ಎಲ್ಲ ಅವಧಿ ಸಾಲಗಳ ಇಎಂಐ ಕಂತು ಪಾವತಿ ೩ ತಿಂಗಳು ಸ್ಥಗಿತ: ಆರ್ಬಿಐಯಿಂದ ‘ಕೊರೋನಾ’ ರಿಯಾಯ್ತಿ
ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಹಾವಳಿ ಏಕಾಏಕಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಘೋಷಿಸಲಾಗಿರುವ ೨೧ ದಿನಗಳ ’ಭಾರತ ದಿಗ್ಬಂಧನ’ದಿಂದ ಸಾಲಗಾರರಿಗೆ ಎದುರಾಗಿರುವ ಸಂಕಷ್ಟ ನಿವಾರಣೆಗಾಗಿ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್ಬಿಎಫ್ಸಿ), ಹೌಸಿಂಗ್ ಫೈನಾನ್ಸ್ ಕಂಪನಿಗಳು ಮತ್ತು ಇತರ ಹಣಕಾಸು ಸಂಸ್ಥೆUಳ ಎಲ್ಲ ಅವಧಿ ಸಾಲಗಳ (ಟರ್ಮ್ ಲೋನ್) ಇಎಂಐ ಕಂತುಗಳ ಪಾವತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) 2020 ಮಾರ್ಚ್
27ರ ಶುಕ್ರವಾರ ಮೂರು ತಿಂಗಳ ಅವಧಿಗೆ ಸ್ಥಗಿತಗೊಳಿಸಿತು.
ಮಧ್ಯಮ ವರ್ಗ ಮತ್ತು ಸಣ್ಣ ಉದ್ಯಮಿಗಳಿಗೆ ಅಗತ್ಯವಾಗಿದ್ದ ಈ ನೆರವನ್ನು ಘೋಷಣೆ ಮಾಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ’ಈ ಕ್ರಮದಿಂದ ಸಾಲಗಾರನ ಸಾಲ ಇತಿಹಾಸದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ’ ಎಂದು ಸ್ಪಷ್ಟ ಪಡಿಸಿದರು.
ಆರ್ಬಿಐ ಅನುಮತಿ ನೀಡಿರುವ ಮೂರು ತಿಂಗಳ ಇಎಂಐ ಕಂತು ಪಾವತಿ ನಿಷೇಧವು ಸಾಲಗಾರರಿಗೆ ತಮ್ಮ ಉಳಿತಾಯದ ಮೇಲಿನ ಹೊರೆಗಳನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಸುಸ್ತಿದಾರರಾಗದಂತೆ ಅವರನ್ನು ಸಂರಕ್ಷಿಸುತ್ತದೆ.
೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ಡೌನ್) ಸಮಯದಲ್ಲಿ ಇವುಗಳನ್ನು ’ನಿಷ್ಕ್ರಿಯ ಆಸ್ತಿಗಳು’ (ಎನ್ಪಿಎ) ಎಂದು ವರ್ಗೀಕರಿಸಬೇಕಾಗುತ್ತದೆ ಎಂಬ ಆತಂಕವಿಲ್ಲದೆ ಕಂಪೆನಿಗಳಿಗೆ ಕಾರ್ಯ ಬಂಡವಾಳದ ಚಕ್ರವನ್ನು ಪುನರ್ ರೂಪಿಸಿಕೊಳ್ಳಲು ಇದರಿಂದ ಅನುಕೂಲವಾಗಲಿದೆ ಎಂದು ಆರ್ಬಿಐ ಹೇಳಿತು.
"ಅವದಿ ಸಾಲಗಳ ಇಎಂಐ ಕಂತು ಪಾವತಿ ಮೇಲಿನ ನಿಷೇಧವು ಎಲ್ಲ ವಾಣಿಜ್ಯ ಬ್ಯಾಂಕುಗಳು (ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ಸ್ಥಳೀಯ ಪ್ರಾದೇಶಿಕ ಬ್ಯಾಂಕುಗಳು ಸೇರಿದಂತೆ), ಸಹಕಾರಿ ಬ್ಯಾಂಕುಗಳು, ಅಖಿಲ ಭಾರತ ಹಣಕಾಸು ಸಂಸ್ಥೆಗಳು ಮತ್ತು ಎನ್ಬಿಎಫ್ಸಿಗಳು (ವಸತಿ ಹಣಕಾಸು ಕಂಪನಿಗಳು ಮತ್ತು ಸೂಕ್ಷ್ಮ ಹಣಕಾಸು ಸಂಸ್ಥೆಗಳು ಸೇರಿದಂತೆ) - ಇವುಗಳಲ್ಲಿ ೨೦೨೦ ಮಾರ್ಚ್ ೧ರ ವೇಳೆಗೆ ಬಾಕಿ ಇರುವ ಎಲ್ಲ ಅವಧಿ ಸಾಲಗಳ ಇಎಂಐ ಕಂತುಗಳ ಪಾವತಿಯನ್ನು ಮೂರು ತಿಂಗಳ ತಿಂಗಳ ಕಾಲ ಸ್ಥಗಿತಗೊಳಿಸಲು ಅನುಮತಿ ನೀಡಲಾಗುತ್ತಿದೆ’ ಎಂದು ಆರ್ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿತು.
"ಹಾಗೆಯೇ ಮರುಪಾವತಿ ವೇಳಾಪಟ್ಟಿಯನ್ನು ಪರಿಷ್ಕರಿಸಿ ಅಂತಹ ಎಲ್ಲ ಸಾಲಗಳ ಮುಂದಿನ ಬಾಕಿ ದಿನಾಂಕಗಳನ್ನು ಮೂರು ತಿಂಗಳುಗಳಿಗೆ ಮುಂದೂಡಿದ್ದನ್ನು ಸೂಚಿಬಹುದು ಎಂದು ಆರ್ ಬಿಐ ಹೇಳಿದೆ.
ನಿರ್ಮಲಾ ಸೀತಾರಾಮನ್ ಸ್ವಾಗತ: ಆರ್ ಬಿಐ ಸಾಲಗಾರರಿಗೆ ರಿಯಾಯ್ತಿ ಘೋಷಿಸಿದ ಬೆನ್ನಲ್ಲೇ ಅದನ್ನು ಸ್ವಾಗತಿಸಿದ ಕೇಂದ್ರ ವಿತ್ತ ಸಚಿವೆ ಸಚಿವ ನಿರ್ಮಲಾ ಸೀತಾರಾಮನ್ ಅವರು ’ಆರ್ಬಿಐ ಘೋಷಿಸಿದ ಕ್ರಮಗಳು "ಅತ್ಯಗತ್ಯವಾಗಿದ್ದ ಪರಿಹಾರವನ್ನು ನೀಡಿವೆ’ ಎಂದು ಟ್ವೀಟ್ ಮಾಡಿದರು.
’ಹಣಕಾಸಿನ ಸ್ಥಿರತೆಯ ಕುರಿತು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಮರುಭರವಸೆಯ ಪದಗಳನ್ನು ಶ್ಲಾಘಿಸುವೆ. ಅವಧಿ ಸಾಲ ಮತ್ತು ಬಡ್ಡಿ ಮೇಲಿನ ಇಎಂಐ ಕಂತು ಪಾವತಿ ಮೇಲಿನ ೩ ತಿಂಗಳ ನಿಷೇಧವು ಅತ್ಯಂತ ಅಪೇಕ್ಷಿತವಾಗಿದ್ದ ಪರಿಹಾರವನ್ನು ಒದಗಿಸುತ್ತದೆ. ಈ ಪರಿಹಾರ ಅತ್ಯಂತ ತುರ್ತಾಗಿ ಸಾಲಗಾರರಿಗೆ ವರ್ಗಾವಣೆಯಾಗಬೇಕಾದ ಅಗತ್ಯ ಇದೆ’ ಎಂದು ಸೀತಾರಾಮನ್ ಹೇಳಿದರು.
ಇದೇ ವೇಳೆಗೆ ಅತ್ಯಂತ ಮುಖ್ಯವಾದ ಸಾಲದ ಮೇಲಿನ ರೆಪೋ ದರವನ್ನು ೭೫ ಬೇಸಿಸ್ ಪಾಯಿಂಟ್ಗಳಿಂದ ೪.೪% ಮತ್ತು ರಿವರ್ಸ್ ರೆಪೊ ದರವನ್ನು ೯೦ ಬೇಸಿಸ್ ಪಾಯಿಂಟ್ಗಳಿಂದ ೪% ಕ್ಕೆ ಇಳಿಸುವ ಮೂಲಕ ಆರ್ಥಿಕ ಬೆಳವಣಿಗೆಯ ಪುನಶ್ಚೇತನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಶಕ್ತಿಕಾಂತ ದಾಸ್ ಪ್ರಕಟಿಸಿದರು.
ಕೊರೋನಾ ವೈರಸ್ ಹರಡುವುದನ್ನು ತಡೆಯಲು ದೇಶವು ಮೂರು ವಾರಗಳ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ಡೌನ್) ಘೋಷಿಸಿದ ಮೂರನೇ ದಿನ ಭಾರತೀಯ ರಿಸರ್ವ್ ಬ್ಯಾಂಕಿನಿಂದ ಈ ಪ್ರಕಟಣೆ ಹೊರಬಿದ್ದಿದೆ.
ಆರ್ಬಿಐನ ಹಣಕಾಸು ನೀತಿ ಸಮಿತಿಯ (ಎಂಪಿಸಿ) ತುರ್ತು ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.
ನೀತಿ ಸಮಿತಿಯ ಸಭೆಯು ಮೂಲತಃ ಮುಂದಿನ ತಿಂಗಳ ಆರಂಭದಲ್ಲಿ ದ್ವಿ-ಮಾಸಿಕ ಪರಿಶೀಲನೆಗಾಗಿ ನಡೆಯಬೇಕಾಗಿತ್ತು.
ದೇಶದಲ್ಲಿ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿರುವ ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ಪಿಡುಗನ್ನು ನಿಗ್ರಹಿಸಲು ಮತ್ತು ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಕ್ರಮದಿಂದ ನಷ್ಟ ಅನುಭವಿಸುವ ಮಧ್ಯಮ ಹಾಗೂ ಕೆಳ ವರ್ಗದಗಳ ಜನರಿಗೆ ನೆರವಾಗಲು ಕೇಂದ್ರ ಸರ್ಕಾರವು ಗುರುವಾರವಷ್ಟೇ ೧.೭ ಲಕ್ಷ ಕೋಟಿ ರೂಪಾಯಿ ಮೊತ್ತದ ಪರಿಹಾರ ಕೊಡುಗೆಯನ್ನು ಘೋಷಣೆ ಮಾಡಿತ್ತು.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ದಿಗ್ಬಂಧನ ಪರಿಹಾರ ಕೊಡುಗೆಯನ್ನು ಪ್ರಕಟಿಸಿದ್ದರು. ಮುಂದಿನ ಮೂರು ತಿಂಗಳುಗಳ ರಾಷ್ಟ್ರದ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಈ ಪರಿಹಾರ ಕೊಡುಗೆಯನ್ನು ಪ್ರಕಟಿಸುತ್ತಿರುವುದಾಗಿ ಸೀತಾರಾಮನ್ ತಿಳಿಸಿದ್ದರು.. ಬಡ ಹಾಗೂ ಮಧ್ಯಮ ವರ್ಗದ ಮಂದಿಗೆ ಅನುಕೂಲವಾಗುವ ಹಲವಾರು ಹೊಸ ಯೋಜನೆಗಳನ್ನೂ ಅವರು ಘೋಷಿಸಿದ್ದರು.
ಸರ್ಕಾರದ ಘೋಷಣೆ ಪ್ರಕಾರ ಮುಂದಿನ ದಿನ ಮೂರು ತಿಂಗಳ ಕಾಲ ಬಿಪಿಎಲ್ ಕಾರ್ಡುದಾರರಿಗೆ ೫ ಕೆಜಿ ಉಚಿತ ಅಕ್ಕಿ ಮತ್ತು ಗೋದಿ ವಿತರಣೆ, ಉಜ್ವಲ ಯೋಜನೆಯ ಅಡಿಯಲ್ಲಿ ೮.೩ ಕೋಟಿ ಬಿಪಿಎಲ್ ಕುಟುಂಬಗಳಿಗೆ ಮುಂದಿನ ಮೂರು ತಿಂಗಳ ಕಾಲ ಉಚಿತವಾಗಿ ಅಡುಗೆ ಅನಿಲ ವಿತರಣೆ, ರೈತರ ಅನುಕೂಲಕ್ಕಾಗಿ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ಅಂದಾಜು ೮.೯ ಕೋಟಿ ರೈತರ ಖಾತೆಗಳಿಗೆ ನೇರವಾಗಿ ಮುಂದಿನ ಮೂರು ತಿಂಗಳಲ್ಲಿ ತಲಾ ೨,೦೦೦ ರೂಪಾಯಿಗಳಂತೆ ಹಣ ಜಮಾವಣೆ, ಮಹಿಳೆಯರ ಅನುಕೂಲಕ್ಕಾಗಿ ಜನಧನ್ ಖಾತೆ ಹೊಂದಿರುವ ಎಲ್ಲ ಮಹಿಳೆಯರ ಖಾತೆಗಳಿಗೂ ನೇರವಾಗಿ ೫೦೦ ರೂಪಾಯಿ ವರ್ಗಾವಣೆ, ಮಹಿಳಾ ಸ್ವಸಹಾಯ ಸಂಘಗಳಿಗೆ ೧೦ ಲಕ್ಷ ರೂಪಾಯಿಗಳವರೆಗೆ ಖಾತರಿ ರಹಿತ ಸಾಲ, ದಿನಗೂಲಿ ನೌಕರರ ವೇತ ೧೮೦ ರಿಂದ ೨೦೦ ರೂಪಾಯಿಗೆ ಏರಿಕೆ, ಕಟ್ಟಡ ಕಾರ್ಮಿಕರಿಗೆ ನೆರವಾಗುವ ಸಲುವಾಗಿ ಎಲ್ಲ ರಾಜ್ಯಗಳ ಖಾತೆಯಲ್ಲಿರುವ ಕಟ್ಟಡ ಕಾರ್ಮಿಕರ ಯೋಗಕ್ಷೇಮ ನಿಧಿಯಲ್ಲಿರುವ ಸುಮಾರು ೩೧,೦೦೦ ಕೋಟಿ ಹಣವನ್ನು ಆಯಾ ರಾಜ್ಯಗಳಿಂದ ಕಾರ್ಮಿಕರಿಗೆ ಸಹಾಯ ಧನ ನೀಡಲು ಬಳಸಿಕೊಳ್ಳಲು ನಿರ್ದೇಶನ ನೀಡಲಾಗಿತ್ತು.
ಇದಲ್ಲದೆ, ಕಾರ್ಮಿಕರ ವಿವಿಧ ವರ್ಗಗಳಿಗೆ ಸಾಲ ಯೋಜನೆ, ಕಾರ್ಮಿಕರ ಭವಿಷ್ಯ ನಿಧಿ ಹಣ ವಾಪಸಾತಿ ನಿಯಮಗಳ ಸರಳೀಕರಣ, ಕಡಿಮೆ ವೇತನದಾರರ ಪಿಎಫ್ ಹಣ ಸರ್ಕಾರದಿಂದಲೇ ಭರ್ತಿ, ವೃದ್ಧಾಪ್ಯ, ವಿಧವಾ, ಅಂಗವಿಕಲರ ಪಿಂಚಣಿ ಏರಿಕೆ, ಕೋರೋನಾವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ವಿಶೇಷ ವಿಮಾ ಸೌಲಭ್ಯ ಇತ್ಯಾದಿ ಕ್ರಮಗಳನ್ನು ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದರು.
ಕೊರೋನಾವೈರಸ್ ಸಾಂಕ್ರಾಮಿಕ ಪಿಡುಗು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ೨೦೨೦ ಮಾರ್ಚ್ ೨೫ ರ ಬುಧವಾರದಿಂದ ದೇಶದಲ್ಲಿ ೨೧ ದಿನಗಳ ದಿಗ್ಬಂಧನ ಘೋಷಿಸಿದ್ದರು. ಈ ದಿಗ್ಬಂಧನದಿಂದಾಗಿ ದೇಶಕ್ಕೆ ೯ ಲಕ್ಷ ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ತಜ್ಞರು ಅಂದಾಜು ಮಾಡಿದ್ದರು.
No comments:
Post a Comment