Monday, February 17, 2020

ದೆಹಲಿಯ ’ಹ್ಯಾಟ್ರಿಕ್’ ಮುಖ್ಯಮಂತ್ರಿ ಕೇಜ್ರಿವಾಲ್ ಪ್ರಮಾಣ

ದೆಹಲಿಯ  'ಹ್ಯಾಟ್ರಿಕ್ಮುಖ್ಯಮಂತ್ರಿ  ಕೇಜ್ರಿವಾಲ್  ಪ್ರಮಾಣ
ಕೇಂದ್ರದ ಜೊತೆಗೆ ಸಾಮರಸ್ಯ,  ಪ್ರಧಾನಿ ಆಶೀರ್ವಾದಕ್ಕೆ ಕೋರಿಕೆ
ನವದೆಹಲಿ: ದೆಹಲಿಯ ಮುಖ್ಯಮಂತ್ರಿಯಾಗಿ ಮೂರನೇ ಅವಧಿಗೆ  2020 ಫೆಬ್ರುವರಿ 16ರ ಭಾನುವಾರ ರಾಮಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಆಮ್ ಆದ್ಮಿ ಪಕ್ಷದ (ಎಎಪಿ-ಆಪ್) ನಾಯಕ ಅರವಿಂದ ಕೇಜ್ರಿವಾಲ್ ಅವರುಕೇಂದ್ರದ ಜೊತೆಗೆ ಸೌಹಾರ್ದಯುತವಾಗಿ ಕೆಲಸ ಮಾಡಲು ಬಯಸುವುದಾಗಿಘೋಷಿಸಿದರು.

ಪ್ರಮಾಣ ವಚನ ಸ್ವೀಕಾರದ ಬಳಿಕ ಮಾತನಾಡಿದ ಕೇಜ್ರಿವಾಲ್ ರಾಜಧಾನಿಯಲ್ಲಿ ಸುಗಮ ಆಡಳಿತ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದ ಕೋರುವುದಾಗಿ ಹೇಳಿದರು.

ನಾನು ಪ್ರಧಾನಿ ನರೇಂದ್ರ ಮೋದಿ ಜಿ ಅವರಿಗೆ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ಕಳುಹಿಸಿದ್ದೆ. ಅವರಿಗೆ ಬರಲು ಆಗಿಲ್ಲ. ಅವರು ಬೇರೆ ಏನಾದರೂ ಕಾರ್ಯಕ್ರಮದಲ್ಲಿ ಮಗ್ನರಾಗಿರಬಹುದು. ವೇದಿಕೆಯ ಮೂಲಕ ನಾನು ದೆಹಲಿ ಅಭಿವೃದ್ಧಿ ಮತ್ತು ಸುಲಲಿತ ಆಡಳಿತಕ್ಕಾಗಿ ಪ್ರಧಾನಿ ಮತ್ತು ಕೇಂದ್ರ ಸರ್ಕಾರದ ಆಶೀರ್ವಾದಗಳನ್ನು ಕೋರುತ್ತಿದ್ದೇನೆ  ಎಂದು ಹಿಂದಿನ ಅವಧಿಯಲ್ಲಿ ಕೇಂದ್ರದ ಜೊತೆಗೆ ಹಲವಾರು ವಿಷಯಗಳಲ್ಲಿ ಘರ್ಷಿಸಿದ್ದ ಕೇಜ್ರಿವಾಲ್ ನುಡಿದರು.

ಚುನಾವಣಾ ಪ್ರಚಾರದ ವೇಳೆಯಲ್ಲಿ ಮಾಡಿದ ಎಲ್ಲ ಟೀಕೆಗಳಿಗಾಗಿ ನನ್ನ ವಿರೋಧಿಗಳನ್ನು ನಾನು ಕ್ಷಮಿಸಿದ್ದೇನೆಎಂದು ಹೇಳಿದ ಕೇಜ್ರಿವಾಲ್, ತಮ್ಮನ್ನುದೆಹಲಿಯ ಪುತ್ರಎಂಬುದಾಗಿ ಉಲ್ಲೇಖಿಸಿದರು. ’ ವಿಜಯ ನನ್ನ ವಿಜಯವಲ್ಲ, ಪ್ರತಿಯೊಬ್ಬ ದೆಹಲಿ ನಿವಾಸಿಯ ವಿಜಯಎಂದು ಅವರು ಹೇಳಿದರು.

ಇದು ನನ್ನ ವಿಜಯವಲ್ಲ. ಇದು ದೆಹಲಿಯ ಪ್ರತಿಯೊಬ್ಬ ನಿವಾಸಿ, ಪ್ರತಿ ಕುಟುಂಬದ ವಿಜಯ. ಕಳೆದ ಐದು ವರ್ಷಗಳಲ್ಲಿ  ಪ್ರತಿಯೊಬ್ಬ ದೆಹಲಿ ನಿವಾಸಿಗೂ ಸಂತಸ ಮತ್ತು ಪರಿಹಾರವನ್ನು ತರುವುದು ನಮ್ಮ ಏಕೈಕ ಪ್ರಯತ್ನವಾಗಿತ್ತು. ನಾನು ಯಾರ ಬಗೆಗೂ ಮಲತಾಯಿ ಧೋರಣೆ ತಾಳಲಿಲ್ಲ. ಕಳೆದ ಐದು ವರ್ಷಗಳಲ್ಲಿ ಎಲ್ಲರಿಗಾಗಿ ಶ್ರಮಿಸಿದ್ದೇನೆಎಂದು ಆಪ್ ನಾಯಕ ನುಡಿದರು.

ಈಗ ಚುನಾವಣೆಗಳು ಮುಗಿದಿವೆ. ನೀವು ಯಾರಿಗೆ ಮತ ಕೊಟ್ಟಿದ್ದೀರಿ ಎಂಬುದು ಈಗ ಪ್ರಸ್ತುತವಲ್ಲ. ಎಲ್ಲ ದೆಹಲಿಗರೂ ನನ್ನ ಕುಟುಂಬ ಸದಸ್ಯರು. ಯಾವುದೇ ಪಕ್ಷವಿರಲಿ, ಜಾತಿ ಇರಲಿ, ಮತ ಇರಲಿ ಅಥವಾ ಸಮಾಜದ ಸ್ತರ ಇರಲಿ, ನಾನು ಪ್ರತಿಯೊಬ್ಬನಿಗಾಗಿ ಶ್ರಮಿಸುತ್ತೇನೆ., ನಾನು ಕೇವಲ ಆಪ್ ಮುಖ್ಯಮಂತ್ರಿಯಲ್ಲ. ನಾನು ಬಿಜೆಪಿಯ ಮುಖ್ಯಮಂತ್ರಿ, ನಾನು ಕಾಂಗ್ರೆಸ್ಸಿನ ಮುಖ್ಯಮಂತ್ರಿ, ನಾನು ಪ್ರತಿಯೊಬ್ಬನ ಮುಖ್ಯಮಂತ್ರಿಎಂದು ಕೇಜ್ರಿವಾಲ್ ನುಡಿದರು.

ಉಚಿತಗಳನ್ನು ಘೋಷಿಸುವ ಮೂಲಕ ಆಪ್ ಗೆದ್ದಿದೆ ಎಂಬುದಾಗಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಮಾಡಿದ ಟೀಕೆಯನ್ನೂ ಮುಖ್ಯಮಂತ್ರಿ ಪ್ರಸ್ತಾಪಿಸಿದರು.

ಕೆಲವು ವ್ಯಕ್ತಿಗಳು ಕೇಜ್ರಿವಾಲ್ ಎಲ್ಲವನ್ನೂ ಉಚಿತವಾಗಿ ನೀಡುತ್ತಾರೆ ಎಂದು ಹೇಳುತ್ತಾರೆ. ಪ್ರಕೃತಿಯು ಪ್ರತಿಯೊಂದು ಮೌಲ್ಯಯುತವಾದುದನ್ನು ಜಗತ್ತಿನಲ್ಲಿ ಉಚಿತವಾಗಿ ನೀಡಿದೆ. ಅದು ಮಾತೆಯ ಪ್ರೀತಿ ಇರಲಿ, ತಂದೆಯ ಆಶೀರ್ವಾದ ಇರಲಿ, ಶ್ರವಣ ಕುಮಾರನ ಸಮರ್ಪಣೆ ಇರಲಿ ಎಲ್ಲವೂ ಉಚಿತವೇ. ಹಾಗೆಯೇ ಕೇಜ್ರಿವಾಲ್ ತನ್ನ ಜನರನ್ನು ಪ್ರೀತಿಸುತ್ತಾನೆ ಆದ್ದರಿಂದ ಪ್ರೀತಿ ಕೂಡಾ ಉಚಿತವೇಎಂದು ಅವರು ಹೇಳಿದರು.

ಕಳೆದ ಮಂಗಳವಾರ ಆಪ್ ವಿಜಯ ಖಚಿತವಾಗುತ್ತಿದ್ದಂತೆಯೇ ಹಲವಾರು ಬಿಜೆಪಿ ನಾಯಕರುಉಚಿತ ಭರವಸೆಗಳ ಕಾರಣ ಆಪ್ ಗೆದ್ದಿದೆ ಹೊರತು ಆಡಳಿತ ನೀತಿಗಳಿಂದಾಗಿ ಅಲ್ಲಎಂದು ಟೀಕಿಸಿದ್ದರು.

ರಾಮಲೀಲಾ ಮೈದಾನದಲ್ಲಿ ಪ್ರಮಾಣವಚನ ಸ್ವೀಕರಿಸಿದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಅರವಿಂದ ಕೇಜ್ರಿವಾಲ್ ಪಾತ್ರರಾಗಿದ್ದಾರೆ. ಅವರ ಪೂರ್ವಾಧಿಕಾರಿಗಳೆಲ್ಲರೂ ರಾಜ್ ನಿವಾಸದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು.

ಆಮ್ ಆದ್ಮಿ ಪಕ್ಷವು ೭೦ ಸದಸ್ಯ ಬಲದ ದೆಹಲಿ ವಿಧಾನಸಭೆಯ ಚುನಾವಣೆಯಲ್ಲಿ ೬೨ ಸ್ಥಾನ ಗೆದ್ದು ಪ್ರಚಂಡ ಜಯ ದಾಖಲಿಸಿದ್ದನ್ನು ಅನುಸರಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶುಕ್ರವಾರ ಕೇಜ್ರಿವಾಲ್ ಅವರನ್ನು ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ನೇಮಕ ಮಾಡಿದ್ದರು.

ಕೇಜ್ರಿವಾಲ್ ಅವರ ಸಂಪುಟದ ಹಿಂದಿನ ಸಚಿವರೆಲ್ಲರೂ ಮುಂದುವರೆಯುತ್ತಾರೆ ಎಂಬುದಾಗಿ ಮೊದಲೇ ಘೋಷಿಸಿದ್ದ ಪ್ರಕಾರ, ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ, ಸತ್ಯೇಂದರ್ ಜೈನ್, ಗೋಪಾಲ್ ರೈ, ಕಾಳಿದಾಸ ಗೆಹ್ಲೋಟ್, ರಾಜೇಂದ್ರ ಪಾಲ್ ಗೌತಮ್ ಮತ್ತು ಇಮ್ರಾನ್ ಹುಸೈನ್ ಅವರೂ 2020 ಫೆಬ್ರುವರಿ 16ರ ಭಾನುವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

No comments:

Advertisement