ಅದ್ನಾನ್
ಸಮಿ, ತಸ್ಲೀಮಾ ನಸ್ರೀನ್ ಉದಾಹರಣೆ:
ಪೌರತ್ವ
ತಿದ್ದುಪಡಿ ಕಾಯ್ದೆಗೆ ನಿರ್ಮಲಾ ಸಮರ್ಥನೆ
ಚೆನೈ:
ತಿದ್ದುಪಡಿಗೊಂಡಿರುವ ಪೌರತ್ವ ಕಾಯ್ದೆಯು ಮುಸ್ಲಿಮರ ವಿರುದ್ಧ ತಾರತಮ್ಯ ಮಾಡುತ್ತಿದೆ ಎಂಬ ಟೀಕೆಯನ್ನು ಅಲ್ಲಗಳೆಯಲು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020 ಜನವರಿ 19ರ ಭಾನುವಾರ ಪಾಕಿಸ್ತಾನಿ ಸಂಜಾತ ಗಾಯಕ ಅದ್ನಾನ್ ಸಮಿ ಅವರಿಗೆ ಭಾರತೀಯ ಪೌರತ್ವ ಒದಗಿಸಿರುವುದು ಮತ್ತು ಬಾಂಗ್ಲಾದೇಶದಿಂದ ಗಡೀಪಾರು ಆಗಿರುವ ಬರಹಗಾರ್ತಿ ತಸ್ಲೀಮಾ ನಸ್ರೀನ್ ಅವರು ನವದೆಹಲಿಯಲ್ಲಿ ವಾಸ್ತವ್ಯ ಅನುಮತಿ ಅಡಿಯಲ್ಲಿ ವಾಸವಾಗಿರುವುದನ್ನು ಉದಾಹರಣೆಗಳಾಗಿ ಉಲ್ಲೇಖಿಸಿದರು.
ಬಿಜೆಪಿಯು
ಕೈಗೊಂಡಿರುವ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ರಾಷ್ಟ್ರವ್ಯಾಪಿ ಜನ ಜಾಗೃತಿ ಅಭಿಯಾನದ
ಅಡಿಯಲ್ಲಿ ಸಂಘಟಿಸಲಾಗಿದ್ದ ಸಭೆಯಲ್ಲಿ ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಲು ಸಚಿವರು ಇನ್ನಷ್ಟು ಅಂಕಿಸಂಖ್ಯೆಗಳನ್ನೂ ಒದಗಿಸಿದರು.
‘ಮುನ್ನೂರ
ತೊಂಬತ್ತೊಂದು (೩೯೧) ಮುಸ್ಲಿಮರು ಮತ್ತು ೧೫೯೫ ಪಾಕಿಸ್ತಾನಿ ವಲಸಿಗರಿಗೆ ೨೦೧೬ರಿಂದ ೨೦೧೮ರ ಅವಧಿಯಲ್ಲಿ ಭಾರತದ ಪೌರತ್ವ ನೀಡಲಾಗಿದೆ.
೨೦೧೬ರಲ್ಲಿ ಇದೇ ಅವಧಿಯಲ್ಲಿ ಅದ್ನಾನ್ ಸಮಿ ಅವರಿಗೆ ಭಾರತದ ಪೌರತ್ವ ನೀಡಲಾಯಿತು. ಇದು ಒಂದು ಉದಾಹರಣೆ. ತಸ್ಲೀಮಾ ನಸ್ರೀನ್ ಪ್ರಕರಣ ಇನ್ನೊಂದು ಉದಾಹರಣೆ. ಇದು ನಮ್ಮ ವಿರುದ್ಧದ ಎಲ್ಲ ಆಪಾದನೆಗಳೂ ತಪ್ಪು ಎಂಬುದನ್ನು ಸಾಬೀತು ಪಡಿಸುತ್ತದೆ’ ಎಂದು
ಸೀತಾರಾಮನ್ ಹೇಳಿದರು.
ಲಾಹೋರಿನಲ್ಲಿ
ಜನಿಸಿದ ಅದ್ನಾನ್ ಸಮಿ ಅವರು ೨೦೦೧ರ ಮಾರ್ಚ್ ೧೩ರಂದು ಭಾರತಕ್ಕೆ ಮೊತ್ತ ಮೊದಲಿಗೆ ಪ್ರವಾಸೀ ವೀಸಾದಲ್ಲಿ ಆಗಮಿಸಿದ್ದರು. ಈ ವೀಸಾ ಒಂದು
ವರ್ಷದ ಅವಧಿಗೆ ಸಿಂಧುವಾಗಿತ್ತು. ಅವರಿಗೆ ೨೦೧೦ರ ಮೇ ೨೭ರಂದು ನೀಡಲಾಗಿದ್ದ
ಪಾಕಿಸ್ತಾನಿ ಪಾಸ್ ಪೋರ್ಟ್ ಅವಧಿ ೨೦೧೫ರ ಮೇ ೨೬ಕ್ಕೆ ಮುಕ್ತಾಯವಾಗಿತ್ತು.
ಆ ಬಳಿಕ ಅವರ ಪಾಸ್ ಪೋರ್ಟ್ನ್ನು ಪಾಕಿಸ್ತಾನಿ ಸರ್ಕಾರ ನವೀಕರಿಸಲಿಲ್ಲ. ಹೀಗಾಗಿ ಸಮಿ ಅವರು ಮಾನವೀಯ ನೆಲೆಯಲ್ಲಿ ಭಾರತದಲ್ಲಿನ ತಮ್ಮ ವಾಸ್ತವ್ಯವನ್ನು ಸಕ್ರಮಗೊಳಿಸುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದರು.
೨೦೧೬ರ
ಜನವರಿ ೧ರಂದು ಕಟ್ಟಕಡೆಗೆ ಕೇಂದ್ರ ಗೃಹ ಸಚಿವಾಲಯವು ಅವರಿಗೆ ಭಾರತೀಯ ಪೌರತ್ವವನ್ನು ಒದಗಿಸಿತ್ತು.
ಮುಸ್ಲಿಂ
ವಿರೋಧಿ ಅಭಿಪ್ರಾಯಗಳಿಗಾಗಿ ಬಾಂಗ್ಲಾದೇಶದ ಮೂಲಭೂತವಾದಿಗಳಿಂದ ಪ್ರಾಣಬೆದರಿಕೆಗೆ
ಗುರಿಯಾದ ಲೇಖಕಿ ತಸ್ಲೀಮಾ ನಸ್ರೀನ್ ಭಾರತಕ್ಕೆ ಬಂದು ೨೦೦೪ರಿಂದ ನವದೆಹಲಿಯಲ್ಲಿ ವಾಸ್ತವ್ಯ ಅನುಮತಿಯಡಿಯಲ್ಲಿ ವಾಸವಾಗಿದ್ದಾರೆ.
ಸಾಕ್ಷಿಯಾಗಿ
ಇನ್ನಷ್ಟು ಅಂಕಿಸಂಖ್ಯೆಗಳನ್ನು ಒದಗಿಸಿದ ನಿರ್ಮಲಾ ಸೀತಾರಾಮನ್ ಅವರು ’ಕಳೆದ ವರ್ಷ ಮುಸ್ಲಿಮರೂ ಸೇರಿದಂತೆ ೨೮೩೮ ಪಾಕಿಸ್ತಾನಿ ನಿರಾಶ್ರಿತರು, ೯೪೮ ಆಫ್ಘಾನಿಸ್ಥಾನಿ ನಿರಾಶ್ರಿತರು ಮತ್ತು ೧೭೨ ಮಂದಿ ಬಾಂಗ್ಲಾದೇಶೀ ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡಲಾಗಿದೆ. ೧೯೬೪ರಿಂದ ೨೦೦೮ರ ಅವಧಿಯಲ್ಲಿ ೪,೦೦,೦೦೦
ಕ್ಕೂ ಹೆಚ್ಚಿನ ತಮಿಳರಿಗೆ (ಶ್ರೀಲಂಕೆಯಿಂದ ಬಂದ ನಿರಾಶ್ರಿತರು) ಮತ್ತು ೨೦೧೪ರವರೆಗಿನ ಅವಧಿಯಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದ ೫೬೬ ಮುಸ್ಲಿಮರಿಗೆ ಭಾರತೀಯ
ಪೌರತ್ವ ನೀಡಲಾಗಿದೆ’
ಎಂದು ಕೇಂದ್ರ ವಿತ್ತ ಸಚಿವೆ ವಿವರಿಸಿದರು.
ಪೌರತ್ವ
ತಿದ್ದುಪಡಿ ಕಾಯ್ದೆಯು ಜನರಿಗೆ ಉತ್ತಮ ಜೀವನವನ್ನು ಒದಗಿಸುವ ಒಂದು ಯತ್ನವೇ ಹೊರತು ಯಾರೊಬ್ಬರ ಪೌರತ್ವವನ್ನೂ ಸರ್ಕಾರವು ಕಿತ್ತುಕೊಳ್ಳುವುದಿಲ್ಲ ಎಂದು ಸಚಿವರು ನುಡಿದರು.
‘ಪೂರ್ವ
ಪಾಕಿಸ್ತಾನದಿಂದ ಬಂದಿರುವ ಜನರು ದೇಶದ ವಿವಿಧ ಶಿಬಿರಗಳಲ್ಲಿ ವಾಸವಾಗಿದ್ದಾರೆ. ಅವರು ಈಗಲೂ ಅಲ್ಲೇ ಇದ್ದಾರೆ. ಅವರ ಈ ಬಗೆಯ ಬದುಕಿಗೆ
ಈಗಾಗಲೇ ೫೦-೬೦ ವರ್ಷಗಳಾಗಿವೆ.
ಈ ಶಿಬಿರಗಳಿಗೆ ಭೇಟಿ ನೀಡಿದರೆ ನಿಮ್ಮ ಕರುಳು ಹಿಂಡಿದಂತಾಗುತ್ತದೆ’ ಎಂದು
ಸೀತಾರಾಮನ್ ಹೇಳಿದರು.
ಕೆಲವು
ರಾಜ್ಯಗಳು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅನುಷ್ಠಾನಗೊಳಿಸುವುದಿಲ್ಲ ಎಂಬುದಾಗಿ ನೀಡುತ್ತಿರುವ ಹೇಳಿಕೆಗಳನ್ನು ’ಸಂವಿಧಾನಬಾಹಿರ’ ಎಂಬುದಾಗಿ
ಬಣ್ಣಿಸಿದ ನಿರ್ಮಲಾ, ’ಸಂಸತ್ತು ಅಂಗೀಕರಿಸಿದ ಕಾನೂನು ಜಾರಿಗೊಳ್ಳುವಂತೆ ನೋಡಿಕೊಳ್ಳಬೇಕಾದ್ದು ಎಲ್ಲ ರಾಜ್ಯಗಳ ಜವಾಬ್ದಾರಿ’
ಎಂದು ನುಡಿದರು.
‘ಒಂದು
ರಾಜ್ಯದ ವಿಧಾನಸಭೆ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಿರ್ಣಯ ಅಂಗೀಕರಿಸಿದೆ. ಇದು ರಾಜಕೀಯ ಹೇಳಿಕೆಯಂತೆ ಕಾಣುತ್ತದೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬಲ್ಲೆವು. ಆದರೆ ಅದನ್ನು ಅನುಷ್ಠಾನಗೊಳಿಸುವುದಿಲ್ಲ ಎಂಬುದಾಗಿ ಅವರು ಹೇಳುವುದು ಕಾನೂನಿಗೆ ವಿರುದ್ಧವಾಗುತ್ತದೆ. ಹಾಗೆ ಹೇಳುವುದು ಸಂವಿಧಾನಬಾಹಿರ’ ಎಂದು
ನಿರ್ಮಲಾ ಹೇಳಿದರು.
ತಸ್ಲೀಮಾ
ನಸ್ರೀನ್ ಶ್ಲಾಘನೆ: ಈ ಮಧ್ಯೆ, ಅಧಿಕೃತವಾಗಿ
ಸ್ವೀಡನ್ ಪ್ರಜೆಯಾಗಿರುವ ತಸ್ಲೀಮಾ ನಸ್ರೀನ್ ಅವರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ’ಅತ್ಯುತ್ತಮ ಮತ್ತು ಉದಾತ್ತವಾದ ಕಾನೂನು’ ಎಂದು ತಸ್ಲೀಮಾ ನಸ್ರೀನ್ ಹೇಳಿದ್ದಾರೆ. ಆದರೆ ನೆರೆಯ ರಾಷ್ಟ್ರಗಳಿಂದ ಬರುವ ಮುಸ್ಲಿಮ್
ಮುಕ್ತ ಚಿಂತಕರು, ಮಹಿಳಾವಾದಿಗಳು ಮತ್ತು ಜಾತ್ಯತೀತರಿಗೆ ಈ ಕಾಯ್ದೆಯಡಿಯಲ್ಲಿ ಅವಕಾಶ
ಕಲ್ಪಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
‘ಬಾಂಗ್ಲಾದೇಶ,
ಪಾಕಿಸ್ತಾನ ಮತ್ತು ಆಫ್ಘಾನಿಸ್ಥಾನದ ಧಾರ್ಮಿಕ ಕಿರುಕುಳಕ್ಕೆ ಗುರಿಯಾದ ಅಲ್ಪಸಂಖ್ಯಾತರಿಗೆ ಪೌರತ್ವ (ಭಾರತದ) ಲಭಿಸುತ್ತದೆ ಎಂಬುದನ್ನು ಕೇಳಲು ಅತ್ಯಂತ ಹಿತವಾಗುತ್ತದೆ. ಇದು ಅತ್ಯುತ್ತಮ ಕಲ್ಪನೆ ಮತ್ತು ಉದಾತ್ತ ಚಿಂತನೆ’ ಎಂದು ತಸ್ಲೀಮಾ ಹೇಳಿದರು.
‘ಆದರೆ,
ಮುಸ್ಲಿಮ್ ಸಮುದಾಯದ ಮುಕ್ತ ಚಿಂತಕರು ಮತ್ತು ನಾಸ್ತಿಕರು ಕೂಡಾ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದಲ್ಲಿ ತೀವ್ರ ಕಿರುಕುಳ ಅನುಭವಿಸುತ್ತಾರೆ. ಅವರಿಗೂ ಭಾರತದಲ್ಲಿ ವಾಸಿಸಲು ಹಕ್ಕು ಲಭಿಸಬೇಕು ಎಂಬುದು ನನ್ನ ಯೋಚನೆ’ ಎಂದು ಅವರು ಹೇಳಿದರು.
No comments:
Post a Comment