Sunday, March 1, 2020

ಕೇರಳ: ’ಕೊರೋನಾ ವೈರಸ್’ ಇರಲಿಲ್ಲ ಆದರೆ ಮರುದಿನ ನ್ಯುಮೋನಿಯಾಕ್ಕೆ ಬಲಿ!

ಕೇರಳ: ಕೊರೋನಾ ವೈರಸ್ ಇರಲಿಲ್ಲ
ಆದರೆ ಮರುದಿನ ನ್ಯುಮೋನಿಯಾಕ್ಕೆ ಬಲಿ!
ತಿರುವನಂತಪುರಂ: ಶೀತಜ್ವರ (ಫೂ) ಮತ್ತು ಉಸಿರಾಟದ ತೊಂದರೆಗಳೊಂದಿಗೆ ಮಲೇಶ್ಯಾದಿಂದ ಕೇರಳದ ಕೋಚಿಗೆ ವಾಪಸಾದ ೩೬ರ ಹರೆಯದ ವ್ಯಕ್ತಿಯೊಬ್ಬ ಮಾರಕ ಕೊರೋನಾ ವೈರಸ್ ಸೋಂಕು ಇಲ್ಲ ಎಂಬುದಾಗಿ ಖಚಿತವಾದ ಬಳಿಕ 2020 ಫೆಬ್ರುವರಿ 29ರ ಶನಿವಾರ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದರು.

ಸದರಿ ವ್ಯಕ್ತಿ ಗುರುವಾರ ರಾತ್ರಿ ಕೋಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಶೀತ ಜ್ವರ ಮತ್ತು ಉಸಿರಾಟದ ತೊಂದರೆ ಕಾರಣ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಏಕಾಂಗಿ ವಾಸಕ್ಕೆ ಕಳುಹಿಸಲಾಗಿತ್ತು. ಆತ ಮಲೇಶ್ಯಾದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ.

ವೈದ್ಯರ ಪ್ರಕಾರ, ವ್ಯಕ್ತಿ ನ್ಯುಮೋನಿಯಾ ಮತ್ತು ಎದೆಗೂಡು ಕಟ್ಟಿಕೊಂಡ ಪರಿಣಾಮವಾಗಿ ಸಾವನ್ನಪ್ಪಿದ್ದಾನೆ. ಆದರೆ, ವೈದ್ಯರು ಇನ್ನೂ ಲ್ಯಾಬೋರೇಟರಿಯಿಂದ ಎರಡನೇ ಮಾದರಿಯ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

ಪ್ರಾಥಮಿಕ ತಪಾಸಣೆಯಲ್ಲಿ ವ್ಯಕ್ತಿ ತೀವ್ರವಾದ ನ್ಯಮೋನಿಯಾ ಮತ್ತು ಉಸಿರಾಟದ ತೊಂದರೆ ಎದುರಿಸುತ್ತಿದ್ದುದು ಪತ್ತೆಯಾಗಿತ್ತು. ಆತನಿಗೆ ಮಧುಮೇಹದ ಸಮಸ್ಯೆಯೂ ಇತ್ತು. ಸೋಂಕು ತೀವ್ರವಾಗಿದ್ದಾಗ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರಿಕೆಯಾಗುತ್ತದೆ ಎಂದು ಸರ್ಕಾರಿ ವೈದ್ಯಕೀಯ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಗಣೇಶ ಮೋಹನನ್ ಹೇಳಿದರು.

ಆತ ನ್ಯಮೋನಿಯಾ ಮತ್ತು ದೇಹದಲ್ಲಿ ಇನ್ ಸುಲಿನ್ ಉತ್ಪಾದನೆಯಾಗದೆ ಮಧುವೇಹ ತೀವ್ರಗೊಂಡ ಪರಿಣಾಮವಾಗಿ ಸಾವನ್ನಪ್ಪಿರಬಹುದು ಎಂಬುದು ನಮ್ಮ ಗುಮಾನಿ ಎಂದು ಡಾ. ಮೋಹನನ್ ನುಡಿದರು.

ಮೃತ ವ್ಯಕ್ತಿಯ ಮಾದರಿಯನ್ನು ಅಲಪ್ಪುಳದ ವೈರಾಣು ಸಂಸ್ಥೆಯಲ್ಲಿ ಪರೀಕ್ಷಿಸಿದಾಗ ಆತನಿಗೆ ಹಂದಿಜ್ವರ (ಎನ್೧ಎನ್೧) ಮತ್ತು ಕೋವಿಡ್ -೧೯ (ಕೊರೋನಾವೈರಸ್) ಇರಲಿಲ್ಲ ಎಂಬುದನ್ನು ಖಚಿತವಾಗಿತ್ತು. ಕೊರೋನಾವೈರಸ್ ಸೋಂಕಿನ ಬಗ್ಗೆ ಪುನಃ ಖಚಿತಪಡಿಸಿಕೊಳ್ಳಲು ಆತನ ಎರಡನೆ ಮಾದರಿಯನ್ನು ಪರೀಕ್ಷಿಗಾಗಿ ಕಳುಹಿಸಲಾಗಿದೆ ಎಂದು ವೈದ್ಯರು ಹೇಳಿದರು.

ವ್ಯಕ್ತಿಯನ್ನು ದಾಖಲಿಸಿದ ಬೆನ್ನಲ್ಲೇ ಆಸ್ಪತ್ರೆಯಲ್ಲಿ ತಲ್ಲಣದ ವಾತಾವರಣ ಉಂಟಾಯಿತು. ವ್ಯಕ್ತಿಯನ್ನು ಏಕಾಂಗಿ ವಾರ್ಡ್ಗೆ ದಾಖಲಿಸಿದ ಬಳಿಕ ಎರ್ನಾಕುಲಂ ಜಿಲ್ಲಾಧಿಕಾರಿ ಎಸ್, ಸುಹಾಸ್ ಅವರು ಶುಕ್ರವಾರ ತುರ್ತು ಸಭೆ ಕರೆದು ಪರಿಸ್ಥಿತಿಯನ್ನು ಅವಲೋಕಿಸಿದ್ದರು.

ಭಾರತದ ಎಲ್ಲ ಮೂರೂ ೨೦೧೯-ಕೋವಿಡ್ ಪ್ರಕರಣಗಳು ಕೇರಳದಿಂದಲೇ ವರದಿಯಾಗಿದ್ದವು. ಚೀನಾದ ಕೊರೋನಾವೈರಸ್ ಕೇಂದ್ರವಾದ ವುಹಾನ್ ನಗರದಿಂದ ವಾಪಸಾದ ಮೂವರು ವಿದ್ಯಾರ್ಥಿಗಳನ್ನು ವೈರಸ್ ಶಂಕೆಯ ಹಿನ್ನೆಲೆಯಲ್ಲಿ ಏಕಾಂಗಿ ವಾರ್ಡ್ಗೆ ದಾಖಲಿಸಲಾಗಿತ್ತು.

ಮೂರನೇ ಪ್ರಕರಣ ವರದಿಯಾಗುತ್ತಿದ್ದಂತೆಯೇ ಕಳೆದ ತಿಂಗಳು ರಾಜ್ಯದಲ್ಲಿ ವೈದ್ಯಕೀಯ ವಿಪತ್ತು ಘೋಷಿಸಲಾಗಿತ್ತು ಮತ್ತು ದೊಡ್ಡ ಪ್ರಮಾಣದ ಸಭೆಗಳು, ಪ್ರವಾಸಗಳ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಉತ್ತರ ಕೇರಳದ ಕಾಸರಗೋಡಿನಲ್ಲಿ ಮೂರನೇ ರೋಗಿ ಪತ್ತೆಯಾದ ಬಳಿಕ ಫೆಬ್ರುವರಿ ೩ರಂದು ವೈದ್ಯಕೀಯ ತುರ್ತುಸ್ಥಿತಿ ಘೋಷಣೆಯನ್ನೂ ಮಾಡಲಾಗಿತ್ತು.

ಮೂರೂ ವಿದ್ಯಾರ್ಥಿಗಳನ್ನು ಯಶಸ್ವಿಯಾಗಿ ಕೊರೋನಾವೈರಸ್ ಮುಕ್ತರನ್ನಾಗಿ ಮಾಡಿದ ಬಳಿಕ ವಿಪತ್ತು ಎಚ್ಚರಿಕೆಯನ್ನು ಸರ್ಕಾರ ಹಿಂತೆಗೆದುಕೊಂಡಿತ್ತು.

ಎರಡು ವರ್ಷಗಳ ಹಿಂದೆ ನಿಫಾ ಸೋಂಕಿನಿಂದ ಪಾಠ ಕಲಿತ ರಾಜ್ಯವು ಜನವರಿ ೩೦ರಂದು ಮೊದಲ ಕೊರೋನಾವೈರಸ್ ಶಂಕೆ ಮೂಡುತ್ತಿದ್ದಂತೆಯೇ ಎಲ್ಲ ಎಚ್ಚರಿಕೆ ಕ್ರಮಗಳು ಮತ್ತು ಏಕಾಂಗಿವಾಸದ ವ್ಯವಸ್ಥೆಗಳನ್ನು ಮಾಡಿತ್ತು.

ಮೂರೂ ಮಂದಿ ವಿದ್ಯಾರ್ಥಿಗಳನ್ನು ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.

No comments:

Advertisement