Sunday, January 12, 2020

ವಿಮಾನ ಹೊಡೆದುರುಳಿಸಿದ್ದು ನಾವೇ: ಇರಾನ್ ತಪ್ಪೊಪ್ಪಿಗೆ

  ವಿಮಾನ ಹೊಡೆದುರುಳಿಸಿದ್ದು ನಾವೇ:  ಇರಾನ್ ತಪ್ಪೊಪ್ಪಿಗೆ
ತಪ್ಪಿತಸ್ಥರಿಗೆ ಶಿಕ್ಷೆ, ಪರಿಹಾರಕ್ಕೆ ಉಕ್ರೇನ್ ಆಗ್ರಹ
ದುಬೈ: ಭಾರಿ ಚರ್ಚೆಗೆ ಗ್ರಾಸವಾಗಿದ್ದ ಉಕ್ರೇನ್ ಇಂಟರ್ ನ್ಯಾಷನಲ್ ಏರ್ಲೈನ್ಸ್ ಬೋಯಿಂಗ್ ವಿಮಾನ ಪತನಗೊಳ್ಳಲು ತಾನೇ ಕಾರಣ ಎಂದು ಇರಾನ್  2020 ಜನವರಿ 11ರ ಶನಿವಾರ ಒಪ್ಪಿಕೊಂಡಿತು.  ಆದರೆ ಇದು ಮಾನವ ತಪ್ಪು ಗ್ರಹಿಕೆಯಿಂದ ಆದ ದುರಂತವೇ ಹೊರತು ಉದ್ದೇಶಪೂರ್ವಕ ಅಲ್ಲ ಇರಾನ್ ಪ್ರತಿಪಾದಿಸಿತು.

ಕ್ರೂಸ್ ಕ್ಷಿಪಣಿ ಎಂಬುದಾಗಿ ತಪ್ಪಾಗಿ ಗ್ರಹಿಸಿ ಉಕ್ರೇನ್ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂಬುದಾಗಿ ಇರಾನ್ ತಪ್ಪೊಪ್ಪಿಕೊಂಡ ಬೆನ್ನಲ್ಲೇ ಉಕ್ರೇನ್ತಪ್ಪಿತಸ್ಥರನ್ನು ಶಿಕ್ಷಿಸುವಂತೆ ಮತ್ತು ಪರಿಹಾರ ನೀಡುವಂತೆಇರಾನನ್ನು ಆಗ್ರಹಿಸಿತು.

ವಿಮಾನ ಪತನಕ್ಕೆ ಸಂಬಂಧಿಸಿದಂತೆ ತನಿಖೆಗೆ ಮಿಲಿಟರಿ ನ್ಯಾಯಾಂಗ ಇಲಾಖೆಗೆ ಆದೇಶ ನೀಡಲಾಗಿತ್ತು.

ಇರಾನ್ ವಿದೇಶಾಂಗ ಸಚಿವ ಜಾವೇದ್ ಜರೀಫ್ ಅವರು ಟ್ವೀಟ್ ಮಾಡಿ, ಸೇನೆ ಕೈಗೊಂಡ ಆಂತರಿಕ ತನಿಖೆಯಲ್ಲಿ ಅಮೆರಿಕದ ದುಸ್ಸಾಹಸದಿಂದ ಉಂಟಾದ ಬಿಕ್ಕಟ್ಟಿನ ಸಮಯದಲ್ಲಿ ಮಾನವ ದೋಷದಿಂದಾಗಿ ವಿಪತ್ತು ಸಂಭವಿಸಿರುವುದು ಬೆಳಕಿಗೆ ಬಂದಿದೆ. ದುರಂತದಲ್ಲಿ ಮೃತರಾದವರ ಮತ್ತು ಸಂಬಂಧಿಸಿದ ರಾಷ್ಟ್ರಗಳಿಗೆ ತೀವ್ರ ವಿಷಾದ ಸೂಚಿಸುತ್ತಾ ಕ್ಷಮೆ ಕೋರುತ್ತೇವೆ ಎಂದು ಟ್ವೀಟ್ ಮಾಡಿದರು.

ಕ್ರೂಸ್ ಕ್ಷಿಪಣಿ ಎಂಬುದಾಗಿ ತಪ್ಪಾಗಿ ಭಾವಿಸಿ ಉಕ್ರೇನ್ ವಿಮಾನವನ್ನು ಹೊಡೆದುರುಳಿಸಲಾಗಿತ್ತುಎಂದು ಹಿರಿಯ ರೆವಲ್ಯೂಷನರಿ ಗಾಡ್ಸ್ ಕಮಾಂಡರ್ ಹೇಳಿದ್ದನ್ನು ಕೂಡಾ ಇರಾನಿನ ಸರ್ಕಾರಿ ಸ್ವಾಮ್ಯದ ಟೆಲಿವಿಷನ್ ಶನಿವಾರ ವರದಿ ಮಾಡಿತು.

ವಿಮಾನವನ್ನು ಸಮೀಪವಲಯ ಸಾಮರ್ಥ್ಯದ ಕ್ಷಿಪಣಿ ಮೂಲಕ ಹೊಡೆದುರುಳಿಸಲಾಯಿತು ಎಂದು ಏರೋಸ್ಪೇಸ್ ವಿಭಾಗದ ಮುಖ್ಯಸ್ಥ ಅಮೀರಾಲಿ ಹಾಜಿದಾದೇಹ್ ಹೇಳಿದರು.

ನಾನು ಸಾಯಲು ಬಯಸುತ್ತೇನೆಯೇ ಹೊರತು ಇಂತಹ ದುರಂತವನ್ನು ನೋಡಲು ಅಲ್ಲಎಂದು ಅಮೀರಾಲಿ ನುಡಿದರು.

ಮೊದಲು ಉಕ್ರೇನ್  ಇಂಟರ್ ನ್ಯಾಷನಲ್ ಏರ್ ಲೈನ್ಸ್ ಬೋಯಿಂಗ್ ವಿಮಾನ ಪತನಗೊಳ್ಳಲು ಇರಾನ್ ನಡೆಸಿದ ಕ್ಷಿಪಣಿ ದಾಳಿಯೇ ಕಾರಣ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು.

ಇರಾಕಿನಲ್ಲಿರುವ
ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಹಾರಿಸಿದ್ದ ಕ್ಷಿಪಣಿಗಳ ಪೈಕಿ ಒಂದು ಆಕಸ್ಮಿಕವಾಗಿ ವಿಮಾನಕ್ಕೆ ಬಡಿದು ದುರಂತ ಸಂಭವಿಸಿದೆ ಎಂದು ಅಮೆರಿಕ, ಕೆನಡಾ ಹಾಗೂ ಇಂಗ್ಲೆಂಡ್ ಅಧಿಕಾರಿಗಳು ಮಾಹಿತಿ ನೀಡಿದ್ದರು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೂ ಇದೇ ಅನುಮಾನ ವ್ಯಕ್ತ ಪಡಿಸಿದ್ದರು. ಆದರೆ ಇರಾನ್ ಇದನ್ನು ನಿರಾಕರಿಸಿತ್ತು.

ಜನವರಿ ೮ರಂದು ಇರಾನ್ ರಾಜಧಾನಿ ಟೆಹರಾನಿನಿಂದ ಉಕ್ರೇನಿನ ಕೀವ್ ಗೆ ಹೊರಟಿದ್ದ ಉಕ್ರೇನ್ ಇಂಟರ್ ನ್ಯಾಷನಲ್ ಏರ್ ಲೈನ್ಸ್ ಬೋಯಿಂಗ್ ೭೩೭ ವಿಮಾನವು ಗಗನಕ್ಕೇ ಏರಿದ ಕೆಲವೇ ಕ್ಷಣಗಳಲ್ಲಿ ವಿಮಾನ ನಿಲ್ದಾಣದ ಬಳಿ ಪತನಗೊಂಡಿತ್ತು. ಪರಿಣಾಮವಾಗಿ ವಿಮಾನದಲ್ಲಿದ್ದ ೧೬೮ ಪ್ರಯಾಣಿಕರು ಮತ್ತು ಸಿಬ್ಬಂದಿ ಮೃತಪಟ್ಟಿದ್ದರು. ವಿಮಾನದಲ್ಲಿ ೬೩ ಮಂದಿ ಕೆನಡಾ ಪ್ರಯಾಣಿಕರು, ೧೧ ಮಂದಿ ಉಕ್ರೇನಿಯನ್ನರು ಮತ್ತು ೮೨ ಮಂದಿ ಇರಾನ್ ಪ್ರಜೆಗಳು ಇದ್ದರು.

ಉಕ್ರೇನ್ ವಿಮಾನ ಪತನದ ನೈಜ ಕಾರಣವನ್ನು ಇರಾನ್ ಇರಾನ್ ಒಪ್ಪಿಕೊಳ್ಳುತ್ತಿದ್ದಂತೆಯೇ ಉಕ್ರೇನಿನ ಅಧ್ಯಕ್ಷ ವೊಲೊಡಿಮೈರ್ ಝೆಲೆನ್ ಸ್ಕಿ ಅವರು ಶನಿವಾರ ವಿಮಾನ ಪತನಕ್ಕೆ ಕಾರಣರಾದವನ್ನು ಶಿಕ್ಷಿಸುವಂತೆ ಮತ್ತು ಪರಿಹಾರ ಪಾವತಿ ಮಾಡುವಂತೆ ಆಗ್ರಹಿಸಿದರು.

ಇರಾನ್ ತಪ್ಪಿತಸ್ಥರನ್ನು ಕೋರ್ಟ್ ಕಟಕಟೆಗೆ ತರುತ್ತದೆ ಮತ್ತು ಪರಿಹಾರ ಪಾವತಿ ಮಾಡುತ್ತದೆ ಎಂಬುದಾಗಿ ನಾವು ನಿರೀಕ್ಷಿಸುತ್ತೇವೆಎಂದು ಝೆಲೆನ್ ಸ್ಕಿ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯಿಸಿದರು.
ಶನಿವಾರದವರೆಗೂ ದುರಂತದ ಬಗ್ಗೆ ಮೌನವಾಗಿದ್ದ ಇರಾನಿನ ಉನ್ನತ ನಾಯಕ ಅಲಿ ಖೊಮೇನಿ ಈದಿನ ಮಾಹಿತಿಯನ್ನು ಬಹಿರಂಗ ಪಡಿಸಲು ಸೂಚನೆ ನೀಡಿದರು.

ವಿಮಾನ ಪತನಕ್ಕೆ ಕೆಲವು ಗಂಟೆಗಳ ಮುನ್ನ ಇರಾಕಿನಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಖಂಡಾಂತರ ಕ್ಷಿಪಣಿ ದಾಳಿಗಳನ್ನು ನಡೆಸಿತ್ತು.

No comments:

Advertisement