Thursday, January 23, 2020

ಕ್ಷಮಾದಾನ ಕೋರಿಕೆ ಅರ್ಜಿ ಸಲ್ಲಿಸಲು ೭ ದಿನಗಳ ಗಡುವು

ಕ್ಷಮಾದಾನ ಕೋರಿಕೆ ಅರ್ಜಿ ಸಲ್ಲಿಸಲು ದಿನಗಳ ಗಡುವು
ಗಲ್ಲು ಶಿಕ್ಷಿತರಿಗೆ ಸಂಬಂಧಿಸಿದಂತೆ ನಿಯಮ:  ಸುಪ್ರೀಂಗೆ ಕೇಂದ್ರ ಮನವಿ
ನವದೆಹಲಿ: ನಿರ್ಭಯಾ ಪ್ರಕರಣ ಎಂಬುದಾಗಿಯೇ ಪರಿಚಿತವಾಗಿರುವ ೨೦೧೨ರ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು  ಕೊಲೆ ಪ್ರಕರಣದ ಅಪರಾಧಿಗಳಿಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆಯ ಜಾರಿ ಬಗೆಗಿನ ಅನಿಶ್ಚಿತತೆಯ ಮಧ್ಯೆ, ಗಲ್ಲು ಶಿಕ್ಷೆಗೆ ಗುರಿಯಾದವರಿಗೆ ಕ್ಷಮಾದಾನ ಕೋರಿಕೆ ಅರ್ಜಿ ಸಲ್ಲಿಸಲು ದಿನಗಳ ಗಡುವು ನಿಗದಿ ಪಡಿಸುವಂತೆ ಕೋರಿ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿಗೆ  2020 ಜನವರಿ 22ರ ಬುಧವಾರ  ಅರ್ಜಿ ಸಲ್ಲಿಸಿತು.

ಇಂತಹ ಪ್ರಕರಣಗಳಲ್ಲಿ ಪುನರ್ ಪರಿಶೀಲನಾ ಅರ್ಜಿ ಮತ್ತು ಕ್ಯುರೇಟಿವ್ ಅರ್ಜಿಗಳನ್ನು ಸಲ್ಲಿಸಲು ಕೂಡಾ ಕಾಲಮಿತಿ ನಿಗದಿ ಪಡಿಸುವಂತೆ ಸರ್ಕಾರವು ಸುಪ್ರೀಂಕೋರ್ಟಿಗೆ ಮನವಿ ಮಾಡಿತು.

ಶತ್ರುಘ್ನ ಚೌಹಾಣ್ ಪ್ರಕರಣಕ್ಕೆ ಸಂಬಂಧಿಸಿದಂತೆ ೨೦೧೪ರ ತನ್ನ ತೀರ್ಪನ್ನು ತಿದ್ದುಪಡಿ ಮಾಡುವಂತೆ ಕೇಂದ್ರವು ಸುಪ್ರೀಂಕೋರ್ಟಿಗೆ ಮನವಿ ಮಾಡಿದೆ. ಶತ್ರುಘ್ನ ಚೌಹಾಣ್ ಪ್ರಕರಣದಲ್ಲಿ ಅಧಿಕಾರಿಗಳು ಕ್ಷಮಾದಾನ ಕೋರಿಕೆ ಅರ್ಜಿಗಳನ್ನು ವರ್ಷಗಳ ಕಾಲ ನೆನೆಗುದಿಯಲ್ಲಿ ಇಡುವುದನ್ನು ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂಕೋರ್ಟ್, ರೀತಿಯಾದ ಕಾಯುವಿಕೆಯು ಶಿಕ್ಷಿತರ ಪಾಲಿಗೆ ಚಿತ್ರ ಹಿಂಸೆಯಾಗುತ್ತದೆ ಎಂದು ತೀರ್ಪು ನೀಡಿತ್ತು.

ಸರ್ಕಾರಗಳು ರಹಸ್ಯವಾಗಿ ಮರಣದಂಡನೆಯನ್ನು ಜಾರಿಗೊಳಿಸುವುದನ್ನು ಕೂಡಾ ಟೀಕಿಸಿದ್ದ ಸುಪ್ರೀಂಕೋರ್ಟ್ ಶಿಕ್ಷ್ಷಿತರ ಕ್ಷಮಾದಾನ ಕೋರಿಕೆ ಅರ್ಜಿ ತಿರಸ್ಕೃತವಾದ ಬಳಿಕ ಮರಣದಂಡನೆ ಜಾರಿಗೆ ೧೪ ದಿನಗಳ ಅಂತರ ಇರುವುದನ್ನು ಸೆರೆಮನೆ ಅಧಿಕಾರಿಗಳು ಖಚಿತ ಪಡಿಸಬೇಕು ಎಂದೂ ಹೇಳಿತ್ತು.

ನಮ್ಮ ವಿಶಾಲ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತೀಕಾರಕ್ಕೆ ಯಾವುದೇ ಸಾಂವಿಧಾನಿಕ ಮೌಲ್ಯ ಇಲ್ಲಎಂದು ನ್ಯಾಯಪೀಠ ತೀರ್ಪು ನೀಡಿತ್ತು.

ಸುಪ್ರೀಂಕೋರ್ಟಿಗೆ ಸಲ್ಲಿಸಿದ ತನ್ನ ಅರ್ಜಿಯಲ್ಲಿ ಕೇಂದ್ರ ಗೃಹ ಸಚಿವಾಲಯವು ಶಿಕ್ಷಿತರು ನಿರ್ದಿಷ್ಟ ಅವಧಿಯ ಒಳಗಾಗಿ ಕ್ಯುರೇಟಿವ್ ಅರ್ಜಿ ಸಲ್ಲಿಸುವುದನ್ನು ಮತ್ತು ಡೆತ್ ವಾರಂಟ್ ಜಾರಿಯಾದ ದಿನಗಳ ಒಳಗಾಗಿ ಕ್ಷಮಾದಾನ ಕೋರಿಕೆ ಅರ್ಜಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಮನವಿ ಮಾಡಿತು..

ರಾಷ್ಟ್ರಪತಿಯವರು ಕ್ಷಮಾದಾನ ಕೋರಿಕೆ ಅರ್ಜಿಯನ್ನು ತಿರಸ್ಕರಿಸಿದ ದಿನಗಳ ಒಳಗಾಗಿ ಶಿಕ್ಷಿತ ಅಪರಾಧಿ ಸಲ್ಲಿಸಿದ ಯಾವುದೇ ಅರ್ಜಿಯ ಸ್ಥಿತಿಗತಿ ಏನೇ ಆಗಿದ್ದರೂ ಮರಣದಂಡನೆಗೆ ಗುರಿಯಾದವರನ್ನು ಗಲ್ಲಿಗೆ ಏರಿಸುವಂತೆ ಎಲ್ಲ ನ್ಯಾಯಾಲಯಗಳು ಮತ್ತು ರಾಜ್ಯ ಸರ್ಕಾರಗಳಿಗೆ ಆದೇಶ ನೀಡುವಂತೆಯೂ ಕೇಂದ್ರವು ತನ್ನ ಅರ್ಜಿಯಲ್ಲಿ ಸುಪ್ರೀಂಕೋರ್ಟನ್ನು ಕೋರಿತು.

ಶಿಕ್ಷಿತರ ಹಕ್ಕುಗಳ ಬಗ್ಗೆ ಕಾಳಜಿ ವಹಿಸುವಾಗ, ಬಲಿಪಶುಗಳು/ ಸಂತ್ರಸ್ಥರು, ಅವರ ಕುಟುಂಬ ಸದಸ್ಯರ ಹಿತಾಸಕ್ತಿಯನ್ನು ಮತ್ತು ವಿಶಾಲ ಸಾರ್ವಜನಿಕ ಹಿತಾಸಕ್ತಿಗಳನ್ನು ಗಮನದಲ್ಲಿ ಇರಿಸಿಕೊಂಡು ಮಾರ್ಗದರ್ಶಿ ಸೂತ್ರಗಳನ್ನು ರಚಿಸಬೇಕಾದ್ದು ಸಮಯದ ಅಗತ್ಯ ಹಾಗೂ ಹೆಚ್ಚು ಮಹತ್ವದ ವಿಚಾರವಾಗಿದೆ ಎಂದು ಕೇಂದ್ರವು ತನ್ನ ಅರ್ಜಿಯಲ್ಲಿ ತಿಳಿಸಿತು.

ಕನಿಷ್ಠ ಇಂತಹ ಭೀಕರ, ಭಯಾನಕ ಕ್ರೂರ, ಅಸಹ್ಯಕರ ಮತ್ತು ಘೋರ ಅಪರಾಧಗಳಲ್ಲಿ ತಪ್ಪಿತಸ್ಥರೆಂದು ಕಾನೂನು ಪ್ರಕ್ರಿಯೆ ಮೂಲಕ ಸಾಬೀತಾದ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಯ ಜಾರಿಯನ್ನು ವಿಳಂಬಗೊಳಿಸಲು ಕಾನೂನು ಬದ್ಧ ಪರಿಹಾರ ಅವಕಾಶಗಳ ಲಾಭ ಪಡೆಯುವ ಪ್ರವೃತ್ತಿU ಕೊನೆ ಹಾಡಲು ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ ಎಂದು ಅರ್ಜಿ ತಿಳಿಸಿತು.

೨೦೧೪ರಲ್ಲಿ ಸುಪ್ರೀಂಕೋರ್ಟ್ ವಿಧಿಸಿರುವ ಮಾರ್ಗದರ್ಶಿ ಸೂತ್ರಗಳುಆರೋಪಿ ಕೇಂದ್ರಿತವಾಗಿವೆ ಮತ್ತು ಅವು ಬಲಿಪಶುಗಳು/ ಸಂತ್ರಸ್ಥರು ಮತ್ತು ಅವರ ಕುಟುಂಬಗಳ ಆಘಾತ, ನೋವು, ದುಃಖ, ಸಂಕಟ, ತಳಮಳಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂದು ಗೃಹ ಸಚಿವಾಲವು ತನ್ನ ಅರ್ಜಿಯಲ್ಲಿ ತಿಳಿಸಿತು.

ಶತ್ರುಘ್ನ ಪ್ರಕರಣದ ತೀರ್ಪಿಗಿಂತ ಮುಂಚೆ ಮತ್ತು ಬಳಿಕ ಇಂತಹ ಹೀನ ಅಪರಾಧ ಪ್ರಕರಣಗಳಲ್ಲಿನ ತಪ್ಪಿತಸ್ಥರು ೨೧ನೇ ಪರಿಚ್ಛೇದದ ಆಶ್ರಯ ಪಡೆದು ನ್ಯಾಯಾಂಗ ಪ್ರಕ್ರಿಯೆಯ ಮೇಲೆ ಸವಾರಿ ನಡೆಸಿದ್ದು ಕಂಡು ಬಂದಿದೆಎಂದು ಅರ್ಜಿ ತಿಳಿಸಿದೆ.

೨೦೧೨ರ ದೆಹಲಿ ಸಾಮೂಹಿಕ ಅತ್ಯಾಚಾರ  ಮತ್ತು ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವ ಪ್ರಕ್ರಿಯೆ ಅವರು ತಮ್ಮ ಕಾನೂನು ಬದ್ಧ ಪರಿಹಾರಗಳನ್ನು ಕಾಲಮಿತಿಯಿಲ್ಲದೆ ಬಳಸುತ್ತಿರುವುದರಿಂದ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರವು ಸುಪ್ರೀಂಕೋರ್ಟಿಗೆ ಮನವಿ ಮಾಡಿದೆ.

ನಿರ್ಭಯಾ ಪ್ರಕರಣದಲ್ಲಿ ನಾಲ್ವರು ಶಿಕ್ಷಿತರ ಪೈಕಿ ಒಬ್ಬ ಅಪರಾಧಿ ಮಾತ್ರ ಕ್ಷಮಾದಾನ ಕೋರಿಕೆಯ ತನ್ನ ಅವಕಾಶವನ್ನ ಬಳಸಿಕೊಂಡು ಅರ್ಜಿ ಸಲ್ಲಿಸಿದ್ದು ಅದು ರಾಷ್ಟ್ರಪತಿಯವರಿಂದ ತಿರಸ್ಕೃತಗೊಂಡಿದೆ. ಉಳಿದ ಮೂವರಿಗೆ ಅವರ ವಿರುದ್ಧ ಹೊರಡಿಸಲಾಗಿರುವ ಡೆತ್ ವಾರಂಟ್ ಪ್ರಕಾರ ಗಲ್ಲಿಗೆ ಹಾಕುವ ಫೆಬ್ರುವರಿ ೧ಕ್ಕೆ ಮುನ್ನ ಯಾವಾಗ ಬೇಕಿದ್ದರೂ ಕ್ಷಮಾದಾನ ಕೋರಿಕೆ ಅರ್ಜಿ ಸಲ್ಲಿಸುವ  ಅವಕಾಶವಿದೆ.

No comments:

Advertisement