ಕೊರೋನಾ ಹೆಮ್ಮಾರಿ: ವಿಶ್ವಾದ್ಯಂತ
೫೦೦೦ಕ್ಕೂ ಹೆಚ್ಚು ಬಲಿ
ಭಾರತದಲ್ಲಿ ೮೧ ಪ್ರಕರಣ, ಚಿನ್ನದ
ಬೆಲೆ ಕುಸಿತ, ಸುಪ್ರೀಂಕೋರ್ಟ್ ಮೇಲೂ ಪ್ರಭಾವ
ನವದೆಹಲಿ: ಇಡೀ ಜಗತ್ತನ್ನೇ ಗಡಗಡ
ನಡುಗಿಸುತ್ತಿರುವ ಮಾರಕ ಕೋರೋನಾ ವೈರಸ್ ಹೆಮ್ಮಾರಿಗೆ ವಿಶ್ವಾದ್ಯಂತ ಬಲಿಯಾದವರ ಸಂಖ್ಯೆ 2020 ಮಾರ್ಚ್ 13ರ ಶುಕ್ರವಾರ ೫೦೦೦ವನ್ನು ದಾಟಿದ್ದು, ಭಾರತದಲ್ಲಿ ಸೋಂಕಿತರ ಸಂಖ್ಯೆ ೮೧ಕ್ಕೆ
ಮುಟ್ಟಿತು.. ಷೇರುಪೇಟೆಯನ್ನು ತಲ್ಲಣಗೊಳಿಸಿರುವ ಕೊರೋನಾ ಚಿನ್ನದ ಮೇಲೂ ಕಣ್ಣ್ನು ಹಾಕಿದ್ದು, ದೆಹಲಿಯಲ್ಲಿ
ಚಿನ್ನದ ಬೆಲೆ ೧೦೦೦ ರೂಪಾಯಿಯಷ್ಟು ಕುಸಿಯಿತು. ಸುಪ್ರೀಂಕೋರ್ಟಿನ ವಿಚಾರಣೆ ಮೇಲೂ ಕೋರೋನಾ ನೆರಳುಬಿದ್ದಿದ್ದು
ತುರ್ತು ಪ್ರಕರಣಗಳನ್ನು ಮಾತ್ರವೇ ಆಲಿಸುವುದಾಗಿ ಸುಪ್ರೀಂಕೋರ್ಟ್ ಪ್ರಕಟಿಸಿತು.
ಕೊರೋನಾ ವೈರಸ್ ಕಬಂಧಬಾಹು ವಿಶ್ವದ
೧೨೧ ರಾಷ್ಟ್ರಗಳು ಮತ್ತು ಪ್ರದೇಶಗಳಿಗೆ ವ್ಯಾಪಿಸಿ ಸೋಂಕಿತರ ಸಂಖ್ಯೆ ೧,೩೪,೩೦೦ನ್ನು ದಾಟುತ್ತಿದ್ದಂತೆಯೇ
ಹೆಮ್ಮಾರಿಗೆ ಬಲಿಯಾದವರ ಸಂಖ್ಯೆ ಶುಕ್ರವಾರ ೫,೦೪೩ಕ್ಕೆ ತಲುಪಿದೆ ಎಂದು ಅಧಿಕೃತ ಮೂಲಗಳು ತಿಳಿಸಿದವು.
ಒಟ್ಟು ೩,೧೭೬ ಮಂದಿ ಚೀನಾದಲ್ಲಿ
ಸಾವನ್ನಪ್ಪಿದ್ದರೆ, ೧,೦೧೬ ಮಂದಿ ಇಟಲಿಯಲ್ಲಿ ಮತ್ತು ೫೧೪ ಮಂದಿ ಇರಾನಿನಲ್ಲಿ ಸಾವನ್ನಪ್ಪಿದ್ದು-
ಈ ಮೂರು ರಾಷ್ಟ್ರಗಳಲ್ಲಿ ಅತ್ಯಧಿಕ ಸಂಖ್ಯೆಯ ಸಾವುಗಳು ಸಂಭವಿಸಿವೆ. ಚೀನಾದ ವುಹಾನ್ ನಗರದಲ್ಲಿ ಕಳೆದ
ಡಿಸೆಂಬರ್ ತಿಂಗಳಲ್ಲಿ ಕೋವಿಡ್-೧೯ ಮೊತ್ತ ಮೊದಲಿಗೆ ಕಂಡು ಬಂದಿತ್ತು.
ಭಾರತದಲ್ಲಿ ವೈರಸ್ ದಾಂಗುಡಿ:
ಭಾರತದಲ್ಲಿ ಈವರೆಗೆ ಕೊರೋನಾವೈರಸ್ ಸೋಂಕಿದ್ದು ದೃಢ ಪಟ್ಟಿರುವ ೮೧ ಪ್ರಕರಣಗಳು ವರದಿಯಾಗಿದ್ದು ಈ
ಪೈಕಿ ೬೪ ಮಂದಿ ಭಾರತೀಯರು, ೧೬ ಮಂದಿ ಇಟಲಿ ಪ್ರಜೆಗಳು ಮತ್ತು ಒಬ್ಬ ಕೆನಡಾ ಪ್ರಜೆ ಎಂದು ಕೇಂದ್ರ
ಆರೋಗ್ಯ ಸಚಿವಾಲಯ ತಿಳಿಸಿದೆ. ಕರ್ನಾಟಕದಲ್ಲಿ ಸಾವನ್ನಪ್ಪಿದ ಒಬ್ಬ ವ್ಯಕ್ತಿ ಕೋರೋನಾ ವೈರಸ್ ಪರಿಣಾಮವಾಗಿಯೇ
ಅಸು ನೀಗಿರುವುದಾಗಿ ವೈದ್ಯಕೀಯ ಮೂಲಗಳು ತಿಳಿಸಿದ್ದು, ಭಾರತದಲ್ಲೂ ಒಬ್ಬ ವ್ಯಕ್ತಿ ಬಲಿಯಾದಂತಾಗಿದೆ.
ದೇಶದಲ್ಲಿ ಕೊರೋನಾವೈರಸ್ ಸಾಂಕ್ರಾಮಿಕವಾಗಿಲ್ಲ
ಎಂದು ತಿಳಿಸಿದ ಸಚಿವಾಲಯ ಆದರೂ ಕೈಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು, ಉಸಿರಾಟ ನೈರ್ಮಲ್ಯ ಮತ್ತು
ಸಾಮಾಜಿಕವಾಗಿ ಅಂತರ ಕಾಯ್ದುಕೊಳ್ಳುವ ಬಗ್ಗೆ ಆದ್ಯ ಗಮನ ನೀಡಬೇಕು ಎಂದು ಜನತೆಗೆ ಸಲಹೆ ಮಾಡಿದೆ.
‘ಈವರೆಗೆ ಭಾರತದಲ್ಲಿ ೮೧ ಪ್ರಕರಣಗಳು
ದೃಢ ಪಟ್ಟಿವೆ ಅವರಲ್ಲಿ ೬೪ ಮಂದಿ ಭಾರತೀಯರು, ೧೬ ಮಂದಿ ಇಟಲಿ ಪ್ರಜೆಗಳು ಮತ್ತು ೧ ಕೆನಡಾ ಪ್ರಜೆ.
ಎಲ್ಲ ಪ್ರಯಾಣಿಕರೂ ತಮ್ಮ ಪ್ರವಾಸದ ವಿವರಗಳನ್ನು ಅಧಿಕಾರಿಗಳಿಗೆ ನೀಡಬೇಕು ಮತ್ತು ವೈದ್ಯರನ್ನು ನೋಡಲು
ಹೋಗುವಾಗ ಮುಸುಕು ಧರಿಸುವುದನ್ನು ಮರೆಯಬಾರದು’ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್‍ಯದರ್ಶಿ
ಲವ ಅಗರ್‌ವಾಲ್ ನುಡಿದರು.
ವೈರಸ್ ಹರಡುವಿಕೆಯನ್ನು ತಡೆಯಲು
ಭಾರತ ಸರ್ಕಾರವು ಭೂ ವಲಸೆ ಚೆಕ್‌ಪೋಸ್ಟ್ ಗಳ ಮೂಲಕ ಅಂತಾರಾಷ್ಟ್ರಿಯ ಸಂಚಾರ ತಪಾಸಣೆಗೆ ನಿರ್ಧರಿಸಿದೆ.
ಇಂತಹ ೩೭ ಚೆಕ್ ಪೋಸ್ಟ್ ಗಳು ಇವೆ. ಈ ಪೈಕಿ ೧೯ರ ಮೂಲಕ ಸಾಗಣೆಗೆ ಅವಕಾಶ ನೀಡಲಾಗಿದೆ. ಬಾಂಗ್ಲಾದೇಶದಿಂದ
ಗಡಿದಾಟಿ ಬರುವ ಬಸ್ಸುಗಳು ಮತ್ತು ರೈಲುಗಳನ್ನು ಮುಂದೆ ತಿಳಿಸುವವರೆಗೆ ಅಮಾನತುಗೊಳಿಸಲಾಗಿದೆ. ಆದಾಗ್ಯೂ
ಭೂತಾನ್ ಮತ್ತು ನೇಪಾಳಿಗರಿಗೆ ಭಾರತಕ್ಕೆ ವೀಸಾಮುಕ್ತ ಪ್ರವೇಶ ಇದೆ ಎಂದು ಅಧಿಕಾರಿ ಹೇಳಿದರು.
ಪಾತಾಳಕ್ಕೆ ಕುಸಿದ ಚಿನ್ನ: ಕೊರೋನಾವೈರಸ್
ಭೀತಿಯ ಹಿನ್ನೆಲೆಯಲ್ಲಿ ಹೂಡಿಕೆದಾರರು ತಮ್ಮ ಚಿನ್ನವನ್ನು ಮಾರಾಟ ಮಾಡಲು ಮುಂದಾದ ಪರಿಣಾಮವಾಗಿ ಚಿನ್ನದ
ಬೆಲೆ ಶುಕ್ರವಾರ ದೆಹಲಿಯಲ್ಲಿ ೧೦೦೦ ರೂಪಾಯಿಗಳಷ್ಟು ಕುಸಿಯಿತು.
ದೆಹಲಿಯಲಿ ಹೂಡಿಕೆದಾರರು ನಷ್ಟವನ್ನು
ಸರಿದೂಗಿಸಿಕೊಳ್ಳುವ ಕಾತರದಲ್ಲಿ ಸಾಧ್ಯವಿರುವುದೆಲ್ಲವನ್ನೂ ಮಾರಾಟ ಮಾಡಲು ಹೊರಟ ಪರಿಣಾಮವಾಗಿ ಚಿನ್ನದ
ಬೆಲೆ ೧,೦೯೭ ರೂಪಾಯಿಗಳಷ್ಟು ಕುಸಿದು ೧೦ ಗ್ರಾಂ ಚಿನ್ನದ ದರ ೪೨,೬೦೦ಕ್ಕೆ ಇಳಿಯಿತು. ಹಿಂದಿನ ದಿನ
ಹಳದಿ ಲೋಹದ ಬೆಲೆ ೧೦ ಗ್ರಾಂಗೆ ೪೩,೬೯೭ ರೂಪಾಯಿ ಇತ್ತು.
ಬೆಳ್ಳಿಯ ಬೆಲೆ ಕೂಡಾ ೧,೫೭೪ ರೂಪಾಯಿಗಳಷ್ಟು
ಕುಸಿಯಿತು. ಬೆಳ್ಳಿಯ ಬೆಲೆ ಕಿಲೋ ಗ್ರಾಂ ಒಂದಕ್ಕೆ ೪೫,೭೦೪ ರೂಪಾಯಿಗಳಿಂದ ೪೪,೧೩೦ ರೂಪಾಯಿಗಳಿಗೆ
ಇಳಿಯಿತು.
ಸುಪ್ರೀಂಕೋರ್ಟಿನ ಮೇಲೂ ಕರಿನೆರಳು:
ಕೊರೋನಾವೈಸ್ ಕರಿನೆರಳು ಶುಕ್ರವಾರ ಸುಪ್ರೀಂಕೋರ್ಟಿನ ಮೇಲೂ ಬಿದ್ದಿದ್ದು, ತುರ್ತು ಪ್ರಕರಣಗಳನ್ನು
ಮಾತ್ರವೇ ಆಲಿಸಲಾಗುವುದು ಮತ್ತು ವಕೀಲರಿಗೆ ಮಾತ್ರವೇ ಪ್ರವೇಶಾವಕಾಶ ನೀಡಲಾಗಿದೆ ಎಂದು ಅಧಿಕೃತವಾಗಿ
ಹೊರಡಿಸಲಾದ ಆದೇಶ ತಿಳಿಸಿದೆ.
ಸುಪ್ರೀಂಕೋರ್ಟ್ ಹೋಳಿ ಬಿಡುವಿನ
ಬಳಿಕ ಸೋಮವಾರ ಪುನಾರಂಭವಾಗುವ ನಿರೀಕ್ಷೆ ಇದೆ.
ಕೊರೋನಾವೈರಸ್ ಹರಡುವ ಅಪಾಯವನ್ನು
ಕನಿಷ್ಠಗೊಳಿಸುವ ಸಲುವಾಗಿ ಮುಂದಿನ ವಾರ ತುರ್ತು ಪ್ರಕರಣಗಳನ್ನು ಮಾತ್ರವೇ ಆಲಿಸಲು ಸುಪ್ರೀಂಕೋರ್ಟ್
ಶುಕ್ರವಾರ ನಿರ್ಧರಿಸಿತು.
ಸುಪ್ರೀಂಕೋರ್ಟ್ ಹೊರಡಿಸಿದ ಆದೇಶವು
ಕೋರ್ಟ್ ಕೊಠಡಿಗೆ ವಕೀಲರು ಮತ್ತು ಕಕ್ಷಿದಾರರಿಗೆ ಮಾತ್ರವೇ ಪ್ರವೇಶಾವಕಾಶ ನೀಡಲು ನಿರ್ಧರಿಸಲಾಗಿದೆ
ಎಂದೂ ತಿಳಿಸಿತು.
ಹೆಚ್ಚು ಜನರು ಸೇರುವಂತಹ ಸಮಾವೇಶಗಳನ್ನು
ನಡೆಸದಂತೆ ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆ ನೀಡಿರುವುದನ್ನು ಉಲ್ಲೇಖಿಸಿದ ಆರೋಗ್ಯ ಸಚಿವಾಲಯದ
ಮಾರ್ಗದರ್ಶಿ ಸುತ್ತೋಲೆಯು ಸಭೆ ಸಮಾರಂಭಗಳನ್ನು ಮುಂದೂಡುವಂತೆ ಸೂಚಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಬೋಬ್ಡೆ
ಅವರು ಇತರ ಹಿರಿಯ ನ್ಯಾಯಮೂರ್ತಿಗಳ ಜೊತೆಗೆ ಶುಕ್ರವಾರ ನಡೆಸಿದ ಸಭೆಯ ಬಳಿಕ ಸುಪ್ರೀಂಕೋರ್ಟ್ ಕಲಾಪಗಳನ್ನು
ಮಿತಿಗೊಳಿಸಲು ಮತ್ತು ವಕೀಲರು ಮತ್ತು ಕಕ್ಷಿದಾರರಿಗೆ
ಮಾತ್ರವೇ ಪ್ರವೇಶಾವಕಾಶ ಕಲ್ಪಿಸುವ ಆದೇಶವನ್ನು ನೀಡಲಾಯಿತು. ಶುಕ್ರವಾರ ಮತ್ತು ಸೋಮವಾರ ಸಾಮಾನ್ಯವಾಗಿ
ಸುಪ್ರೀಂಕೋರ್ಟ್ ಕೊಠಡಿಗಳು ಜನರಿಂದ ಕಿಕ್ಕಿರಿದಿರುತ್ತವೆ.
ಪಂದ್ಯ ರದ್ದಿಗೆ ಬಿಸಿಸಿಐ ನಿರ್ಧಾರ:
ಈ ಮಧ್ಯೆ, ದಕ್ಷಿಣ ಆಫ್ರಿಕಾ ವಿರುದ್ಧ ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯದ ಬಾಕಿ ಉಳಿದಿರುವ ಎರಡು
ಪಂದ್ಯಾಟಗಳ ವೇಳಾಪಟ್ಟಿಯನ್ನು ಕೊರೋನಾವೈರಸ್ ಹಿನ್ನೆಲೆಯಲ್ಲಿ ಪರಿಷ್ಕರಿಸಲು ಬಿಸಿಸಿಐ (ಬೋರ್ಡ್ ಆಫ್
ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ) ಶುಕ್ರವಾರ ನಿರ್ಧರಿಸಿತು. ಪರಿಣಾಮವಾಗಿ ಲಕ್ನೋ ಮತ್ತು
ಕೋಲ್ಕತ ಪಂದ್ಯಗಳು ರದ್ದಾದವು.
ಇಂಡಿಯನ್ ಪ್ರೀಮಿಯಲ್ ಲೀಗ್ (ಐಪಿಎಲ್)
ಕೊರೋನಾವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತನ್ನ ಪಂದ್ಯಾಟಗಳನ್ನು ಏಪ್ರಿಲ್ ೧೫ಕ್ಕೆ ಮುಂದೂಡಲು
ನಿರ್ಧರಿಸಿದ ಬಳಿ ಬಿಸಿಸಿಐ ಕೂಡಾ ತನ್ನ ಪಂದ್ಯಗಳ ದಿನಾಂಕಗಳನ್ನು ಪರಿಷ್ಕರಿಸುವ ನಿರ್ಧಾರ ಕೈಗೊಂಡಿತು.
No comments:
Post a Comment