ಭಾರತದಲ್ಲಿ ೧೦೮ಕ್ಕೆ ಏರಿದ
ಕೊರೋನಾ ಪ್ರಕರಣ
ಮಹಾರಾಷ್ಟ್ರ, ಕೇರಳದಲ್ಲಿ ಅತ್ಯಧಿಕ ಜನರಿಗೆ ಸೋಂಕು
ನವದೆಹಲಿ: ಮಾರಕ ಕೋವಿಡ್-೧೯
ಸೋಂಕು ಹರಡದಂತೆ ತಡೆಯಲು ಕೇಂದ್ರ ಹಾಗೂ
ರಾಜ್ಯ ಸರ್ಕಾರಗಳು ಸಮರೋಪಾದಿ ಕ್ರಮಗಳನ್ನು ಕೈಗೊಳ್ಳುತ್ತಿರುವುದರ ಮಧ್ಯೆಯೇ,
ವಿದೇಶೀ ಪ್ರಜೆಗಳೂ ಸೇರಿದಂತೆ ಭಾರತದಲ್ಲಿ ಕೊರೋನಾವೈರಸ್ ಸೋಂಕಿತರ ಸಂಖ್ಯೆ 2020 ಮಾರ್ಚ್ 15ರ ಭಾನುವಾರ ೧೦೮ಕ್ಕೆ ಏರಿತು.
ದೆಹಲಿ ಮತ್ತು ಕರ್ನಾಟಕದಲ್ಲಿ ಇಬ್ಬರು ವ್ಯಕ್ತಿಗಳು ಸೋಂಕಿಗೆ ಬಲಿಯಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಅತ್ಯಧಿಕ ಜನರಿಗೆ ಕೊರೋನಾವೈರಸ್ ಸೋಂಕು
ತಗುಲಿದ್ದು,
ಸೋಂಕು ದೃಢಪಟ್ಟವರ ಸಂಖ್ಯೆ ೩೨ಕ್ಕೆ ಏರಿದೆ.
ಕೇರಳ ನಂತರದ ಸ್ಥಾನದಲ್ಲಿದ್ದು ೨೨
ಮಂದಿಗೆ ಸೋಂಕು ತಗುಲಿದೆ. ಉತ್ತರ ಪ್ರದೇಶದಲ್ಲಿ ೧೧
ಮಂದಿಗೆ ಸೋಂಕು ತಗುಲಿರುವುದು ಖಚಿತ
ಪಟ್ಟಿದೆ. ಒಟ್ಟು ೧೦೭
ಪ್ರಕರಣಗಳಲ್ಲಿ
೧೭ ಮಂದಿ ವಿದೇಶೀ ಪ್ರಜೆಗಳಾಗಿದ್ದಾರೆ.
ಭಾರತ
ಸರ್ಕಾರವು ಈಗಾಗಲೇ ಕೋವಿಡ್-೧೯ನ್ನು ’ವಿಪತ್ತು’ ಎಂಬುದಾಗಿ ಘೋಷಿಸಿದೆ ಮತ್ತು ೨೦೨೦
ಜೂನ್ ೩೦ರವರೆಗೆ ಮುಖವಾಡ (ಮಾಸ್ಕ್) ಮತ್ತು ಸ್ಯಾನಿಟೈಜರ್ಗಳನ್ನು ಅಗತ್ಯ
ವಸ್ತುಗಳ ಕಾಯ್ದೆಯ ಅಡಿಯಲ್ಲಿ ಅಗತ್ಯ
ವಸ್ತುಗಳು ಎಂಬುದಾಗಿ ಘೋಷಿಸಿದೆ. ಅಗತ್ಯ ವಸ್ತು
ಕಾಯ್ದೆಯ ಅಡಿಯಲ್ಲಿ ರಾಜ್ಯಗಳು ಉತ್ಪಾದಕರಿಗೆ ಈ
ಉತ್ಪನ್ನಗಳ
ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ
ಸರಬರಾಜಿಗೆ
ಧಕ್ಕೆಯಾಗದಂತೆ
ನೋಡಿಕೊಳ್ಳಲು
ನಿರ್ದೇಶನ ನೀಡಬಹುದಾಗಿದೆ.
ಇದಕ್ಕೂ ಮುನ್ನ
ಪ್ರಧಾನಿ ನರೇಂದ್ರ ಮೋದಿ
ಅವರು ತಮ್ಮ ಸರ್ಕಾರದ ಯಾರೇ
ಸಚಿವರು ಮುಂಬರುವ ದಿನಗಳಲ್ಲಿ ವಿದೇಶ
ಪ್ರಯಾಣ ಮಾಡುವುದಿಲ್ಲ ಎಂದು
ಘೋಷಿಸಿ, ಸೋಂಕು ಹರಡದಂತೆ ತಡೆಯುವ ಸಲುವಾಗಿ ಅನಗತ್ಯ ವಿದೇಶ
ಪಯಣಗಳನ್ನು
ಮುಂದೂಡುವಂತೆ
ಜನತೆಗೆ ಮನವಿ ಮಾಡಿದ್ದರು. ಹೆಚ್ಚು ಜನರು
ಸೇರುವಂತಹ ಸಭೆ ಸಮಾರಂಭಗಳನ್ನು ನಡೆಸಬೇಡಿ, ಆದರೆ ಭಯಭೀತರಾಗುವ ಅಗತ್ಯವಿಲ್ಲ ಎಂದು
ಪ್ರಧಾನಿ ಹೇಳಿದ್ದರು.
ಈ
ಮಧ್ಯೆ, ಎಲ್ಲ ನಾಗರಿಕ ಆಸ್ಪತ್ರೆಗಳು ಮತ್ತು
ವೈದ್ಯಕೀಯ ಕಾಲೇಜುಗಳಿಗೆ ಏಕಾಂಗಿ ವಾರ್ಡ್ಗಳನ್ನು ಸ್ಥಾಪಿಸುವಂತೆ ಸೂಚಿಸಿ ಸರ್ಕಾರವು ಸುತ್ತೋಲೆ ಹೊರಡಿಸಿದೆ ಎಂದು
ಕೇಂದ್ರದ ಆರೋಗ್ಯ ಸಹಾಯಕ
ಸಚಿವ ಅಶ್ವಿನಿ ಚೌಬೆ
ತಿಳಿಸಿದ್ದಾರೆ.
ಕೊರೋನಾವೈರಸ್
ಹರಡದಂತೆ ತಡೆಯಲು ಸಾಧ್ಯವಿರುವ ಎಲ್ಲ
ಉತ್ತಮ ಕ್ರಮಗಳನ್ನೂ ಕೈಗೊಳ್ಳುತ್ತಿದ್ದೇವೆ. ಸೋಂಕು ಈಗಾಗಲೇ ೧೨
ರಾಜ್ಯಗಳಿಗೆ
ಹರಡಿದೆ ಎಂದು ಸಚಿವರು ಹೇಳಿದರು.
ಕೊರೋನಾವೈರಸ್ ಈಗಾಗಲೇ ವಿಶ್ವಾದ್ಯಂತ ೫೦೦೦ಕ್ಕೂ ಹೆಚ್ಚು ಮಂದಿಯನ್ನು ಬಲಿ
ತೆಗೆದುಕೊಂಡಿದೆ.
೧೦೦ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಸೋಂಕು
ಹರಡಿದ್ದು ಅಂದಾಜು ೧,೫೦,೦೦೦
ಮಂದಿಗೆ ಪ್ರಸ್ತುತ ಸೋಂಕು
ತಗುಲಿದೆ. ಈಗ ಯುರೋಪ್ ವ್ಯಾಧಿಯ ಹೊಸ
ಕೇಂದ್ರವಾಗಿದೆ
ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ.
ಭಾರತದಲ್ಲಿ ತೆಲಂಗಾಣ, ದೆಹಲಿ, ಹಿಮಾಚಲ ಪ್ರದೇಶ, ಉತ್ತರಾಖಂಡ, ರಾಜಸ್ಥಾನ ಮತ್ತು
ಗೋವಾ ರಾಜ್ಯಗಳು ಶಾಲೆ-ಕಾಲೇಜು ಮತ್ತು
ಇತರ ಸಾರ್ವಜನಿಕ ಸ್ಥಳಗಳನ್ನು ಮುಚ್ಚಿದ ರಾಜ್ಯಗಳ ಪಟ್ಟಿಗೆ ಸೇರ್ಪಡೆಯಾಗಿವೆ. ಜನನಿಬಿಡ ಸ್ಥಳಗಳಲ್ಲಿ ಸೋಂಕು
ಕ್ಷಿಪ್ರವಾಗಿ
ಹರಡುವ ಸಾಧ್ಯತೆಗಳು ಇರುವುದರಿಂದ ಈ
ಕ್ರಮ ಕೈಗೊಳ್ಳಲಾಗಿದೆ.
ತನ್ನ
ನೌಕರರಿಗೆ ಮನೆಗಳಿಂದಲೇ ಕೆಲಸ
ಮಾಡಲು ಅನುವು ಮಾಡಿಕೊಡುವಂತೆ ಐಟಿ
ಕಂಪೆನಿಗಳಿಗೆ
ಸಲಹೆ ಮಾಡುವುದಾಗಿ ಕರ್ನಾಟಕ ಸರ್ಕಾರ ಶನಿವಾರ ಹೇಳಿದೆ. ರಾಜ್ಯದಲ್ಲಿ ಕೊರೋನಾವೈರಸ್ ಸೋಂಕಿಗೆ ತುತ್ತಾದವರು ಐಟಿ
ಕಂಪನಿಗಳ ಉದ್ಯೋಗಿಗಳು ಇಲ್ಲವೇ ಅವರ
ಬಂಧುಗಳಾಗಿರುವ
ಹಿನ್ನೆಲೆಯಲ್ಲಿ
ಈ ಕ್ರಮ ಕೈಗೊಳ್ಳಲಾಗಿದೆ.
ಕೊರೋನಾವೈರಸ್ ಹರಡುವಿಕೆಯನ್ನು ತಡೆಯಲು ಕೇಂದ್ರ ರೈಲ್ವೆ ಮತ್ತು
ಪಶ್ಚಿಮ ರೈಲ್ವೇಗಳು ಹವಾನಿಯಂತ್ರಿತ ಬೋಗಿಗಳ ಪರದೆಗಳನ್ನು ತೆಗೆದುಹಾಕಿದೆ.
ಹವಾನಿಯಂತ್ರಿತ ಬೋಗಿಗಳಲ್ಲಿ ಒದಗಿಸಲಾಗುವ ಪರದೆಗಳು ಮತ್ತು
ಹೊದಿಕೆಗಳನ್ನು
ಹಾಲಿ ಸೂಚನೆಗಳ ಪ್ರಕಾರ ಪ್ರತಿ
ಪ್ರವಾಸದ ತತ್ ಕ್ಷಣವೇ ತೊಳೆಯಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕೋವಿಡ್ -೧೯ ಹರಡದಂತೆ ತಡೆಯುವ ಸಲುವಾಗಿ ಮುಂದಿನ ಆದೇಶದವರೆಗೆ ಎಲ್ಲ
ಹವಾ ನಿಯಂತ್ರಿತ ಬೋಗಿಗಳಿಂದ ಹೊದಿಕೆ ಮತ್ತು
ಪರದೆಗಳನ್ನು
ಹಿಂಪಡೆಯಬೇಕು
ಎಂದು ಆದೇಶ ನೀಡಲಾಗಿದೆ ಎಂದು
ಪಶ್ಚಿಮ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಳಿದರು.
’ಪ್ರಯಾಣಿಕರಿಗೆ ಸ್ವಯಂ ಹಿತದ
ದೃಷ್ಟಿಯಿಂದ
ತಮ್ಮದೇ ಹೊದಿಕೆಗಳನ್ನು ತರುವಂತೆ ಸಲಹೆ
ಮಾಡಲಾಗಿದೆ.
ಈ ವಿಚಾರವಾಗಿ ವ್ಯಾಪಕ ಪ್ರಚಾರ ನೀಡಬೇಕು. ತುರ್ತು ಅಗತ್ಯಗಳ ಸಲುವಾಗಿ ಕೆಲವು
ಹೆಚ್ಚುವರಿ
ಹೊದಿಕೆಗಳನ್ನು
ಇರಿಸಿಕೊಳ್ಳಲಾಗುವುದು’ ಎಂದು ಅಧಿಕಾರಿ ನುಡಿದರು.
ಕೊರೋನಾವೈರಸ್ ಸೋಂಕು
ತಗುಲಿದ್ದ ಉತ್ತರ ಪ್ರದೇಶದ ೫
ಮತ್ತು ರಾಜಸ್ಥಾನ ಹಾಗೂ
ದೆಹಲಿಯ ತಲಾ ಒಂದೊಂದು ಪ್ರಕರಣಗಳು ಸೇರಿ
೭ ಪ್ರಕರಣಗಳಲ್ಲಿ ಸೋಂಕಿತರನ್ನು ಚಿಕಿತ್ಸೆಯ ಬಳಿಕ
ಗುಣಮುಖರಾಗಿರುವ
ಹಿನ್ನೆಲೆಯಲ್ಲಿ
ಆಸ್ಪತ್ರೆಗಳಿಂದ
ಬಿಡುಗಡೆ ಮಾಡಲಾಗಿದೆ.
ಸೋಂಕಿಗೆ ಬಲಿಯಾದವರ ಶವಗಳ
ವಿಲೇವಾರಿ ಸಂಬಂಧ ಮಾರ್ಗದರ್ಶಿ ಸೂತ್ರಗಳ ರಚನೆ
ಮಾಡಲಾಗುತ್ತಿದೆ
ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಮೃತರ
ಶವಗಳ ನಿಭಾವಣೆಯಿಂದ ಕೊರೋನಾವೈರಸ್ ಸೋಂಕು
ಹರಡುವ ಸಾಧ್ಯತೆಗಳು ಇಲ್ಲವಾದರೂ, ಈ ವಿಚಾರದಲ್ಲಿ ಯಾವುದೇ ತಪ್ಪು
ಕಲ್ಪನೆಗಳು
ಉಂಟಾಗದಂತೆ
ಜಾಗೃತಿ ಮೂಡಿಸುವ ಸಲುವಾಗಿ ಮಾರ್ಗದರ್ಶಿ ಸೂತ್ರಗಳನ್ನು ರಚಿಸುವುದು ಅತ್ಯಗತ್ಯವಾಗಿದೆ ಎಂದು
ಆರೋಗ್ಯ ಸಚಿವಾಲಯದ ಅಧಿಕಾರಿ ನುಡಿದರು.
ಕೊರೋನಾವೈರಸ್ ಸೋಂಕು
ಉಸಿರಾಟದ ವ್ಯವಸ್ಥೆಯ ಮೂಲಕ
ಹರಡುವ ರೋಗವಾಗಿದ್ದು ಸೋಂಕಿತನ ನಿಶ್ವಾಸದಿಂದ ಹರಡುತ್ತದೆ. ಆದ್ದರಿಂದ ಎಬೋಲಾ,
ನಿಫಾ ರೋಗಳ ರೀತಿಯಲ್ಲಿ ಶವಗಳ
ವಿಲೇವಾರಿ ಕಾಲದಲ್ಲಿ ದೇಹದ
ದ್ರವಗಳ ಸಂಪರ್ಕದಿಂದ ಕೋವಿಡ್-೧೯
ಸೋಂಕು ಹರಡುವ ಸಾಧ್ಯತೆ ಇಲ್ಲ
ಎಂದು ಆರೋಗ್ಯ ಸಚಿವಾಲಯದ ಅಧಿಕಾರಿ ಹೇಳಿದರು.
No comments:
Post a Comment