ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್
ತಜ್ಞರಿಂದ ನಿಯಂತ್ರಿತ ಸ್ಫೋಟದ ಮೂಲಕ ಸ್ಫೋಟಕ
ನಾಶ
ಬೆಂಗಳೂರು: ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ
2020 ಜನವರಿ 20ರ ಸೋಮವಾರ ಬೆಳಗ್ಗೆ ೧೦ ಕಿಲೋ ಗ್ರಾಂ ತೂಕದ ಸುಧಾರಿತ ಐಇಡಿ ಜೀವಂತ ಬಾಂಬ್ ಪತ್ತೆಯಾಗಿದ್ದು, ಕೂದಲೆಳೆ ಅಂತರದಲ್ಲಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ ಎಫ್) ಸಿಬ್ಬಂದಿಯ ಮುಂಜಾಗರೂಕತೆಯಿಂದ ತಪ್ಪಿತು.
ಸುಧಾರಿತ ಐಐಡಿ ಸ್ಫೋಟಕವನ್ನು ಕೆಂಜಾರಿನ ನಿರ್ಜನ ಪ್ರದೇಶಕ್ಕೆ ಸಾಗಿಸಿ ನಿಯಂತ್ರಿತ ರೀತಿಯಲಿ ಸ್ಫೋಟಿಸುವ ಮೂಲಕ ಅದರಿಂದ ಆಗಬಹುದಾದ ಅಪಾಯವನ್ನು ನಿವಾರಿಸಲಾಯಿತು.
ಸುಧಾರಿತ ಐಐಡಿ ಸ್ಫೋಟಕವನ್ನು ಕೆಂಜಾರಿನ ನಿರ್ಜನ ಪ್ರದೇಶಕ್ಕೆ ಸಾಗಿಸಿ ನಿಯಂತ್ರಿತ ರೀತಿಯಲಿ ಸ್ಫೋಟಿಸುವ ಮೂಲಕ ಅದರಿಂದ ಆಗಬಹುದಾದ ಅಪಾಯವನ್ನು ನಿವಾರಿಸಲಾಯಿತು.
ವಿಮಾನ ನಿಲ್ದಾಣದ ಆವರಣಕ್ಕೆ ರಿಕ್ಷಾದ ಮೂಲಕ ಬಂದು ಬಾಂಬ್ ಇದ್ದ ಬ್ಯಾಗ್ ಇರಿಸಿ ಪರಾರಿಯಾದ ವ್ಯಕ್ತಿಯ ಚಿತ್ರ ಸಿಸಿಟಿವಿಯಲ್ಲಿ ದಾಖಲಾಗಿದ್ದು ಪೊಲೀಸರು ಆ ಭಾವಚಿತ್ರವನ್ನು ಬಿಡುಗಡೆ ಮಾಡಿದ್ದು, ಅಪರಿಚಿತ ವ್ಯಕ್ತಿಗಳಿಗಾಗಿ ಪೊಲೀಸರು ತೀವ್ರ ಶೋಧ ಆರಂಭಿಸಿದರು.. ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಯಿತು.
ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಕೆಲವು ಸಮಾಜಘಾತುಕ ಶಕ್ತಿಗಳು ಶಾಮೀಲಾಗಿರುವ ಸಾಧ್ಯತೆ ಇದೆ ಎಂಬ ಅನುಮಾನದ ಜೊತೆಗೆ ಗಣರಾಜ್ಯ ದಿನದಂದು ಭಯೋತ್ಪಾದಕರು ವಿಧ್ವಂಸಕ ಕೃತ್ಯಗಳನ್ನು ಎಸಗುವ ಸಂಚು ರೂಪಿಸಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಬಾಂಬ್ ಪತ್ತೆ ಘಟನೆಯು ಆಘಾತದ ಅಲೆಗಳನ್ನು ಎಬ್ಬಿಸಿದ್ದು, ಎಲ್ಲೆಡೆಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಯಿತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರದ ನಾಗರಿಕ ವಿಮಾನಯಾನ ಸಚಿವಾಲಯವು ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಮೂಲಕ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಶಂಕಿತರ ಚಿತ್ರ ಲಭಿಸಿದೆ- ಬೊಮ್ಮಾಯಿ: ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಶಂಕಿತ ವ್ಯಕ್ತಿಗಳ ಚಿತ್ರ ಸಿಸಿಟಿವಿಯಲ್ಲಿ ಲಭಿಸಿರುವುದಾಗಿ ತಿಳಿಸಿ, ರಾಜ್ಯ ಪೊಲೀಸರು ಕೂಡಾ ತನಿಖೆ ನಡೆಸಲಿದ್ದು, ಶೀಘ್ರದಲ್ಲೇ ಘಟನೆಯ ಹಿನ್ನೆಲೆಯನ್ನು ಭೇದಿಸುವ ವಿಶ್ವಾಸ ವ್ಯಕ್ತ ಪಡಿಸಿದರು. ದೇಶದ್ರೋಹಿ ಶಕ್ತಿಗಳು ಭಯೋತ್ಪಾದನೆ ಮಾಡಿ ಜನರಲ್ಲಿ ಆತಂಕ ಉಂಟು ಮಾಡುತ್ತಿವೆ. ಇದು ದೇಶದ ಆರ್ಥಿಕ ಚಟುವಟಿಕೆಗಳನ್ನು ಭಗ್ನಗೊಳಿಸುವ ಯತ್ನ. ಇದನ್ನು ಗಂಭೀರವಾಗಿ ಪರಿಗಣಿ ಕ್ರಮ ಕೈಗೊಳ್ಳಲಾಗುವುದು ಎಂದು ಬೊಮ್ಮಾಯಿ ನುಡಿದರು.
ಮಂಗಳೂರು ವಿಮಾನ ನಿಲ್ದಾಣ ಘಟನೆಯ ಹಿನ್ನೆಲೆಯಲ್ಲಿ ಮಂಗಳೂರು, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಎಲ್ಲ ಕಡೆ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.
ಇತ್ತೀಚೆಗೆ ನಗರದಲ್ಲಿ ನಡೆದಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ ದೊಡ್ಡ ಮಟ್ಟದ ಸುದ್ದಿ ಮಾಡಿದ್ದ ಹಿನ್ನೆಲೆಯಲ್ಲಿ ಈ ಹೋರಾಟಕ್ಕೂ ವಿಮಾನ ನಿಲ್ದಾಣದಲ್ಲಿ ಬಾಂಬ್ ಎಸೆದಿರುವ ಪ್ರಕರಣಕ್ಕೂ ಸಂಬಂಧ ಇದೆಯೇ ಎಂಬ ಬಗ್ಗೆ ಹಾಗೂ ಭದ್ರತಾ ವೈಫಲ್ಯದ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಬೆಳಗ್ಗೆಯೇ ರಿಕ್ಷಾದಲ್ಲಿ ಬಂದರು: ಮಂಗಳೂರು ವಿಮಾನ ನಿಲ್ದಾಣಕ್ಕೆ ಬೆಳಗ್ಗೆ ೭ರಿಂದ ೮ ಗಂಟೆಯ ವೇಳೆಯಲ್ಲಿ ಆಟೋರಿಕ್ಷಾ ಒಂದರಲ್ಲಿ ಬಂದ ವ್ಯಕ್ತಿಗಳಿಬ್ಬರು ಲ್ಯಾಪ್ ಟ್ಯಾಪ್ ಬ್ಯಾಗ್ ಒಂದನ್ನು ಪ್ರವೇಶ ದ್ವಾರದ ಬಳಿಕ ಟಿಕೆಟ್ ಕೌಂಟರ್ ಸಮೀಪ ಇಟ್ಟು ಹೋಗಿದ್ದು, ಬಾಗ್ನಲ್ಲಿ ಸಜೀವ್ ಬಾಂಬ್ ಇರುವ ವಿಷಯ ಬಳಿಕ ಪತ್ತೆಯಾಗಿ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತು.
ಸುದ್ದಿ ತಿಳಿಯುತ್ತಿದ್ದಂತೆಯೇ ವಿಮಾನ ನಿಲ್ದಾಣದ ಭದ್ರತೆಗಾಗಿ ನಿಯೋಜಿತರಾಗಿದ್ದ ಸಿಐಎಸ್ ಎಫ್ ಅಧಿಕಾರಿಗಳು ಜಾಗೃತರಾಗಿ ಬಾಂಬ್ ನಾಶಕ್ಕೆ ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಾಂಬ್ ಒಂದು ವೇಳೆ ಸ್ಫೋಟಗೊಂಡಿದ್ದರೆ ಊಹಿಸಲಾಗದ ಅನಾಹುತ ಸಂಭವಿಸುತ್ತಿತ್ತು ಮತ್ತು ಸುಮಾರು ೫೦೦ ಕಿಮೀ ವ್ಯಾಪ್ತಿಯಲ್ಲಿ ಭಾರೀ ಹಾನಿ ಸಂಭವಿಸುತ್ತಿತ್ತು ಎಂದು ಅಂದಾಜು ಮಾಡಲಾಗಿದೆ.
ಬಾಂಬ್ ಪತ್ತೆಯಾಗುತ್ತಿದ್ದಂತೆಯೇ ಅದನ್ನು ದೂರದ ಕೆಂಜಾರು ನಿರ್ಜನ ಪ್ರದೇಶಕ್ಕೆ ಸಾಗಿಸಿ, ನಿಯಂತ್ರಿತ ವಿಧಾನದಲ್ಲಿ ಅದನ್ನು ಸ್ಫೋಟಗೊಳಿಸಿದ್ದರಿಂದ ಸಂಭವಿಸಬಹುದಾಗಿದ್ದ ಬಾರೀ ಅನಾಹುತ ತಪ್ಪಿದ್ದು, ವಿಮಾನ ನಿಲ್ದಾಣದಲ್ಲಿದ್ದ ಪ್ರಯಾಣಿಕರು ನೆಮ್ಮದಿಯ ಉಸಿರು ಎಳೆದರು.
ಮಾಲೀಕರಿಲ್ಲದ ಬ್ಯಾಗ್ ಬಜ್ಪೆ ವಿಮಾನ ನಿಲ್ದಾಣದ ಗಣ್ಯ ವ್ಯಕ್ತಿಗಳಿಗಾಗಿ ಮೀಸಲಿಡಲಾಗಿರುವ ಟಿಕೆಟ್ ಕೌಂಟರ್ ಸಮೀಪ ಪತ್ತೆಯಾಯಿತು. ಅನುಮಾನಾಸ್ಪದ ಬ್ಯಾಗ್ ಬಗ್ಗೆ ಸಿಐಎಸ್ಎಫ್ ಭದ್ರತಾ ಸಿಬ್ಬಂದಿ ತತ್ ಕ್ಷಣವೇ ಬಾಂಬ್ ನಿಷ್ಕ್ರಿಯದಳ ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದರು.
ಕೂಡಲೇ ಸ್ಥಳಕ್ಕೆ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಮತ್ತು ಅಗ್ನಿಶಾಮಕ ಅಧಿಕಾರಿಗಳು ಐಐಡಿ ಸ್ಫೋಟಕ ಇದ್ದ ಬ್ಯಾಗ್ನ್ನು ಯಂತ್ರದ ಮೂಲಕ ಕೆಂಜಾರು ಮೈದಾನಕ್ಕೆ ಸಾಗಿಸಿ
ಆಳವಾದ ಹೊಂಡದಲ್ಲಿರಿಸಿ ಅದರ ಸುತ್ತ ಮರಳಿನ ಮೂಟೆಗಳನ್ನು ತುಂಬಿ ನಿಯಂತ್ರಿತ ವಿಧಾನದಲ್ಲಿ ಅದನ್ನು ಸ್ಫೋಟಿಸಿ, ನಿಷ್ಕ್ರಿಯಗೊಳಿಸಿದರು.
ಉಗ್ರರ ಕೃತ್ಯದ ಶಂಕೆ: ರಾಜ್ಯದಲ್ಲಿ ಇತ್ತೀಚೆಗೆ ಹಲವಾರು ಕಡೆಗಳಲ್ಲಿ ಉಗ್ರಗಾಮಿಗಳನ್ನು ಬಂಧಿಸಲಾಗಿದೆ. ಜನವರಿ ೨೬ರ ಗಣರಾಜ್ಯೋತ್ಸವದ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕದಡಲು ಉಗ್ರಗಾಮಿಗಳು ಈ ಕೃತ್ಯಕ್ಕೆ ಕೈಹಾಕಿರಬಹುದೇ ಎಂಬ ಅನುಮಾನ ಮೂಡಿದೆ.
ನಗರದಲ್ಲಿ ಉಗ್ರಗಾಮಿಗಳು ಬೀಡು ಬಿಟ್ಟಿರುವ ಸಾಧ್ಯತೆ ಬಗೆಗೂ ಅಧಿಕಾರಿಗಳು ತನಿಖೆ ನಡೆಸಲು ಆರಂಭಿಸಿದ್ದಾರೆ. ತಮ್ಮ ಶಕ್ತಿ ಪ್ರದರ್ಶನದ ಸಲುವಾಗಿ ಉಗ್ರಗಾಮಿಗಳು ಉದ್ದೇಶಪೂರ್ವಕವಾಗಿ ಸಂಪರ್ಕ ಕಡಿದ ಬಾಂಬ್ ಇಟ್ಟಿರಬಹುದೇ ಅಥವಾ ಭದ್ರತಾ ಸಿಬ್ಬಂದಿಯ ಮುಂಜಾಗರೂಕತಾ ಕ್ರಮದಿಂದ ವಿಧ್ವಂಸಕ ಕೃತ್ಯ ಕೂದಲೆಳೆಯಲ್ಲಿ ತಪ್ಪಿತೇ ಎಂಬ ಬಗೆಗೂ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಮಂಗಳೂರು ಪೊಲೀಸ್ ಕಮೀಷನರ್ ಡಾ. ಹರ್ಷ ಸೇರಿದಂತೆ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು.
ಬಾಂಬ್ ಪತ್ತೆ ಘಟನೆಯಿಂದ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರದ ಮೇಲೆ ಯಾವುದೇ ದುಷ್ಟರಿಣಾಮ ಬೀರಿಲ್ಲ. ಸ್ವಲ್ಪ ಕಾಲ ಗೊಂದಲ ಉಂಟಾದರೂ, ಎಲ್ಲ ವಿಮಾನಗಳ ಆಗಮನ, ನಿರ್ಗಮನ ವೇಳಾಪಟ್ಟಿಯಂತೆಯೇ ಮುಂದುವರೆಯಿತು ಎಂದು ವಿಮಾನ ನಿಲ್ದಾಣ ಮೂಲಗಳು ಹೇಳಿವೆ.
ಸಿಸಿ ಟಿವಿ ದೃಶ್ಯಾವಳಿ: ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಯೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಆಟೋರಿಕ್ಷಾ ಒಂದರಲ್ಲಿ ಶಂಕಿತ ವ್ಯಕ್ತಿ ಆಗಮಿಸಿದ ದೃಶ್ಯವಿದೆ. ದೃಶ್ಯಾವಳಿಯಲ್ಲಿ ಇರುವ ವ್ಯಕ್ತಿ ಬೀಳಿಯ ಟೋಪಿ (ಕ್ಯಾಪ್)
ಧರಿಸಿದ್ದು ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ದೃಶ್ಯ ಸಿಸಿ
ಟಿವಿ ವಿಡಿಯೋದಲ್ಲಿ
ದಾಖಲಾಗಿದೆ.
ಬಿಳಿಯ ಟೋಪಿ ಧರಿಸಿದ ಈ ವ್ಯಕ್ತಿ ಪೂರ್ಣ ತೋಳಿನ ಬಿಳಿ ಪಟ್ಟಿಗಳಿರುವ ಶರ್ಟ್ ಮತ್ತು ಕರಿಯ ಪ್ಯಾಂಟ್ ಧರಿಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಇದೇ ವ್ಯಕ್ತಿ ಆಟೋ ರಿಕ್ಷಾದಲ್ಲಿ ಬಂದು ಬಾಂಬ್ ಇದ್ದ ಬ್ಯಾಗ್ನ್ನು ವಿಮಾನ ನಿಲ್ದಾಣದ ಆವರಣದಲ್ಲಿ ಬಿಟ್ಟು ಹೋಗಿರಬಹುದು ಎಂದು ಶಂಕಿಸಲಾಗಿದೆ.
ಶಂಕಿತರು ಮಂಗಳೂರಿನಿಂದ ಉಡುಪಿಗೆ ಪಯಣಿಸಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮಂಗಳೂರು, ಉಡುಪಿಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ ಮತ್ತು ನಗರದ ಪ್ರಮುಖ ರಸ್ತೆಗಳಲ್ಲಿ ವ್ಯಾಪಕ ತಪಾಸಣೆ ನಡೆಸಿದರು. ಕೆಲವು ದಿನಗಳ ಹಿಂದೆ ತಮಿಳುನಾಡಿನ ಪೊಲೀಸ್ ಅಧಿಕಾರಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯ ಇಬ್ಬರು ಯುವಕರನ್ನು ಬಂಧಿಸಲಾಗಿತ್ತು. ಹೀಗಾಗಿ ಉಡುಪಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗುತ್ತಿದ್ದಂತೆಯೇ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೈಸೂರು ವಿಮಾನ ನಿಲ್ದಾಣ, ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣಗಳಲ್ಲೂ ಭದ್ರತೆಯನ್ನು ಹೆಚ್ಚಿಸಿ ಹೈ ಅಲರ್ಟ್ ಘೋಷಿಸಲಾಯಿತು.
ಪ್ರಮುಖ ಸ್ಥಳಗಳಲ್ಲಿ ಪರಿಶೀಲನೆ ನಡೆಸುವಂತೆ ಮೈಸೂರು ನಗರ ಪೊಲೀಸ್ ಕಮಿಷನರ್ ಕೆ.ಟಿ. ಬಾಲಕೃಷ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಮಧ್ಯೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾಗಿರುವ ಬಗ್ಗೆ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಬಾಂಬ್ನ್ನು ನಿಷ್ಕ್ರಿಯಗೊಳಿಸಲಾಗಿದ್ದು, ಭದ್ರತಾ ವೈಫಲ್ಯದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಡಾ. ಪಿಎಸ್. ಹರ್ಷ ತಿಳಿಸಿದರು.
ಅವಶೇಷ ವಿಧಿವಿಜ್ಞಾನ ಪ್ರಯೋಗಾಯಕ್ಕೆ: ಬಾಂಬ್ನ್ನು ಸ್ಫೋಟಿಸಿದ ಬಳಿಕ, ಅದರ ಅವಶೇಷಗಳು, ರಾಸಾಯನಿಕಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಇಂಡಿಗೋ ವಿಮಾನದಲ್ಲೂ ಬಾಂಬ್ ಬೆದರಿಕೆ:ಮಂಗಳೂರು ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ ಸಜೀವ ಬಾಂಬ್ ಪತ್ತೆಯಾದ ಬೆನ್ನಲ್ಲೇ ಸೋಮವಾರ ಮಧ್ಯಾಹ್ನ ಮಂಗಳೂರಿನಿಂದ ಹೈದರಬಾದಿಗೆ ತೆರಳಲು ಸಿದ್ಧವಾಗಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಇದೆ ಎಂಬ ಬೆದರಿಕೆ ಕರೆ ಬಂದಿತು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಕೆಳಗಿಳಿಸಿ, ತೀವ್ರ ತಪಾಸಣೆಗೆ ಒಳಪಡಿಸಲಾಯಿತು.
ವಿಮಾನದಲ್ಲಿ ಇದ್ದ ಎಲ್ಲ ೧೨೬ ಮಂದಿಯನ್ನು ಕೂಡಾ ಕೆಳಗಿಳಿಸಿ ತಪಾಸಣೆ ನಡೆಸಲಾಯಿತು ಎಂದು ವಿಮಾನ ನಿಲ್ದಾಣ ಮೂಲಗಳು ತಿಳಿಸಿದವು.
No comments:
Post a Comment