'ಸಿಎಎ
ವಿರುದ್ಧ ಮಹಾಗೋಡೆ’: ೬೨೦
ಕಿ.ಮೀ ಮಾನವ ಸರಪಳಿಗೆ
ಕೈಜೋಡಿಸಿದ ಕೇರಳ ಮುಖ್ಯಮಂತ್ರಿ
ತಿರುವನಂತಪುರಂ:
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು (ಎನ್ ಪಿಆರ್) ಪ್ರತಿಭಟಿಸಲು ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗವು
(ಎಲ್ಡಿಎಫ್) 2020 ಜನವರಿ 26ರ ಭಾನುವಾರ ಆಯೋಜಿಸಿದ್ದ
ಮಾನವ ಸರಪಳಿಯಲ್ಲಿ ಕೇರಳದ ಸುಮಾರು ಏಳು ಮಿಲಿಯನ್ (೭೦ ಲಕ್ಷ) ಜನರು
ಪಾಲ್ಗೊಂಡಿದ್ದು, ರಾಜ್ಯದ ಮುಖ್ಯಮಂತ್ರಿ ಪಿಣರಾಯಿ
ವಿಜಯನ್ ಅವರೂ ಮಾನವ ಸರಪಳಿಗೆ ಕೈಜೋಡಿಸಿದರು.
ಗಣರಾಜ್ಯೋತ್ಸವ
ದಿನದಂದು ಆಡಳಿತಾರೂಢ ಸಿಪಿಐ (ಎಂ) ನೇತೃತ್ವದಲ್ಲಿ ೬೨೦ ಕಿ.ಮೀ ಉದ್ದದ
ಮಾನವ ಸರಪಳಿಯನ್ನು ಉತ್ತರ ಕೇರಳದ ಕಾಸರಗೋಡಿನಿಂದ ರಾಜ್ಯದ ದಕ್ಷಿಣ ಭಾಗದ ಕಲಿಯಕ್ಕವಿಲ್ಲೈವರೆಗೆ ರಚಿಸಲಾಯಿತು.
ಕೇರಳದ
ರಾಜಧಾನಿ ತಿರುವನಂತಪುರಂನಲ್ಲಿ ನಡೆದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸುವಲ್ಲಿ ಮುಂಚೂಣಿಯಲ್ಲಿದ್ದ ಪಿಣರಾಯಿ ವಿಜಯನ್ ಮತ್ತು ಸಿಪಿಐ ನಾಯಕ ಕನಂ ರಾಜೇಂದ್ರನ್ ಪ್ರತಿಭಟನೆಯಲ್ಲಿ ಸೇರಿಕೊಂಡರು.
‘ಸಿಎಎ
ವಿರುದ್ಧ ಭಾನುವಾರ ಆಯೋಜಿಸಲಾದ ಮಾನವ ಸರಪಳಿ ಮಹಾಗೋಡೆಯಾಗಿ ಮಾರ್ಪಟ್ಟಿದೆ. ಈ ಕಾನೂನು ದೇಶದ
ಜಾತ್ಯತೀತತೆಗೆ ಅಪಾಯಕಾರಿಯಾಗಿದೆ. ಈ ನೆಲದಲ್ಲಿ ಸಿಎಎ,
ಎನ್ಆರ್ಸಿ ಮತ್ತು ಎನ್ಪಿಆರ್ ಜಾರಿಗೆ ಬರುವುದಿಲ್ಲ ಎಂದು ಕೇರಳ ಸ್ಪಷ್ಟಪಡಿಸಿದೆ’ ಎಂದು
ಪಿಣರಾಯಿ ಅವರನ್ನು ಉಲ್ಲೆಖಿಸಿದ ಸುದ್ದಿ ಸಂಸ್ಥೆ ವರದಿ ಮಾಡಿತು.
ಹಿರಿಯ
ಸಿಪಿಐ (ಎಂ) ಮುಖಂಡ ಎಸ್. ರಾಮಚಂದ್ರನ್ ಪಿಳ್ಳೈ ಅವರು ಕಾಸರಗೋಡಿನಲ್ಲಿ ಸರಪಳಿಯ ಮೊದಲ ಕೊಂಡಿಯಾದರೆ, ಕಲಿಯಕ್ಕವಿಲೈಯಲ್ಲಿ ಎಂ.ಎ. ಬೇಬಿ
ಕೊನೆಯ ಕೊಂಡಿಯಾದರು. ಮಾನವ ಸರಪಳಿಯಲ್ಲಿ ಸುಮಾರು ಆರರಿಂದ ಏಳು ಮಿಲಿಯನ್ (೬೦ರಿಂದ ೭೦ ಲಕ್ಷ) ಜನರು ಭಾಗವಹಿಸಿದ್ದಾರೆ ಎಂದು ಎಡ ಪ್ರಜಾತಾಂತ್ರಿಕ ರಂಗ
ಪ್ರತಿಪಾದಿಸಿತು.
ಸಂಜೆ ೪ ಗಂಟೆಗೆ ಮಾನವ ಸರಪಳಿಯನ್ನು ರಚಿಸಲಾಯಿತು, ಅದರ ನಂತರ ಸಂವಿಧಾನದ ಮುನ್ನುಡಿಯನ್ನು ಓದಲಾಯಿತು. ಸಂವಿಧಾನವನ್ನು ನಾಶಮಾಡುವ "ಕೇಂದ್ರ ಸರ್ಕಾರದ ಪ್ರಯತ್ನಗಳಿಂದ" ಸಂವಿಧಾನವನ್ನು ರಕ್ಷಿಸಲು ಆ ಬಳಿಕ ಪ್ರಮಾಣವಚನ ಸ್ವೀಕರಿಸಲಾಯಿತು.
ಅನೇಕ ಪ್ರಮುಖ ವ್ಯಕ್ತಿಗಳು ಸಹ ಸರಪಳಿಯಲ್ಲಿ ಕೈಜೋಡಿಸಿದ್ದರು.
ಸಂವಿಧಾನವು
ರೂಪಿಸಿದ ಜಾತ್ಯತೀತತೆಗೆ ಪೌರತ್ವ ತಿದ್ದುಪಡಿ ಕಾಯ್ದೆಯು ವಿರುದ್ಧವಾಗಿದೆ ಎಂಬುದಾಗಿ ಕೇರಳ ರಾಜ್ಯ ವಿಧಾನಸಭೆಯು ಕಳೆದ ವರ್ಷ ಡಿಸೆಂಬರ್ನಲ್ಲಿ ನಿರ್ಣಯವನ್ನು ಅಂಗೀಕರಿಸಿತ್ತು ಮತ್ತು ಈ ತಿಂಗಳ ಆರಂಭದಲ್ಲಿ
ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ವಿವಾದಾತ್ಮಕ ಕಾಯ್ದೆಯನ್ನು ಮೊತ್ತ ಮೊದಲನೆಯ ರಾಜ್ಯವಾಗಿ ಪ್ರಶ್ನಿಸಿತ್ತು.
ಎಡ
ಪ್ರಜಾತಾಂತ್ರಿಕ ರಂಗ ಮತ್ತು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ನಿರ್ಣಯವನ್ನು ಅಂಗೀಕರಿಸಲು ಒಗ್ಗೂಡಿದ್ದವು.
ವಿಜಯನ್
ಅವರು ೧೧ ಮುಖ್ಯಮಂತ್ರಿಗಳಿಗೆ ಪತ್ರವನ್ನು ಕೂಡಾ
ಬರೆದು ಪೌರತ್ವ ಕಾಯ್ದೆಯನ್ನು ವಿರೋಧಿಸಲು ಒಗ್ಗೂಡಬೇಕೆಂದು ಒತ್ತಾಯಿಸಿದ್ದರು.
No comments:
Post a Comment