ಕೊರೊನಾ ಭೀತಿ: ಶಾಹೀನ್ ಬಾಗ್ ಪ್ರತಿಭಟನೆ ತೆರವುಗೊಳಿಸಿದ ಪೊಲೀಸರು
ನವದೆಹಲಿ: ಮಾರಕ ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸಂಪೂರ್ಣ ಲಾಕ್ ಡೌನ್ ವಿಧಿಸಲಾಗಿದ್ದು, ಅದನ್ನು ಅನುಸರಿಸಿ ಶಾಹೀನ್ ಬಾಗ್ನಲ್ಲಿ ಕಳೆದ ೧೦೦ ದಿನಗಳಿಂದ ನಡೆಯುತ್ತಿದ್ದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನಕಾರರನ್ನು ಪೊಲೀಸರು 2020 ಮಾರ್ಚ್ 24ರ ಮಂಗಳವಾರ ನಸುಕಿನಲ್ಲಿ ತೆರವು ಗೊಳಿಸಿದರು. ಸ್ಥಳಬಿಡಲು ನಿರಾಕರಿಸಿದ ಕೆಲವರನ್ನು ಪೊಲೀಸರು ಬಂಧಿಸಿದರು.
ಸರ್ಕಾರದ ಆದೇಶದನ್ವಯ ನಸುಕಿನಿಂದಲೇ ಶಾಹೀನ್ ಬಾಗ್ ಪ್ರತಿಭಟನಾಕಾರರನ್ನು ಪೊಲೀಸರು ಸ್ಥಳದಿಂದ ತೆರವುಗೊಳಿಸಿದರು. ವ್ಯಾನ್ ಹಾಗೂ ಬಸ್ಸುಗಳೊಂದಿಗೆ ಶಾಹೀನ್ ಬಾಗ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟಕಾರರನ್ನು ಅದೇ ವಾಹನದಲ್ಲಿ ತುಂಬಿ ಸ್ಥಳವನ್ನು ತೆರವುಗೊಳಿಸಿದರು.
ಕೊರೊನಾ ವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ ’ನಿಮ್ಮ ಆರೋಗ್ಯದ ದೃಷ್ಟಿಯಿಂದಲೇ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈಬಿಡಿ’ ಎಂದು ಪೊಲೀಸರು ಪ್ರತಿಭಟನಾಕಾರರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಪ್ರತಿಭಟನಾಕಾರರು, ಪೊಲೀಸ್ ವಾಹನದಲ್ಲಿ ತಮ್ಮ ತಮ್ಮ ಮನೆಗಳಿಗೆ ವಾಪಸ್ ತೆರಳಿದರು.
ಇದೇ ವೇಳೆಯಲ್ಲಿ ಪ್ರತಿಭಟನಾಕಾರರು ಹಾಕಿದ್ದ ಟೆಂಟುಗಳನ್ನು ಜೆಸಿಬಿ ಬಳಸಿ ಕಿತ್ತುಹಾಕಲಾಗಿದ್ದು, ಪ್ರತಿಭಟನೆ ಕೈಬಿಡದ ಕೆಲವರನ್ನು ಬಲವಂತವಾಗಿ ಸ್ಥಳದಿಂದ ಹೊರ ಹಾಕಲಾಯಿತು. ಬಳಿಕ ಪೊಲೀಸರು ಸೆಕ್ಷನ್ ೧೪೪ ಅನ್ವಯ ನಿಷೇಧಾಜ್ಞೆ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದಾಗ ಉಳಿದಿದ್ದ ಪ್ರತಿಭಟನಾಕಾರರು ಸ್ಥಳದಿಂದ ಕಾಲ್ಕಿತ್ತರು ಎಂದು ವರದಿಗಳು ತಿಳಿಸಿವೆ.
ಪ್ರತಿಭಟನೆ ಕೈಬಿಡಲು ನಿರಾಕರಿಸಿದ ೬ ಮಹಿಳೆಯರು ಹಾಗೂ ಇಬ್ಬರು ಪುರುಷರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದರು.
ಪೊಲೀಸರ ಕ್ರಮದ ಪರಿಣಾಮವಾಗಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕಳೆದ ಮೂರು ತಿಂಗಳಿಗೂ ಅಧಿಕ ಕಾಲ ನಡೆದ ಶಾಹೀನ್ ಬಾಗ್ ಪ್ರತಿಭಟನೆಗೆ ಕೊರೊನಾ ವೈರಸ್ ತಡೆ ಹಾಕಿದಂತಾಯಿತು.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಲೌಕ್ ಡೌನ್ ಘೋಷಿಸಲಾಗಿದ್ದು, ಇದು ಶಾಹೀನ್ ಬಾಗ್ ಪ್ರತಿಭಟನಕಾರರಿಗೂ ಅನ್ವಯಿಸುವುದರಿಂದ ಅವರು ಜಾಗ ತೆರವುಗೊಳಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೂ ಮನವಿ ಮಾಡಿದ್ದರು.
ಭಾರೀ ಭದ್ರತೆಯಡಿಯಲ್ಲಿ ಇರಿಸಲಾಗಿರುವ ಶಾಹೀನ್ ಬಾಗ್ನಲ್ಲಿದ್ದ ಎಲ್ಲಾ ಡೇರೆಗಳು ಮತ್ತು ಜಾಹೀರಾತು ಫಲಕಗಳ ಆಂದೋಲನಕಾರರೇ ಪಡೆದುಕೊಂಡಿದ್ದಾರೆ ಎಂದು ಪೊಲೀಸರು ಬಳಿಕ ತಿಳಿಸಿದರು.
ಸೋಮವಾರ ರಾತ್ರಿ ಪೊಲೀಸರು ಬಂದು ಸ್ಥಳವನ್ನು ತೆರವುಗೊಳಿಸುವಂತೆ ಕೇಳಿಕೊಂಡಿದ್ದರು. ಮುಂಜಾನೆ ೩ ಗಂಟೆ ಸುಮಾರಿಗೆ ಭಾರೀ ಪೊಲೀಸ್ ಸಿಬ್ಬಂದಿಯನ್ನು ಸಜ್ಜುಗೊಳಿಸಲಾಯಿತು. ಅವರು ಕೆಲವು ಲೇನ್ಗಳನ್ನು ಲಾಕ್ ಮಾಡಿದರು. ಬೆಳಿಗ್ಗೆ ೫: ೩೦-೬ರ ಸುಮಾರಿಗೆ ಪೊಲೀಸರು ಬಂದು ನಮ್ಮನ್ನು ಬಲವಂತವಾಗಿ ಹೊರಹಾಕಿದರು ”ಎಂದು ಮಹಿಳಾ ಪ್ರತಿಭಟನಾಕಾರರಲ್ಲಿ ಒಬ್ಬರಾದ ಪ್ರಕಾಶ್ ದೇವಿ ಹೇಳಿದರು.
ನಾವು ಪಾಳಿಯಲ್ಲಿ ಪ್ರತಿಭಟಿಸುತ್ತಿದ್ದೆವು. ಪೊಲೀಸರು ಬಂದಾಗ ನಾನು ಅಲ್ಲಿ ಇರಲಿಲ್ಲ. ಪೊಲೀಸರು ಕೆಲವು ಮಹಿಳೆಯರನ್ನು ಕರೆದೊಯ್ದು ವಶಕ್ಕೆ ಪಡೆದಿದ್ದಾg’ ಎಂದು ಅವರು ನುಡಿದರು.
ಸೋಮವಾರದಿಂದ ರಾಷ್ಟ್ರ ರಾಜಧಾನಿಯಲ್ಲಿ ಲಾಕ್ಡೌನ್ ಘೋಷಿಸಲಾಗಿದೆ. ಆದರೆ ಆಗ್ನೇಯ ದೆಹಲಿಯ ಶಾಹೀನ್ ಬಾಗಿನ ರಸ್ತೆ ಸಂಖ್ಯೆ ೧೩ ಎಯಲ್ಲಿ ಬೆರಳೆಣಿಕೆಯ ಮಹಿಳಾ ಪ್ರತಿಭಟನಾಕಾರರು ಕುಳಿತಿದ್ದರು.
ಐವರು ಪ್ರತಿಭಟನಾಕಾರರನ್ನು ಹೊರತುಪಡಿಸಿ ಉಳಿದವರೆಲ್ಲರೂ ಭಾನುವಾರ ಪ್ರತಿಭಟನಾ ಸ್ಥಳದಿಂದ ಹಿಂದೆ ಸರಿದಿದ್ದರು ಆದರೆ "ಕೋವಿಡ್ -೧೯ ರೋಗದ ವಿರುದ್ಧದ ಹೋರಾಟಕ್ಕೆ ಸಹಮತ ವ್ಯಕ್ತ ಪಡಿಸಲು ಮತ್ತು ತಮ್ಮ ಆಂದೋಲನದ ಸಂಕೇತವಾಗಿ ತಮ್ಮ ಚಪ್ಪಲಿಗಳನ್ನು ಬಿಟ್ಟು ಹೋಗಿದ್ದರು.
ಈವರೆಗೆ ಕೋವಿಡ್ -೧೯ ಪ್ರಕರಣಗಳಲ್ಲಿ ೩೦ ಪ್ರಕರಣಗಳು ವರದಿಯಾಗಿರುವ ದೆಹಲಿಯಲ್ಲಿ ಕೊರೋನವೈರಸ್ ರೋಗದ ಏಕಾಏಕಿ ಹರಡುವಿಕೆಯನ್ನು ನಿಭಾಯಿಸಲು ಈಗಾಗಲೇ ಅಭೂತಪೂರ್ವ ನಿರ್ಬಂಧಗಳನ್ನು ಸರ್ಕಾರ ತೀವ್ರಗೊಳಿಸಿದೆ. ಕೊರೋನಾವೈರಸ್ ಸೋಂಕಿತ ೩೦ ರೋಗಿಗಳಲ್ಲಿ ಒಬ್ಬರು ವಿದೇಶಿಯರಾಗಿದ್ದು, ಐವರು ಗುಣಮುಖರಾಗಿದ್ದಾರೆ ಮತ್ತು ಒಬ್ಬರು ಸಾವನ್ನಪ್ಪಿದ್ದಾರೆ.
ದೆಹಲಿಯ ಯಾವುದೇ ಗಡಿಯಿಂದ ದೆಹಲಿಗೆ ಪ್ರವೇಶಿಸುವ ಜನರಿಗೆ ವಿಶೇಷ “ಕರ್ಫ್ಯೂ ಪಾಸ್” ಅಗತ್ಯವಿರುತ್ತದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
No comments:
Post a Comment