರ ಮಂಗಳವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪ್ರಯಾಣಿಕರ ಮೂಲದರವನ್ನು ಏರಿಸಲು ರೈಲ್ವೇ ಸಚಿವಾಲಯವು 2019 ಡಿಸೆಂಬರ್ 31ರ ಮಂಗಳವಾರ ತಡರಾತ್ರಿಯಲ್ಲಿ ಆದೇಶ ನೀಡಿತು.

‘ರೈಲ್ವೇ ಸಚಿವಾಲಯವು ಮೂಲ ಪ್ರಯಾಣಿಕ ದರವನ್ನು (ಪ್ಯಾಸೆಂಜರ್ ಫೇರ್) ಪರಿಷ್ಕರಿಸಲು ನಿರ್ಧರಿಸಿದೆ. ಪರಿಷ್ಕೃತ ದರವು ೨೦೨೦ ಜನವರಿ ೧ರಿಂದ ಜಾರಿಗೆ ಬರುತ್ತದೆ ಎಂದು ಮಂಗಳವಾರ ರಾತ್ರಿ ಜಾರಿಗೊಳಿಸಲಾದ ಆದೇಶ ತಿಳಿಸಿತು.  ನೂತನ ಪಯಣದರ ಜಾರಿಗೆ ಕೆಲವೇ ಗಂಟೆಗಳು ಇರುವಾಗ ಈ ಆದೇಶವನ್ನು ಹೊರಡಿಸಲಾಯಿತು.

ಕಿಲೋ ಮೀಟರ್ ದೂರಕ್ಕೆ ಸಾಮಾನ್ಯ ಹವಾನಿಯಂತ್ರಿತವಲ್ಲದ (ನಾನ್ ಎಸಿ) ರೈಲುಗಳಲ್ಲಿ ೧ ಪೈಸೆ ಮತ್ತು ಮೆಯಿಲ್ ಮತ್ತು ಎಕ್ಸ್ ಪ್ರೆಸ್ ರೈಲುಗಳಲ್ಲಿ (ಹವಾನಿಯಂತ್ರಿತವಲ್ಲದ ಬೋಗಿಗಳು)೨ ಪೈಸೆ ಹಾಗೂ ಹವಾನಿಯಂತ್ರಿತ ವರ್ಗಗಳಲ್ಲಿ ಪಯಣದರವನ್ನು ಕಿಲೋಮೀಟರಿಗೆ ೪ ಪೈಸೆಯಷ್ಟು ಏರಿಸಲಾಗಿದೆ.

ಕೇಂದ್ರ ಸರ್ಕಾರವು ಪ್ರಯಾಣಿಕರ ದರ ಮತ್ತು ಸಾಗಣೆದರವನ್ನು ಪರಿಷ್ಕರಿಸಲು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂಬುದಾಗಿ ರೈಲ್ವೇ ಮಂಡಳಿ  ಅಧ್ಯಕ್ಷ ವಿನೋದ ಕುಮಾರ್ ಯಾದವ್ ಅವರು ಹೇಳಿದ ಕೇವಲ ಒಂದು ದಿನದ ಬಳಿಕ ರೈಲ್ವೇ ಪಯಣದರಗಳ ಏರಿಕೆಯಾಗಿದೆ. ಏನಿದ್ದರೂ ಯಾದವ್ ಅವರು ದರವನ್ನು ಸುಧಾರಿಸುವ ಅಗತ್ಯವಿದೆ ಎಂದು ಹೇಳಿದ್ದರು.

No comments:

Advertisement