Monday, March 16, 2020

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ೮ಕ್ಕೆ ಏರಿಕೆ

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ೮ಕ್ಕೆ ಏರಿಕೆ
ವಿಧಾನಸೌಧಕ್ಕೂ ಬಿಸಿ, ಕಲ್ಬುರ್ಗಿಯಲ್ಲಿ ತಿಂಗಳ ಕಾಲಅಘೋಷಿತ ಬಂದ್
ಬೆಂಗಳೂರು: ದೇಶದಲ್ಲಿ ಕೊರೊನ ವೈರಸ್ ಸೋಂಕಿತರ ಸಂಖ್ಯೆ ೧೧೯ಕ್ಕೆ ತಲುಪಿರುವುದರ ನಡುವೆಯೇ ರಾಜ್ಯದಲ್ಲಿಯೂ ಕೊರೊನಾ ಸೋಂಕಿತರ ಸಂಖ್ಯೆ 2020 ಮಾರ್ಚ್  16ರ ಸೋಮವಾರ ೮ಕ್ಕೆ ಏರಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

2020 ಮಾರ್ಚ್  16ರ ಸೋಮವಾರ  ಕೂಡಾ ಒಬ್ಬ ವ್ಯಕ್ತಿಗೆ ಸೋಂಕು ತಗುಲಿದ ಪ್ರಕರಣ ಬೆಳಕಿಗೆ ಬಂದಿದ್ದು, ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ೮ಕ್ಕೆ ಏರಿದಂತಾಯಿತು.

ಕಲಬುರಗಿಯಲ್ಲಿ ಶನಿವಾರ ಮತ್ತೊಂದು ಪ್ರಕರಣ ಪತ್ತೆಯಾಗುವ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ ೭ಕ್ಕೆ ಏರಿತ್ತು. ಇದೀಗ ೮ಕ್ಕೆ ಏರಿಕೆಯಾಗಿದೆ. ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಸಚಿವ ಸುಧಾಕರ್ ತಿಳಿಸಿದ್ದಾರೆ.

ಅಮೆರಿಕದಿಂದ ಬಂದಿದ್ದ ವ್ಯಕ್ತಿಯ ಸಹೋದ್ಯೋಗಿಯನ್ನು ಪರೀಕ್ಷಿಸಿದಾಗ ಕೊರೊನಾ ವೈರಸ್ ಸೋಂಕು ತಗುಲಿದ್ದು ದೃಢಪಟ್ಟಿರುವ ವರದಿ ಬಂದಿದ್ದು, ವ್ಯಕ್ತಿಯನ್ನು ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವರು ವಿವರಿಸಿದರು.

ಬೆಂಗಳೂರಿನ ೩೨ ವರ್ಷದ ಸಾಫ್ಟವೇರ್ ಎಂಜಿಯರ್ ಇದೇ ಮಾರ್ಚ್ ೮ರಂದು ಅಮೆರಿಕದಿಂದ ಲಂಡನ್ ಮೂಲಕ ಬೆಂಗಳೂರಿಗೆ ಬಂದಿದ್ದರು. ಇದೇ ವಿಮಾನದಲ್ಲಿ ಈಗಾಗಲೇ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ರಾಜ್ಯದ ಮತ್ತೊಬ್ಬರು ಇದ್ದರು.

ಮನೆಯಲ್ಲಿಯೇ ತೀವ್ರ ನಿಗಾಕ್ಕೆ ಒಳಪಟ್ಟಿದ್ದ ಸಾಫ್ಟವೇರ್ ಎಂಜಿನಿಯರರನ್ನು ಪ್ರಸ್ತುತ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಲಾಗಿದೆ. ಪತ್ನಿ ಮತ್ತು ಮನೆ ಕೆಲಸದವರು ಅವರೊಂದಿಗೆ ಪ್ರತ್ಯಕ್ಷ, ಪರೋಕ್ಷವಾಗಿ ಸಂಪರ್ಕಕ್ಕೆ ಬಂದಿದ್ದಾರೆ. ಸಾಫ್ಟವೇರ್ ಎಂಜಿನಿಯರ್ ಸಂಪರ್ಕಕ್ಕೆ ಯಾರ್ಯಾರು ಬಂದಿದ್ದರೋ ಅವರನ್ನು ಪತ್ತೆ ಹಚ್ಚುವ ಕಾರ್ಯ ಆರಂಭವಾಗಿದೆ. ಹೆಚ್ಚಿನ ಮಾಹಿತಿ ಸರ್ಕಾರದಿಂದ ನಾಳೆ ಹೊರಬೀಳಲಿದೆ ಎಂದು ಸುದ್ದಿ ಮೂಲಗಳು ತಿಳಿಸಿದವು.

ವಿಧಾನಸೌಧಕ್ಕೂ ಬಿಸಿ: ಕೊರೊನಾ ಆತಂಕ ವಿಧಾನಸೌಧಕ್ಕೂ ತಟ್ಟಿದ್ದು, ವಿಧಾನಸಭೆ ಕಲಾಪ ವೀಕ್ಷಿಸಲು ಬರುವ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಯಿತು.

ಮಾರ್ಚ್ ೧೭ ರಿಂದ ೨೦ ರವರೆಗೆ ವಿಧಾನಸಭಾಧ್ಯಕ್ಷರ ಗ್ಯಾಲರಿ ಹಾಗೂ ಸಾರ್ವಜನಿಕರ ಗ್ಯಾಲರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಸೋಮವಾರ ಸದನದಲ್ಲಿ ಕುರಿತು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಕಟಣೆ ಹೊರಡಿಸಿದ್ದು, ಕೊರೊನಾ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ಗ್ಯಾಲರಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಶಾಸಕರು ಹಾಗೂ ಸಚಿವರು ಸಹ ಗ್ಯಾಲರಿ ಪ್ರವೇಶ ಕೋರಿ ಮನವಿ ಸಲ್ಲಿಸಬಾರದು. ಪಾಸ್ ಸಹ ವಿತರಿಸಬಾರದು ಎಂದು ಹೇಳಿದರು.

ಕಲಬುರ್ಗಿ ಅಘೋಷಿತ ಬಂದ್ ಮುಂದುವರಿಕೆ: ಮಧ್ಯೆ, ಕೊರೋನಾದಿಂದ ಮೃತರಾದ ವೃದ್ಧನ ಇಬ್ಬರು ಸಂಬಂಧಿಕರು ಹಾಗೂ ಸೌದಿಯಿಂದ ಬಂದ ಚಿತ್ತಾಪೂರ ತಾಲೂಕಿನ ಓರ್ವ ಮತ್ತು ದುಬೈಯಿಂದ ಬಂದ ಚಿಂಚೋಳಿ ತಾಲೂಕಿನ ಓರ್ವನಿಗೆ ಕೊರೋನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ನಾಲ್ವರನ್ನು ಇಎಸ್ ಆಸ್ಪತ್ರೆಯ ಪ್ರತ್ಯೇಕ ವಾರ್ಡಿನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಮತ್ತು ನಾಲ್ವರಿಗೆ ಕೊರೋನಾ ತಗುಲಿದ ಶಂಕೆ ಮೂಡಿರುವ ಹಾಗೂ ಅವರ ಗಂಟಲ ದ್ರವ ಮಾದರಿಯನ್ನು ಲ್ಯಾಬ್ ಪರೀಕ್ಷೆಗಾಗಿ ಕಳುಹಿಸಲಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮುಂದಿನ ಒಂದು ತಿಂಗಳ ಕಾಲ ಅಘೋಷಿತ ಬಂದ್ ಮುಂದುವರೆಯಲಿದೆ ಎಂದು ಜಿಲ್ಲಾಧಿಕಾರಿ ಬಿ ಶರದ್ ಹೇಳಿದ್ದಾರೆ.

No comments:

Advertisement