ಜನತಾ ಕರ್ಫ್ಯೂವಿಗೆ ಸರ್ವತ್ರ ಬೆಂಬಲ:
ಕೊರೋನಾಕ್ಕೆ ೫ನೇ ಬಲಿ
ಭಾರತದಲ್ಲಿ ಸೋಂಕಿತರ ಸಂಖ್ಯೆ ೨೨೩,
ವಿಶ್ಯಾದ್ಯಂತ ೧೦,೦೦೦ ದಾಟಿದ ಸಾವು
ನವದೆಹಲಿ: ಇಡೀ ವಿಶ್ವವನ್ನೇ ಬಾಧಿಸುತ್ತಿರುವ
ಕೊರೋನಾವೈರಸ್ ಸೋಂಕಿನ ವಿರುದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ ೨೨ರ ಭಾನುವಾರ ವಿಧಿಸಿಕೊಳ್ಳಲು ಕರೆಕೊಟ್ಟಿರುವ ’ಜನತಾ ಕರ್ಫ್ಯೂ’ಗೆ
ವ ಸರ್ವ ಪಕ್ಷಗಳೂ ಸೇರಿ ವ್ಯಾಪಕ ಬೆಂಬಲ ವ್ಯಕ್ತವಾಗುತಿದ್ದಂತೆಯೇ 2020 ಮಾರ್ಚ್
20ರ ಶುಕ್ರವಾರ ಐದನೇ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ ೨೨೩ಕ್ಕೆ ಏರಿದೆ.
ಸಾಂಕ್ರಾಮಿಕ ಪಿಡುಗು ಹರಡದಂತೆ
ತಡೆಯುವ ಸಲುವಾಗಿ ಪ್ರಧಾನಿ ನೀಡಿದ ’ಜನತಾ ಕರ್ಫ್ಯೂವಿಗೆ ಸರ್ವ ಪಕ್ಷಗಳೂ ಬೆಂಬಲ ನೀಡಿದ್ದು ವಿವಿಧ
ಸಂಘಸಂಸ್ಥೆಗಳು, ಸಾರಿಗೆ ಸಂಸ್ಥೆಗಳೂ ಸ್ವಯಂ ಕರ್ಫ್ಯೂ ವಿಧಿಸಿಕೊಳ್ಳುವುದಾಗಿ ಪ್ರಕಟಿಸಿವೆ. ಭಾರತೀಯ
ರೈಲ್ವೇಯು ಶನಿವಾರ ಮಧ್ಯರಾತ್ರಿಯಿಂದ ಭಾನುವಾರ ರಾತ್ರಿ ೧೦ಗಂಟೆಯವರೆ ಎಲ್ಲ ಪ್ರಯಾಣಿಕರ ರೈಲುಗಳ ಪಯಣವನ್ನು
ರದ್ದು ಪಡಿಸಲಾಗುವುದು ಎಂದು 2020 ಮಾರ್ಚ್ 20ರ ಶುಕ್ರವಾರ
ಪ್ರಕಟಿಸಿತು.
ಅಗತ್ಯ ಸೇವೆಗಳನ್ನು ಹೊರತುಪಡಿಸಿ
ಮುಂಬೈಯ ಎಲ್ಲ ಕಚೇರಿಗಳನ್ನೂ ಮಾರ್ಚ್ ೩೧ರವರೆಗೆ ಮುಚ್ಚಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ
ಉದ್ಧವ್ ಠಾಕ್ರೆ ಪ್ರಕಟಿಸಿದರು.
ಜನತಾ ಕರ್ಫ್ಯೂವಿಗೆ ಸರ್ವ ಪಕ್ಷಗಳೂ
ಬೆಂಬಲ ಘೋಷಿಸಿದ್ದನ್ನು ಲೋಕಸಭಾಧ್ಯಕ್ಷ ಓ ಬಿರ್ಲಾ ಅವರು ಲೋಕಸಭೆಯಲ್ಲಿ ಪ್ರಕಟಿಸಿ ಎಲ್ಲರಿಗೋ ಧನ್ಯವಾದ
ಅರ್ಪಿಸಿದರು.
ಇದೇ ವೇಳೆಗೆ ಭಾರತದಲ್ಲಿ ಇಟಲಿಯ
ನಾಗರಿಕನೊಬ್ಬ ಕೊರೋನಾವೈರಸ್ಸಿಗೆ ಬಲಿಯಾಗಿದ್ದು, ದೇಶದಲ್ಲಿ ಸಾವಿನ ಸಂಖ್ಯೆಯನ್ನು ೫ಕ್ಕೆ ಏರಿಸಿದೆ.
ದೇಶದ ಹಲವಡೆಗಳಲ್ಲಿ ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ
೨೨೩ಕ್ಕೆ ಏರಿತು.
ಕೊರೋನಾವೈರಸ್ ಸೋಂಕಿಗೆ ಒಳಗಾಗಿ
ಮೂರು ದಿನಗಳ ಹಿಂದೆ ಚೇತರಿಸಿಕೊಂಡಿದ್ದ ಇಟಲಿಯ ಪ್ರಜೆ ಶುಕ್ರವಾರ ಜೈಪುರದಲ್ಲಿ ಸಾವನ್ನಪ್ಪಿರುವುದಾಗಿ
ವರದಿಗಳು ತಿಳಿಸಿವೆ. ಕೊರೋನಾಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಭಾರತದಾದ್ಯಂತ ಸಾರ್ವಜನಿಕ
ಸಭೆ, ಸಮಾರಂಭಗಳ ನಿಷೇಧ, ಭಾನುವಾರದಿಂದ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ಬಂದ್ ಮತ್ತು ಶಾಲೆ, ಕಾಲೇಜುಗಳಿಗೆ
ರಜೆ ಸಾರುವ ಮೂಲಕ ದೇಶದಲ್ಲಿ ಸರ್ಕಾರ ಬಹುತೇಕ ’ಲಾಕ್ ಡೌನ್’ ವಿಧಿಸಿದೆ.
ವಿಶ್ಯಾದ್ಯಂತ ಕೊರೋನಾವೈರಸ್ ಬಲಿತೆಗೆದುಕೊಂಡಿರುವವರ
ಸಂಖ್ಯೆ ೧೦,೦೦೦ ದಾಟಿದ್ದು, ಸೋಂಕಿತರ ಸಂಖ್ಯೆ ೨,೪೨,೦೦೦ ಮೀರಿದೆ. ಎರಡನೇ ವಿಶ್ವ ಸಮರ, ೨೦೦೮ರ ಆರ್ಥಿಕ ಬಿಕ್ಕಟ್ಟು ಮತ್ತು ೧೯೧೮ ಸ್ಪಾನಿಶ್ ಫ್ಲೂ
ಕಾಲದ ದುರಂತಮಯ ಪರಿಸ್ಥಿತಿಯನ್ನು ಜಗತ್ತು ಇದೀಗ ನೆನಪಿಸಿಕೊಳ್ಳುವಂತಾಗಿದೆ.
ಇಟಲಿಯಲ್ಲಿ ಕೊರೋನಾಸಾವಿನ ಸಂಖ್ಯೆ
ಗುರುವಾರ ಚೀನಾವನ್ನೂ ಮೀರಿಸಿದ್ದು, ವಿಶ್ಯಾದ್ಯಂತ ಸೋಂಕು ಹರಡುವಿಕೆ ಮೇಲೆ ನಿಯಂತ್ರಣ ಸಾಧಿಸದೇ ಇದ್ದಲ್ಲಿ
ಲಕ್ಷಾಂತರ ಮಂದಿ ಸಾಯುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ವೈರಸ್ ಸಮರದ ಭಾಗವಾಗಿ
ಪ್ರಧಾನಿ ಮೋದಿ ಅವರು ಕರೆ ನೀಡಿರುವ ಮಾರ್ಚ್ ೨೨ರ ಜನತಾ ಕರ್ಫ್ಯೂವಿಗೆ ಲೋಕಸಭೆಯಲ್ಲಿ ಸರ್ವಪಕ್ಷಗಳ
ಸದಸ್ಯರು ಬೆಂಬಲ ನೀಡಿದ್ದನ್ನು ಉಲ್ಲೇಖಿಸಿದ ಲೋಕಸಭಾಧ್ಯಕ್ಷ ಓಂ ಬಿರ್ಲಾ, ಆಪತ್ಕಾಲದಲ್ಲಿ ಪ್ರಧಾನಿ
ಮೋದಿ ಕರೆಗೆ ಓಗೊಟ್ಟ ಸಂಸದರಿಗೆ ಧನ್ಯವಾದ ಎಂದು ಹೇಳಿದರು. ಅಲ್ಲದೇ ಒಂದು ನಿರ್ದಿಷ್ಟ ವಿಷಯದ ಮೇಲೆ
ಇಡೀ ಸದನ ಒಂದಾಗುವುದು ಪ್ರಜಾಪ್ರಭುತ್ವದ ಗೆಲುವು ಎಂದು ಸಂತಸ ವ್ಯಕ್ತಪಡಿಸಿದರು.
ಇದೇ ವೇಳೆ ದೇಶದಲ್ಲಿ ಐವರನ್ನು
ಬಲಿ ತೆಗೆದುಕೊಂಡಿರುವ ಮಾರಕ ಕೊರೋನಾ ವೈರಾಣು ಸೋಂಕು ನಿಯಂತ್ರಣಕ್ಕೆ ಲೋಕಸಭಾ ಸದಸ್ಯರು ಅಗತ್ಯ ಶ್ರಮ
ವಹಿಸಲಿದ್ದಾರೆ ಎಂದು ಓಂ ಬಿರ್ಲಾ ಭರವಸೆ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿಯವರ ಉದ್ದೇಶಿತ ಜನತಾ
ಕರ್ಫ್ಯೂವಿಗೆ ಲೋಕಸಭೆ ಸಹಕರಿಸಿದ್ದು, ಎಲ್ಲಾ ವಿಪಕ್ಷ ನಾಯಕರೂ ಸಹ ಜನತಾ ಕರ್ಫ್ಯೂನಲ್ಲಿ ಭಾಗವಹಿಸುವ
ಭರವಸೆ ನೀಡಿದ್ದಾರೆ ಎಂದು ಓಂ ಬಿರ್ಲಾ ಸದನಕ್ಕೆ ಮಾಹಿತಿ ನೀಡಿದರು.
ಸಂಕಷ್ಟದ ಸಮಯದಲ್ಲಿ ಒಗ್ಗಟ್ಟು
ಪ್ರದರ್ಶಿಸುವುದೇ ಭಾರತದ ಪ್ರಜಾಪ್ರಭುತ್ವ ವಿಶೇಷ ಗುಣ. ಜಗತ್ತನ್ನು ವ್ಯಾಪಿಸುತ್ತಿರುವ ಸೋಂಕನ್ನು
ನಾವು ಧೈರ್ಯದಿಂದ ಎದುರಿಸಲೇಬೇಕು ಎಂದು ಓಂ ಬಿರ್ಲಾ ಘೋಷಿಸಿದರು.
ಬೆಂಗಳೂರು, ದೆಹಲಿ, ಜೈಪುರ ಮೆಟ್ರೋ
ಬಂದ್
ಪ್ರಧಾನಿ ಕರೆ ನೀಡಿರುವ ಜನತಾ ಕರ್ಫ್ಯೂವಿಗೆ
ಬೆಂಬಲ ವ್ಯಕ್ತ ಪಡಿಸಿ ಭಾನುವಾರ ತನ್ನ ಸೇವೆಗಳನ್ನು ಬಂದ್ ಮಾಡುವುದಾಗಿ ಬೆಂಗಳೂರು ಮೆಟ್ರೋ, ದೆಹಲಿ
ಮೆಟ್ರೋ, ಜೈಪುರ ಮೆಟ್ರೋ ಸೇರಿದಂತೆ ವಿವಿಧ ಮೆಟ್ರೋ ಸಾರಿಗೆ ಸಂಸ್ಥೆಗಳು ಶುಕ್ರವಾರ ಪ್ರಕಟಿಸಿದವು.
ಕೇರಳದಲ್ಲಿ ಇನ್ನೂ ೧೨ ಮಂದಿಗೆ
ಸೋಂಕು
ಕೇರಳದ ಎರ್ನಾಕುಲಂನಲ್ಲಿ ೫, ಕಾಸರಗೋಡಿನಲ್ಲಿ
೬ ಮತ್ತು ಪಾಲಕ್ಕಾಡಿನಲ್ಲಿ ೧ ಪ್ರಕರಣ ಹೊಸದಾಗಿ ಪತ್ತೆಯಾಗುವುದರೊಂದಿಗೆ ಕೇರಳದಲ್ಲಿ ಇನ್ನೂ ೧೨ ಮಂದಿಗೆ
ಕೊರೋನಾವೈರಸ್ ಬಾಧಿಸಿದೆ. ರಾಜ್ಯದಲ್ಲಿ ಈಗಾಗಲೇ ಒಟ್ಟು ೪೦ ಮಂದಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ
ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಅಮೆರಿಕದಿಂದ ಎಲ್ಲ ವೀಸಾ ರದ್ದು
ಕೊರೋನಾವೈರಸ್ ವ್ಯಾಪಕಗೊಳ್ಳುತ್ತಿರುವ
ಹಿನ್ನೆಲೆಯಲ್ಲಿ ಅಮೆರಿಕವು ವಿಶ್ವಾದ್ಯಂತದ ತನ್ನ ಎಲ್ಲ ವೀಸಾ ಸೇವೆಗಳನ್ನೂ ರದ್ದು ಪಡಿಸುತ್ತಿರುವುದಾಗಿ
ಅಮೆರಿಕ ಶುಕ್ರವಾರ ಪ್ರಕಟಿಸಿತು.
ಸಾಕಷ್ಟು ಸಿಬ್ಬಂದಿ ಇದ್ದಲ್ಲಿ
ತುರ್ತು ವೀಸಾ ನೀಡುವ ಬಗ್ಗೆ ಪರಿಗಣಿಸಬಹುದು ಎಂದು ವಿದೇಶಾಂಗ ಇಲಾಖೆಯು ಅಮೆರಿಕದ ರಾಯಭಾರ ಕಚೇರಿಗಳು
ಮತ್ತು ರಾಜತಾಂತ್ರಿಕರಿಗೆ ಕಳುಹಿಸಿದ ಪ್ರಯಾಣಿಕ ಮಾರ್ಗದರ್ಶನದಲ್ಲಿ ತಿಳಿಸಿತು.
ಸಿಂಗಾಪುರದಲ್ಲಿ ಹೊಸ ಸೋಂಕು
ಸಿಂಗಾಪುರದಲ್ಲಿ ೩೦ ಆಮದು ಸೋಂಕು
ಸೇರಿದಂತೆ ೪೦ ಹೊಸ ಕೊರೋನಾವೈರಸ್ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ದ್ವೀಪರಾಷ್ಟ್ರದ ಕೋವಿಡ್-೧೯
ಪ್ರಕರಣಗಳ ಸಂಖ್ಯೆ ೩೮೫ಕ್ಕೆ ಏರಿತು.
ಬಹುತೇಕ ಆಮದು ಸೋಂಕು ಪ್ರಕರಣಗಳು
ಇಂಗ್ಲೆಂಡ್, ಇಂಡೋನೇಶ್ಯಾ ಮತ್ತು ಅಮೆರಿಕಕ್ಕೆ ಪ್ರಯಾಣ ಮಾಡಿದವರಿಂದ ಬಂದಿವೆ. ಅವರ ಪೈಕಿ ೨೨ ಮಂದಿ
ಸಿಂಗಾಪುರ ನಾಗರಿಕರು ಇಲ್ಲಿನ ಕಾಯಂ ನಿವಾಸಿಗಳು, ಇತರ ೭ ಮಂದಿ ದೀರ್ಘಕಾಲೀನ ಪಾಸ್ ಹೊಂದಿರುವವರು,
ಹೊಸ ರೋಗಿಗಳ ಪೈಕಿ ಒಬ್ಬ ಅಲ್ಪಾವಧಿಯ ಸಂದರ್ಶನ ಪಾಸ್ ಹೊಂದಿದ್ದಾರೆ ಎಂದು ಸಿಂಗಾಪುರ ಸರ್ಕಾರಿ ಮೂಲಗಳು
ಹೇಳಿವೆ.
ರಾಜಸ್ಥಾನದಲ್ಲಿ ೮ ಹೊಸ ಪ್ರಕರಣ
ರಾಜಸ್ಥಾನದಲ್ಲಿ ಎಂಟು ಹೊಸ ಕೊರೋನಾವೈರಸ್
ಸೋಂಕು ಪ್ರಕರಣಗಳು ಶುಕ್ರವಾರ ಒಂದೇ ದಿನ ವರದಿಯಾಗಿದೆ. ಇವರ ಪೈಕಿ ಒಬ್ಬ ವ್ಯಕ್ತಿ ಅಮೆರಿಕದಿಂದ ವಾಪಸಾಗಿರುವ
ಬಾಲಕಿ ಎಂದು ವರದಿ ತಿಳಿಸಿತು.
ಈ ಮಧ್ಯೆ, ತೆಲಂಗಾಣದ ಎಂಎಎನ್‌ಎನ್‌ಯು
ವಿಶ್ವ ವಿದ್ಯಾಲಯ ಆವರಣವನ್ನು ಕೋವಿಡ್-೧೯ಕ್ಕಾಗಿ ಏಕಾಂಗಿವಾಸದ ಕೇಂದ್ರವಾಗಿ ಮಾರ್ಪಡಿಸಲು ಪಡೆದುಕೊಳ್ಳಲಾಗಿದೆ.
ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳನ್ನು ಮನೆಗಳಿಗೆ ಕಳುಹಿಸಲಾಗಿದೆ. ಉಪಕುಲಪತಿಯವರು ಜಿಲ್ಲಾಧಿಕಾರಿ
ರಂಗಾರೆಡ್ಡಿ ಅವರನ್ನು ಭೇಟಿ ರಾಷ್ಟ್ರೀಯ ವಿಪತ್ತಿನ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕಾಗಿ ಒದಗಿಸುವ
ಬಗ್ಗೆ ಮಾತುಕತೆ ನಡೆಸಿದರು ಎಂದು ಮೂಲಗಳು ಹೇಳಿವೆ.
ವಸುಂಧರಾ ರಾಜೆ ಸೇರಿ ೩ ರಾಜಕಾರಣಿಗಳಿಗೆ
ಏಕಾಂಗಿವಾಸ
ಲಕ್ನೋದಲ್ಲಿ ನಡೆದಿದ್ದ ಭೋಜನಕೂಟಕ್ಕೆ
ತಾನು ಹಾಜರಾಗಿದ್ದುದಾಗಿ ಹೇಳಿರುವ ಗಾಯಕಿ ಕನಿಕಾ ಕಪೂರ್ ಅವರು ತನಗೆ ಕೊರೋನಾವೈರಸ್ ಸೋಂಕು ತಗುಲಿರುವುದಾಗಿ
ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ ಬಳಿಕ ರಾಜಕಾರಣಿಗಳ ವಲಯದಲ್ಲಿ ತೀವ್ರ ಕಳವಳ ವ್ಯಕ್ತವಾಯಿತು.
ಬಿಜೆಪಿಯ ನಾಯಕಿ ವಸುಂಧರಾ ರಾಜೆ
ಮತ್ತು ಆಕೆಯ ಪುತ್ರ ಸಂಸತ್ ಸದಸ್ಯ ದುಷ್ಯಂತ ಸಿಂಗ್ ಕೂಡಾ ಈ ಭೋಜನ ಕೂಟಕ್ಕೆ ಹಾಜರಾಗಿದ್ದು ತಾವು
ಸ್ವ ಇಚ್ಛೆಯಿಂದ ಏಕಾಂಗಿ ವಾಸಕ್ಕೆ ತೆರಳಿರುವುದಾಗಿ ಪ್ರಕಟಿಸಿದ್ದಾರೆ. ಇವರಿಬ್ಬರಿಗೂ ಪರೀಕ್ಷೆಯಲ್ಲಿ
ಕೊರೋನಾವೈರಸ್ ಸೋಂಕು ಕಂಡು ಬಂದಿಲ್ಲ ಎಂದು ವರದಿಗಳು ಹೇಳಿವೆ. ರಾಜಸ್ಥಾನದ ಮಾಜಿ ಮುಖ್ಯಮಂತ್ರಿಯಾಗಿರುವ
ವಸುಂಧರಾ ರಾಜೇ ಅವರು ಎಚ್ಚರಿಕೆಯ ಕ್ರಮವಾಗಿ ನಾವಿಬ್ಬರೂ ಏಕಾಂಗಿ ವಾಸಕ್ಕೆ ತೆರಳಿದ್ದೇವೆ ಎಂದು ಟ್ವೀಟ್
ಮಾಡಿದರು.
ಸಂಸತ್ ಸದಸ್ಯ ದುಷ್ಯಂತ ಸಿಂಗ್
ಅವರು ಸದರಿ ಭೋಜನಕೂಟದಲ್ಲಿ ಪಾಲ್ಗೊಂಡ ಬಳಿಕ ಸಂಸತ್ತಿಗೂ ಹಾಜರಾಗಿದ್ದರು. ಇದಕ್ಕೆ ತೀವ್ರ ಕೋಪ ವ್ಯಕ್ತ
ಪಡಿಸಿ ಟ್ವೀಟ್ ಮಾಡಿರುವ ತೃಣಮೂಲ ಕಾಂಗ್ರೆಸ್ ಸದಸ್ಯ ಡೆರೆಕ್ ಒ’ಬ್ರಿಯನ್ ಅವರು ಕೋವಿಡ್-೧೯ ಸಲುವಾಗಿ
ಸಂಸತ್ತನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಒ’ಬ್ರಿಯನ್ ಅವರೂ ಸ್ವಯಂ ಇಚ್ಛೆಯಿಂದ ಏಕಾಂಗಿವಾಸಕ್ಕೆ
ತೆರಳಿದ್ದಾರೆ.
’ಸರ್ಕಾರವು ಎಲ್ಲರನ್ನೂ ಅಪಾಯಕ್ಕೆ
ಸಿಲುಕಿಸುತ್ತಿದೆ. ಪ್ರಧಾನಿಯವರು ಸ್ವತಃ ಏಕಾಂಗಿವಾಸಕ್ಕೆ ಸಲಹೆ ಮಾಡುತ್ತಿದ್ದಾರೆ. ಆದರೆ ಸಂಸತ್ತು
ನಡೆಯುತ್ತಿದೆ. ನಾನು ಆದಿನ ದುಷ್ಯಂತ ಪಕ್ಕ ೨-೫ ಗಂಟೆ
ಕಾಲ ಕುಳಿತಿದ್ದೆ. ಅಲ್ಲಿ ಇಬ್ಬರಿಗಿಂತ ಹೆಚ್ಚು ಸಂಸದರಿದ್ದರು. ಅವರೂ ಸ್ವಯಂ ಏಕಾಂಗಿವಾಸಕ್ಕೆ ತೆರಳಿದ್ದಾರೆ.
ಸಂಸತ್ ಅಧಿವೇಶವನ್ನು ಮುಂದೂಡಬೇಕು’ ಎಂದು ಒ’ಬ್ರಿಯನ್ ಟ್ವೀಟ್ ಮಾಡಿದರು.
ಕನಿಕಾ ಕಪೂರ್ ಅವರು ಭೋಜನಕೂಟವನ್ನು
ತಾನು ಏರ್ಪಡಿಸಿದ್ದು ಎಂಬ ಮಾಧ್ಯಮ ವರದಿಗಳನ್ನು ತಿರಸ್ಕರಿಸಿದ್ದಾರೆ. ಸಚಿವರು ಮತ್ತು ಅಧಿಕಾರಿಗಳು ಸೇರಿದಂತೆ ಲಕ್ನೋದ ಇತರ ಗಣ್ಯರಂತೆಯೇ
ನಾನೂ ಪಾಲ್ಗೊಂಡಿದ್ದೆ ಎಂದು ಅವರು ಹೇಳಿದ್ದಾರೆ. ಭೋಜನಕೂಟದಲಿ ಸುಮಾರು ೨೦೦ ಮಂದಿ ಇದ್ದರು ಎನ್ನಲಾಗಿದೆ.
ಕನಿಕಾ ಕಪೂರ್ ಅವರು ಮಾರ್ಚ್ ೯ರಂದು ಲಂಡನ್ನಿನಿಂದ ಬಂದಿದ್ದು ಎರಡು ದಿನಗಳ ಬಳಿಕ ಲಕ್ನೋಗೆ ತೆರಳಿದ್ದರು.
ಚೀನಾದಲ್ಲಿ ಹೊಸ ಪ್ರಕರಣಗಳಿಲ್ಲ
ಕೊರೋನಾಸೋಂಕು ಸ್ಫೋಟದ ಬಳಿಕ ಇದೇ
ಮೊತ್ತ ಮೊದಲ ಬಾರಿಗೆ ಚೀನಾದಲ್ಲಿ ದೇಶದ ಒಳಗೆ ಯಾವುದೇ ಕೊರೋನಾಸೋಂಕು ತಗುಲಿದ ಹೊಸ ಪ್ರಕರಣಗಳು ವರದಿಯಾಗಿಲ್ಲ
ಎಂದು ಚೀನಾ ತಿಳಿಸಿದೆ. ವಿಶ್ವಾದ್ಯಂತ ಹರಡುವ ಮುನ್ನ ಚೀನಾದ ವುಹಾನ್ ನಗರದಲ್ಲೇ ಮೊತ್ತ ಮೊದಲಿಗೆ
ಡಿಸೆಂಬರ್ ತಿಂಗಳಲ್ಲಿ ವೈರಸ್ ಸೋಂಕು ಕಂಡು ಬಂದಿತ್ತು.
No comments:
Post a Comment