Monday, January 27, 2020

ಭಾರತದ ಸೇನಾ ಸಾಮರ್ಥ್ಯ, ಸಾಂಸ್ಕೃತಿಕ ವೈವಿಧ್ಯ ಮೆರೆದ ಗಣರಾಜ್ಯೋತ್ಸವ

ವಿನೂತನ ಸಮರಾಸ್ತ್ರ, ಮಹಿಳೆಯರ ಬೈಕ್ ಸಾಹಸ, ಉಕ್ಕಿನ ಹಕ್ಕಿಗಳ ಕಸರತ್ತು
ಭಾರತದ ಸೇನಾ ಸಾಮರ್ಥ್ಯ, ಸಾಂಸ್ಕೃತಿಕ ವೈವಿಧ್ಯ ಮೆರೆದ ಗಣರಾಜ್ಯೋತ್ಸವ
ನವದೆಹಲಿ: ನವದೆಹಲಿಯ ಹೃದಯಭಾಗದಲ್ಲಿನ ರಾಜಪಥದಲ್ಲಿ  2020 ಜನವರಿ 26ರ ಭಾನುವಾರ ನಡೆದ ೯೦ ನಿಮಿಷಗಳ ಭಾರತದ ೭೧ನೇ ಗಣರಾಜ್ಯೋತ್ಸವ ಕವಾಯತು (ಪರೇಡ್) ಭಾರತದ ಬಹುಹಂತದ ಭದ್ರತಾ ಸಾಮರ್ಥ್ಯ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಪ್ರದರ್ಶನದ ಜೊತೆಗೆ ಹಲವಾರು ಪ್ರಥಮಗಳಿಗೆ ಸಾಕ್ಷಿಯಾಯಿತು.

ಸಮಾರಂಭದ ಗೌರವ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ಭಾರತದ ಗಣರಾಜ್ಯೋತ್ಸವ ಸಂಭ್ರಮವನ್ನು ಕಣ್ತುಂಬಿಕೊಂಡರು. ಸಶಸ್ತ್ರ ಪಡೆಗಳ ಗೌರವ ರಕ್ಷೆ ಸ್ವೀಕರಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಜೈರ್ ಬೋಲ್ಸೊನಾರೊ ಜೊತೆಗೆ ರಾಜಪಥದಲ್ಲಿ ಪರೇಡ್ ಮತ್ತು ಟ್ಯಾಬ್ಲೋಗಳನ್ನು ವೀಕ್ಷಿಸಿದರು.

ಬೆಳಗ್ಗೆ ಗಣರಾಜ್ಯೋತ್ಸವ ಸಮಾರಂಭ ಆರಂಭಕ್ಕೂ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಅವರು ಗಣರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರವನ್ನು ಅಭಿನಂದಿಸಿದರು.

ಸಂಪ್ರದಾಯವನ್ನು ಮುರಿದು ಕೇಸರಿ ಪೇಟ ಧರಿಸಿ ಅಮರ ಜವಾನ್ ಜ್ಯೋತಿಗೆ ಬದಲಾಗಿ ರಾಷ್ಟ್ರೀಯ ಸಮರ ಸ್ಮಾರಕಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು ಅಲ್ಲಿಯೇ ಹುತಾತ್ಮರಿಗೆ ಮಾಲಾರ್ಪಣೆ ಮಾಡುವ ಮೂಲಕ ರಾಷ್ಟ್ರದ ಶ್ರದ್ಧಾಂಜಲಿ ಸಲ್ಲಿಸಿದರು.

ಸ್ವಾತಂತ್ರ್ಯ ಕಾಲದಿಂದಲೇ ಕಾರ್ಯಾಚರಣೆಗಳಲ್ಲಿ ಹುತಾತ್ಮರಾದ ಯೋಧರ ನೆನಪಿಗಾಗಿ ಇಂಡಿಯಾ ಗೇಟ್ ಸಮೀಪ ರಾಷ್ಟ್ರೀಯ ಸಮರ ಸ್ಮಾರಕವನ್ನು ನಿರ್ಮಿಸಲಾಗಿದೆ.

ಸರಣಿ ಪ್ರಥಮಗಳು: ಸೇನೆಯ ಸಮರ ಟ್ಯಾಂಕ್ ಭೀಷ್ಮ, ಪದಾತಿ ಯುದ್ಧ ವಾಹನ ಬಾಲ್ ವೇ ಮೆಷಿನ್ ಪಿಕಾಟೆ ಮತ್ತು ವಾಯುಪಡೆಯ ವಿನೂತನ ರಫೇಲ್ ಯುದ್ಧ ವಿಮಾನ ಹಾಗೂ ವಾಯುಪಡೆಗೆ ಹೊಸದಾಗಿ ಸೇರ್ಪಡೆಯಾದ ಚಿನೂಕ್ ಸಮರವಿಮಾನ ಮತ್ತು ಅಪಾಚೆ ಹೆಲಿಕಾಪ್ಟರುಗಳ ಪ್ರದರ್ಶನದೊಂದಿಗೆ ಸಂಪೂರ್ಣ ಪರೇಡಿನಲ್ಲಿ ಭಾರತದ ಸಶಸ್ತ್ರ ಪಡೆಗಳು ಕೇಂದ್ರ ಸ್ಥಾನದಲ್ಲಿ ಮಿಂಚಿದವು.

ಭಾರತೀಯ ಸೇನಾ ಕ್ಯಾಪ್ಟನ್ ಮೃಗಾಂಕ್ ಭಾರದ್ವಾಜ್ ಮುನ್ನಡೆಸಿದ ದೀರ್ಘಗಾಮೀ ಆರ್ಟಿಲರಿ ಗನ್ ಧನುಶ್, ರಾಜಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡಿನಲ್ಲಿ ಇದೇ ಮೊತ್ತ ಮೊದಲ ಬಾರಿಗೆ ಕಾಣಿಸಿಕೊಂಡಿತು.

ಹೊವಿಟ್ಜರ್ ವಿನ್ಯಾಸದ ೧೫೫ ಎಂಎಂ/೪೫ ಕ್ಯಾಲಿಬರ್ ಧನುಶ್ ಬಂದೂಕು ವ್ಯವಸ್ಥೆಯನ್ನು ದೇಶದ ಸಶಸ್ತ್ರ ಪಡೆಗಳ ಕಾರ್ಖಾನೆ ಮಂಡಳಿಯು ದೇಶೀಯವಾಗಿ ನಿರ್ಮಿಸಿದೆ. ೩೬. ಕಿಮೀ ಗರಿಷ್ಠ ವ್ಯಾಪ್ತಿಯ ಗುಂಡು ಹಾರಿಸುವ ಸಾಮರ್ಥ್ಯದ ಜೊತೆಗೆ ಗನ್ ಹೊಂದಿಸುವ ಸ್ವಯಂಚಾಲಿತ ವ್ಯವಸ್ಥೆಗಳನ್ನೂ ಇದು ಹೊಂದಿದೆ.

ಮೈನವಿರೇಳಿಸಿದ ಮಹಿಳಾ ಸಾಹಸ: ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಸರ್ವ ಮಹಿಳಾ ಬೈಕ್ ಸವಾರರ ತುಕಡಿ ಕೂಡಾ ೭೧ನೇ ಗಣರಾಜ್ಯೋತ್ಸವದಲ್ಲಿ ಚೊಚ್ಚಲ ಸಾಹಸ ಪ್ರದರ್ಶಿಸಿತು. ಕ್ಷಿಪ್ರ ಕಾರ್ ಪಡೆಗೆ (ರಾಪಿಡ್ ಆಕ್ಸ್ನ್ ಫೋರ್ಸ್ -ಆರ್ಎಎಫ್) ನಿಯೋಜಿತರಾಗಿರುವ ಇನ್ಸ್ಪೆಕ್ಟರ್ ಸೀಮಾ ನಾಗ್ ಅವರು ತುಕಡಿಯನ್ನು ಮುನ್ನಡೆಸಿದರು. ಮುನ್ನುಗ್ಗುತ್ತಿದ್ದ ಮೋಟಾರ್ ಸೈಕಲ್ ಮೇಲಿನ ಮಹಿಳಾ ಯೋಧರ ಗುಂಪಿನ ತುತ್ತ ತುದಿಯಲಿ ನಿಂತುಕೊಂಡು ಸೀಮಾ ನಾಗ್ ಅವರು ಗೌರವ ವಂದನೆ ನೀಡಿದ್ದು ಪ್ರೇಕ್ಷಕರ ಮೈನವಿರೇಳಿಸಿತು.

ಹಲವಾರು ಡೇರ್ ಡೆವಿಲ್ ಸ್ಟಂಟ್ಗಳನ್ನು ಪ್ರದರ್ಶಿಸುವ ಮೂಲಕ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದ ೨೧ ಸಿಬ್ಬಂದಿಯನ್ನು ಒಳಗೊಂಡಿದ್ದ ಮಹಿಳಾ ಬೈಕ್ ಸವಾರರು ಚಲಿಸುತ್ತಿದ್ದ ಐದು ಮೋಟಾರ್ ಸೈಕಲ್ಗಳ ಮೇಲೆ ಮಾನವ ಸರಪಣಿ ನಿರ್ಮಿಸುವುದರೊಂದಿಗೆ ತಮ್ಮ ಸಾಹಸ ಪ್ರದರ್ಶನವನ್ನು ಸಮಾಪ್ತಿಗೊಳಿಸಿದರು.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ತುಕಡಿಯು ಉಪಗ್ರಹ ನಿಗ್ರಹ ಶಸ್ತ್ರಾಸ್ತ್ರಗಳು (ಎಸ್ಯಾಟ್) - ಮಿಷನ್ ಶಕ್ತಿಯನ್ನು ಪ್ರದರ್ಶಿಸಿದ್ದು ಪರೇಡಿನ ಇನ್ನೊಂದು ಹೈಲೈಟ್ ಆಗಿತ್ತು.  ಮಿಷನ್ ಶಕ್ತಿಯು ಭಾರತದ ಪ್ರಪ್ರಥಮ ಉಪಗ್ರಹ ನಿಗ್ರಹ ಮಿಷನ್ ಆಗಿದ್ದು, ವೈರಿ ಉಪಗ್ರಹಗಳನ್ನು ಹೊಡೆದುರುಳಿಸಬಲ್ಲ ರಾಷ್ಟ್ರದ ಸಾಮರ್ಥ್ಯವನ್ನು ಅನಾವರಣಗೊಳಿಸಿದ್ದು ಮಹತ್ವದ ಪ್ರಗತಿಯಾಗಿದೆ.

ಸಶಸ್ತ್ರಪಡೆಗಳಿಗೆ ಹೊಸದಾಗಿ ಸೇರ್ಪಡೆಯಾಗಿರುವ ಚಿನೂಕ್ ಹೆವಿ ಲಿಫ್ಟ್ ಮತ್ತು ಅಪಾಚೆ ದಾಳಿ ವಿಮಾನಗಳು ಕೂಡಾ ಇದೇ ಮೊದಲ ಬಾರಿಗೆ ರಾಜಪಥಧ ಕವಾಯತಿನಲ್ಲಿ ಪ್ರದರ್ಶನಗೊಂಡವು.
ಸೇನಾ ವಾಯು ರಕ್ಷಣಾ ಕೇಂದ್ರದ ಕ್ಯಾಪ್ಟನ್ ವಿಕಾಸ್ ಕುಮಾರ್ ಸಾಹು ನೇತೃತ್ವದಲ್ಲಿ ಸೇನಾ ವಾಯು ರಕ್ಷಣಾ ವಿಶೇಷ ತಂಡ ಕೂಡಾ ಇದೇ ಮೊದಲ ಬಾರಿಗೆ ಪಥಸಂಚಲನದಲ್ಲಿ ಪಾಲ್ಗೊಂಡಿತು.

ಪಥ ಸಂಚಲನ: ಗಣರಾಜ್ಯೋತ್ಸವ ಪಥ ಸಂಚಲನದ ನೇತೃತ್ವವನ್ನು ದೆಹಲಿ ಪ್ರದೇಶದ ಪೆರೇಡ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಆಸಿತ್ ಮಿಸ್ತ್ರಿ, ಜನರಲ್ ಆಫೀಸರ್ ಕಮಾಂಡಿಂಗ್ ವಹಿಸಿದ್ದರು. ದೆಹಲಿ ಪ್ರದೇಶದ ಮುಖ್ಯಸ್ಥ ಮೇಜರ್ ಜನರಲ್ ಅಲೋಕ್ ಕ್ಯಾಕರ್ ಎರಡನೇ ಕಮಾಂಡ್ ಆಗಿದ್ದರು.
ಹಿಂದಿನ ಗ್ವಾಲಿಯರ್ ಲ್ಯಾನ್ಸರ್ಗಳ ಸಮವಸ್ತ್ರದಲ್ಲಿ ಮೊದಲ ತುಕಡಿ ೬೧ ಅಶ್ವದಳ - ವಿಶ್ವದ ಏಕೈಕ ಸಕ್ರಿಯ ಕುದುರೆ ಅಶ್ವದಳದ ರೆಜಿಮೆಂಟ್ ಅವರನ್ನು ಹಿಂಬಾಲಿಸಿತು. ತುಕಡಿ ೬೧ ಅಶ್ವದಳವನ್ನು ಆರು ರಾಜ್ಯ ಪಡೆಗಳ ಅಶ್ವಸೈನ್ಯ ಘಟಕಗಳ ಸಂಯೋಜನೆಯೊಂದಿಗೆ ಆಗಸ್ಟ್ , ೧೯೫೩ ರಂದು ರಚಿಸಲಾಗಿದೆ.

ಭಾರತೀಯ ಸೈನ್ಯವನ್ನು ೬೧ ಅಶ್ವದಳ, ಎಂಟು ಯಾಂತ್ರಿಕೃತ ಕಾಲಮ್ಗಳು, ಫ್ಲೈ-ಪಾಸ್ಟ್ನಿಂದ ರುದ್ರ ಮತ್ತು ಧ್ರುವ್ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ಗಳು ವಾಯುಪಡೆ ವಿಭಾಗದಿಂದ ಪ್ರತಿನಿದಿಸಿದವು.

ಸೈನ್ಯದ ಇತರ ಪ್ರದರ್ಶನಗಳಲ್ಲಿ ಪ್ಯಾರಾಚ್ಯೂಟ್ ರೆಜಿಮೆಂಟ್, ಗ್ರೆನೇಡಿಯರ್ಸ್ ರೆಜಿಮೆಂಟ್, ಸಿಖ್ ಲೈಟ್ ಕಾಲಾಳುಪಡೆ ರೆಜಿಮೆಂಟ್, ಕುಮಾವೂನ್ ರೆಜಿಮೆಂಟ್ ಮತ್ತು ಕಾರ್ಪ್ಸ್ ಆಫ್ ಸಿಗ್ನಲ್ಸ್ ಸೇರಿದ್ದವು.

ಭಾರತೀಯ ಸೇನೆಯು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಮುಖ್ಯ ಸಮರ ಟ್ಯಾಂಕ್,  ಟಿ -೯೦ ಭೀಷ್ಮ ಟ್ಯಾಂಕ್, ಕಾಲಾಳುಪಡೆ ಯುದ್ಧ ವಾಹನ ಬಾಲ್ವೇ ಮೆಷಿನ್ ಪಿಕೇಟ್, ಕೆ - ವಜ್ರ ಮತ್ತು ಧನುಶ್ ಬಂದೂಕುಗಳು, ಸಾಗಿಸಬಹುದಾದ ಉಪಗ್ರಹ ಟರ್ಮಿನಲ್ ಮತ್ತು ಆಕಾಶ್ ಶಸ್ತ್ರಾಸ್ತ್ರ ವ್ಯವಸ್ಥೆಯು ಯಾಂತ್ರಿಕೃತ ಕಾಲಮ್ಗಳಲ್ಲಿ ಪ್ರಮುಖ ಆಕರ್ಷಣೆಗಳಾಗಿದ್ದವು.

ಭಾರತೀಯ ನೌಕಾಪಡೆಯ ದಳವು ಲೆಫ್ಟಿನೆಂಟ್ ಜಿತಿನ್ ಮಲ್ಕಾಟ್ ನೇತೃತ್ವದ ೧೪೪ ನಾವಿಕರನ್ನು ಒಳಗೊಂಡಿತ್ತು. ಅದರ ನಂತರ ನೌಕಾಪಡೆಯ ಟ್ಯಾಬ್ಲೋ  ಇಂಡಿಯನ್ ನೇವಿ - ಸೈಲೆಂಟ್, ಸ್ಟ್ರಾಂಗ್ ಮತ್ತು ಸ್ವಿಫ್ಟ್ಸಾಗಿಬಂತು.

೧೪೪ ವಾಯು ಯೋಧರನ್ನು ಒಳಗೊಂಡ ಐಎಎಫ್ ತುಕಡಿಯನ್ನು ಫ್ಲೈಟ್ ಲೆಫ್ಟಿನೆಂಟ್ ಶ್ರೀಕಾಂತ್ ಶರ್ಮಾ ಮುನ್ನಡೆಸಿದರು. ವಾಯುಪಡೆಯ ತಂಡವು ರಫೇಲ್ ಮತ್ತು ತೇಜಸ್ ವಿಮಾನ, ಸ್ಕೇಲ್-ಡೌನ್ ಮಾದರಿಗಳು, ಹಗರು ಯುದ್ಧ ಹೆಲಿಕಾಪ್ಟರ್, ಆಕಾಶ್ ಕ್ಷಿಪಣಿಗಳ ವ್ಯವಸ್ಥೆ ಮತ್ತು ಅಸ್ಟ್ರಾ ಕ್ಷಿಪಣಿಗಳನ್ನು ಪ್ರದರ್ಶಿಸಿತು.

ಟ್ಯಾಬ್ಲೋ  ಮತ್ತು ಅತಿ ವೇಗದ ಸಾಹಸಗಳು: ಹೊಸದಾಗಿ ರಚಿಸಲಾದ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹದಿನಾರು ಟ್ಯಾಬ್ಲೋಗಳು ದೇಶದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯವನ್ನು ಪ್ರದರ್ಶಿಸಿದವು.

ಸ್ಟಾರ್ಟ್-ಅಪ್ ಇಂಡಿಯಾ ಮತ್ತು ಜಲ ಜೀವನ್ ಮಿಷನ್ ಸೇರಿದಂತೆ ಸರ್ಕಾರದ ಹಲವಾರು ಸುಧಾರಣೆಗಳನ್ನು ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಆರು ಟ್ಯಾಬ್ಲೋಗಳ ಮೂಲಕ ಪ್ರದರ್ಶಿಸಲಾಯಿತು.

ಪರೇಡಿನಲ್ಲಿ ದೆಹಲಿಯ ಶಾಲಾ ಮಕ್ಕಳು ಯೋಗ ಮತ್ತು ರವೀಂದ್ರನಾಥ ಟ್ಯಾಗೋರ್ ಅವರ ಹಾಡನ್ನು ಒಳಗೊಂಡಂತೆ ಹಲವಾರು ನೃತ್ಯಗಳನ್ನು ಪ್ರದರ್ಶಿಸಿದರು.

ಗಣರಾಜ್ಯೋತ್ಸವದ ಪರೇಡಿನಲ್ಲಿ ೨೦೨೦ರ ಸಾಲಿನ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪುರಸ್ಕೃತ ಮಕ್ಕಳು ಪಾಲ್ಗೊಂಡಿದ್ದರು.

೧೮ ಬಾಲಕಿಯರು ಮತ್ತು ೩೧ ಬಾಲಕರು ಸೇರಿದಂತೆ ೪೯ ಮಕ್ಕಳು ಶೌರ್ಯ, ನಾವೀನ್ಯತೆ, ಪಾಂಡಿತ್ಯ, ಕ್ರೀಡೆ, ಕಲೆ, ಸಂಸ್ಕೃತಿ, ಸಾಮಾಜಿಕ ಸೇವೆ ಮತ್ತು ಸಂಗೀತ ಕ್ಷೇತ್ರಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ.

ಫ್ಲೈ-ಪಾಸ್ಟ್ - ಗ್ರ್ಯಾಂಡ್ ಫಿನಾಲೆ ಮತ್ತು ಪರೇಡಿನ ಅತ್ಯಂತ ಕುತೂಹಲದ ವಿಭಾಗದಲ್ಲಿ ಮೂರು ಸುಧಾರಿತ ಹಗರ ಹೆಲಿಕಾರುಗಳುತ್ರಿಶೂಲ್ರಚನೆಯನ್ನು ಪ್ರದರ್ಶಿಸಿದವು.

ಭಾರಿಯ  ಗಣರಾಜ್ಯೋತ್ಸವದ ಪರೇಡಿನಲ್ಲಿ ಮೊದಲ ಬಾರಿಗೆ "ತ್ರಿ-ಸೇವಾ ರಚನೆ" ಕೂಡ ಇತ್ತು. ಅದರ ನಂತರ ಚಿನೂಕ್ ಹೆಲಿಕಾಪ್ಟರ್ಗಳವಿಕ್ರಚನೆಯು ವೈವಿಧ್ಯಮಯ ಹೊರೆಗಳನ್ನು ದೂರದ ಸ್ಥಳಗಳಿಗೆ ವಿಮಾನಯಾನ ಮೂಲಕ ಮೇಲೆತ್ತಿ ಸಾಗಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿತು.

ಅಪಾಚೆ ಹೆಲಿಕಾಪ್ಟರುಗಳು, ಡಾರ್ನಿಯರ್ ವಿಮಾನ, ಸಿ -೧೩೦ ಜೆ ಸೂಪರ್ ಹರ್ಕ್ಯುಲಸ್ ವಿಮಾನ, ವಾಯುಗಾಮಿ ಆರಂಭಿಕ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆಯ ವಿಮಾನ ಮತ್ತು ಮೂರು ಸಿ -೧೭ ಗ್ಲೋಬ್ ಮಾಸ್ಟರ್ ಗಳನ್ನು ಒಳಗೊಂಡಗ್ಲೋಬ್ (ಭೂಗೋಳ) ರಚನೆ ಸಹ ಪ್ರೇಕ್ಷಕರನ್ನು ಮೋಡಿ ಮಾಡಿತು.

ಏರೋಹೆಡ್ರಚನೆಯಲ್ಲಿ ಆಳ ದಾಳಿ ಸಾಮರ್ಥ್ಯದ ಐದು ಜಾಗ್ವಾರ್ ವಿಮಾನಗಳು ಮತ್ತು ಮೇಲ್ದರ್ಜೆಗೆ ಏರಿಸಲಾದ ಐದು ಮಿಗ್ -೨೯ ವಿಮಾನಗಳು ವೈಮಾನಿಕ ಕುಶಲತೆಯನ್ನು ಪ್ರದರ್ಶಿಸಿದವು.

ಸುಖೋಯ್ -೩೦ ಎಂಕೆಐ ವಿಮಾನಗಳ ಒಂದು ತುಕಡಿಯು ವೈಮಾನಿಕ ಕುಶಲತೆ ಪ್ರದರ್ಶನ ಮೂಲಕ ಪ್ರೇಕ್ಷಕರನ್ನು ಕಟ್ಟ ಕಡೆಯದಾಗಿ ಉಸಿರು ಕಟ್ಟಿ ನೋಡುವಂತೆ ಮಾಡಿತು.


ಅಸ್ಸಾಮಿನಲ್ಲಿ ಲಘು ಸ್ಫೋಟಗಳು: ರಾಷ್ಟ್ರವ್ಯಾಪಿ ಗಣರಾಜ್ಯೋತ್ಸವ ಸಂಭ್ರಮಾಚರಣೆಗಳ ಮಧ್ಯೆಅಸ್ಸಾಂ ಮೇಲ್ಭಾಗದ ಕೆಲವು ಪ್ರದೇಶಗಳಲ್ಲಿ ನಿಷೇಧಿತ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂಇಂಡಿಪೆಂಡೆಂಟ್ (ಯುಎಲ್ಎಫ್-ಯೋಜಿಸಿದ್ದು ಎಂಬುದಾಗಿ ಶಂಕಿಸಲಾಗಿರುವ ಹಲವಾರು ಕಡಿಮೆ ತೀವ್ರತೆಯ ಸ್ಫೋಟಗಳು ಸಂಭವಿಸಿದವು.

ಅಸ್ಸಾಮಿನ ಮತ್ತು ಈಶಾನ್ಯ ಭಾಗದ ಉಗ್ರಗಾಮಿ ಸಂಘಟನೆಗಳು ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯೋತ್ಸವ ಆಚರಣೆ ನಿಷೇಧಕ್ಕೆ ನಿಯಮಿತವಾಗಿ ಕರೆ ನೀಡುತ್ತಿದ್ದುತಮ್ಮ ಹಾಜರಿಯನ್ನು ದಾಖಲಿಸಲು ಮತ್ತು ಭೀತಿ ಸೃಷ್ಟಿಯ ಸಲುವಾಗಿ ಲಘು ಸ್ಫೋಟಗಳನ್ನು ನಡೆಸುತ್ತಿವೆ.

No comments:

Advertisement