ಬಾಲಿವುಡ್ ಗಾಯಕಿ ಕನಿಕಾ ಕಪೂರ್ಗೆ ೪ನೇ ಬಾರಿ ಕೊರೋನಾವೈರಸ್ ಪಾಸಿಟಿವ್
ನವದೆಹಲಿ: ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಅವರಿಗೆ ಸತತ ನಾಲ್ಕನೇ ಬಾರಿ ನಡೆಸಿದ ಪರೀಕ್ಷೆಯಲ್ಲಿ ಕೂಡಾ ಕೊರೋನಾವೈರಸ್ ಸೋಂಕು ದೃಢಪಟ್ಟಿದ್ದು, ಇದು ಆಕೆಯ ಕುಟುಂಬ ಸದಸ್ಯರನ್ನು ತೀವ್ರ ಚಿಂತೆಗೆ ಈಡು ಮಾಡಿದೆ.
ಮಾರ್ಚ್ ೯ರಂದು ಲಂಡನ್ನಿನಿಂದ ವಾಪಸಾಗಿದ್ದ ಕನಿಕಾ ಕಪೂರ್ ಅವರನ್ನು ಮಾರ್ಚ್ ೨೦ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಆಕೆಗೆ ಕೊರೋನಾವೈರಸ್ ಸೋಂಕು ತಗುಲಿದ್ದು ಪರೀಕ್ಷೆಯಿಂದ ಖಚಿತವಾಗಿತ್ತು. ಲಂಡನ್ನಿನಿಂದ ವಾಪಸಾದ ಬಳಿಕ ಕನಿಕಾ ಕಪೂರ್ ಕಾನ್ಪುರ ಮತ್ತು ಲಕ್ನೋಗೆ ಪಯಣಿಸಿದ್ದರು ಮತ್ತು ಲಕ್ನೋದಲ್ಲಿ ಇದ್ದಾಗ ಅವರಿಗೆ ಕೆಮ್ಮು ಮತ್ತು ಜ್ವರ ಕಾಣಿಸಿಕೊಂಡಿತ್ತು.
ವಿವಿಧ ಸಭೆಗಳಲ್ಲಿ ಪಾಲ್ಗೊಂಡು ಇತರ ಹಲವರಿಗೆ ವೈರಸ್ ಹರಡಿದ್ದಕ್ಕಾಗಿ ಮಾಧ್ಯಮಗಳು ಕನಿಕಾ ಕಪೂರ್ ಅವರನ್ನು ಕೊರೋನಾವೈರಸ್ ಖಚಿತವಾದ ಬಳಿಕ ಟೀಕಿಸಿದ್ದವು. ಏನಿದ್ದರೂ ಆಕೆಯ ಸಂಪರ್ಕಕ್ಕೆ ಬಂದಿದ್ದ ಯಾರಿಗೂ ಕೊರೋನಾವೈರಸ್ ಸೋಂಕು ತಗುಲಿದ ಬಗ್ಗೆ ಈವರೆಗೆ ವರದಿಗಳು ಬಂದಿಲ್ಲ.
ಪ್ರಸ್ತುತ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಎಸ್ಜಿಪಿಜಿಐಎಂಎಸ್) ದಾಖಲಾಗಿರುವ ಕನಿಕಾ ಕಪೂರ್ ಅವರನ್ನು ಆಸ್ಪತ್ರೆ ಆಡಳಿತ ಕೂಡಾ ’ತಾರಾ ವರ್ತನೆ’ಗಾಗಿ ಟೀಕಿಸಿದೆ.
ಈ ಮಧ್ಯೆ, ಹೆಸರು ಹೇಳಲು ಇಚ್ಛಿಸದ ಕನಿಕಾ ಕುಟುಂಬದ ಒಬ್ಬ ಸದಸ್ಯರು ’ಪರೀಕ್ಷಾ ವರದಿಗಳಿಂದ ನಮಗೆ ಚಿಂತೆಯಾಗಿದೆ. ಕನಿಕಾ ಅವರು ಬಹುಶಃ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲವೇನೋ ಎಂದು ನಮಗೆ ಅನಿಸುತ್ತಿದೆ. ರಾಷ್ಟ್ರವ್ಯಾಪಿ ದಿಗ್ಬಂಧನದ ಕಾರಣ ಅತ್ಯಾಧುನಿಕ ಚಿಕಿತ್ಸೆಗಾಗಿ ಅವರನ್ನು ವಿಮಾನದಲ್ಲಿ ಒಯ್ಯಲೂ ನಮಗೆ ಸಾಧ್ಯವಾಗುತ್ತಿಲ್ಲ. ಆಕೆ ಚೇತರಿಸಲಿ ಎಂದು ಪ್ರಾರ್ಥಿಸುವುದಷ್ಟೇ ನಮ್ಮ ಪಾಲಿಗೆ ಉಳಿದಿದೆ’ ಎಂದು ಹೇಳಿದರು.
ಆದಾಗ್ಯೂ, ಎಸ್ಜಿಪಿಜಿಐಎಂಎಸ್ ಆಸ್ಪತ್ರೆಯ ವೈದ್ಯರು ಗಾಯಕಿಯ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ.
No comments:
Post a Comment