Saturday, February 15, 2020

ಎಲ್ಗರ್ ಪರಿಷದ್ ಪ್ರಕರಣ: ಎನ್‌ಐಎ ಕೋರ್ಟ್‌ಗೆ ವರ್ಗಾವಣೆ

ಎಲ್ಗರ್ ಪರಿಷದ್ ಪ್ರಕರಣ: ಎನ್ಐಎ ಕೋರ್ಟ್ಗೆ ವರ್ಗಾವಣೆ
ಮಹಾರಾಷ್ಟ್ರ ಸರ್ಕಾರದ ಯು ಟರ್ನ್, ಪುಣೆ ಕೋರ್ಟ್ ಅಸ್ತು
ಪುಣೆ: ರಾಜಕೀಯವಾಗಿ ಅತ್ಯಂತ ಸೂಕ್ಷ್ಮ ಪ್ರಕರಣವಾದ ಭಿಮಾ ಕೋರೆಗಾಂವ್ ಪ್ರಕರಣವನ್ನು ನಗರದ ಸೆಷನ್ಸ್ ನ್ಯಾಯಾಲಯವು 2020 ಫೆಬ್ರುವರಿ 14ರ ಶುಕ್ರವಾರ ಮುಂಬೈಯಲ್ಲಿನ ಎನ್ಐಎ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲು ಅನುಮತಿ ನೀಡಿತು. ಪ್ರಕರಣದ ತನಿಖೆಯನ್ನು ಎನ್ಐಎ ಕೈಗೆತ್ತಿಕೊಳ್ಳಲು ತನ್ನ ಆಕ್ಷೇಪವಿಲ್ಲ ಎಂಬುದಾಗಿ ಮಹಾರಾಷ್ಟ್ರ ಸರ್ಕಾರವು ಕೊನೆಯ ಕ್ಷಣದಲ್ಲಿ ತಿಳಿಸಿದ ಬಳಿಕ ಸೆಷನ್ಸ್ ನ್ಯಾಯಾಲಯವು ಪ್ರಕರಣವನ್ನು ಮುಂಬೈಯ ಎನ್ಐಎ ನ್ಯಾಯಾಲಯಕ್ಕೆ ವರ್ಗಾಯಿಸಲು ಅನುಮತಿ ನೀಡಿತು.

ಏನಿದ್ದರೂ, ಸರ್ಕಾರವು ನಿರಾಕ್ಷೇಪಣಾ ಪತ್ರ  (ಎನ್ಒಸಿ) ಕೊಡದೇ ಇದ್ದರೂ ಪ್ರಕರಣವನ್ನು ಮುಂದುವರೆಸುವ ಅಧಿಕಾರ ತನಗೆ ಇಲ್ಲ ಎಂದು ಪುಣೆ ಸೆಷನ್ಸ್ ಕೋರ್ಟ್ ಸ್ಪಷ್ಟ ಪಡಿಸಿತು.

೨೦೧೭ರ ಡಿಸೆಂಬರ್ ೩೧ರಂದು ಪುಣೆಯ ಶನಿವಾರವಾಡಾದಲ್ಲಿ ನಡೆದ ಎಲ್ಗರ್ ಸಮಾವೇಶದಲ್ಲಿ ಮಾಡಲಾಗಿತ್ತು ಎನ್ನಲಾದ ಪ್ರಚೋದನಕಾರೀ ಭಾಷಣಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಪ್ರಚೋದನಾಕಾರಿ ಭಾಷಣಗಳ ಪರಿಣಾಮವಾಗಿಯೇ ಜಿಲೆಯ ಕೋರೆಗಾಂವ್ -ಭಿಮಾ ಸಮರ ಸ್ಮಾರಕದಲ್ಲಿ ಮರುದಿನ ಹಿಂಸಾಚಾರ ಭುಗಿಲೆದ್ದಿತು ಎಂದು ಪೊಲೀಸರು ಪ್ರತಿಪಾದಿಸಿದ್ದರು.

ಸಮಾವೇಶಕ್ಕೆ ಮಾವೋವಾದಿ ನಕ್ಸಲೀಯರ ಬೆಂಬಲವಿತ್ತು ಎಂದು ಪುಣೆ ಪೊಲೀಸರು ಪ್ರತಿಪಾದಿಸಿದ್ದರು.

ತನಿಖೆಯ ವೇಳೆಯಲ್ಲಿ ಪೊಲೀಸರು ಎಡಪಂಥೀಯ ಕಾರ್ಯಕರ್ತರಾದ ಸುಧೀರ್ ಧವಳೆ, ರೋನಾ ವಿಲ್ಸನ್, ಸುರೇಂದ್ರ ಗಡ್ಲಿಂಗ್, ಮಹೇಶ ರೌತ್, ಶೊಮಾ ಸೆನ್, ಅರುಣ್ ಫೆರೇರಿಯಾ, ವೆರ್ನೋನ್ ಗೋನ್ಸಾಲ್ವೆಸ್, ಸುಧಾ ಭಾರದ್ವಾಜ್ ಮತ್ತು ವರವರರಾವ್ ಅವರನ್ನು ಮಾವೋವಾದಿ ಸಂಪರ್ಕಗಳಿಗಾಗಿ ಬಂಧಿಸಿದ್ದರು.

ಎಲ್ಗರ್ ಪರಿಷದ್ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಪ್ರಕರಣ ದಾಖಲಿಸಿರುವ ೧೧ ಮಂದಿಯ ಪೈಕಿ  ಪ್ರಸ್ತುತ ಸೆರೆಮನೆಯಲ್ಲಿರುವ ಒಂಬತ್ತು ಮಂದಿ ಕಾರ್ಯಕರ್ತರು ಕೂಡಾ ಸೇರಿದ್ದಾರೆ.

ಕೇಂದ್ರ ಸರ್ಕಾರವು ಕಳೆದ ತಿಂಗಳು ಪ್ರಕರಣದ ತನಿಖೆಯನ್ನು ಪುಣೆ ಪೊಲೀಸರಿಂದ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ವರ್ಗಾಯಿಸಿತ್ತು. ಶಿವಸೇನಾ - ಎನ್ಸಿಪಿ-ಕಾಂಗ್ರೆಸ್ ಸರ್ಕಾರವು ಕ್ರಮವನ್ನು ಟೀಕಿಸಿತ್ತು.

ಪುಣೆ ಪೊಲೀಸರು ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ ೧೨೪ಎ (ರಾಷ್ಟ್ರದ್ರೋಹ) ಅನ್ವಯಿಸಿದ್ದರೆ, ಎನ್ಐಎ ದಾಖಲಿಸಿರುವ ಎಫ್ಐಆರ್ನಲಿ ಆಪಾದನೆ ಇಲ್ಲ. ಅದೇ ರೀತಿ, ಐಪಿಸಿ ಸೆಕ್ಸನ್ ೧೨೧ (ಭಾರತ ಸರ್ಕಾರದ ವಿರುದ್ಧ ಸಮರ ಸಾರುವುದು ಅಥವಾ ಸಮರಕ್ಕೆ ಯತ್ನಿಸುವುದು ಅಥವಾ ಸಮರಕ್ಕೆ ಪ್ರಚೋದನೆ ನೀಡುವುದು) ಮತ್ತು ಸೆಕ್ಷನ್ ೧೨೧ (ಸೆಕ್ಷನ್ ೧೨೧ರ ಅಡಿಯಲಿ ಸೆರೆವಾಸ ಯೋಗ್ಯವಾದ ಅಪರಾಧಗಳನ್ನು ಎಸಗಲು ಸಂಚು ಹೂಡುವುದು) ಹಾಗೂ ೧೨೦ ಬಿ (ಕ್ರಿಮಿನಲ್ ಸಂಚು) ಇವು ಎನ್ಐಎಯ ಎಫ್ಐಆರ್ನಲ್ಲಿ ಇರಲಿಲ್ಲ.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ ೧೫೩ (ಗುಂಪುಗಳ ಮಧ್ಯೆ ದ್ವೇಷಕ್ಕೆ ಪ್ರಚೋದನೆ ನೀಡುವುದು), ೫೦೫ ()(ಬಿ) ಸಾರ್ವಜನಿಕರಲ್ಲಿ ಭೀತಿ ಮೂಡಿಸುವುದು ಅಥವಾ ಭೀತಿ ಉಂಟು ಮಾಡುವಂತೆ ಮಾಡುವ ಉದ್ದೇಶ ಹೊಂದಿರುವುದು, ೧೧೭ ಸಾರ್ವಜನಿಕರು ಅಥವಾ ೧೦ಕ್ಕಿಂತ ಹೆಚ್ಚು  ಮಂದಿಯಿಂದ ದಾಳಿ ನಡೆಸುವುದು ಅಥವಾ ದಾಳಿಗೆ ಪ್ರಚೋದನೆ ನೀಡುವುದು ಇತ್ಯಾದಿ ಮತ್ತು ಭಯೋತಾದನೆ ನಿಗ್ರಹ ವಿರೋಧಿ ಅಕ್ರಮ ಚಟುವಟಿಕೆಯಲ್ಲಿ ತೊಡಗುವುದಕ್ಕೆ ಸಂಬಂಧಿಸಿದ ಆಪಾದನೆಗಳನ್ನು ಆರೋಪಿಗಳ ವಿರುದ್ಧ ಮಾಡಲಾಗಿತ್ತು.

ಕಳೆದ ವಾರ ಎನ್ಐಎ ಪುಣೆ ಸೆಷನ್ಸ್ ನ್ಯಾಯಾಲಯಕ್ಕೆ  ಅರ್ಜಿ ಸಲ್ಲಿಸಿ ದಾಖಲೆಗಳು, ವಶಪಡಿಸಿಕೊಳ್ಳಲಾದ ಮಾಹಿತಿ, ಕೋರ್ಟ್ ದಾಖಲೆ ಮತ್ತು ಕಲಾಪಗಳನ್ನು ಮುಂಬೈಯಲ್ಲಿನ ಎನ್ಐಎ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಕೋರಿಕೆ ಮಂಡಿಸಿತ್ತು. ಆದಾಗ್ಯೂ, ಎನ್ಐಎ ಅರ್ಜಿಯನ್ನು ಪ್ರಾಸೆಕ್ಯೂಷನ್ ವಿರೋಧಿಸಿತ್ತು. ಕೇಂದ್ರೀಯ ತನಿಖಾ ಸಂಸ್ಥೆಯು ನೀಡಿರುವ ಕಾರಣಗಳು ಕಾನೂನುಬದ್ಧವಲ್ಲ ಮತ್ತು ಪ್ರಕರಣವನ್ನು ವಿಶೇಷ ಎನ್ಐಎ ನ್ಯಾಯಾಲಯಕ್ಕೆ ವರ್ಗಾಯಿಸುವುದಕ್ಕೆ ಯೋಗ್ಯವಾದವುಗಳಲ್ಲ ಎಂದು ಪ್ರಾಸೆಕ್ಯೂಷನ್ ವಾದಿತ್ತು.

ಶುಕ್ರವಾರ ತನ್ನ ನಿಲುವು ಬದಲಾಯಿಸಿದ ಮಹಾರಾಷ್ಟ್ರ ಸರ್ಕಾರ, ರಾಷ್ಟ್ರೀಯ ತನಿಖಾ ಸಂಸ್ಥೆಯು ಪ್ರಕರಣದ ತನಿಖೆ ಕೈಗೆತ್ತಿಕೊಳ್ಳಲು ತನ್ನ ಆಕ್ಷೇಪವಿಲ್ಲ ಎಂದು ಹೇಳಿತು.

ಗೃಹ ಸಚಿವ ಅನಿಲ್ ದೇಶಮುಖ್ ಅವರು ಚೆಂಡನ್ನು ಎನ್ಸಿಪಿ ಮತ್ತು ಕಾಂಗ್ರೆಸ್ ಕೂಡಾ ಒಳಗೊಂಡಿರುವ ಮಹಾ ವಿಕಾಸ ಅಘಾಡಿಯ ಇನ್ನೊಂದು ಅಂಗಪಕ್ಷವಾಗಿರುವ ಶಿವಸೇನೆಗೆ ಸೇರಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಂಗಳಕ್ಕೆ ಎಸೆದರು.

ರಾಜ್ಯ ಸಂಸ್ಥೆಗಳು ಕೋರೆಗಾಂವ್ ಭಿಮಾ (ಎಲ್ಗರ್ ಪರಿಷದ್) ಪ್ರಕರಣದ ತನಿಖೆ ನಡೆಸುತ್ತಿವೆ. ಆದರೆ ಕೇಂದ್ರವು ಪ್ರಕರಣದ ವಿಚಾರಣೆಯನ್ನು ಎನ್ಐಎಗೆ ಹಸ್ತಾಂತರಿಸಿದೆ. ಕೇಂದ್ರವು ನಿರ್ಧಾರ ಕೈಗೊಳ್ಳುವುದಕ್ಕೆ ಮುನ್ನ ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂಬುದು ಗೃಹ ಸಚಿವನಾಗಿ ನನ್ನ ನಿಲುವು. ನಾವು ನ್ಯಾಯಾಲಯದಲ್ಲಿ ನಮ್ಮ ನಿಲುವನ್ನು ಮುಂದಿಡುತ್ತೇವೆ. ಮುಖ್ಯಮಂತ್ರಿಯವರಿಗೆ ನನ್ನ ನಿಲುವನ್ನು ತಳ್ಳಿಹಾಕುವ ಹಕ್ಕಿದೆಎಂದು ಎನ್ಸಿಪಿ ನಾಯಕ ಹೇಳಿದರು.

ಎಲ್ಲರ ಕುತೂಹಲ ಕೆರಳಿಸಿರುವ ಪ್ರಕರಣವು ಇದೀಗ ಉದ್ಧವ್ ಠಾಕ್ರೆ ನೇತೃತ್ವದ ಮುಖ್ಯಮಂತ್ರಿಯವರ ಕಚೇರಿ ಮತ್ತು ದೇಶಮುಖ್ ನೇತೃತ್ವದ ಗೃಹ ಇಲಾಖೆ ನಡುವಣ ಭಿನ್ನಮತವನ್ನು ಬಯಲಿಗೆ ಎಳೆದಿದೆ ಎಂದು ರಾಜಕೀಯ ವಲಯಗಳು ಅಭಿಪ್ರಾಯಪಟ್ಟಿವೆ.

No comments:

Advertisement