ರಾಮಮಂದಿರಕ್ಕಾಗಿ ಟ್ರಸ್ಟ್, ಮಸೀದಿಗೆ ೫ ಎಕರೆ ಭೂಮಿ
ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಣೆ
ನವದೆಹಲಿ: ರಾಮಜನ್ಮಭೂಮಿ-ಬಾಬರಿ
ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ನವೆಂಬರ್ ತಿಂಗಳ ತನ್ನ ಚಾರಿತ್ರಿಕ ತೀರ್ಪಿನಲ್ಲಿ ಸುಪ್ರೀಂಕೋರ್ಟ್
ನೀಡಿದ್ದ ನಿರ್ದೇಶನಕ್ಕೆ ಅನುಗುಣವಾಗಿ ರಾಮಮಂದಿರ ನಿರ್ಮಿಸಲು ೧೫ ಸದಸ್ಯರ ಟ್ರಸ್ಟ್‌ನ್ನು ಪ್ರಧಾನಿ
ನರೇಂದ್ರ ಮೋದಿ ಅವರು 2020 ಫೆಬ್ರುವರಿ 05ರ ಬುಧವಾರ ಸಂಸತ್ತಿನಲ್ಲಿ ಪ್ರಕಟಿಸಿದರು.
ಇದೇ ವೇಳೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ನೇತೃತ್ವದ
ಸರ್ಕಾರವು ಮಸೀದಿಗಾಗಿ ೫ ಎಕರೆ ಭೂಮಿಯನ್ನು ಸುನ್ನಿ
ಕೇಂದ್ರೀಯ ವಕ್ಫ್ ಮಂಡಳಿಗೆ (ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್) ಮಂಜೂರು ಮಾಡಿತು.
ಕೇಂದ್ರ ಸರ್ಕಾರವು ಮಂದಿರ ಆಸುಪಾಸಿನ ೬೭ ಎಕರೆ ಭೂಮಿಯನ್ನು ಕೂಡಾ
ರಾಮಮಂದಿರ ಟ್ರಸ್ಟಿಗೆ ಮಂಜೂರು ಮಾಡಿದೆ.
‘ಬುಧವಾರ ಬೆಳಗ್ಗೆ ಸಭೆ ಸೇರಿದ್ದ ಸಚಿವ ಸಂಪುಟದ ಸಭೆಯು ಅಯೋಧ್ಯಾ
ಟ್ರಸ್ಟ್ ಸಂಬಂಧ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂಬುದಾಗಿ ಪ್ರಕಟಿಸಲು ನನಗೆ ಹರ್ಷವಾಗುತ್ತದೆ.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ನಾವು ’ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ’ ಹೆಸರಿನಲ್ಲಿ ಟ್ರಸ್ಟ್ ರಚಿಸಿದ್ದೇವೆ. ಈ ಟ್ರಸ್ಟ್ ಸ್ವಾಯತ್ತ ಸಂಸ್ಥೆಯಾಗಿರುತ್ತದೆ’ ಎಂದು ಮೋದಿ ಸಂಸತ್ತಿನಲ್ಲಿ ಹೇಳಿದರು.
‘ಭಾರತದಲ್ಲಿ ಪ್ರತಿಯೊಬ್ಬರೂ, ಅವರು ಹಿಂದುಗಳಿರಲಿ, ಮುಸ್ಲಿಮರಿರಲಿ,
ಸಿಕ್ಖರಿರಲಿ, ಕ್ರೈಸ್ತರಿರಲಿ, ಬೌದ್ಧರಿರಲಿ, ಪಾರ್ಸಿಗಳಿರಲಿ ಅಥವಾ ಜೈನರಿರಲಿ ಎಲ್ಲರೂ ’ವಿಶಾಲ ಕುಟುಂಬ’ದ ಭಾಗವಾಗಿದ್ದಾರೆ’ ಎಂದು ಮೋದಿ ನುಡಿದರು.
‘ರಾಮ ಮಂದಿರ ಯಾತ್ರಾರ್ಥಿಗಳಿಗಾಗಿ ನಾವು ಇನ್ನೊಂದು ದೊಡ್ಡ ಹೆಜ್ಜೆ
ಇರಿಸಿದ್ದೇವೆ. ನಾವು ಮಂದಿರ ಸುತ್ತಮುತ್ತಣ ೬೭ ಎಕರೆ ಭೂಮಿಯನ್ನೂ ಟ್ರಸ್ಟ್‌ಗೆ ಮಂಜೂರು ಮಾಡುತ್ತಿದ್ದೇವೆ’ ಎಂದು ಪ್ರಧಾನಿ ಹೇಳಿದರು.
‘ದಲಿತ ಪ್ರತಿನಿಧಿ ಒಬ್ಬರು ಸೇರಿದಂತೆ ೧೫ ಸದಸ್ಯರು ಟ್ರಸ್ಟಿನಲ್ಲಿ
ಇರುತ್ತಾರೆ ಮತ್ತು ಈ ಟ್ರಸ್ಟ್ ಸಂಪೂರ್ಣ ೬೭ ಎಕರೆ ಭೂಮಿಯ ಉಸ್ತುವಾರಿ ಹೊಂದಿರುತ್ತದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನುಡಿದರು.
ರಾಮಮಂದಿರ ನಿರ್ಮಾಣಕ್ಕಾಗಿ ಟ್ರಸ್ಟಿಗಳ ಮಂಡಳಿ ಅಥವಾ ಬೇರಾವುದಾದರೂ
ಸೂಕ್ತವಾದ ಸಂಸ್ಥೆ, ಟ್ರಸ್ಟಿನ ಕಾರ್‍ಯ ನಿರ್ವಹಣೆ, ಟ್ರಸ್ಟಿಗಳ ಅಧಿಕಾರ, ಟ್ರಸ್ಟಿಗೆ ಭೂಮಿಯ ಹಸ್ತಾಂತರ
ಮತ್ತು ಇತರ ಎಲ್ಲ ಅಗತ್ಯ ಮತ್ತು ಪೂರಕ ವಿಧಿಗಳ ಸಹಿತವಾದ ಟ್ರಸ್ಟ್ ರಚನೆಯ ಯೋಜನೆಯನ್ನು ರೂಪಿಸುವಂತೆ
ತನ್ನ ನವೆಂಬರ್ ೯ರ ತನ್ನ ಐತಿಹಾಸಿಕ ತೀರ್ಪಿನಲ್ಲಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ
ನೀಡಿತ್ತು.
ತನ್ನ ತೀರ್ಪಿನ ಮೂಲಕ ಅಯೋಧ್ಯೆಯ ವಿವಾದಿತ ನಿವೇಶನದಲ್ಲಿ ಟ್ರಸ್ಟ್
ಮೂಲಕ ರಾಮಮಂದಿರ ನಿರ್ಮಾಣಕ್ಕೆ ದಾರಿ ಸುಗಮಗೊಳಿಸಿದ್ದ ಸುಪ್ರೀಂಕೋರ್ಟ್, ನೂತನ ಮಸೀದಿ ನಿರ್ಮಾಣಕ್ಕೆ
೫ ಎಕರೆ ಪಯಾಯ ಭೂಮಿಯನ್ನು ಉತ್ತರ ಪ್ರದೇಶದ ಪವಿತ್ರ ನಗರದಲ್ಲೇ ಪ್ರಮುಖ ತಾಣದಲ್ಲಿ ಹಂಚಿಕೆ ಮಾಡುವಂತೆಯೂ
ಆಜ್ಞಾಪಿಸಿತ್ತು.
ಹಿಂದುಗಳು ಭಗವಾನ್ ಶ್ರೀರಾಮ ಜನಿಸಿದ್ದನೆಂದು ನಂಬುವ ನಿವೇಶನದಲ್ಲಿ
ಮಂದಿರ ನಿರ್ಮಾಣಕ್ಕಾಗಿ ಮೂರು ತಿಂಗಳ ಒಳಗಾಗಿ ಟ್ರಸ್ಟ್ ರಚನೆಯಾಗಬೇಕು ಎಂದು ಸುಪ್ರೀಂಕೋರ್ಟ್ ಹೇಳಿತ್ತು.
ಪೌರತ್ವ ತಿದ್ದುಪಡಿ ಮಸೂದೆ ವಿರೋಧಿ ಚಳವಳಿಯ ಅಶಾಂತಿಯ ಮಧ್ಯೆ,
ದೆಹಲಿ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ ೨ ದಿನಗಳು ಬಾಕಿ ಉಳಿದಿರುವಾಗ ಪ್ರಧಾನಿಯವರು ರಾಮಮಂದಿರ
ನಿರ್ಮಾಣಕ್ಕೆ ಟ್ರಸ್ಟ್ ರಚನೆಯ ಘೋಷಣೆ ಮಾಡಿರುವುದು ವಿರೋಧ ಪಕ್ಷಗಳ ಆಕ್ರೋಶಕ್ಕೆ ಗುರಿಯಾಗುವ ಸಾಧ್ಯತೆಗಳನ್ನು
ಹುಟ್ಟು ಹಾಕಿದೆ.
ಟ್ರಸ್ಟ್ ರಚನೆಯ ಪ್ರಕಟಣೆಯ ಸಮಯವನ್ನು ಟೀಕಿಸಿದ ಎಐಎಂಐಎಂ ನಾಯಕ
ಅಸಾದುದ್ದೀನ್ ಓವೈಸಿ, ’ಸಂಸತ್ ಅಧಿವೇಶನ ಫೆಬ್ರುವರಿ ೧೧ರಂದು ಮುಕ್ತಾಯವಾಗಲಿದೆ, ಫೆಬ್ರುವರಿ ೮ರ
(ದೆಹಲಿ ಚುನಾವಣಾ ದಿನಾಂಕ) ಬಳಿಕ ಮಾಡಬಹುದಿತ್ತು. ಬಿಜೆಪಿಯು ಚಿಂತಿತವಾಗಿರುವಂತೆ ಕಾಣುತ್ತದೆ’ ಎಂದು ಹೇಳಿದರು.
‘ಸುನ್ನಿ ವಕ್ಫ್ ಮಂಡಳಿಯು ೫ ಎಕರೆ ಜಾಗವನ್ನು ತೆಗೆದುಕೊಳ್ಳಬಾರದು.
ಸುಪ್ರೀಂಕೋರ್ಟ್ ಸುಪ್ರೀಂ, ಆದರೆ ದೋಷಾತೀತವೇನಲ್ಲ. ಪ್ರಧಾನಿಯವರ ಪ್ರಕಟಣೆ ಮಾದರಿ ನೀತಿ ಸಂಹಿತೆಯ
ಉಲ್ಲಂಘನೆಯಾಗಿದೆ’ ಎಂದೂ ಓವೈಸಿ ನುಡಿದರು.
ಆದಾಗ್ಯೂ, ಪ್ರಕಟಣೆಯು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುವುದಿಲ್ಲ.
ಪ್ರಕಟಣೆ ಹೊರಡಿಸಲು ಸುಪ್ರೀಂಕೋರ್ಟ್ ಫೆಬ್ರುವರಿ ೯ರವರೆಗೆ ಸರ್ಕಾರಕ್ಕೆ ಕಾಲಾವಕಾಶ ನೀಡಿತ್ತು ಎಂದು
ಚುನಾವಣಾ ಆಯೋಗದ ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿಗಳು ತಿಳಿಸಿವೆ.
ಮಸೀದಿಗೆ ೫ ಎಕರೆ, ಉ.ಪ್ರ. ಸರ್ಕಾರದ ಅಸ್ತು
ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸಂಸತ್ತಿನಲ್ಲಿ ಅಯೋಧ್ಯೆಯಲ್ಲಿ
ರಾಮಮಂದಿರ ನಿರ್ಮಾಣದ ನಿರ್ವಹಣೆಗಾಗಿ ಟ್ರಸ್ಟ್ ರಚನೆಯನ್ನು ಪ್ರಕಟಿಸುತ್ತಿದ್ದಂತೆಯೇ, ಸುಪ್ರೀಂಕೋರ್ಟ್
ಆದೇಶದಂತೆ ಉತ್ತರ ಪ್ರದೇಶ ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿಗೆ ಮಸೀದಿ ನಿಮಾಣಕ್ಕಾಗಿ ೫ ಎಕರೆ ಭೂಮಿ
ಹಂಚಿಕೆ ಮಾಡುವ ಪ್ರಸ್ತಾಪಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ
ಸಚಿವ ಸಂಪುಟವು ತನ್ನ ಒಪ್ಪಿಗೆ ನೀಡಿತು.
ಅಯೋಧ್ಯಾ ಜಿಲ್ಲೆಯ ಸೋಹವಾಲ್ ತೆಹ್ಸಿಲ್ ವ್ಯಾಪ್ತಿಯಲ್ಲಿರುವ
ಧನ್ನಿಪುರ ಗ್ರಾಮದಲ್ಲಿ ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿಗೆ ೫ ಎಕರೆ ಭೂಮಿ ಮಂಜೂರು ಮಾಡಲಾಗಿದೆ ಎಂದು
ಉತ್ತರ ಪ್ರದೇಶ ಸರ್ಕಾರದ ವಕ್ತಾರ ಹಾಗೂ ಸಂಪಟ ಸಚಿವ ಶ್ರೀಕಾಂತ ಶರ್ಮ ತಿಳಿಸಿದರು.
ಭೂಮಿಯು ಫೈಜಾಬಾದ್ ಜಿಲ್ಲಾ ಕೇಂದ್ರದಿಂದ ೧೮ ಕಿಮೀ ದೂರದಲ್ಲಿದ್ದು,
ಹೆದ್ದಾರಿಯಿಂದ ೨೦೦ ಮೀಟರ್ ಅಂತರದಲ್ಲಿದೆ ಹೀಗಾಗಿ ಅಲ್ಲಿಗೆ ಸುಲಭವಾಗಿ ತಲುಪಬಹುದು. ಕೋಮು ಸೌಹಾರ್ದ
ಮತ್ತು ಕಾನೂನು ಸುವ್ಯವಸ್ಥೆ ಪಾಲನೆಗೆ ಅತ್ಯಂತ ಉತ್ತಮ ಸ್ಥಳ ಇದು ಎಂದು ಶರ್ಮ ಹೇಳಿದರು.
ಸರ್ಕಾರದ ಕೊಡುಗೆ ಬಗ್ಗೆ ನಿರ್ಧಾರ ಕೈಗೊಳ್ಳುವ ಸಲುವಾಗಿ ಉತ್ತರಪ್ರದೇಶ
ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿಯ ಸಭೆ ಫೆಬ್ರುವರಿ ೨೪ರಂದು ನಡೆಯಲಿದೆ ಎಂದು ಸುನ್ನಿ ವಕ್ಫ್ ಮಂಡಳಿಯ
ವಕ್ತಾರರು ತಿಳಿಸಿದರು.
ನ್ಯಾಯಾಲಯದಲ್ಲಿ ಮುಸ್ಲಿಮ್ ಕಕ್ಷಿದಾರರನ್ನು ಪ್ರತಿನಿಧಿಸಿದ್ದ
ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ, ಜಮೀಯತ್ ಉಲೇಮಾ -ಐ-ಹಿಂದ್ ಮುಸ್ಲಿಮರಿಗೆ ಮಸೀದಿ
ನಿರ್ಮಾಣಕ್ಕಾಗಿ ೫ ಎಕರೆ ಭೂಮಿ ನೀಡುವ ಕೊಡುಗೆಯನ್ನು ತಿರಸ್ಕರಿಸಿವೆ.
ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ
ಶರ್ಮ ಅವರು ಸುಪ್ರೀಂಕೋರ್ಟ್ ಆದೇಶದ ಪ್ರಕಾರ ವಕ್ಫ್ ಮಂಡಳಿಗೆ ಭೂಮಿ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.
’ನ್ಯಾಯಾಲಯವು ತನ್ನ ಆದೇಶದಲ್ಲಿ ಮಸೀದಿ ನಿರ್ಮಾಣಕ್ಕಾಗಿ ಭೂಮಿ ಮಂಜೂರು ಮಾಡಲು ಮೂರು ತಿಂಗಳ ಕಾಲಾವಕಾಶ
ನೀಡಿತ್ತು’ ಎಂದು ಶರ್ಮ ಹೇಳಿದರು.
ರಾಜ್ಯ ಸರ್ಕಾರವು ಅಯೋಧ್ಯೆಗೆ ಹೋಗುವ ಹೆದ್ದಾರಿಗಳ ಸಮೀಪದಲ್ಲೇ
ಮಸೀದಿಗಾಗಿ ೩ ಸ್ಥಳಗಳನ್ನು ಗುರುತಿಸಿತ್ತು. ಈ ಮೂರೂ ಪರ್ಯಾಯಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿತ್ತು
ಮತ್ತು ಲಕ್ನೋ-ಗೋರಖ್ ಪುರ ಹೆದ್ದಾರಿಯಲ್ಲಿನ ಧನ್ನಿಪುರ ಗ್ರಾಮದಲ್ಲಿರುವ ಭೂಮಿಯನ್ನು ಕೇಂದ್ರ ಮಂಜೂರು
ಮಾಡಿತು. ಭೂಮಿಯು ರೌನಾಹಿ ಪೊಲೀಸ್ ಠಾಣೆಯ ಹಿಂಭಾಗದಲ್ಲಿದೆ ಮತ್ತು ಹೆದ್ದಾರಿಗೆ ಸಂಪರ್ಕಿಸಲ್ಪಟ್ಟಿದೆ
ಎಂದು ಶರ್ಮ ನುಡಿದರು.
ಸಾಧುಗಳು, ಸಂತರು ಮತ್ತು ಮಹಂತರು ಅಯೋಧ್ಯೆಯ ರಾಮಮಂದಿರ ’ಪಂಚಕೋಶಿ’ ಪರಿಕ್ರಮದಿಂದ ಹೊರಗೆ ಅಂದರೆ ರಾಮನಿಗೆ ತಲೆಬಾಗಿ ನಮಿಸಲು ಆರಂಭಿಸುವ ಸ್ಥಳದಿಂದ
೧೫ ಕಿಮೀ ದೂರದಲ್ಲಿ ಮಸೀದಿಗೆ ಜಾಗ ಮಂಜೂರು ಮಾಡುವಂತೆ ಆಗ್ರಹಿಸಿದ್ದರು ಎಂದು ಹೆಸರು ಹೇಳಲು ಇಚ್ಛಿಸದ ರಾಜ್ಯ ಸರ್ಕಾರಿ ಅಧಿಕಾರಿಯೊಬ್ಬರು
ಹೇಳಿದರು.
‘ದನ್ನಿಪುರವು ಫೈಜಾಬಾದ್ ಜಿಲ್ಲಾ ಕೇಂದ್ರದಿಂದ ೧೮ ಕಿಮೀ ದೂರದಲ್ಲಿದೆ.
ಅಯೋಧ್ಯೆಯಿಂದ ಇಲ್ಲಿಗೆ ಅಂದಾಜು ೨೫ ಕಿಮೀ ದೂರ ಇದೆ’ ಎಂದು ಅಧಿಕಾರಿ ನುಡಿದರು.
‘ಉತ್ಸವಗಳ ಸಂದರ್ಭದಲ್ಲಿ ಮುಸ್ಲಿಮ್ ಮತ್ತು ಹಿಂದು ಸಮುದಾಯಗಳ
ಸದಸ್ಯರು ಮುಖಾಮುಖಿಯಾಗುವ ಸಂದರ್ಭಗಳು ಇಲ್ಲಿಲ್ಲ. ಐದು ಎಕರೆ ಭೂಮಿಯ ಹೊರಭಾಗದಲ್ಲಿ ಇರುವ ವಿಸ್ತಾರವಾದ
ಖಾಲಿ ಭೂಮಿಯನ್ನು ಧಾರ್ಮಿಕ ಸಮಾವೇಶಗಳಿಗೆ ಬಳಸಬಹುದು. ತೆಹ್ಸಿಲ್ ಕಚೇರಿ ಮತ್ತು ಪೊಲೀಸ್ ಠಾಣೆ ಕೂಡಾ
ಸಮೀಪದಲ್ಲೇ ಇವೆ’ ಎಂದು ಅವರು ನುಡಿದರು.
ಡಿಸೆಂಬರ್ ೯ರಂದು ರಾಜ್ಯ ಸರ್ಕಾರವು ೪೧ ಗ್ರಾಮಗಳನ್ನು ಸೇರ್ಪಡೆ
ಮಾಡುವ ಮೂಲಕ ಅಯೋಧ್ಯೆಯ ಮುನಿಸಿಪಲ್ ವ್ಯಾಪ್ತಿಯನ್ನು ವಿಸ್ತರಿಸಲು ನಿರ್ಧರಿಸಿತ್ತು. ಅಯೋಧ್ಯೆ ಮುನಿಸಿಪಲ್
ವ್ಯಾಪ್ತಿಗೆ ಗಾಮಗಳನ್ನು ಸೇರ್ಪಡೆ ಮಾಡಲು ಕೂಡಾ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
No comments:
Post a Comment