ಉದ್ದವ್ ಠಾಕ್ರೆ ಭದ್ರತಾ ತಂಡದ ೧೬೦ ಸಿಬ್ಬಂದಿಗೆ ಏಕಾಂಗಿವಾಸ
ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಭದ್ರತಾ ತಂಡದ ೧೬೦ ಮಂದಿ ಸದಸ್ಯರನ್ನು ಬಾಂದ್ರಾ ಪೂರ್ವದಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು ಅವರ ಗಂಟಲ ದ್ರವದ ಮಾದರಿಗಳನ್ನು ಕೊರೋನಾವೈರಸ್ ಸೋಂಕು ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ನಾಗರಿಕ ಅಧಿಕಾರಿಗಳು 2020 ಏಪ್ರಿಲ್ 07ರ ಮಂಗಳವಾರ ಇಲ್ಲಿ ತಿಳಿಸಿದರು.
ಕಾಲಾನಗರದಲ್ಲಿನ ಠಾಕ್ರೆ ಅವರ ನಿವಾಸವಾದ ’ಮಾತೋಶ್ರೀ’ಗೆ ಸಮೀಪದ ಚಹಾ ಮಾರುವ ವ್ಯಕ್ತಿಯೊಬ್ಬನಿಗೆ ಕೊರೋನಾವೈರಸ್ ಸೋಂಕು ತಗುಲಿರುವುದು ಖಚಿತವಾದ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಠಾಕ್ರೆ ಅವರ ಭದ್ರತಾ ತಂಡದ ಸದಸ್ಯರನ್ನು ಕ್ವಾರಂಟೈನ್‌ಗೆ ಒಳಪಡಿಸುವ ನಿರ್ಧಾರ ಕೈಗೊಳ್ಳಲಾಯಿತು. ಚಹಾ ಮಾರಾಟಗಾರನನ್ನು ಜೋಗೇಶ್ವರಿಯಲ್ಲಿ ಹಿಂದು ಹೃದಯ ಸಾಮ್ರಾಟ ಬಾಳಾಸಾಹೇಬ್ ಠಾಕ್ರೆ ಟ್ರೂಮಾ ಕೇರ್ ಮುನಿಸಿಪಲ್ ಆಸ್ಪತ್ರೆಗೆ ದಾಖಲಿಸಲಾಯಿತು.
’ಮುಖ್ಯಮಂತ್ರಿಯವರ ಭದ್ರತಾ ದಳದ ಸುಮಾರು ೧೬೦ ಮಂದಿ ಸಿಬ್ಬಂದಿ ಚಹಾ ಮಾರಾಟಗಾರನ ಸಂಪರ್ಕಕ್ಕೆ ಬಂದಿರುವ ಸಾಧ್ಯತೆಗಳಿವೆ. ಹೀಗಾಗಿ ಅವರೆಲ್ಲರನ್ನೂ ಅಗತ್ಯ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ’ ಎಂದು ಬೃಹನ್ಮುಂಬಯಿ ಮುನಿಸಿಪಲ್ ಕಾರ್ಪೋರೇಷನ್ನಿನ ಆರೋಗ್ಯ ಇಲಾಖಾ ಉಪ ನಿದೇಶಕರಾದ ದಕ್ಷ ಶಾ ಹೇಳಿದರು.
’ಆದಾಗ್ಯೂ, ಭಯಗ್ರಸ್ತರಾಗುವ ಅಗತ್ಯವಿಲ್ಲ, ಇದು ರೋಗ ಹರಡದಂತೆ ತಡೆಯಲು ಅಪಾಯ ಸಾಧ್ಯತೆಗಳನ್ನು ಗುರುತಿಸುವ ಶಿಷ್ಟಾಚಾರ ಮಾತ್ರ’ ಎಂದು ಶಾ ನುಡಿದರು.
ಈ ಬೆಳವಣಿಗೆಯನ್ನು ಅನುಸರಿಸಿ ರಾಜ್ಯ ಸರ್ಕಾರವು ಎಲ್ಲ ಮಾತೋಶ್ರೀಯಲ್ಲಿ ನಿಯೋಜಿಸಲಾಗಿದ್ದ ಎಲ್ಲ ಸಿಬ್ಬಂದಿಯನ್ನೂ ಬದಲಾಯಿಸಿದೆ. ಎಲ್ಲ ಭದ್ರತಾ ಸಿಬ್ಬಂದಿಯ ದೇಹದ ತಾಪಮಾನವನ್ನು ಪ್ರತಿದಿನವೂ ಪರೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.
ಮಹಾನಗರ ಪಾಲಿಕೆಯು ಆರು ತಿಂಗಳ ಮಗು ಸೇರಿದಂತೆ, ಚಹಾ ಮಾರಾಟಗಾರನ ಜೊತೆಗೆ ಅತ್ಯಂತ ಹೆಚ್ಚು ಸಂಪರ್ಕದಲ್ಲಿದ್ದ ನಾಲ್ವರನ್ನು ಗುರುತಿಸಿದೆ.
ಮುಂಜಾಗರೂಕತಾ ಕ್ರಮವಾಗಿ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಸಹಾಯಕ ಸಚಿವ ರಾಮದಾಸ ಅಠವಳೆ ಅವರ ಭದ್ರತಾ ಸಿಬ್ಬಂದಿಯನ್ನು ಕೂಡಾ ಮಂಗಳವಾರ ಬದಲಾಯಿಸಲಾಯಿತು. ಅಠವಳೆ ಅವರು ಬಾಂದಾ ಪೂರ್ವದ ನಿವಾಸಿಯಾಗಿದ್ದಾರೆ.
೧೫೦ ತಬ್ಲಿಘಿ ಸದಸ್ಯರ ವಿರುದ್ಧ ಎಫ್ ಐಆರ್
ಈ ಮಧ್ಯೆ, ನವದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಕಳೆದ ತಿಂಗಳು ತಬ್ಲಿಗಿ ಜಮಾತ್ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ ೧೫೦ ಜನರ ವಿರುದ್ಧ, ‘ಕೊರೊನಾ ಸೋಂಕು ಹರಡಿರುವ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿದ’ ಆರೋಪದಡಿ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಈ ಬಗ್ಗೆ ‘ಆಜಾದ್ ಮೈದಾನ್ ಪೊಲೀಸ್ ಠಾಣೆಯಲ್ಲಿ ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೊರೇಷನ್ ದೂರು ನೀಡಿತ್ತು. ಈ ದೂರನ್ನು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
’ಭಾರತೀಯ ದಂಡಸಂಹಿತೆಯ (ಐಪಿಸಿ) ೨೬೯ನೇ ಸೆಕ್ಷನ್ (ಉದ್ದೇಶಪೂರ್ವಕವಾಗಿ ಅಥವಾ ನಿರ್ಲಕ್ಷ್ಯದಿಂದ ಜೀವಕ್ಕೆ ಅಪಾಯ ಉಂಟುಮಾಡುವಂತಹ ಸೋಂಕು ಹರಡುವ ಕೃತ್ಯ ಎಸಗುವುದು) ಹಾಗೂ ೨೭೧ನೇ ಸೆಕ್ಷನ್ (ಕ್ವಾರಂಟೈನ್ ನಿಯಮ ಉಲ್ಲಂಘಿಸುವುದು) ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ತಬ್ಲಿಘಿಯಿಂದ ಬಹಿರಂಗ ಮಲವಿಸರ್ಜನೆ: ತಬ್ಲೀಘಿ ಜಮಾತ್ನ ಸದಸ್ಯರು ಕ್ವಾರಂಟೈನ್ ಕೇಂದ್ರದ ಕೊಠಡಿಯ ಮುಂಭಾಗದಲ್ಲೇ ಮಲವಿಸರ್ಜನೆ ಮಾಡಿದ ಘಟನೆ ನವದೆಹಲಿಯಲ್ಲಿ ಘಟಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದರು.
ದೆಹಲಿಯ ನರೇಲಾದಲ್ಲಿನ ಕ್ವಾರಂಟೈನ್ ಕೇಂದ್ರದಲ್ಲಿ ಈ ಘಟನೆ ಘಟಿಸಿದೆ. ಕ್ವಾರಂಟೈನ್ ನಲ್ಲಿ ಇರುವ ಆರೋಪಿಗಳು ನಿಜಾಮುದ್ದೀನ್ ಪ್ರದೇಶದ ತಬ್ಲೀಘಿ ಜಮಾತ್ ನಲ್ಲಿ ಕಳೆದ ತಿಂಗಳು ನಡೆದಿದ್ದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದರು. ಇಬ್ಬರೂ ಆರೋಪಿಗಳು ಉತ್ತರ ಪ್ರದೇಶದ ಬಾರಾಬಂಕಿ ನಿವಾಸಿಗಳಾಗಿದ್ದಾರೆ.
ಕ್ವಾರಂಟೈನ್ ಕೇಂದ್ರದ ಎರಡನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ ೨೧೨ರ ಮುಂಭಾಗದಲ್ಲಿ ಇಬ್ಬರು ಮಲವಿಸರ್ಜನೆ ಮಾಡಿದ್ದಾರೆ. ಈ ಕುರಿತು ಶನಿವಾರ ಕ್ವಾರಂಟೈನ್ ಕೇಂದ್ರದಲ್ಲಿ ಸ್ವಚ್ಛತಾ ಕಾರ್ಯ ನಡೆಸುವ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಸ್ವಚ್ಛತಾ ಕಾರ್ಯ ನಡೆಸುವ ಸಿಬ್ಬಂದಿ ಮತ್ತು ಹೌಸ್ ಕೀಪಿಂಗ್ ಸೂಪರ್ವೈಸರ್ ಘಟನೆಯ ವರದಿ ಮಾಡಿದ್ದಾರೆ. ಕೊರೊನಾ ಸೋಂಕು ವ್ಯಾಪಿಸದಂತೆ ತಡೆಯಲು ಆರೋಗ್ಯ ಇಲಾಖೆ ಹಾಗೂ ಸರ್ಕಾರ ನೀಡಿರುವ ಸೂಚನೆಗಳನ್ನು ಕೊಠಡಿಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗಿರುವ ವ್ಯಕ್ತಿಗಳು ಅನುಸರಿಸುತ್ತಿಲ್ಲ. ಅವರು ಇತರರ ಜೀವಗಳನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.
ಈವರೆಗೆ ಕೋವಿಡ್-೧೯ನಿಂದ ಸಾವಿಗೀಡಾಗಿರುವವ ಪೈಕಿ ೧೫ ಮಂದಿ ತಬ್ಲೀಘಿ ಜಮಾತ್ ಸಮಾವೇಶದ ಜೊತೆಗೆ ನಂಟು ಹೊಂದಿದ್ದವರಾಗಿದ್ದಾರೆ. ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ ಕನಿಷ್ಠ ೯,೦೦೦ ಜನರು ದೇಶದ ಹಲವು ಭಾಗಗಳಲ್ಲಿ ಸಂಚರಿಸಿದ್ದಾರೆ.
No comments:
Post a Comment