೧೦ ಬ್ಯಾಂಕುಗಳ ವಿಲೀನ ಏಪ್ರಿಲ್ ೧ರಿಂದ ಜಾರಿ: ನಿರ್ಮಲಾ ಸೀತಾರಾಮನ್
ನವದೆಹಲಿ: ಸರ್ಕಾರಿ ರಂಗದ ೧೦ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಪ್ರಗತಿಯಲ್ಲಿದ್ದು ೨೦೨೦ರ ಏಪ್ರಿಲ್ ೧ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2020 ಮಾರ್ಚ್ 04ರ ಬುಧವಾರ ಇಲ್ಲಿ ಹೇಳಿದರು.
ಕೇಂದ್ರ ಸಚಿವ ಸಂಪುಟವು ವಿಲೀನ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದ್ದು ಈ ಬ್ಯಾಂಕುಗಳ ಜೊತೆ ಸರ್ಕಾರ ನಿರಂತರ ಸಂಪರ್ಕದಲ್ಲಿದೆ. ಯಾವುದೇ ನಿಯಂತ್ರಣ ಸಮಸ್ಯೆಗಳೂ ಇಲ್ಲ ಎಂದು ಸಚಿವರು ನುಡಿದರು.
‘ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಪ್ರಗತಿಯಲ್ಲಿದೆ ಮತ್ತು ಸಂಬಂಧಪಟ್ಟ ಬ್ಯಾಂಕ್ ಮಂಡಳಿಗಳ ಜೊತೆ ಈಗಾಗಲೇ ನಿರ್ಣಯಗಳನ್ನೂ ಕೈಗೊಳ್ಳಲಾಗಿದೆ’ ಎಂದು ಅವರು ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.
ಭಾರತದಲ್ಲಿ ಜಾಗತಿಕ ಗಾತ್ರದ ಬ್ಯಾಂಕುಗಳನ್ನು ಸೃಷ್ಟಿಸುವ ಸಲುವಾಗಿ ಈ ಬಾಂಕುಗಳನ್ನು ವಿಲೀನಗೊಳಿಸಲಾಗಿದೆ.
೨೦೧೯ರ ಆಗಸ್ಟ್ ತಿಂಗಳಲ್ಲಿ ಸರ್ಕಾರಿ ರಂಗದ ನಾಲ್ಕು ಪ್ರಮುಖ ಬ್ಯಾಂಕುಗಳ ವಿಲೀನ ಪ್ರಕ್ರಿಯೆಯನ್ನು ಸರ್ಕಾರ ಪ್ರಕಟಿಸಿತ್ತು. ಇದೊಂದಿಗೆ ೨೦೧೭ರಲ್ಲಿ ಇದ್ದ ೨೭ ಬ್ಯಾಂಕುಗಳ ಸಂಖ್ಯೆ ೧೨ಕ್ಕೆ ಇಳಿದಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳನ್ನು ಜಾಗತಿಕ ಬ್ಯಾಂಕುಗಳ ಗಾತ್ರದ ಬ್ಯಾಂಕುಗಳನ್ನಾಗಿ ಮಾರ್ಪಡಿಸುವುದು ಈ ಕ್ರಮದ ಉದ್ದೇಶವಾಗಿತ್ತು.
ಸರ್ಕಾರದ ನಿರ್ಧಾರದ ಪ್ರಕಾರ ಪಂಜಾಬ್ ನ್ಯಾಷನಲ್ ಬ್ಯಾಂಕ್ ಜೊತೆಗೆ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಓರಿಯೆಂಟಲ್ ಬ್ಯಾಂಕು ವಿಲೀನಗೊಳ್ಳಲಿದೆ, ಕೆನರಾ ಬ್ಯಾಂಕಿನ ಜೊತೆಗೆ ಸಿಂಡಿಕೇಟ್ ಬ್ಯಾಂಕ್ ವಿಲೀನಗೊಳ್ಳಲಿದೆ, ಇಂಡಿಯನ್ ಬ್ಯಾಂಕ್ ಜೊತೆಗೆ ಅಲಹಾಬಾದ್ ಬ್ಯಾಂಕ್ ವಿಲೀನವಾಗಲಿದೆ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೊತೆಗೆ ಆಂಧ್ರ ಬ್ಯಾಂಕ್ ಮತ್ತು ಕಾರ್ಪೋರೇಷನ್ ಬ್ಯಾಂಕ್ ವಿಲೀನಗೊಳ್ಳಲಿವೆ.
ಕಳೆದ ವರ್ಷ ಬ್ಯಾಂಕ್ ಆಫ್ ಬರೋಡಾ ಜೊತೆಗೆ ದೇನಾ ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್ ವಿಲೀನಗೊಂಡಿದ್ದವು. ಇದಕ್ಕೂ ಮುನ್ನ ಸರ್ಕಾರವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆಗೆ ಎಸ್ಬಿಐಯ ಐದು ಅಸೋಸಿಯೇಟ್ ಬ್ಯಾಂಕುಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕನ್ನು ವಿಲೀನಗೊಳಿಸಿತ್ತು.
No comments:
Post a Comment