ಜೂನ್ 1ರಂದು
ಕೇರಳಕ್ಕೆ ಮುಂಗಾರು ಪ್ರವೇಶ, ಈ ವರ್ಷ ಸಹಜ ಮಳೆ
ನವದೆಹಲಿ:
ಭಾರತದಲ್ಲಿ ಈ ವರ್ಷ ಮಾಮೂಲಿ ಮುಂಗಾರು ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ 2020
ಏಪ್ರಿಲ್ 15ರ ಬುಧವಾರ ಬಿಡುಗಡೆ ತಿಳಿಸಿತು. ಕೋವಿಡ್-೧೯ ದಿಗ್ಬಂಧನದಿಂದ (ಲಾಕ್ ಡೌನ್) ನಲುಗುತ್ತಿರುವ
ರೈತರ ಪಾಲಿಗೆ ಈ ಸುದ್ದಿ ಹರ್ಷವನ್ನು ಉಂಟು ಮಾಡಲಿದೆ.
‘ಈ ವರ್ಷ ನಾವು
ಮಾಮೂಲಿ ಮುಂಗಾರು ಮಳೆಯನ್ನು ಪಡೆಯಲಿದ್ದೇವೆ. ೨೦೨೦ರ ಮುಂಗಾರು ಋತುವಿನಲ್ಲಿ ಶೇಕಡಾ ೧೦೦ರಷ್ಟು ಮಳೆ
ಸುರಿಯವ ನಿರೀಕ್ಷೆಯಿದೆ. ಈ ಲೆಕ್ಕಾಚಾರದಲ್ಲಿ ಶೇಕಡಾ ೫ರಷ್ಟು ಹೆಚ್ಚು ಕಡಿಮೆ ಆಗಬಹುದಷ್ಟೆ’ ಎಂದು ಭೂ ವಿಜ್ಞಾನ ಸಚಿವಾಲಯದ (ಎಂಒಇಎಸ್) ಕಾರ್ಯದರ್ಶಿ ಮಾಧವನ್
ರಾಜೀವನ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಇದು ನಿಜವಾಗಿಯೂ
ನಮಗೆಲ್ಲರಿಗೂ ಸಂತಸದ ಸುದ್ದಿ. ಇದು ನಿಜವಾಗಿಯೂ ನಮ್ಮ ಕೃಷಿ ರಂಗಕ್ಕೆ ನೆರವಾಗಲಿದ್ದು ಈ ವರ್ಷ ಉತ್ತಮ
ಫಸಲು ಬರಬಹುದು. ಇದು ಖಂಡಿತವಾಗಿ ನಮ್ಮ ಆರ್ಥಿಕತೆಗೆ ನೆರವಾಗಲಿದೆ’ ಎಂದು
ಅವರು ಹೇಳಿದರು.
ನೈಋತ್ಯ ಮುಂಗಾರು
(ಜೂನ್-ಸೆಪ್ಟೆಂಬರ್) ಅವಧಿಯ ಮಳೆಯ ಕುರಿತ ತನ್ನ ಮೊದಲ ದೀರ್ಘ ವಲಯದ ಹವಾಮಾನ ಭವಿಷ್ಯದಲ್ಲಿ (ಎಲ್‌ಆರ್‌ಎಫ್) ಹವಾಮಾನ ಬ್ಯೂರೋ ಹಲವಾರು ಸ್ಥಳಗಳಲ್ಲಿ
ಮುಂಗಾರು ಆರಂಭವಾಗುವ ದಿನಾಂಕಗಳನ್ನು ಕೂಡಾ ನೀಡಿದೆ.
ವರದಿಯ ಪ್ರಕಾರ
ಕೇರಳಕ್ಕೆ ಮುಂಗಾರು ಮಾಮೂಲಿಯಾಗಿ ಜೂನ್ ೧ರಂದೇ ಆಗಮಿಸಲಿದೆ ಎಂದು ಅಧಿಕಾರಿ ನುಡಿದರು. ಚೆನ್ನೈಗೆ
ಜೂನ್ ೪ರಂದು, ಪಂಜಿಮ್‌ಗೆ ಜೂನ್ ೭ರಂದು, ಹೈದರಾಬಾದಿಗೆ ಜೂನ್ ೮ರಂದು, ಪುಣೆಗೆ ಜೂನ್ ೧೦ರಂದು ಮತ್ತು
ಮುಂಬೈಗೆ ಜೂನ್ ೧೧ರಂದು ಮುಂಗಾರು ಪ್ರವೇಶವಾಗಲಿದೆ.
ರಾಷ್ಟ್ರದ
ರಾಜಧಾನಿ ದೆಹಲಿಯನ್ನು ಮುಂಗಾರು ಜೂನ್ ೨೭ರಂದು ತಲುಪಲಿದೆ ಎಂದು ವರದಿ ಹೇಳಿದೆ.
ಮೊದಲ ದೀರ್ಘ
ವಲಯ ಭವಿಷ್ಯವು ಹವಾಮಾನ ಇಲಾಖೆಯು ನೀಡುವ ಜೂನ್- ಸೆಪ್ಟೆಂಬರ್ ನಡುವಣ ಇಡೀ ರಾಷ್ಟ್ರದ ಮುಂಗಾರು ಋತುವಿನ
ವರದಿಯಾಗಿದೆ. ಇದರಲ್ಲಿ ಪ್ರಾದೇಶಿಕ ಮಳೆಯ ಮಟ್ಟ ಅಥವಾ ಮಳೆಯ ನಿರ್ದಿಷ್ಟ ಪ್ರಮಾಣದ ವಿವರ ಸೇರ್ಪಡೆಯಾಗಿಲ್ಲ.
ಹವಾಮಾನ ಇಲಾಖೆಯು
ಎರಡು ಹಂತಗಳಲ್ಲಿ ದೀರ್ಘ ವಲಯ ಭವಿಷ್ಯವನ್ನು ನೀಡುತ್ತದೆ. ಮೊದಲ ಭವಿಷ್ಯವನ್ನು ಏಪ್ರಿಲ್ ತಿಂಗಳಲ್ಲಿ
ಮತ್ತು ಎರಡನೇ ಭವಿಷ್ಯವನ್ನು ಜೂನ್ ತಿಂಗಳಲ್ಲಿ ನೀಡುತ್ತದೆ.
ಅಂಕಿಸಂಖ್ಯೆ
ಆಧಾರಿತ ಸಮಗ್ರ ಭವಿಷ್ಯ ವ್ಯವಸ್ಥೆಯನ್ನು ಬಳಸಿಕೊಂಡು ಮತ್ತು ಸಮುದ್ರದ ಪರಿಸರವನ್ನು ಆಧರಿಸಿ ಈ ಭವಿಷ್ಯಗಳನ್ನು
ನೀಡಲಾಗುತ್ತದೆ.
ಭಾರತವು ತನ್ನ
ವಾರ್ಷಿಕ ಮಳೆಯ ಶೇಕಡಾ ೭೦ರಷ್ಟನ್ನು ಜೂನ್ ತಿಂಗಳಲ್ಲಿ ಆರಂಭವಾಗಿ ಸೆಪ್ಟೆಂಬರ್‌ಗೆ ಮುಕ್ತಾಯವಾಗುವ
ಮುಂಗಾರು ಋತುವಿನಲ್ಲೇ ಪಡೆಯುತ್ತದೆ.
ಮುಂಗಾರು ಮಳೆಯು
ದೇಶದಲ್ಲಿ ಅಕ್ಕಿ (ಬತ್ತ), ಗೋಧಿ, ಕಬ್ಬು ಮತ್ತು ತೈಲಬೀಜಗಳ ವ್ಯವಸಾಯಕ್ಕೆ ನಿರ್ಣಾಯಕವಾಗಿದೆ. ದೇಶದ
ಆರ್ಥಿಕತೆಯ ಶೇಕಡಾ ೧೫ರಷ್ಟು ವ್ಯವಸಾಯದ ಪಾಲು ಪಡೆಯುತ್ತಿದ್ದು, ದೇಶದ ಜನಸಂಖ್ಯೆಯ ಅರ್ಧದಷ್ಟು ಮಂದಿಗೆ
ವ್ಯವಸಾಯವೇ ಉದ್ಯೋಗ ಒದಗಿಸುತ್ತದೆ.
No comments:
Post a Comment