ಕೆಜಿಗೆ
ರೂ ೨೨ ದರದಲ್ಲಿ ಈರುಳ್ಳಿ:
ಕೇಂದ್ರ ಸರ್ಕಾರದ ಘೋಷಣೆ
ಹಣದುಬ್ಬರ
ಶೇಕಡಾ ೭.೩೫ಕ್ಕೆ ಏರಿದ
ಹಿನ್ನೆಲೆಯಲ್ಲಿ ಕ್ರಮ
ನವದೆಹಲಿ:
ಚಿಲ್ಲರೆ ಹಣದುಬ್ಬರ ದರವು ೨೦೧೯ರ ಡಿಸೆಂಬರ್ ತಿಂಗಳಿನಲ್ಲಿ ಐದೂವರೆ ವರ್ಷಗಳಲ್ಲೇ ಅತ್ಯಧಿಕ ಮಟ್ಟಕ್ಕೆ ಏರಿ ಶೇಕಡಾ ೭.೩೫ಕ್ಕೆ ತಲುಪಿದ್ದನ್ನು
ಅನುಸರಿಸಿ, ಹಣದುಬ್ಬರ ಏರಿಕೆಗೆ ಮೂಲಕಾರಣವಾಗಿದ್ದ ಈರುಳ್ಳಿಯನ್ನು ಕಿಲೋ ಗ್ರಾಂಗೆ ತಲಾ ೨೨ ರೂಪಾಯಿ ದರದಲ್ಲಿ
ಒದಗಿಸಲಾಗುವುದು ಎಂದು ಕೇಂದ್ರ ಸರ್ಕಾರ 2020 ಜನವರಿ
14ರ ಮಂಗಳವಾರ ಪ್ರಕಟಿಸಿತು. ಕೇಂದ್ರದ ಬಳಿ ಪ್ರಸ್ತುತ ೧೮,೦೦೦ ಟನ್ಗಳಷ್ಟು ಆಮದು
ಈರುಳ್ಳಿ ದಾಸ್ತಾನು ಇದೆ ಎಂದು ಸರ್ಕಾರ ಹೇಳಿತು.
‘ಸುಮಾರು
೧೮,೦೦೦ ಟನ್ನಷ್ಟು ಆಮದು ಈರುಳ್ಳಿ ಸಂಗ್ರಹ ಈಗ ಇದೆ. ಆದರೆ
ನಮ್ಮ ಎಲ್ಲ ಪ್ರಯತ್ನಗಳ ಬಳಿಕ ಕೇವಲ ೨೦೦೦ ಟನ್ ಈರುಳ್ಳಿ ಮಾರಾಟ ಮಾಡಲು ಸಾಧ್ಯವಾಗಿದೆ. ನಾವು ಈಗ ಕಿಲೋಗ್ರಾಂಗೆ ತಲಾ
೨೨ ರೂಪಾಯಿ ದರದಲ್ಲಿ ಈರುಳ್ಳಿ ಒದಗಿಸುತ್ತಿದ್ದೇವೆ’ ಎಂಬುದಾಗಿ
ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ವರದಿಯೊಂದು
ತಿಳಿಸಿತು.
ಕಳೆದ
ವರ್ಷ ಬಹುತೇಕ ನಗರಗಳಲ್ಲಿ ಈರುಳ್ಳಿ ದರ ಕಿಲೋ ಗ್ರಾಂಗೆ
೧೦೦ ರೂಪಾಯಿ ಇತ್ತು. ’ಈಗ ಆಮದು ಈರುಳ್ಳಿ
ಬರಲು ಆರಂಭವಾಗಿದೆ. ೧,೧೬೦ ಟನ್
ಈರುಳ್ಳಿ ಭಾರತಕ್ಕೆ ತಲುಪಿದೆ. ೧೦,೫೬೦ ಟನ್
ಹೆಚ್ಚುವರಿ ಈರುಳ್ಳಿ ಹಡಗುಗಳಿಗೆ ಏರಿದ್ದು ಮುಂದಿನ ೩-೪ ದಿನಗಳಲ್ಲಿ
ಬರಲಿದೆ’ ಎಂದು
ಗ್ರಾಹಕ ವ್ಯವಹಾರಗಳ ಸಚಿವಾಲಯದ ಹಿರಿಯ
ಅಧಿಕಾರಿಯೊಬ್ಬರು ಹೇಳಿದರು.
ಕೆಂಪು
ಮತ್ತು ಹಳದಿ ಈರುಳ್ಳಿಯನ್ನು ಟರ್ಕಿ, ಈಜಿಪ್ಟ್ ಮತ್ತು ಆಫ್ಘಾನಿಸ್ಥಾನದಿಂದ ಆಮದು ಮಾಡಿಕೊಳ್ಳಲಾಗಿದೆ. ಸರಕುಗಳು ಮುಂಬೈ ಬಂದರಿನಲ್ಲಿ ಇಳಿಯಲಿವೆ ಎಂದು ಅಧಿಕಾರಿ ಡಿಸೆಂಬರಿನಲ್ಲಿ ಹೇಳಿದ್ದರು.
ದೇಶಕ್ಕೆ
ಬಂದಿಳಿದಾಗ ತಗಲುವ ಕಿಲೋ ಗ್ರಾಂಗೆ ೫೫ ರೂಪಾಯಿ ದರದಲ್ಲೇ
ಆಮದು ಈರುಳ್ಳಿಯನ್ನು ಒದಗಿಸುವ ಕೊಡುಗೆಯನ್ನು ಕೇಂದ್ರ ಸರ್ಕಾರವು ನೀಡಿದೆ. ಜೊತೆಗೆ ಸಂಪೂರ್ಣ ಸಾಗಣೆ ವೆಚ್ಚವನ್ನೂ ತಾನೇ ಭರಿಸುವುದಾಗಿ ಹೇಳಿದೆ. ಇವೆಲ್ಲದರ ಹೊರತಾಗಿಯೂ ರಾಜ್ಯಗಳು ಈರುಳ್ಳಿ ಖರೀದಿಸಲು ಮತ್ತು ಚಿಲ್ಲರೆಯಾಗಿ ವಿತರಿಸಲು ಮುಂದೆ ಬರುತ್ತಿಲ್ಲ ಎಂದು ಸಚಿವ ಪಾಸ್ವಾನ್ ಹೇಳಿದರು.
ಆಮದಿನ
ಹೊರತಾಗಿಯೂ ಬೆಲೆಗಳು ಇನ್ನೂ ಗರಿಷ್ಠ ಪ್ರಮಾಣದಲ್ಲಿ ಇರುವುದು ಏಕೆ ಎಂಬ ಪ್ರಶ್ನೆಗೆ ’ದೇಶೀ ಸರಬರಾಜು ಸುಧಾರಣೆ ಮತ್ತು ಬೆಲೆ ನಿಯಂತ್ರಣಕ್ಕಾಗಿ ಆಮದು ಮಾಡಲಾಗುತ್ತದೆ. ರಾಜ್ಯ ಸರ್ಕಾರಗಳು ಆಮದು ಈರುಳ್ಳಿಯನ್ನು ಪಡೆಯಲು ಸಿದ್ಧವಿಲ್ಲದೇ ಹೋದರೆ ನಾವು ಏನು ಮಾಡಲು ಸಾಧ್ಯ?’ ಎಂದು ಪಾಸ್ವಾನ್ ಪ್ರತಿ ಪ್ರಶ್ನೆ ಕೇಳಿದರು.
ಈವರೆಗೆ,
ಆಂಧ್ರಪ್ರದೇಶ, ಕೇರಳ, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಆಮದು ಈರುಳ್ಳಿಯನ್ನು ಪಡೆದುಕೊಂಡಿವೆ. ಹಲವಾರು ರಾಜ್ಯಗಳು ತಮ್ಮ ಬೇಡಿಕೆಯನ್ನು ಹಿಂಪಡೆದಿವೆ ಎಂದು ಅವರು ನುಡಿದರು.
ಆಮದು
ಈರುಳ್ಳಿಯ ರುಚಿ, ದೇಶೀ ಈರುಳ್ಳಿಯ ರುಚಿಗಿಂತ ಭಿನ್ನವಾಗಿದೆ, ಹೀಗಾಗಿ ಚಿಲ್ಲರೆ ಮಾರುಕಟ್ಟೆಯಲ್ಲಿ ಗ್ರಾಹಕರು ಅದೇ ದರದಲ್ಲಿ
ದೇಶೀ ಈರುಳ್ಳಿ ಸಿಗುವಾಗ ವಿದೇಶೀ ಈರುಳ್ಳಿಯನ್ನು ಖರೀದಿಸುವುದಿಲ್ಲ ಎಂದು ಮೂಲಗಳು ಹೇಳಿದವು.
ಸಗಟು
ಹಣದುಬ್ಬರವೂ ಏರಿಕೆ: ಈ ಮಧ್ಯೆ, ಸಗಟು
ಬೆಲೆ ಆಧಾರಿತ ಹಣದುಬ್ಬರವು ಡಿಸೆಂಬರಿನಲ್ಲಿ ಎಂಟು ತಿಂಗಳುಗಳಲ್ಲೇ ಅತ್ಯಧಿಕ ಮಟ್ಟಕ್ಕೆ ಅಂದರೆ ಶೇಕಡಾ ೨.೫೯ಕ್ಕೆ ಏರಿದೆ
ಎಂದು ಮೂಲಗಳು ತಿಳಿಸಿವೆ. ನವೆಂಬರಿನಲ್ಲಿ ಸಗಟು ಬೆಲೆ ಆಧಾರಿತ ಹಣದುಬ್ಬರ ಶೇಕಡಾ ೦.೫೮ರಷ್ಟು ಏರಿತ್ತು.
ಈರುಳ್ಳಿ ಮತ್ತು ಆಲೂಗಡ್ಡೆಯಂತಹ ಆಹಾರ ವಸ್ತುಗಳ ಬೆಲೆ ಏರಿಕೆ ಪರಿಣಾಮವಾಗಿ ಈ ಹಣದುಬ್ಬರ ಉಂಟಾಗಿದೆ
ಎಂದು ಮೂಲಗಳು ಹೇಳಿದವು.
ಸರ್ಕಾರಿ
ಅಂಕಿ ಅಂಶಗಳ ಪ್ರಕಾರ, ಮಾಸಿಕ ಸಗಟು ಬೆಲೆ ಸೂಚ್ಯಂಕವನ್ನು (ಡಬ್ಲ್ಯೂ ಪಿಐ) ಆಧರಿಸಿದ ವಾರ್ಷಿಕ ಹಣದುಬ್ಬರವು ೨೦೧೯ರ ಏಪ್ರಿಲ್ ತಿಂಗಳಲ್ಲಿ ಶೇಕಡಾ ೩.೨೪ರಷ್ಟು ಇತ್ತು.
೨೦೧೮ರ ಡಿಸೆಂಬರ್ ತಿಂಗಳಲ್ಲಿ ಇದು ಶೇಕಡಾ ೩.೪೬ಕ್ಕೆ ಏರಿದೆ.
ನವೆಂಬರ್
ತಿಂಗಳಲ್ಲಿ ಶೇಕಡಾ ೧೧ರಷ್ಟು ಏರಿಕೆಯಾಗಿದ್ದ ಆಹಾರ ವಸ್ತುಗಳ ದರವು ಡಿಸೆಂಬರ್ ತಿಂಗಳಲ್ಲಿ ಶೇಕಡಾ ೧೩.೧೨ಕ್ಕೆ ಏರಿದೆ.
ಆಹಾರೇತರ ವಸ್ತುಗಳ ದರವು ನವೆಂಬರಿನಲ್ಲಿದ್ದ ಶೇಕಡಾ ೧.೯೩ರಿಂದ ಶೇಕಡಾ
೭.೭೨ಕ್ಕೆ, ಅಂದರೆ ಸುಮಾರು ನಾಲ್ಕು ಪಟ್ಟು ಏರಿದೆ.
ಆಹಾರ
ವಸ್ತುಗಳಲ್ಲಿ, ತರಕಾರಿ ಬೆಲೆಗಳು ಶೇಕಡಾ ೬೯.೬೯ರಷ್ಟು ಏರಿದೆ.
ಇದಕ್ಕೆ ಮುಖ್ಯ ಕಾರಣ ಈರುಳ್ಳಿ ಬೆಲೆ ಅತ್ಯಧಿಕವಾಗಿ ಅಂದರೆ ಶೇಕಡಾ ೪೫೫.೮೩ರಷ್ಟು ಏರಿದ್ದು. ಹಾಗೆಯೇ ಆಲೂಗಡ್ಡೆ ದರ ಕೂಡಾ ಶೇಕಡಾ
೪೪.೯೭ರಷ್ಟು ಏರಿದ್ದೂ ಆಹಾರ ವಸ್ತುಗಳ ಹಣದುಬ್ಬರಕ್ಕೆ ಕಾಣಿಕೆ ನೀಡಿತ್ತು.
ತೀರಾ
ಇತ್ತೀಚಿನವರೆಗೂ ಈರುಳ್ಳಿ ದರವು ಹಲವಾರು ಮಾರುಕಟ್ಟೆಗಳಲ್ಲಿ ಕಿಲೋ ಗ್ರಾಂಗೆ ೧೦೦ ರೂಪಾಯಿಯಷ್ಟು ಇತ್ತು. ಅತಿಯಾದ ಮಳೆಯಿಂದಾಗಿ ಬೆಳೆ ನಷ್ಟ ಸಂಭವಿಸಿದ್ದು ಇದಕ್ಕೆ ಕಾರಣವಾಗಿತ್ತು. ಏನಿದ್ದರೂ ಹೊಸ ಫಸಲಿನ ಆಗಮನ ಮತ್ತು ಆಮದು ಈರುಳ್ಳಿಯ ಆಗಮನದೊಂದಿದೆ ಬೆಲೆಗಳು ಇಳಿಮುಖಗೊಂಡಿದ್ದವು.
No comments:
Post a Comment