Monday, January 13, 2020

ರಾಜ್ಯಾದ್ಯಂತ ಸರಣಿ ವಿಧ್ವಂಸಕ ಕೃತ್ಯಕ್ಕೆ ಭಾರೀ ಸಂಚು ಸಿಸಿಬಿ ಪೊಲೀಸರಿಂದ ಬಯಲು

ರಾಜ್ಯಾದ್ಯಂತ ಸರಣಿ ವಿಧ್ವಂಸಕ ಕೃತ್ಯಕ್ಕೆ ಭಾರೀ ಸಂಚು ಸಿಸಿಬಿ ಪೊಲೀಸರಿಂದ ಬಯಲು 

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿದ್ದ ಹೋರಾಟದ ಸಂದರ್ಭವನ್ನು ಬಳಸಿಕೊಂಡು, ಹೋರಾಟದಲ್ಲಿ ಇದ್ದವರನ್ನು ಆಯ್ದು, ಜಿಹಾದಿ ಗ್ಯಾಂಗ್ ಐಸಿಸ್ಗೆ ನೇಮಿಸಿ, ರಾಜ್ಯಾದ್ಯಂತ ಸರಣಿ ವಿಧ್ವಂಸಕ ಕೃತ್ಯಗಳಲ್ಲಿ ಬಳಸಲು ನಡೆದಿದ್ದ ಸಂಚನ್ನು ಸಿಸಿಬಿ ಪೊಲೀಸರು ಭೇದಿಸಿದರು.

ಪೌರತ್ವ ಕಾಯ್ದೆ ಪ್ರತಿಭಟನೆಯನ್ನು ಬಳಸಿಕೊಂಡು ಉಗ್ರರನ್ನು ನೇಮಕ ಮಾಡಲು ಸಂಚು ರೂಪಿಸಿದ್ದ ಪಾತಕಿಯನ್ನು  ಮೆಹಬೂಬ್ ಪಾಷ ಎಂಬುದಾಗಿ ಸಿಸಿಬಿ ಪೊಲೀಸರು ಗುರುತಿಸಿದ್ದಾರೆ.

ಅಲ್ಪಸಂಖ್ಯಾತರನ್ನು ಜಿಹಾದ್ ಹೋರಾಟದತ್ತ ಸೆಳೆಯಲು ಮೆಹಬೂಬ್ ಸಂಚು ರೂಪಿಸಿದ್ದ ಹಾಗೂ ಬೆಂಗಳೂರಿನಲ್ಲಿರುವ ಜಿಹಾದಿ ತಂಡದ ನಾಯಕನಾಗಿಯೂ ಕೆಲಸ ಮಾಡುತ್ತಿದ್ದ ಎಂಬುದಾಗಿ ಪೊಲೀಸರು ಪತ್ತೆ ಹಚ್ಚಿದರು. ಇದೇ ಕಾರಣಕ್ಕೆ ಸಂಬಂಧಿಸಿದಂತೆ, ಮೂರು ದಿನಗಳ ಹಿಂದೆ ಪೊಲೀಸರು ಜಿಹಾದಿ ತಂಡದ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ಆರಂಭಿಸಿದ್ದರು.

ತನಿಖೆ ನಡೆಸುತ್ತಿದ್ದ ವೇಳೆಯಲ್ಲಿ ಸಿಎಎ ಪ್ರತಿಭಟನೆಯನ್ನು ಜಿಹಾದಿ ಸಂಘಟನೆಗೆ ನೇಮಕ ಮಾಡಿಕೊಳ್ಳಲು ಹೂಡಿದ್ದ ಸಂಚಿನ  ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದ್ದು, ಪೌರತ್ವ ಕಾಯ್ದೆ ಗಲಾಟೆ ವೇಳೆ ವಿಧ್ವಂಸಕ ಕೃತ್ಯ ನಡೆಸಲು ರೂಪಿಸಿದ್ದ ಸಂಚನ್ನು ಬಯಲಿಗೆಳೆದಿದೆ. ತನ್ಮೂಲಕ ಮುಂದಾಗಬಹುದಾಗಿದ್ದ ಅನಾಹುತವನ್ನು ತಪ್ಪಿಸುವಲ್ಲಿ ಸಿಸಿಬಿ ಪೊಲಿಸರು ಯಶಸ್ವಿಯಾದರು.ರಾಜ್ಯ ಸೇರಿದಂತೆ, ದಕ್ಷಿಣ ಭಾರತದಲ್ಲಿ ಜಿಹಾದಿ ಉಗ್ರರನ್ನು ನೇಮಕ ಮಾಡಲು ಸಂಚು ನಡೆದಿತ್ತು. ತಂಡದ ನಾಯಕ ಮೆಹಬೂಬ್ ಪಾಷ, ಜಿಹಾದಿ ತಂಡಕ್ಕೆ ಸದಸ್ಯರ ನೇಮಕ, ಶಸ್ತ್ರಾಸ್ತ್ರ ಪೂರೈಕೆ ಹಾಗೂ ಇನ್ನುಳಿದ ವಿಧ್ವಂಸಕ ಕೃತ್ಯಗಳಿಗೆ ಈತ ಯೋಜನೆ ರೂಪಿಸಿದ್ದ ಎಂದು ಪೊಲೀಸರು ತಿಳಿಸಿದರು.
ಮಡಿಕೇರಿ ಅರಣ್ಯ, ಬೆಂಗಳೂರು ಹೊರವಲಯದ ಅರಣ್ಯ ಪ್ರದೇಶಗಳಲ್ಲಿ ಈತ ತರಬೇತಿ ಕೊಡಿಸುತ್ತಿದ್ದ ಎಂಬುದು ಪೊಲೀಸರ ಬಂಧನಕ್ಕೆ ಒಳಗಾಗಿರುವ ಆತನ ಸಹಚರರು ನೀಡಿದ ಮಾಹಿತಿಯಿಂದ ಬೆಳಕಿಗೆ ಬಂದಿದೆ. ಸಹಚರರನ್ನು ಬಂಧನವಾಗುತ್ತಿದ್ದಂತೆಯೇ ಪಾಷ ತಲೆಮರೆಸಿಕೊಂಡಿದ್ದಾನೆ.

ವಿಧ್ವಂಸಕ ಕೃತ್ಯದ ರೂವಾರಿ ಮೆಹಬೂಬ್ ಪಾಷ ಬಂಧನಕ್ಕೆ ಪೊಲೀಸರು ತೀವ್ರ ಶೋಧ ಆರಂಭಿಸಿದ್ದು, ಸದ್ಯದಲ್ಲೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದರು.

No comments:

Advertisement