Wednesday, January 15, 2020

ಇಲ್ಲದಿದ್ದರೆ ಮುಂದಿನ ತಿಂಗಳಿನಿಂದ ನಿಮ್ಮ ಪಿಂಚಣಿ ನಿಂತುಹೋಗಬಹುದು..!

ಇಲ್ಲದಿದ್ದರೆ ಮುಂದಿನ ತಿಂಗಳಿನಿಂದ  ನಿಮ್ಮ ಪಿಂಚಣಿ  ನಿಂತುಹೋಗಬಹುದು..!
ಲಕ್ನೋ: ಇಪಿಎಫ್‌ಒ ಪಿಂಚಣಿದಾರರಿಗೆ  ಸಿಹಿ ಸುದ್ದಿ. ಪಿಂಚಣಿದಾರರು ಪ್ರತಿ ವರ್ಷ ನವೆಂಬರ್‌ನಲ್ಲಿ ಜೀವಂತ ಪ್ರಮಾಣಪತ್ರಗಳನ್ನು (ಲೈಫ್ ಸರ್ಟಿಫಿಕೇಟ್ ) ನೀಡಬೇಕು ಎಂಬ ಕಡ್ಡಾಯ ನಿಯಮ ಇದೀಗ ಸಡಿಲಿಕೆಯಾಗಿದೆ.

ಪಿಂಚಣಿದಾರರು ಈಗ ತಮ್ಮ ಅನುಕೂಲಕ್ಕೆ ಅನುಗುಣವಾಗಿ ವರ್ಷದ ಯಾವುದೇ ತಿಂಗಳಲ್ಲಿ ಜೀವಂತ ಪ್ರಮಾಣಪತ್ರಗಳನ್ನು ನೀಡಬಹುದು. ಆದರೆ ಒಂದು ಶರತ್ತು:  ನೀವು ಜನವರಿಯಲ್ಲಿ ಪ್ರಮಾಣಪತ್ರವನ್ನು ಸಲ್ಲಿಸಿದರೆ, ಮುಂದಿನ ವರ್ಷದ ಜನವರಿ ತಿಂಗಳಲ್ಲೇ  ನೀವು ಅದನ್ನು ಸಲ್ಲಿಸಬೇಕಾಗುತ್ತದೆ , ಇಲ್ಲದಿದ್ದರೆ ಪಿಂಚಣಿಯನ್ನು ನಂತರದ ತಿಂಗಳಿನಿಂದ ತಡೆಹಿಡಿಯಲಾಗುತ್ತದೆ.

ಇಪಿಎಫ್‌ಒ ಪ್ರಧಾನ ಕಚೇರಿ ಆಯುಕ್ತ ಮುಖೇಶ್ ಕುಮಾರ್ ಈ ಕುರಿತು ಸೂಚನೆಗಳನ್ನು ನೀಡಿದ್ದಾರೆ.

ಇಪಿಎಫ್‌ಒ ಇದುವರೆಗೆ ಡಿಸೆಂಬರ್‌  ಒಳಗಾಗಿ ಅಂದರೆ ನವೆಂಬರ್ ತಿಂಗಳಿನಲ್ಲೇ  ಜೀವಂತ ಪ್ರಮಾಣಪತ್ರವನ್ನು ಸಲ್ಲಿಸುವ ನಿಯಮವನ್ನು ಮಾಡಿತ್ತು. ಇದರಿಂದಾಗಿ , ಪ್ರಾದೇಶಿಕ ಕಚೇರಿಗಳಲ್ಲಿ ಪಿಂಚಣಿದಾರರ ಒತ್ತಡ ಹೆಚ್ಚುತ್ತಿತ್ತು.

ನವೆಂಬರ್  ತಿಂಗಳು ಪೂರ್ತಿ ಪಿಂಚಣಿದಾರರ ಜಮಾವಣೆಯಿಂದಾಗಿ ಎಲ್ಲ ಕಚೇರಿಗಳ ಕಾರ್ಯಚಟುವಟಿಕೆಗೆ ತೊಂದರೆಯಾಗುತ್ತಿತ್ತು. ಈ ಒತ್ತಡ ನಿವಾರಣೆ ಸಲುವಾಗಿ ಇಪಿಎಫ್‌ಒ ಅದನ್ನು ವರ್ಷದ ಯಾವುದೇ ತಿಂಗಳಲ್ಲಿ ಸಲ್ಲಿಸಬಹುದು ಎಂಬ ಸೂಚನೆ ನೀಡಿದೆ.  ಆದರೆ  ಪಿಂಚಣಿದಾರರು ಯಾವ ತಿಂಗಳಲ್ಲಿ ಪ್ರಮಾಣಪತ್ರವನ್ನು ಸಲ್ಲಿಸುತ್ತಾರೋ, ನಂತರದ ವರ್ಷಗಳಲ್ಲಿ ಅವರು ಅದನ್ನು ಅದೇ  ತಿಂಗಳಲ್ಲಿ ಸಲ್ಲಿಸಬೇಕು.

ಈ ನಿರ್ದೇಶನದಿಂದ  ಉತ್ತರ ಪ್ರದೇಶದ  ೩ ಲಕ್ಷ  ಮತ್ತು ದೇಶಾದ್ಯಂತ  ೧ ಕೋಟಿ ಪಿಂಚಣಿದಾರರಿಗೆ ಅನುಕೂಲವಾಗಲಿದೆ ಎಂದು ಇಪಿಎಫ್‌ಒ ಮಂಡಳಿಯ ಸದಸ್ಯ ಸುಖದೇವ್ ಪ್ರಸಾದ್ ಮಿಶ್ರಾ ಹೇಳುತ್ತಾರೆ.

ಹೊಸ ವ್ಯವಸ್ಥೆ ಜಾರಿಯಾಗಿರುವುದರಿಂದ ಈಗ  ಜೀವಂತ  ಪ್ರಮಾಣಪತ್ರ ಸಲ್ಲಿಸದ ಕಾರಣಕ್ಕಾಗಿ ಯಾರ ಪಿಂಚಣಿಯೂ ನವೆಂಬರ್ ಬಳಿಕ ಸ್ಥಗಿತಗೊಳ್ಳುವುದಿಲ್ಲ.

No comments:

Advertisement