Saturday, February 1, 2020

ಕೃಷಿ ಪುನಶ್ಚೇತನಕ್ಕೆ ಭಾರೀ ಒತ್ತು, ಮಧ್ಯಮ ವರ್ಗಕ್ಕೆ ಸಿಹಿ

ಕೃಷಿ ಪುನಶ್ಚೇತನಕ್ಕೆ ಭಾರೀ ಒತ್ತು, ಮಧ್ಯಮ ವರ್ಗಕ್ಕೆ ಸಿಹಿ
ಕೈಗಾರಿಕೋದ್ಯಮಕ್ಕೆ ಕಹಿ, ಷೇರುಪೇಟೆ ತಲ್ಲಣ, ಭಾರೀ ಕುಸಿತ
ನವದೆಹಲಿ: ರೈತರ ಆದಾಯವನ್ನು ೨೦೨೨ರ ವೇಳೆಗೆ ದುಪ್ಪಟ್ಟುಗೊಳಿಸುವ ಗುರಿಯೊಂದಿಗೆ ಕೃಷಿ ಪುನಶ್ಚೇತನಕ್ಕೆ ಭಾರೀ ಒತ್ತು, ಮಧ್ಯಮ ವರ್ಗದ ಜನರಿಗೆ ವೈಯಕ್ತಿಕ ಆದಾಯ ತೆರಿಗೆ ಇಳಿಕೆಯ ಸಿಹಿಯ ಜೊತೆಗೇ ಸಾರ್ವಜನಿಕ ಉದ್ಯಮಗಳ ಖಾಸಗೀಕರಣದ ಪ್ರಸ್ತಾವದೊಂದಿಗೆ ಕೈಗಾರಿಕೋದ್ಯಮಕ್ಕೆ ಕಹಿ ಅನುಭವನ್ನು ನೀಡುವ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ 2020 ಫೆಬ್ರುವರಿ 01ರ ಶನಿವಾರ ಮಂಡಿಸಿದ ೨೦೨೦-೨೧ರ ಸಾಲಿನ ಮುಂಗಡಪತ್ರವು ಜನರಿಗೆ ಮಿಶ್ರ ಅನುಭವವನ್ನು ನೀಡಿತು.

ಕೃಷಿ ಮತ್ತು ಸಂಬಂಧಿತ ಗ್ರಾಮೀಣ ಅಭಿವೃದ್ಧಿ ಚಟುವಟಿಕೆಗಳಿಗೆ ೨.೮೩ ಲಕ್ಷ ಕೋಟಿಗೂ ಹೆಚ್ಚು ಮೊತ್ತವನ್ನು ಘೋಷಿಸಿದ ಕೇಂದ್ರ ವಿತ್ತ ಸಚಿವರು ಕೃಷಿಗೆ ೧.೬ ಲಕ್ಷ ಕೋಟಿ ಮೀಸಲು ಮತ್ತು. ಗ್ರಾಮೀಣಾಭಿವೃದ್ಧಿಗೆ ೧.೨೩ ಲಕ್ಷ ಕೋಟಿ ರೂಪಾಯಿಗಳನ್ನು ಘೋಷಿಸಿದರು. ಆದರೆ, ಸಾರ್ವಜನಿಕ ಉದ್ಯಮಗಳ ಖಾಸಗೀಕರಣವನ್ನು ವಿತ್ತ ಸಚಿವರು ಪ್ರಕಟಿಸುತ್ತಿದ್ದಂತೆಯೇ ಷೇರು ಮಾರುಕಟ್ಟೆ ದಿಢೀರನೆ ಕುಸಿದು ಒಂದೇ ದಿನದಲ್ಲಿ ೪.೧ ಲಕ್ಷ ಕೋಟಿ ರೂಪಾಯಿಗಳ ನಷ್ಟ ಅನುಭವಿಸಿತು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೆ ಏರಿರುವ ಹಿನ್ನೆಲೆ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎರಡನೇ ಬಾರಿಗೆ ಮಂಡಿಸಿರುವ ಮುಂಗಡಪತ್ರದಲ್ಲಿ ನಿರ್ಮಲಾ ಸೀತಾರಾಮನ್ ಅವರು ಪ್ರಕಟಿಸಿರುವ ಕ್ರಮಗಳಲ್ಲಿ ಬೆಂಗಳೂರು ಸಬರ್ಬನ್ ರೈಲು ಯೋಜನೆಗೆ ಒತ್ತು ಮತ್ತು ಬೆಂಗಳೂರು ಚೆನ್ನೈ ಎಕ್ಸ್ ಪ್ರೆಸ್ ಮಾರ್ಗವು ಕರ್ನಾಟಕಕ್ಕೆ ಲಭಿಸಿರುವ ಪ್ರಮುಖ ಕೊಡುಗೆಗಳಾಗಿವೆ.

ಆರ್ಥಿಕತೆಯ ಕುಸಿತದ ಹಿನ್ನೆಲೆಯಲ್ಲಿ ೨೦೨೦ ಮೇಲೆ ಬಜೆಟ್ ಬಗ್ಗೆ ನಿರೀಕ್ಷೆಗಳ ಮಹಾಪೂರವಿತ್ತು. ಕುಸಿತದತ್ತ ಸಾಗುತ್ತಿರುವ ದೇಶದ ಆರ್ಥಿಕತೆಗೆ ಆಮ್ಲಜನಕ ತುಂಬುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರಲಿದೆ ತೆರಿಗೆ ನೀತಿಯಲ್ಲಿ ಮಹತ್ವದ ಬದಲಾವಣೆ ತರಲಿದೆ ಎಂದು ಅಂದಾಜಿಸಲಾಗಿತ್ತು.

ಈ ಎಲ್ಲ ನಿರೀಕ್ಷೆಗಳ ಮಧ್ಯೆ, ಕೆಲವು ಹೊಸ ಯೋಜನೆಗಳನ್ನು ಘೋಷಿಸಿರುವ ನಿರ್ಮಲಾ ಸೀತಾರಾಮನ್ ಬಜೆಟ್ ಮಧ್ಯಮ ವರ್ಗದ ಜನರಿಗೆ ಸಿಹಿ ಸುದ್ದಿ ನೀಡಿತಾದರೂ ಉದ್ಯಮಿಗಳಿಗೆ ಕಹಿಯಾಗಿ ಪರಿಣಮಿಸಿತು. ದೇಶದ ಬಹುತೇಕ ಸಾರ್ವಜನಿಕ ಉದ್ಯಮವನ್ನು ಖಾಸಗಿ ಕಂಪೆನಿಗಳಿಗೆ ಧಾರೆ ಎರೆಯಲು ಮುಂದಾದ ಮುಂಗಡಪತ್ರದ ಪರಿಣಾಮವಾಗಿ ಷೇರು ಮಾರುಕಟ್ಟೆ ನೆಲ ಕಚ್ಚಿತು.

ಮಧ್ಯಮ ವರ್ಗಕ್ಕೆ ಸಿಹಿ: ವೈಯಕ್ತಿಕ ಆದಾಯ ತೆರಿಗೆ ಕಡಿತ:
ವೈಯಕ್ತಿಕ ಆದಾಯ ತೆರಿಗೆಯನ್ನು ನಿರೀಕ್ಷೆಯಂತೆಯೇ ಕೇಂದ್ರ ಸರ್ಕಾರ ಇಳಿಕೆ ಮಾಡಿತು. ನೂತನ ಆದಾಯ ತೆರಿಗೆ ನೀತಿ ಘೋಷಿಸುವ ಮೂಲಕ ಆದಾಯ ತೆರಿಗೆ ಸ್ಲ್ಯಾಬ್ ಗಳ ಸಂಖ್ಯೆಯನ್ನು ಹೆಚ್ಚಿಸಿ ವಿವಿಧ ಹಂತಗಳಿಗೆ ವಿವಿಧ ತೆರಿಗೆ ದರ ವಿಧಿಸಿತು.

ನಿರ್ಮಲಾ ಸೀತಾರಾಮನ್ ಮುಂಗಡಪತ್ರ ಘೋಷಣೆಯ ಪ್ರಕಾರ ೫ ಲಕ್ಷ ರೂಪಾಯಿಗಳವರೆಗಿನ ಆದಾಯ ಇರುವವರಿಗೆ ತೆರಿಗೆ ವಿನಾಯಿತಿ ಮುಂದುವರಿಯಲಿದೆ. ೫ ರಿಂದ ೭.೫ ಲಕ್ಷದ ರೂಪಾಯಿವರೆಗೆ ಆದಾಯ ಪಡೆಯುತ್ತಿರುವವರಿಗೆ ವಿಧಿಸಲಾಗುತ್ತಿದ್ದ ಶೇ. ೨೦ರಷ್ಟು ತೆರಿಗೆಯನ್ನು ಕಡಿತಗೊಳಿಸಿ ಶೇ. ೧೦ಕ್ಕೆ ಇಳಿಸಲಾಗಿದೆ. ೭.೫ರಿಂದ ೧೦ ಲಕ್ಷ ರೂಪಾಯಿವರೆಗಿನ ಆದಾಯ ಇರುವವರಿಗೆ ಶೇ. ೧೫ ತೆರಿಗೆಯನ್ನು ನಿಗದಿ ಪಡಿಸಲಾಗಿದೆ. ಈ ಹಿಂದೆ ೫ರಿಂದ ೧೦ ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಶೇ. ೨೦ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು.

ಹಾಗೆಯೇ, ೧೦-೧೨.೫ ಲಕ್ಷ ರೂಪಾಯಿ ಆದಾಯಗಳಿಗೆ ಈ ಮುಂಚೆ ವಿಧಿಸಲಾಗುತ್ತಿದ್ದ ಶೇ. ೩೦ರಷ್ಟು ತೆರಿಗೆಯನ್ನು ಶೇ ೨೦ಕ್ಕೆ ಇಳಿಕೆ ಮಾಡಲಾಗಿದೆ. ೧೨.೫-೧೫ ಲಕ್ಷ ರೂಪಾಯಿದವರೆಗಿನ ಆದಾಯಕ್ಕೆ ತೆರಿಗೆಯನ್ನು ಶೇ. ೨೫ಕ್ಕೆ ಇಳಿಸಲಾಗಿದೆ. ಈ ಮೊದಲು ೧೦-೧೫ ಲಕ್ಷ ರೂಪಾಯಿ ಆದಾಯಕ್ಕೆ ಶೇ. ೩೦ ತೆರಿಗೆ ವಿಧಿಸಲಾಗುತ್ತಿತ್ತು. ಇನ್ನು ೧೫ ಲಕ್ಷ ರೂ.ಗಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವವರಿಗೆ ಶೇ. ೩೦ ತೆರಿಗೆ ಮುಂದುವರೆಯಲಿದೆ.

ಕೃಷಿ ಪುನಃಶ್ಚೇತನಕ್ಕೆ ಒತ್ತು, ೧೬ ಅಂಶಗಳ ಯೋಜನೆ:
ಕೇಂದ್ರದ ಆರ್ಥಿಕ ಅಭಿವೃದ್ಧಿ ಗುರಿಗೆ ಪ್ರಮುಖ ಹಿನ್ನಡೆ ತಂದಿರುವ ಕ್ಷೇತ್ರಗಳಲ್ಲಿ ಕೃಷಿಯೂ ಪ್ರಮುಖವಾಗಿದ್ದು, ೨೦೨೨ರ ವೇಳೆಗೆ ಕೃಷಿ ಕ್ಷೇತ್ರದ ಆದಾಯವನ್ನು ದ್ವಿಗುಣಗೊಳಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರ ಈ ಮುಂಗಡಪತ್ರದಲ್ಲಿ ಕೃಷಿ ಕ್ಷೇತ್ರಕ್ಕೆ ಪುಷ್ಟಿ ನೀಡಲು ಕಲವು ಪ್ರಮುಖ ಕ್ರಮಗಳನ್ನು ಘೋಷಿಸಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿರುವ ೧೬ ಅಂಶಗಳ ಯೋಜನೆ ಯೋಜನೆಗಳಲ್ಲಿ ಮಾದರಿ ಕೃಷಿ ಕಾನೂನುಗಳನ್ನು ಅಳವಡಿಸಲು ರಾಜ್ಯಗಳಿಗೆ ಉತ್ತೇಜನ, ಅತೀವ ಜಲಕ್ಷಾಮ ಇರುವ ೧೦೦ ಜಿಲ್ಲೆಗಳ ಸಂಕಷ್ಟ ನೀಗಿಸಲು ಸಮಗ್ರ ಕ್ರಮ, ಸೀಮೆ ಎಣ್ಣೆಯ ಮೇಲಿನ ಅವಲಂಬನೆ ಕಡಿಮೆ ಮಾಡಿ ಸೌರ ವಿದ್ಯುತ್ ಬಳಕೆ ಉತ್ತೇಜಿಸಲು ’ಪ್ರಧಾನ ಮಂತ್ರಿ  ಕುಸುಮ್ ಯೋಜನೆ’, ಸಮತೋಲಿತವಾಗಿ ರಸಗೊಬ್ಬರ ಬಳಕೆಗೆ ಉತ್ತೇಜನ, ಕೃಷಿ ಮಳಿಗೆ, ಕೋಲ್ಡ್ ಸ್ಟೋರೇಜ್ ಇತ್ಯಾದಿ ಸಂಗ್ರಹಾಗಾರಗಳನ್ನು ಮ್ಯಾಪಿಂಗ್ ಮಾಡಲು ಅಥವಾ ಪರಸ್ಪರ ಸಂರ್ಪಕ ಏರ್ಪಡಿಸಲು ನಬಾರ್ಡ್ ಕ್ರಮ ಸೇರಿವೆ.

ಗ್ರಾಮ ಸಂಗ್ರಹ ಯೋಜನೆ ಮೂಲಕ ರೈತರು ತಮ್ಮ ಉತ್ಪನ್ನಗಳನ್ನು ಕಡಿಮೆ ವೆಚ್ಚದಲ್ಲಿ ಸಂಗ್ರಹಿಸಿಡಲು ಅನುಕೂಲವಾಗಲಿದೆ. ಇದರ ಜವಾಬ್ದಾರಿಯನ್ನು ಗ್ರಾಮಗಳ ಮಹಿಳೆಯರಿಗೆ ನೀಡಲಾಗುತ್ತದೆ.  ನಾಗರಿಕ ವಿಮಾನ ಯಾನ ಸಚಿವಾಲಯದಿಂದ ಕೃಷಿ ಉಡಾನ್ ಯೋಜನೆ ಪ್ರಾರಂಭಿಸಲಾಗುವುದು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಕೃಷಿ ವಿಮಾನ ಯೋಜನೆಯ ಅಳವಡಿಕೆ ಇರುತ್ತದೆ ಎಂದು ವಿತ್ತ ಸಚಿವರು ಪ್ರಕಟಿಸಿದರು.

ತೋಟಗಾರಿಕೆ ವಲಯದಲ್ಲಿ ಆಗುತ್ತಿರುವ ಉತ್ಪಾದನೆಯು ಆಹಾರ ಧಾನ್ಯಗಳ ಉತ್ಪನ್ನ ಪ್ರಮಾಣವನ್ನು ಮೀರಿಸಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಎಂಬ ರೀತಿಯಲ್ಲಿ ಇದನ್ನು ಮಾರ್ಪಡಿಸಲಾಗುವುದು, ಕೃಷಿ ಸಂಗ್ರಹಗಾರಗಳ ಸ್ವೀಕೃತಿಗಳನ್ನು ಇತರ ಇ-ಸೇವೆಗಳೊಂದಿಗೆ ಜೋಡಿಸಲಾಗುವುದು. ಕೃಷಿ ಉತ್ಪನ್ನಗಳಿಗೆ ಆನ್-ಲೈನ್ ಮಾರುಕಟ್ಟೆ ಒದಗಿಸಲಾಗುವುದು ಎಂದು ನಿರ್ಮಲಾ  ಸೀತಾರಾಮನ್ ನುಡಿದರು. 
ಕೃಷಿ ಕ್ಷೇತ್ರಕ್ಕೆ ೨೦೨೧ರವರೆಗೆ ೧೫ ಲಕ್ಷ ಕೋಟಿ ಹಣ ಮೀಸಲಿಡಲಾಗುತ್ತದೆ. ಕುರಿ ಮತ್ತು ಮೇಕೆಗಳನ್ನು ಬಾಧಿಸುವ ಕಾಲುಬಾಯಿ ರೋಗವನ್ನು ೨೦೨೫ರಲ್ಲಿ ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ೨೦೨೫ರಷ್ಟರಲ್ಲಿ ಹಾಲಿನ ಉತ್ಪನ್ನವನ್ನು ೫೩.೫ ದಶಲಕ್ಷ ಮೆಟ್ರಿಕ್ ಟನ್ ನಿಂದ ೧೦೩ ದಶಲಕ್ಷ ಮೆಟಿಕ್  ಟನ್‌ಗಳಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ಹೇಳಿದರು.

ಮೀನುಗಾರಿಕೆ ವಲಯದಲ್ಲಿ ಯುವ ಸಮುದಾಯವನ್ನು ಭಾಗಿಯಾಗಿಸಲು ಕ್ರಮ. ಗ್ರಾಮೀಣ ಯುವಕರಿಗಾಗಿ ’ಸಾಗರ ಮಿತ್ರ’ ಯೋಜನೆ, ಇದೆ. ಮೀನು ರೈತ ಸಂಘದ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ನುಡಿದರು.

ದೀನದಯಾಳ್ ಅಂತ್ಯೋದಯ ಯೋಜನೆಯನ್ನು ಬಲಗೊಳಿಸಲಾಗುವುದು. ಕೃಷಿಗೆ ೨.೮೩ ಲಕ್ಷ ಕೋಟಿ,  ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಭಿವೃದ್ಧಿಗೆ ೧.೨೩ ಲಕ್ಷ ಕೋಟಿ ರೂ ವಿನಿಯೋಗ ಮಾಡಲಾಗುವುದು ಎಂದು ಸಚಿವರು ಹೇಳಿದರು.

ಮಹಿಳಾ ಅಭಿವೃದ್ಧಿಗೆ ೨೮,೬೦೦ ಕೋಟಿ ರೂ, ಮಕ್ಕಳ ಕಲ್ಯಾಣಕ್ಕೂ ಆದ್ಯತೆ:
ಮುಂಗಡಪತ್ರ ಮಂಡನೆಯ ಆರಂಭದಲ್ಲೇ ಯುವಜನರ ಉದ್ಯೋಗ, ಮಹಿಳೆಯರ ಸಬಲೀಕರಣ, ಮಕ್ಕಳ ಕಲ್ಯಾಣಕ್ಕೆ ಆದ್ಯತೆ ನೀಡಿರುವುದಾಗಿ ಘೋಷಿಸಿದ ನಿರ್ಮಲಾ ಸೀತಾರಾಮನ್ ಮಹಿಳಾ ಕಲ್ಯಾಣಕ್ಕಾಗಿ ೨೮,೬೦೦ ಕೋಟಿ ರೂ. ಮೀಸಲಿಟ್ಟಿರುವುದಾಗಿ ಪ್ರಕಟಿಸಿದರು.

ಈ ಬಾರಿಯ ಕೇಂದ್ರದ ಬಜೆಟ್‌ನಲ್ಲಿ ಮಹಿಳಾ ಕಲ್ಯಾಣ ಇಲಾಖೆಗೆ ೨೮,೬೦೦ ಕೋಟಿ ರೂ. ಮೀಸಲಿಡಲಾಗಿದೆ. ಗರ್ಭಿಣಿಯರ ಸಾವನ್ನು ತಡೆಗಟ್ಟಲು ಹೆಚ್ಚಿನ ಆದ್ಯತೆ ನೀಡಲಾಗುವುದು. ಇದಕ್ಕಾಗಿ ಹೊಸ ಕಾರ್‍ಯಪಡೆ (ಟಾಸ್ಕ್ ಫೋರ್ಸ್)  ರಚಿಸಲಾಗುವುದು, ಅಂಗನವಾಡಿಗಳ ಮೂಲಕ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ವಿತರಿಸಲಾಗುವುದು ಎಂದು ಸೀತಾರಾಮನ್ ಹೇಳಿದರು.

ಶೈಕ್ಷಣಿಕ ಕ್ಷೇತ್ರದಲ್ಲೂ ವಿದೇಶಿ ಬಂಡವಾಳದ ನೇರ ಹೂಡಿಕೆ:
ದೇಶದ ಶೈಕ್ಷಣಿಕ ಕ್ಷೇತ್ರಕ್ಕೆ  ೯೯,೩೦೦ ಕೋಟಿ ರೂಪಾಯಿ ಹಾಗೂ ಕೌಶಲ್ಯ ಅಭಿವೃದ್ಧಿಗೆ ೩,೦೦೦ ಕೋಟಿ ರೂಪಾಯಿಗಳ ಅನುದಾನ ನೀಡಲಾಗುವುದು. ಮುಂದಿನ ದಿನಗಳಲ್ಲಿ ಶಿಕ್ಷಣ ವಲಯದಲ್ಲಿ ವಿದೇಶಿ ನೇರ ಹೂಡಿಕೆಯನ್ನು ಕೇಂದ್ರ ಸರ್ಕಾರ ಪರಿಚಯಿಸಲಿದೆ ಎಂದು ನಿರ್ಮಲಾ ಸೀತಾರಾಮನ್ ನುಡಿದರು.

ವಿಮಾ ನಿಗಮ ಖಾಸಗೀಕರಣ:
ಅಭಿವೃದ್ಧಿ ಕಾರ್ಯಕ್ಕೆ ಹಣ ಕ್ರೋಡೀಕರಣಕ್ಕೆ ಮುಂದಾದ ಕೇಂದ್ರ ವಿತ್ತ ಸಚಿವರು ವಿವಿಧ ಆಯಾಮಗಳಲ್ಲಿ ಹಣವನ್ನು ಒಟ್ಟುಗೂಡಿಸಲು ಮುಂದಾದರು. ಈ ನಿಟ್ಟಿನಲ್ಲಿ ಸರ್ಕಾರಿ ವಿಮಾ ಕಂಪೆನಿಯಾಗಿರುವ ಭಾರತೀಯ ಜೀವ ವಿಮಾ ನಿಗಮದಲ್ಲಿನ (ಎಲ್‌ಐಸಿ) ಸರ್ಕಾರಿ ಷೇರುಗಳ ಮಾರಾಟ ಮಾಡಲಾಗುವುದು ಎಂದು ಸಚಿವರು ಪ್ರಕಟಿಸಿದರು. ಪ್ರಸ್ತುತ ಎಲ್‌ಐಸಿ ಷೇರುಗಳ ಅಲ್ಪ ಪ್ರಮಾಣದ ಮಾರಾಟಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಭವಿಷ್ಯದಲ್ಲಿ ಎಲ್‌ಐಸಿಯನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸುವ ಸಾಧ್ಯತೆಯನ್ನೂ ೨೦೨೦ ಬಜೆಟ್ ತೆರೆದಿಟ್ಟಿದೆ.

ಎಸ್ಸಿ-ಎಸ್ಟಿ ಸಮಾಜದ ಕಲ್ಯಾಣಕ್ಕಾಗಿ ೧.೩೮ ಲಕ್ಷ ಕೋಟಿ ಅನುದಾನ:
ಕೇಂದ್ರ ಮುಂಗಡಪತ್ರವು ಸಮಾಜದಲ್ಲಿ ಹಿಂದುಳಿದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಬಲೀಕರಣಕ್ಕಾಗಿ ೧.೩೮ ಲಕ್ಷ ಕೋಟಿ ರೂಪಾಯಿ ಅನುದಾನದ ಮಹತ್ವದ ಕ್ರಮವನ್ನೂ ಘೋಷಿಸಿದೆ. ೨೦೨೧ರ ಆರ್ಥಿಕ ವರ್ಷದಲ್ಲಿ ಎಸ್‌ಎಸಿ (ಪರಿಶಿಷ್ಟ ಜಾತಿ) ಅಥವಾ ಒಬಿಸಿ(ಇತರೆ ಹಿಂದುಳಿದ ವರ್ಗ) ಸಮುದಾಯ ಅಭಿವೃದ್ಧಿಗೆ ೮೫ ಸಾವಿರ ಕೋಟಿ ರೂಪಾಯಿ ಹಾಗೂ ಎಸ್ಟಿ (ಪರಿಶಿಷ್ಟ ಪಂಗಡ) ಸಮುದಾಯದ ಅಭಿವೃದ್ಧಿಗೆ ೫೩,೭೦೦ ಕೋಟಿ ರೂಪಾಯಿ ಅನುದಾನವನ್ನು ನೀಡಲು ಉದ್ದೇಶಿಸಲಾಗಿದೆ. ಇದಲ್ಲದೆ, ಹಿರಿಯ ನಾಗರೀಕರ ಯೋಗಕ್ಷೇಮವನ್ನೂ ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಇದಕ್ಕೆಂದು ವಿಶೇಷವಾಗಿ ೯,೫೦೦ ಕೋಟಿ ಅನುದಾನ  ನೀಡಲಿದೆ" ಎಂದು ಅವರು ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು.

ಕುಸಿತ ಕಂಡ ಮುಂಬೈ ಷೇರುಪೇಟೆ:
ನಿರ್ಮಲಾ ಸೀತಾರಾಮ್ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಅಲ್ಪ ಪ್ರಮಾಣ ಷೇರುಗಳನ್ನು ಸರ್ಕಾರ ಮಾರಾಟ ಮಾಡಲು ನಿರ್ಧರಿಸಿದೆ. ಸಾರ್ವಜನಿಕರೂ ಸಹ ಈ ಷೇರುಗಳನ್ನು ಖರೀದಿ ಮಾಡಬಹುದು ಎಂದು ತಿಳಿಸಿದ್ದಲ್ಲದೆ,  ಭsವಿಷ್ಯದಲ್ಲಿ ಸರ್ಕಾರಿ ವಿಮಾ ನಿಗಮ ಸಂಪೂರ್ಣ ಖಾಸಗೀಕರಣವಾಗುವ ಸಾಧ್ಯತೆ ಇದೆ ಎಂಬ ಸೂಚನೆಯನ್ನೂ ನೀಡುತ್ತಿದ್ದಂತೆಯೇ ಷೇರು ಮಾರುಕಟ್ಟೆ ತಲ್ಲಣಿಸಿತು.

ಸಚಿವರು ಷೇರು ಮಾರಾಟದ ಕುರಿತು ಉಲ್ಲೇಖ ಮಾಡುತ್ತಿದ್ದಂತೆಯೇ ಎಚ್‌ಡಿಎಫ್‌ಸಿ ಲೈಫ್, ಐಸಿಐಸಿಐ ಪ್ರುಡೆನ್ಶಿಯಲ್ ಹಾಗೂ ಎಸ್ಬಿಐ ಲೈಫ್ ಕಂಪೆನಿಗಳು ದಾಖಲೆಯ ಕುಸಿತ ಕಾಣಲು ಆರಂಭಿಸಿದವು. ಮುಂಗಡಪತ್ರ ಮಂಡನೆಗೂ ಮುನ್ನವೇ ೧೦೦ ಅಂಕಗಳ ಕುಸಿತದೊಂದಿಗೆ ಮಾರುಕಟ್ಟೆ ವಹಿವಾಟು ಆರಂಭಿಸಿದ ಭಾರತೀಯ ಷೇರುಪೇಟೆ ಮಧ್ಯಾಹ್ನದ ವೇಳೆಗೆ ಖಾಸಗಿ ವಿಮಾ ಕಂಪೆನಿಗಳ ಪಾಲಿಗೆ ಮತ್ತಷ್ಟು ನಷ್ಟವನ್ನು ಉಂಟು ಮಾಡಿತು.

ಬಿಎಸ್‌ಇ ಸೆನ್ಸೆಕ್ಸ್ ೩ ಗಂಟೆ ೩೦ ನಿಮಿಷದ ಹೊತ್ತಿಗೆ ೧೦೬೬ ಅಂಕಗಳ ಕುಸಿತ ಕಂಡು ೩೯,೬೫೬ ಅಂಕಗಳಿಗೆ ಇಳಿಕೆಯಾಗಿತ್ತು. ಈ ಮೂಲಕ ಬಿಎಸ್‌ಇ ಮಾರುಕಟ್ಟೆ ಮೌಲ್ಯವೂ ೧೫೬.೫೦ ಲಕ್ಷ ಕೋಟಿ ರೂಪಾಯಿಯಿಂದ ೧೫೨.೪ ಕೋಟಿ ರೂಪಾಯಿಗೆ ಇಳಿಕೆಯಾಗಿ,  ಷೇರುದಾರರು ಅಂದಾಜು ೪.೧ ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದರು.

ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ನಿಫ್ಟಿಯಲ್ಲೂ ದೊಡ್ಡ ಮಟ್ಟದ ಇಳಿಕೆಯಾಗಿದ್ದು ೩೯೨ ಅಂಕಗಳ ಕುಸಿತ ದಾಖಲಾಯಿತು. ನಿಫ್ಟಿ ೧೧.೬೪೩ ಅಂಕಕ್ಕೆ ಇಳಿಯಿತು.

ಟೆಕ್ ಮಹೀಂದ್ರಾ, ಪವರ್‌ಗ್ರಿಡ್, ಟಾಟಾ ಸ್ಟೀಲ್, ಎನ್ಟಿಪಿಸಿ, ಕೊಟಕ್ ಬ್ಯಾಂಕ್ ಮತ್ತು ಹೆಚ್ಸಿಎಲ್ ಟೆಕ್ ಕಂಪೆನಿಗಳ ಆದಾಯದಲ್ಲೂ ಶೇ. ೩ ರಷ್ಟು ಕುಸಿತ ಉಂಟಾಯಿತು. ಮುಂಬೈ ಷೇರು ಮಾರುಕಟ್ಟೆ ಸೆನ್ಸೆಕ್ಸ್ ೬೮೦ ಅಂಕಗಳಷ್ಟು ಇಳಿಕೆ ಕಂಡರೆ, ನಿಫ್ಟಿ ೨೦೦ ಅಂಕಗಳನ್ನು ಕಳೆದುಕೊಂಡಿತು.

ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಲಾಭಾಂಶ ವಿತರಣಾ ತೆರಿಗೆ (ಡಿಡಿಟಿ) ತೆಗೆದು ಹಾಕುವ ಪ್ರಸ್ತಾಪ ಇಟ್ಟಿದ್ದಾರೆ. ಇದರಿಂದ ಕಂಪನಿಗಳು ಶೇರುದಾರರಿಗೆ ಹೆಚ್ಚಿನ ಪಾವತಿ ಮಾಡಬೇಕಾಗುತ್ತದೆ. ಈ ಘೋಷಣೆ ಸೇರಿದಂತೆ ಬಜೆಟ್ ಭಾಷಣ ಪೂರ್ಣಗೊಳ್ಳುತ್ತಿದ್ದಂತೆ ಶೇರುಪೇಟೆಯಲ್ಲಿ ಕುಸಿತ ದಾಖಲಾಯಿತು.

ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ಆರಂಭಿಸುವ ಮೊದಲು ಬಿಎಸ್‌ಇ ಸೆನ್ಸೆಕ್ಸ್ ೧೧೫ ಅಂಕಗಳು ಏರಿಕೆ ಕಂಡು ೪೦,೮೩೬ಕ್ಕೆ ತಲುಪಿತ್ತು. ನಿಫ್ಟಿಯಲ್ಲಿ ಕೂಡ ೩೭ ಅಂಕ ಏರಿಕೆಯಾಗಿ ೧೧,೯೯೭ಕ್ಕೆ ಮುಟ್ಟಿತ್ತು. ಆದರೆ ಬಜೆಟ್ ನಂತರ ಏರಿಕೆ ಹಾದಿಯಿಂದ ಎರಡೂ ಶೇರು ಮಾರುಕಟ್ಟೆಗಳು ಇಳಿಕೆ ಹಾದಿಗೆ ಮರಳಿದವು.

೨೦೨೦ರ ಮುಂಗಡಪತ್ರದಲ್ಲಿ ಕರ್ನಾಟಕಕ್ಕೆ ಉಪನಗರ ರೈಲು ಯೋಜನೆ (ಸಬ್ ಅರ್ಬನ್ ರೈಲು) ಮಂಜೂರಾಗಿರುವುದು ಬಿಟ್ಟರೆ ಉದ್ಯಮಿಗಳಿಗೆ ಸಂತಸ ಪಡಲು ಬೇರೆ ಯಾವ ಕಾರಣಗಳೂ ಇಲ್ಲ ಎಂದು ಉದ್ಯಮ ವಲಯಗಳಲ್ಲಿ ಭಾವಿಸಲಾಗುತ್ತದೆ.  ಆದಾಯ ತೆರಿಗೆಯಲ್ಲಿ ಅಲ್ಪ ಪ್ರಮಾಣದ ಕಡಿತ ಮಾಡಿರುವುದು ಮಧ್ಯಮ ವರ್ಗಕ್ಕೆ ಸಿಹಿ ನೀಡಿದ್ದರೂ, ಉದ್ಯಮ ವಲಯಕ್ಕೆ ಉತ್ತೇಜನ ನೀಡುವ ಯಾವ ಅಂಶವೂ ಈ ಮುಂಗಡಪತ್ರದಲ್ಲಿ ಇಲ್ಲ ಎಂದೇ ಉದ್ಯಮ ವಲಯಗಳು ಪ್ರತಿಕ್ರಿಯಿಸಿವೆ.

ಐಟಿಬಿಟಿ ಹಬ್ ಎನಿಸಿಕೊಂಡಿರುವ ಬೆಂಗಳೂರು, ಹೈದರಾಬಾದ್ ನಂತಹ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳಿಗೆ ಹೆಚ್ಚಿನ ತೆರಿಗೆ ವಿನಾಯಿತಿ ನೀಡುವ ಹಾಗೂ ಉದ್ಯೋಗಾವಕಾಶಗಳನ್ನು ಹೆಚ್ಚಿಸಿ ಯುವಕರಿಗೆ ಸಹಾಯ ಮಾಡುವ ದೂರದೃಷ್ಟಿಯ ಯೋಜನೆಗಳ ನಿರೀಕ್ಷೆ ಇತ್ತು. ಆದರೆ, ಈ ಎಲ್ಲಾ ನಿರೀಕ್ಷೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹುಸಿಗೊಳಿಸಿದ್ದಾರೆ  ಎಂಬುದಾಗಿ ಆರ್ಥಿಕ ವಿಶ್ಲೇಷಕರು ಹೇಳಿದರು.

೨೦೨೦-೨೧ರ ಸಾಲಿನ ಕೇಂದ್ರ ಮುಂಗಡಪತ್ರ ಆಯವ್ಯಯ
ಕೋಟಿ ರೂಪಾಯಿಗಳಲ್ಲಿ
          
೨೦೨೦-೨೧ರ ಮುಂಗಡಪತ್ರದ ಒಟ್ಟು ಗಾತ್ರ: ೩೦,೪೨,೨೩೦ ಕೋಟಿ ರೂಪಾಯಿ.
ಹಣಕಾಸು ಕೊರತೆ: ೭,೯೬,೩೩೭ ಕೋಟಿ ರೂಪಾಯಿ
ಪ್ರಾಥಮಿಕ ಕೊರತೆ ೮೮,೧೩೪ ಕೋಟಿ ರೂಪಾಯಿಗಳು

ಬಜೆಟ್ ಮುಖ್ಯಾಂಶಗಳು
            ಎರಡು ಮುಕ್ಕಾಲು ಗಂಟೆಗಳ ಕಾಲ ಬಜೆಟ್ ಭಾಷಣ ಮಾಡಿ, ತನ್ನದೇ ದಾಖಲೆ ಮುರಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್. ಅಸ್ವಸ್ಥತೆ ಕಾರಣ ಕೊನೆಯ ೨ ಪುಟ ಮುಗಿಸುವ ಮುನ್ನವೇ ಬಜೆಟ್ ಮಂಡನೆ ಮುಕ್ತಾಯ.
            ಹೊಸ ಆದಾಯ ತೆರಿಗೆ ನೀತಿ, ಹೊಸ ಸ್ಲ್ಯಾಬ್‌ಗಳ ರಚನೆ.
            ಆಮದು ಮಾಡಿಕೊಂಡ ವೈದ್ಯೋಪಕರಣಗಳು ಇನ್ನು ದುಬಾರಿ
            ಆಮದು ಮಾಡಿಕೊಳ್ಳಲಾದ ಚಪ್ಪಲಿ, ಪೀಠೋಪಕರಣ ದರ ದುಬಾರಿ
            ಇನ್ನು ಆಧಾರ್ ಕಾರ್ಡಿಗಾಗಿ ಪ್ರತ್ಯೇಕ ಅರ್ಜಿ ಸಲ್ಲಿಸಬೆಕಾಗಿಲ್ಲ. ಆಧಾರ್ ಸಂಖ್ಯೆಯ ಆಧಾರದ ಮೇಲೆ ಪಾನ್ ಕಾರ್ಡ್ ಮಂಜೂರು
            ಸಹಕಾರಿ ಸಂಘಗಳ ಮೇಲಿನ ತೆರಿಗೆ ೨೨%ದಷ್ಟು ಇಳಿಕೆ
            ೨೦೨೦ ಮಾರ್ಚ್ ೩೧ರ ಒಳಗೆ ಬಾಕಿ ತೆರಿಗೆ ಪಾವತಿಸಿದರೆ ದಂಡ ಹಾಗೂ ಬಡ್ಡಿ ಮನ್ನಾ
            ವಿವಾದದಿಂದ ವಿಶ್ವಾಸದೆಡೆಗೆ  ಹೊಸ ಯೋಜನೆ ಘೋಷಣೆ
            ಮಧ್ಯಮ ಬಜೆಟ್‌ನಲ್ಲಿ ಮನೆ ನಿರ್ಮಿಸುವ ಬಿಲ್ಡರ್‌ಗಳಿಗೆ ಸರಕಾರದ ಕೊಡುಗೆ. ಲಾಭಾಂಶ ಮೇಲಿನ ತೆರಿಗೆ ಒಂದು ವರ್ಷದ ಅವಧಿಗೆ ಮನ್ನಾ
            ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಬಂಪರ್ ಕೊಡುಗೆ. ಒಂದು ವರ್ಷ ಲಾಭಾಂಶದ ಮೇಲೆ ತೆರಿಗೆ ಕಟ್ಟಬೇಕಾಗಿಲ್ಲ
            ವಾರ್ಷಿಕ ೦೫ ಕೋಟಿ ವ್ಯವಹಾರಕ್ಕೆ ಆಡಿಟ್ ರಿಯಾಯ್ತಿ
            ಮನೆ ಸಾಲದ ಮೇಲಿನ ತೆರಿಗೆ ವಿನಾಯ್ತಿ ಅವಧಿ ವಿಸ್ತರಣೆ
            ನವೋದ್ಯಮಗಳಿಗೆ (ಸ್ಟಾರ್ಟ್ ಅಪ್) ೦೫ ವರ್ಷಗಳವರೆಗೆ ತೆರಿಗೆ ವಿನಾಯಿತಿ.
            ಹೊಸದಾಗಿ ಹೂಡಿಕೆ ಮಾಡುವ ಸಂಸ್ಥೆಗಳಿಗೆ ತೆರಿಗೆ ರಿಲೀಫ್
            ಉತ್ಪಾದನಾ ವಲಯದಲ್ಲಿ ಕಾರ್ಪೊರೇಟ್ ತೆರಿಗೆ ಶೇ.೧೫ರಷ್ಟು ಇಳಿಕೆ
            ೨೦೨೦ರ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆ ಗುರಿ ೩.೮% ಆಗಿದ್ದರೆ ೨೦೨೧ರಲ್ಲಿ ವಿತ್ತೀಯ ಕೊರತೆಯನ್ನು೩.೫%ಕ್ಕೆ ಇಳಿಸುವ ಗುರಿ.
            ೨೦೨೦-೨೧ರಲ್ಲಿ ಅಂದಾಜು ವೆಚ್ಚ ೩೦.೪೨ ಲಕ್ಷ ಕೋಟಿ ರೂ.
            ೨೦೨೦-೨೧ರಲ್ಲಿ ೨೨.೬೬ ಲಕ್ಷ ಕೋಟಿ ರೂಪಾಯಿಗಳ ತೆರಿಗೆ ಸಂಗ್ರಹ ಗುರಿ
            ೨೦೨೧ರಲ್ಲಿ ಜಿಡಿಪಿ ಶೇ.೧೦ರ ದರದಲ್ಲಿ ಏರಿಕೆಯಾಗುವ ವಿಶ್ವಾಸ
            ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಸಾಲಗಳಿಗೆ ಭಾಗಶಃ ಗ್ಯಾರಂಟಿ
            ೧೫ನೇ ಹಣಕಾಸು ಆಯೋಗದ ವರದಿಗೆ ಒಪ್ಪಿಗೆ
            ಎಲ್.ಐ.ಸಿ.ಯಲ್ಲಿರುವ ಸರಕಾರಿ ಹೂಡಿಕೆಯಲ್ಲಿ ಅಲ್ಪ ಪಾಲು ಮಾರಾಟ
            ಡಿಪಾಸಿಟ್ ವಿಮೆ ಮೊತ್ತ ೦೧ ಲಕ್ಷದಿಂದ ೦೫ ಲಕ್ಷಕ್ಕೆ ಏರಿಕೆ
            ಹಣದ ಹರಿವಿನ ಪ್ರಮಾಣ ಹೆಚ್ಚಳಕ್ಕೆ ಕ್ರಮ
            ಐಡಿಬಿಐ ಬ್ಯಾಂಕ್ ಸಂಪೂರ್ಣ ಖಾಸಗೀಕರಣ
            ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಗಳಲ್ಲಿ ಉದ್ಯೋಗ ಹೆಚ್ಚಳಕ್ಕೆ ಕ್ರಮ
            ಕೌಶಲಾಭಿವೃದ್ಧಿ ಯೋಜನೆಗಳ ಉತ್ತೇಜನಕ್ಕಾಗಿ ೩೦೦೦ ಕೋಟಿ ರೂಪಾಯಿಗಳ ಅನುದಾನ
            ಕೃಷಿ ಹಾಗೂ ನೀರಾವರಿ ಕ್ಷೇತ್ರದಲ್ಲಿ ವಿವಿಧ ಅಬಿವೃದ್ಧಿ ಯೋಜನೆಗಳ ಅನುಷ್ಠಾನಕ್ಕಾಗಿ ೨.೮೩ ಲಕ್ಷ ಕೋಟಿ ರೂಪಾಯಿಗಳ ಅನುದಾನ
            ಬ್ಯಾಂಕ್ ಗಳ ಆರ್ಥಿಕ ಸ್ಥಿತಿಗತಿಗಳ ಮೇಲೆ ಸರಕಾರದ ತೀವ್ರ ನಿಗಾ
            ನೂತನ ಕೇಂದ್ರಾಡಳಿತ ಪ್ರದೇಶ ಲಢಾಕ್ ಗಾಗಿ ೫,೯೫೮ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಣೆ
            ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ಯೋಜನೆಗಳಿಗಾಗಿ ೩೦,೭೫೭ ಕೋಟಿ ರೂಪಾಯಿಗಳ ಅನುದಾನ ಘೋಷಣೆ
            ಹಿರಿಯ ನಾಗರಿಕರು ಹಾಗೂ ಒಬಿಸಿ ವರ್ಗಗಳ ಅಭಿವೃದ್ಧಿ ಯೋಜನೆಗಳಿಗಾಗಿ ೯,೫೦೦ ಕೋಟಿ ರೂಪಾಯಿಗಳ ನೆರವು
            ಪರಿಶಿಷ್ಟ ಜಾತಿಗಳ ಅಭಿವೃದ್ಧಿಗಾಗಿ ೮೫ಸಾವಿರ ಕೋಟಿ ರೂಪಾಯಿ ಪರಿಶಿಷ್ಟ ಮತ್ತು ಪಂಗಡಗಳ ಅಭಿವೃದ್ಧಿಗಾಗಿ ೫೩,೭೦೦ ಕೋಟಿ ರೂಪಾಯಿಗಳ ಅನುದಾನ ಘೋಷಣೆ
            ನಾನ್ ಗಜೆಟೆಡ್ ಹುದ್ದೆಗಳಲ್ಲಿ ಭಾರೀ ಸುಧಾರಣೆ ಘೋಷಣೆ. ಸಾಮಾನ್ಯ ಪರೀಕ್ಷಾ ಪದ್ಧತಿ ಅಳವಡಿಕೆ
            ತೆರಿಗೆ ಕಿರುಕುಳ ಪ್ರಕರಣಗಳನ್ನು ಸಹಿಸಿಕೊಳ್ಳಲಾಗುವುದಿಲ್ಲ
            ಜನಸಾಮಾನ್ಯರ ಜೀವನವನ್ನು ಸುಗಮವಾಗಿಸುವುದೇ ನಮ್ಮ ಗುರಿ
            ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಸರಕಾರದ ಆದ್ಯತೆ
            ರಾಷ್ಟ್ರೀಯ ಭದ್ರತೆ ಈ ಸರಕಾರದ ಪ್ರಥಮ ಆದ್ಯತೆ
            ಹೆಚ್ಚಿನ ಪ್ರಮಾಣದಲ್ಲಿ ವಿಷಕಾರಿ ಅನಿಲ ಹೊರಹಾಕುವ ಕಾರ್ಖಾನೆಗಳನ್ನು ಮುಚ್ಚಲು ಕ್ರಮ
            ಅಹಮದಾಬಾದ್ ನಲ್ಲಿ ಸಿಂಧೂ ನಾಗರಿಕತೆಯ ಮಹತ್ವವನ್ನು ಸಾರುವ ಮ್ಯೂಸಿಯಂ ಸ್ಥಾಪನೆ
            ಸದನದಲ್ಲಿ ತಿರುವಳ್ಳರ್ ತ್ರಿಪದಿ ಮೂಲಕ ರಾಷ್ಟ್ರೀಯ ಭದ್ರತೆಯ ಮಹತ್ವವನ್ನು ಪ್ರತಿಪಾದಿಸಿದ ವಿತ್ತ ಸಚಿವೆ.
            ಸ್ವಚ್ಛ ಗಾಳಿ ಪೂರಕ ಯೋಜನೆಗಳಿಗಾಗಿ ೪,೪೦೦ ಕೋಟಿ ರೂಪಾಯಿಗಳ ಅನುದಾನ
            ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ೫೩,೭೦೦ ಕೋಟಿ ರೂಪಾಯಿಗಳ ಅನುದಾನ
            ಪ್ರವಾಸೋದ್ಯಮ ಕ್ಷೇತ್ರದ ಉತ್ತೇಜನಕ್ಕಾಗಿ ೨,೫೦೦ ಕೋಟಿ ರೂಪಾಯಿ ಘೋಷಣೆ
            ಜಾರ್ಖಂಡ್ ನಲ್ಲಿ ಬುಡಕಟ್ಟು ಮ್ಯೂಸಿಯಂ ಸ್ಥಾಪನೆ
            ಸಂಸ್ಕೃತಿ ಸಚಿವಾಲಯಕ್ಕೆ ೩೧೫೦ ಕೋಟಿ ರೂಪಾಯಿಗಳ ಅನುದಾನ
            ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ೨೮,೬೦೦ ಕೋಟಿ ರೂಪಾಯಿಗಳ ಅನುದಾನ
            ಪೌಷ್ಠಿಕಾಂಶ ಪೂರಕ ಯೋಜನೆಗಳಿಗಾಗಿ ೩೫,೬೦೦ ಕೋಟಿ ರೂಪಾಯಿಗಳ ಅನುದಾನ
            ಗರ್ಭಿಣಿಯರ ಮರಣ ಪ್ರಮಾಣ ತಡೆಗೆ ಹೊಸ ಟಾಸ್ಕ್ ಫೋರ್ಸ್ ಸ್ಥಾಪನೆ
            ಮುಂದಿನ ೦೫ ವರ್ಷಗಳಲ್ಲಿ ಕ್ವಾಂಟಮ್ ಟೆಕ್ನಾಲಜಿಗಾಗಿ ೮ ಸಾವಿರ ಕೋಟಿ ರೂಪಾಯಿಗಳ ಅನುದಾನ ಘೋಷಣೆ
            ಖಾಸಗಿ ವಲಯದವರಿಗೆ ಡಾಟಾ ಸೆಂಟರ್ ಪಾರ್ಕ್ ನಿರ್ಮಿಸಲು ಆಹ್ವಾನ
            ಎರಡು ರಾಷ್ಟ್ರೀಯ ವಿಜ್ಞಾನ ಯೋಜನೆಗಳಿಗೆ ಅನುದಾನ
            ಅಂಗನವಾಡಿ ಕೇಂದ್ರಗಳಲ್ಲೂ ಇನ್ನು ಮಂದೆ ಇಂಟರ್ನೆಟ್ ಸೌಲಭ್ಯ
            ಒಂದು ಲಕ್ಷ ಗ್ರಾಮಗಳಿಗೆ ಫೈಬರ್ ನೆಟ್ ಸೌಲಭ್ಯ ವಿಸ್ತರಣೆ
            ಭಾರತ್ ನೆಟ್ ಯೋಜನೆಗೆ ೨೦೨೧ ಆರ್ಥಿಕ ವರ್ಷದಲ್ಲಿ ೦೬ ಸಾವಿರ ಕೋಟಿ ರೂಪಾಯಿಗಳ ಅನುದಾನ ಘೋಷಣೆ
            ಮುಂದಿನ ಮೂರು ವರ್ಷಗಳೊಳಗಾಗಿ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ.
            ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ೨೨ ಸಾವಿರ ಕೋಟಿ ರೂ. ಅನುದಾನ
            ೨೭ಸಾವಿರ ಕಿಲೋಮೀಟರ್ ಹಳಿಗಳ ವಿದ್ಯುದ್ದೀಕರಣ ಪೂರ್ಣ
            ಉಡಾನ್ ಯೋಜನೆಯಡಿಯಲ್ಲಿ ೨೦೨೪ರೊಳಗೆ ೧೦೦ ವಿಮಾನ ನಿಲ್ದಾಣಗಳ ಸ್ಥಾಪನೆ
            ಭಾರತೀಯ ರೈಲ್ವೇಯಲ್ಲಿ ಸೌರ ಶಕ್ತಿ ಸಾಮರ್ಥ್ಯ ವೃದ್ಧಿಗೆ ಕ್ರಮ
            ೧೮,೬೦೦ ಕೋಟಿ ರೂಪಾಯಿಗಳ ಬೆಂಗಳೂರು ಉಪನಗರ ಸಾರಿಗೆ (ಸಬ್ ಅರ್ಬನ್ ಟ್ರಾನ್ಸ್ ಪೋರ್ಟೇಷನ್) ಯೋಜನೆ ಜಾರಿಗೆ ಅಸ್ತು. ಇದರಲ್ಲಿ ಕೇಂದ್ರದ ಪಾಲು ೨೦%.
            ಭಾರತೀಯ ರೈಲ್ವೇ ಇಲಾಖೆಗೆ ೦೫ ಕ್ರಮಗಳ ಘೋಷಣೆ
            ಮೂಲಸೌಕರ್ಯಕ್ಕೆ ೧೦೩ ಲಕ್ಷ ಕೋಟಿ ರೂ.ಗಳ ಅನುದಾನ. ಮುಂದಿನ ೦೫ ವರ್ಷಗಳ ಅವಧಿಗೆ ಈ ಅನುದಾನ ಮೀಸಲು.
            ರಫ್ತು ಉತ್ತೇಜನಕ್ಕೆ ತೆರಿಗೆ ಕಡಿತ ಮಾದರಿ ಜಾರಿ
            ರಾಷ್ಟ್ರೀಯ ಟೆಕ್ನಿಕಲ್ ಟೆಕ್ಸ್ ಟೈಲ್ ಯೋಜನೆಗೆ ೧೪೮೦ ಕೋಟಿ ರೂಪಾಯಿ ನಿಗದಿ
            ರಫ್ತು ಉದ್ಯಮ ಉತ್ತೇಜನಕ್ಕೆ ‘ನಿರ್ವಿಕ್’ ಯೋಜನೆ ಜಾರಿ
            ರಾಷ್ಟ್ರೀಯ ತಾಂತ್ರಿಕ ಜವಳಿ ಯೋಜನೆ ಘೋಷಣೆ
            ರಾಜ್ಯ ಮತ್ತು ಕೇಂದ್ರದಲ್ಲಿ ಇನ್ವೆಸ್ಟ್ ಮೆಂಟ್ ಕ್ಲಿಯರೆನ್ಸ್ ಸೆಲ್ ಸ್ಥಾಪನೆ
            ಪಿಪಿಪಿ ಯೋಜನೆಯಡಿಯಲ್ಲಿ ೦೫ ಸ್ಮಾರ್ಟ್ ಸಿಟಿಗಳ ನಿರ್ಮಾಣ
            ಕೌಶಲಾಭಿವೃದ್ಧಿಗೆ ೩ ಸಾವಿರ ಕೋಟಿ ರೂಪಾಯಿ ಅನುದಾನ ಮೀಸಲು
            ಸ್ಟಡಿ ಇನ್ ಇಂಡಿಯಾ ಕಾರ್ಯಕ್ರಮದ ಪರಿಣಾಮಕಾರಿ ಜಾರಿಗೆ ಕ್ರಮ
            ಉದ್ಯೋಗಾಧಾರಿತ ಕೋರ್ಸ್ ಗಳಿಗೆ ಆದ್ಯತೆ.ಶಿಕ್ಷಣ ಕ್ಷೇತ್ರಕ್ಕೆ ೯೯,೩೦೦ ಕೋಟಿ ರೂಪಾಯಿ ಅನುದಾನ ಮೀಸಲು.
            ಹೊಸದಾಗಿ ರಾಷ್ಟ್ರೀಯ ಪೊಲೀಸ್, ವಿಧಿವಿಜ್ಞಾನ ವಿವಿ ಸ್ಥಾಪನೆ. ಹೊಸ ವೈದ್ಯರ ಉತ್ತೇಜನಕ್ಕಾಗಿ ಮೆಡಿಕಲ್ ಕಾಲೇಜು ಸ್ಥಾಪನೆ.
            ಸೌಲಭ್ಯ ವಂಚಿತ ವಿದ್ಯಾರ್ಥಿಗಳಿಗೆ ಆನ್ ಲೈನ್ ಕೋರ್ಸ್.ಪ್ರತಿ ಜಿಲ್ಲೆಗೆ ಒಂದರಂತೆ ಮೆಡಿಕಲ್ ಕಾಲೇಜು ಸ್ಥಾಪನೆ.
            ಸ್ಥಳೀಯ ಸಂಸ್ಥೆಗಳಲ್ಲಿ ಇಂಜಿನಿಯರಿಂಗ್ ಪದವೀಧರರಿಗೆ ತರಬೇತಿ.೧೫೦ ಉನ್ನತ ಶಿಕ್ಷಣ ಕೇಂದ್ರಗಳಲ್ಲಿ ತರಬೇತಿ ನೀಡಲಾಗುವುದು.
            ಶಿಕ್ಷಣದಲ್ಲಿಯೂ ವಿದೇಶಿ ಬಂಡವಾಳ ಹೂಡಿಕೆಗೆ ಕ್ರಮ. ಹೊಸ ಶಿಕ್ಷಣ ನೀತಿ ಶೀಘ್ರದಲ್ಲಿಯೇ ಘೋಷಣೆ
            ಸ್ವಚ್ಛ ಭಾರತ್ ಯೋಜನೆಗೆ ೧೨,೩೦೦ ಕೋಟಿ ರೂಪಾಯಿ ಅನುದಾನ. ಹೊಸ ಶಿಕ್ಷಣ ನೀತಿ ಜಾರಿಗೆ ಕ್ರಮ.
            ಎಲ್ಲಾ ಜಿಲ್ಲೆಗಳಲ್ಲಿ ಜನೌಷಧ ಮಳಿಗೆ ಸ್ಥಾಪನೆ. ಜಲಜೀವನ ಯೋಜನೆಗೆ ೩.೬ ಲಕ್ಷ ಕೋಟಿ ರೂಪಾಯಿ ಮೀಸಲು.
            ಪಿಎಂ ಆರೋಗ್ಯ ಯೋಜನೆ ಮೂಲಕ ೨೦ ಸಾವಿರ ಆಸ್ಪತ್ರೆಗೆಳಿಗೆ ನೆರವು.ಆರೋಗ್ಯಕ್ಕೆ ೬೯ ಸಾವಿರ ಕೋಟಿ ರೂಪಾಯಿ ಅನುದಾನ.
            ಆಯುಷ್ಮಾನ್ ಭಾರತ ಯೋಜನೆಯಡಿ ೧೧೨ ಜಿಲ್ಲೆಗಳಿಗೆ ಹೊಸ ಆಸ್ಪತ್ರೆ ನಿರ್ಮಾಣ ಗುರಿ.ಜಲಜೀವನ್ ಮಿಷನ್ ಯೋಜನೆ.
            ಸಾಗರ ಮಿತ್ರ ಯೋಜನೆಯಡಿ ಮತ್ಸೋದ್ಯಮಕ್ಕೆ ಉತ್ತೇಜನ. ೧೨ ರೋಗಗಳಿಗೆ ಮಿಷನ್ ಇಂದ್ರಧನುಷ್ ಯೋಜನೆ ಜಾರಿ.
            ಕೃಷಿ ವಲಯಕ್ಕೆ ೨.೮೩ ಲಕ್ಷ ಕೋಟಿ ರೂಪಾಯಿ ಅನುದಾನ. ಗ್ರಾಮೀಣಾಭಿವೃದ್ದಿಗೆ ೧.೨೩ ಲಕ್ಷ ಕೋಟಿ ರೂಪಾಯಿ ಮೀಸಲು.
            ನರೇಗಾ ಯೋಜನೆಯಡಿ ಜೇನು ಕೃಷಿಗೆ ಉತ್ತೇಜನ. ಕೃಷಿ ಉತ್ಪನ್ನಗಳಿಗಾಗಿ ಇ ಮಾರುಕಟ್ಟೆ.೫೦೦ ಮೀನು ಉತ್ಪಾದಕರ ಸಂಘ ಸ್ಥಾಪನೆ.
            ಜಾನುವಾರುಗಳ ಕಾಲು ಬಾಯಿ ರೋಗ ತಡೆಗೆ ಕ್ರಮ. ನೈಸರ್ಗಿಕ ಕೃಷಿಗಾಗಿ ರಾಷ್ಟ್ರೀಯ ಮಾರುಕಟ್ಟೆ.ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗೆ ಪ್ರಸ್ತಾವನೆ.
            ನಬಾರ್ಡ್ ಗೆ ೧೫ ಲಕ್ಷ ಕೋಟಿ ರೂಪಾಯಿ ಘೋಷಣೆ.ಶೂನ್ಯ ಬಂಡವಾಳ ಕೃಷಿ ಪದ್ಧತಿಗೆ ಜೈವಿಕ್ ಖೇತಿ ಯೋಜನೆ ಜಾರಿ.
            ಅನ್ನದಾತರನ್ನು ವಿದ್ಯುತ್ ಉತ್ಪಾದಕರನ್ನಾಗಿ ಮಾಡುತ್ತೇವೆ. ಗ್ರಾಮ, ಗ್ರಾಮಗಳಲ್ಲಿ ಈ ಯೋಜನೆ ಜಾರಿ.
            ರೈತರ ಅನುಕೂಲಕ್ಕಾಗಿ ಕೃಷಿ ರೈಲು, ಕೃಷಿ ಉಡಾನ್ ಯೋಜನೆ ಜಾರಿ. ಮುದ್ರಾ, ನಬಾರ್ಡ್ ಯೋಜನೆಯಡಿ ಸಾಲ ಸೌಲಭ್ಯ.
            ರೈತರಿಗಾಗಿ ಧಾನ್ಯ ಲಕ್ಷ್ಮಿ ಯೋಜನೆ ಜಾರಿ. ರೈತ ಮಹಿಳೆಯರಿಗಾಗಿ ಹೊಸ ಯೋಜನೆ ಜಾರಿ. ಕುಸುಮ್ ಯೋಜನೆ ವಿಸ್ತರಣೆ.ರೈತ ಮಹಿಳೆಯರಿಗಾಗಿ ಧಾನ್ಯ ಲಕ್ಷ್ಮಿ ಯೋಜನೆ.
            ಪ್ರಧಾನಮಂತ್ರಿ ಫಸಲ್ ಭೀಮ್ ಯೋಜನೆ. ರೈತರ ಪಂಪ್ ಸೆಟ್ ಸೌರ ವಿದ್ಯುತ್ ಜತೆ ಜೋಡಣೆ. ಫಸಲ್ ಭೀಮಾ ಯೋಜನೆಯಿಂದ ೬.೧೧ ಕೋಟಿ ರೈತರಿಗೆ ಅನುಕೂಲ. ಸಮತೋಲಿತ ರಸಗೊಬ್ಬರ ಬಳಕೆ ಯೋಜನೆ ಜಾರಿ. ರಾಸಾಯನಿಕ ಗೊಬ್ಬರ ಬದಲು ಸಾವಯವ ಗೊಬ್ಬರ ಬಳಕೆಗೆ ಪ್ರೋತ್ಸಾಹ.
            ಬರಡು ಭೂಮಿಯಲ್ಲಿ ಸಾವಯವ ಕೃಷಿ, ಸೌರ ವಿದ್ಯುತ್ ಉತ್ಪಾದನೆಗೆ ಪ್ರೋತ್ಸಾಹ. ದೇಶದ ೧೦೦ ಜಿಲ್ಲೆಗಳಲ್ಲಿ ಜಲವರ್ಧನೆಗೆ ಕ್ರಮ.
            ೨೦ ಲಕ್ಷ ರೈತರಿಗೆ ಸೋಲಾರ್ ಪಂಪ್ ವಿತರಣೆ.
            ಕೃಷಿ ಮಾರುಕಟ್ಟೆ ಉದಾರೀಕರಣಗೊಳಿಸಲು ಕ್ರಮ.ಕೃಷಿ ಅಭಿವೃದ್ದಿಗೆ ೧೬ ಅಂಶUಳ ಯೋಜನೆ, ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆಗೆ ಕ್ರಮ.
            ೨೦೨೨ರ ವೇಳೆಗೆ ಕೃಷಿ ಆದಾಯ ದ್ವಿಗುಣಗೊಳಿಸಲು ಸರ್ಕಾರ ಬದ್ಧವಾಗಿದೆ. ಆರ್ಥಿಕ ಒಳಗೊಳ್ಳುವಿಕೆ ರೈತರ ಆದಾಯ ದ್ವಿಗುಣಗೊಳ್ಳಲು ಸಾಧ್ಯವಾಗಿಸುತ್ತದೆ.
            ನಮ್ಮ ದೇಶ ವಿಶ್ವದಲ್ಲೇ ಇಷ್ಟದ ದೇಶ, ಶಾಲಿಮಾರ್ ತೋಟದಲ್ಲಿ ಅರಳುವ ಹೂವಿನಂತೆ ನಮ್ಮ ದೇಶ, ಯುವಕರ ಬಿಸಿ ರಕ್ತದ ರೀತಿ ನಮ್ಮ ದೇಶ, ದಾಲ್ ಸರೋವರದಲ್ಲಿ ಅರಳುವ ಕಮಲದಂತೆ ನಮ್ಮ ಭಾರತ... ಅಂತ್ಯೋದಯ ಉದ್ಧಾರಕ್ಕೆ ಬಜೆಟ್ ನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಬಜೆಟ್ ಮಂಡನೆ ನಡುವೆ ಶಾಯರಿ ಹೇಳಿದ ನಿರ್ಮಲಾ ಸೀತಾರಾಮನ್.
            ಈ ಬಾರಿಯ ಬಜೆಟ್ ೩ ಅಂಶಗಳ ಮೇಲೆ ನಿಂತಿದೆ.ಆಕಾಂಕ್ಷೆಯ ಭಾರತ, ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಕಾಳಜಿ.
            ಕಳೆದ ೫ ವರ್ಷಗಳಲ್ಲಿ ಭಾರತೀಯರನ್ನು ಉದ್ಯಮಶೀಲರನ್ನಾಗಿಸಲು ಪ್ರಯತ್ನಿಸಲಾಗಿದೆ.ಭಾರತ ಜಗತ್ತಿನ ೫ನೇ ಅತೀ ದೊಡ್ಡ ಆರ್ಥಿಕ ದೇಶವಾಗಿದೆ.
            ೨೭೧ ಮಿಲಿಯನ್ ಜನರು ಬಡತನದಿಂದ ಹೊರ ಬಂದಿದ್ದಾರೆ.೨೦೧೮-೧೯ರಲ್ಲಿ ಶೇ.೭ರಷ್ಟು ದೇಶದ ಆರ್ಥಿಕ ವೃದ್ದಿ ದರ ದಾಖಲಾಗಿತ್ತು.
            ಹಿಂದುಳಿದ ವರ್ಗಗಳಿಗೆ ಸಾಲ ಸೌಲಭ್ಯ, ಡಿಜಿಟಲ್ ಇಂಡಿಯಾ ಗುರಿ ಸಾಕಾರದತ್ತ ಹೆಜ್ಜೆ ಹಾಕಿದೆ.ಈ ಬಜೆಟ್ ದೇಶದ ಜನರ ನಿರೀಕ್ಷೆಗಳನ್ನು ಈಡೇರಿಸಲಿದೆ.
            ೪೦ ಕೋಟಿ ಜನರು ಈ ಬಾರಿ ಜಿಎಸ್ ಟಿ ಪಾವತಿಸಿದ್ದಾರೆ.ಜಿಎಸ್ ಟಿಯಿಂದ ರಿಟರ್ನ್ಸ್ ಸಲ್ಲಿಕೆ ತುಂಬಾ ಸರಳವಾಗಿದೆ.
            ನಮ್ಮ ಪ್ರಧಾನಿ ಮೋದಿಯಿಂದಾಗಿ ಸರ್ಕಾರ ನೀಡುವ ಪ್ರತಿ ಪೈಸೆ ನಾಗರಿಕನಿಗೆ ಸಿಗುತ್ತಿದೆ. ಗೃಹ ನಿರ್ಮಾಣದ ಮೂಲಕ ಜನರಿಗೆ ನೆರವು.
            ಈ ಬಜೆಟ್ ಆದಾಯ ಹೆಚ್ಚಳಕ್ಕೆ ಉತ್ತೇಜನ ನೀಡಲಿದೆ. ವಾರ್ಷಿಕವಾಗಿ ಒಂದು ಲಕ್ಷ ಕೋಟಿ ರೂಪಾಯಿ ತೆರಿಗೆ ವಿನಾಯ್ತಿ ಸಿಕ್ಕಿದೆ.
            ಸಾರಿಗೆ ವಲಯದಲ್ಲಿ ಭಾರೀ ಅಭಿವೃದ್ಧಿಗೆ ಜಿಎಸ್ ಟಿ ಕಾರಣವಾಗಿದೆ.ಜಿಎಸ್ ಟಿಯಿಂದ ಪ್ರತಿಯೊಂದು ಕುಟುಂಬಕ್ಕೂ ಒಳಿತಾಗಿದೆ.
            ಚೆಕ್ ಪೋಸ್ಟ್ ಗಳ ನಿರ್ಮೂಲನೆಯಿಂದ ಶೇ.೨೦ರಷ್ಟು ಸಮಯ ಉಳಿತಾಯ.ಜಿಎಸ್ ಟಿ ಜಾರಿಯಿಂದ ರಾಜಕೀಯ ಮೀರಿ ಬೆಳೆಯುತ್ತದೆ ಎಂಬುದು ಸಾಬೀತಾಗಿದೆ.
            ಕೊಳಕು ರಾಜಕೀಯವನ್ನು ಮೀರಿ ಭಾರತ ಬೆಳೆಯಲು ಸಾಧ್ಯವಿದೆ ಎಂಬುದು ಸಾಬೀತಾಗಿದೆ- ಮೇಜು ಕುಟ್ಟಿ ಸ್ವಾಗತಿಸಿದ ಬಿಜೆಪಿ ಸಂಸದರು.
            ಬ್ಯಾಂಕಿಂಗ್ ವಲಯಕ್ಕೆ ಕೇಂದ್ರ ಸರ್ಕಾರ ಹಣ ಹೊಂದಿಸಿದೆ.ಬ್ಯಾಂಕಿಂಗ್ ವಲಯವನ್ನು ಸ್ವಚ್ಛಗೊಳಿಸಲಾಗಿದೆ.ಇವತ್ತಿನ ಹಣಕಾಸು ಸ್ಥಿತಿ ಉತ್ತಮವಾಗಿರಲು ಜೇಟ್ಲಿ ಕಾರಣ.
            ೨೦೧೯-೨೦ರ ಸಾಲಿನಲ್ಲಿ ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿಗೆ ಎಲ್ಲಾ ರೀತಿಯ ಕ್ರಮ ತೆಗೆದುಕೊಂಡಿದೆ. ಹಣದುಬ್ಬರ ನಿಯಂತ್ರಣದಲ್ಲಿದೆ.
            ಯುವ ಜನತೆ, ಮಹಿಳೆಯರು ಹಾಗೂ ಸಮಾಜದ ಎಲ್ಲಾ ಜನರ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದೇವೆ. ಅಭಿವೃದ್ಧಿ ದರ ಹೆಚ್ಚಳ ಮಾಡುವಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಎಸ್ ಸಿ, ಎಸ್ ಟಿ ಶ್ರೇಯೋಭಿವೃದ್ಧಿಗೆ ಕ್ರಮ.

No comments:

Advertisement