Wednesday, April 8, 2020

ದಿಗ್ಬಂಧನ ತೆರವು ಸಧ್ಯಕ್ಕೆ ಅಸಾಧ್ಯ: ಪ್ರಧಾನಿ ಮೋದಿ

ದಿಗ್ಬಂಧನ ತೆರವು ಸಧ್ಯಕ್ಕೆ ಅಸಾಧ್ಯ: ಪ್ರಧಾನಿ ಮೋದಿ
ಏಪ್ರಿಲ್ ೧೧ರಂದು ಮತ್ತೆ ಮುಖ್ಯಮಂತ್ರಿಗಳ ಜೊತೆ ಚರ್ಚೆ
ನವದೆಹಲಿ: ವಿರೋಧ ಪಕ್ಷಗಳ ಸದನ ನಾಯಕರ ಜೊತೆ 2020 ಏಪ್ರಿಲ್ 8ರ ಬುಧವಾರ ನಡೆಸಿದ ತಮ್ಮ ವಿಡಿಯೋ ಸಂವಹನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟವ್ಯಾಪಿ ದಿಗ್ಬಂಧನವನ್ನು (ಲಾಕ್ ಡೌನ್) ತೆರವುಗೊಳಿಸುವ ಸಾಧ್ಯತೆಗಳನ್ನು ವಸ್ತುಶಃ ತಳ್ಳಿಹಾಕಿದರು.  ಏಪ್ರಿಲ್ ೧೧ರಂದು ಪುನಃ ಮುಖ್ಯಮಂತ್ರಿಗಳ ಜೊತೆ ಇನ್ನೊಂದು ಸುತ್ತಿನ ಮಾತುಕತೆ ನಡೆಸುವುದಾಗಿ ಪ್ರಧಾನಿ ಹೇಳಿದರು.
ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಕೂಡಾ ಶೇಕಡಾ ೮೦ರಷ್ಟು ರಾಜಕೀಯ ಪಕ್ಷಗಳು ದಿಗ್ಬಂಧನ ಮುಂದುವರೆಸುವಂತೆ ಸಲಹೆ ಮಾಡಿವೆ ಎಂದು ತಿಳಿಸಿದರು.

ಸಂಪನ್ಮೂಲಗಳ ಮೇಲೆ ಅಗಾಧವಾದ ಒತ್ತಡ ಬಿದ್ದಿದ್ದರೂ, ಕೊರೋನಾವೈರಸ್ ಹರಡುವಿಕೆಯು ನಿಯಂತ್ರಣದಲ್ಲಿ ಇರುವ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ ಎಂದೂ ಪ್ರಧಾನಿ ವಿಪಕ್ಷ ನಾಯಕರ ಜೊತೆಗಿನ ವಿಡಿಯೋ ಸಂವಹನದಲ್ಲಿ ನುಡಿದರು.

ನಮ್ಮ ಜನರನ್ನು ಸಂರಕ್ಷಿಸಲು ಲಾಕ್ ಡೌನ್ ಒಂದೇ ಮಾರ್ಗವಾಗಿದೆಎಂದು ಒತ್ತಿ ಹೇಳಿದ ಪ್ರಧಾನಿ, ’ನಾನು ನಿಯಮಿತವಾಗಿ ಮುಖ್ಯಮಂತ್ರಿಗಳು, ಜಿಲ್ಲೆಗಳು ಮತ್ತು ತಜ್ಞರ ಜೊತೆ ಮಾತನಾಡುತ್ತಿದ್ದೇನೆ.ಯಾರು ಕೂಡಾ ದಿಗ್ಬಂಧನ ತೆರವುಗೊಳಿಸುವಂತೆ ನನ್ನ ಬಳಿ ಹೇಳುತ್ತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಠಿಣ ನಿಯಮಾವಳಿಗಳ ಅಗತ್ಯ ನಮಗಿದೆ. ನಾವು ಹಲವಾರು ಅನಿರೀಕ್ಷಿತ ಕ್ರಮಗಳನ್ನೂ ಕೈಗೊಳ್ಳಬೇಕಾಗಬಹುದುಎಂದು ನುಡಿದರು.

ಲಾಕ್ ಡೌನ್ ತೆರವುಗೊಳಿಸಬೇಕು ಎಂದು ಯಾರೂ ಹೇಳುತ್ತಿಲ್ಲ. ಏಪ್ರಿಲ್ ೧೧ ರಂದು ನಾನು ಪುನಃ ಮುಖ್ಯಮಂತ್ರಿಗಳ ಜೊತೆಗೆ ಮಾತನಾಡುವೆ. ಆದರೆ, ಈಗಿನ ಪ್ರಕಾರ ಸಂಪೂರ್ಣವಾಗಿ ಲಾಕ್ ಡೌನ್ ತೆರವುಗೊಳಿಸುವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯವಿದೆ. ನಾವು ಜಿಲ್ಲಾ ಮಟ್ಟದಲ್ಲೂ ಮಾತನಾಡುತ್ತಿದ್ದೇವೆ. ನಮಗೆ ನಮ್ಮ ಜನರನ್ನು ಸಂರಕ್ಷಿಸಲು ಲಾಕ್ ಡೌನ್ ಏಕೈಕ ಮಾರ್ಗವಾಗಿದೆಎಂದು ಮೋದಿ ಹೇಳಿದರು.

ದಿಗ್ಬಂಧನ ತೆರವುಗೊಳಿಸುವುದು ಸಾಧ್ಯವಿಲ್ಲ ಎಂಬ ಮಾತನ್ನು ಪ್ರಧಾನಿ ಮೋದಿ ಅವರು ಹೇಳಿದ್ದು ಇದೇ ಮೊದಲನೇ ಸಲ.

ಸಭೆಯಲ್ಲಿ ವ್ಯಕ್ತವಾದ ಧನಾತ್ಮಕ ನಿಲುವನ್ನು ಒತ್ತಿ ಹೇಳಿದ ಪ್ರಧಾನಿ ಜಾಗತಿಕ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಡುವಲ್ಲಿ ಧನಾತ್ಮಕ ನಿಲುವು ನೆರವಾಗುತ್ತದೆಎಂದು ಹೇಳಿದರು. ಮಾತುಕತೆ ಯಶಸ್ವಿಯಾಗಿದೆ ಎಂದು ಅವರು ಬಣ್ಣಿಸಿದರು.

ನಿಮ್ಮ ಭರವಸೆಗಳು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಸುದೀರ್ಘ ಬೆಂಬಲ ನೀಡುತ್ತವೆ. ಸವಾಲಿನ ವಿರುದ್ಧ ಹೋರಾಡುವಲ್ಲಿ ಮಾದರಿಯ ಸಹಕಾರೀ ಯತ್ನಗಳು ಅತ್ಯಗತ್ಯವಾಗಿವೆಎಂದು ಪ್ರಧಾನಿ ಹೇಳಿದರು.

ಕೋವಿಡ್ -೧೯ ಸಾಂಕ್ರಾಮಿಕ ಪಿಡುಗು ಆಗಿ ಪರಿಣಮಿಸಿದ ಬಳಿಕ ಇದೇ ಮೊದಲ ಬಾರಿಗೆ ವಿರೋಧ ಪಕ್ಷU ನಾಯಕರ ಜೊತೆ ಮಾತನಾಡಿದ ಪ್ರಧಾನಿ, ರಾಜಕೀಯ ಪಕ್ಷಗಳು, ರಾಜ್ಯ ಸರ್ಕಾರಗಳು ಮತ್ತು ಭಾರತದ ಜನರ ನೆರವಿನೊಂದಿಗೆ ರಾಷ್ಟ್ರವು ಕೊರೋನಾವೈರಸ್ ವಿರುದ್ಧ ಹೋರಾಡುವುದು ಎಂಬ ಆಶಯ ಮತ್ತು ವಿಶ್ವಾಸವನ್ನು ವ್ಯಕ್ತ ಪಡಿಸಿದರು.

ಪ್ರಸ್ತುತ ಪರಿಸ್ಥಿತಿಯಲ್ಲಿ ಮತ್ತು ಲಭ್ಯ ಸಂಪನ್ಮೂಗಳೊಂದಿಗೆ, ಗರಿಷ್ಠ ಪ್ರಮಾಣದಲ್ಲಿ ನಾವು ಮುಂದುವರೆಯಲಿದ್ದೇವೆ. ಪರಿಸ್ಥಿತಿಯಲ್ಲಿ ಸರ್ಕಾರವು ಎಷ್ಟು ಸಾಧ್ಯವೋ ಅಷ್ಟು ಜನರೊಂದಿಗೆ ಮಾತನಾಡುತ್ತಿದೆ. ನಾನು ನಿಯಮಿತವಾಗಿ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತಿದ್ದೇನೆ. ನಾನು ಅವರ ಸಲಹೆಗಳನ್ನು ಪಡೆದುಕೊಂಡಿದ್ದೇನೆ ಮತ್ತು ಸಮಾಜದ ಇತರ ಜನರ ಜೊತೆಗೂ ಮಾತನಾಡಿದ್ದೇನೆಎಂದು ಹೇಳುವ ಮೂಲಕ ಮೋದಿ ಅವರು ತಮ್ಮ ಕಾರ್ಯತಂತ್ರವನ್ನೂ ವಿವರಿಸಿದರು.

ಬಿಕ್ಕಟ್ಟಿಗೆ ಸಂಬಂಧಿಸಿದಂತೆ ರಾಜಕೀಯ ರಂಗದಲ್ಲಿ ವ್ಯಕ್ತವಾದs ಅಭೂತಪೂರ್ವ ಒಗ್ಗಟ್ಟನ್ನು ಪ್ರಧಾನಿ ಶ್ಲಾಘಿಸಿದರು. ’ನಾನು ಮತ್ತೊಮ್ಮೆ ರಾಜ್ಯ ಸರ್ಕಾರಗಳಿಗೆ ಧನ್ಯವಾದ ಹೇಳಬಯಸುತ್ತೇನೆ. ಅಗತ್ಯಗಳನ್ನು ಮಸ್ಸಿನಲ್ಲಿ ಇಟ್ಟುಕೊಂಡು ಕೇಂದ್ರ ಮತ್ತು ರಾಜ್ಯಗಳು ಕೆಲಸ ಮಾಡುತ್ತಿವೆ. ಯಾವುದೇ ಪೂರ್ವಾಗ್ರಹಗಳಿಲ್ಲದೆ ರಾಜ್ಯಗಳು, ಕೇಂದ್ರ ಮತ್ತು ರಾಜಕೀಯ ಪಕ್ಷಗಳು ಒಟ್ಟಾಗಿ ಕೆಲಸ ಮಾಡುತ್ತಿರುವುದಕ್ಕೆ ಇದೇ ಕಾರಣಎಂದು ಪ್ರಧಾನಿ ಹೇಳಿದರು.

ಸಮಾಜದ ಅತ್ಯಂತ ಕೆಳಗಿನ ಮತ್ತು ಅತ್ಯುನ್ನತ ಸ್ತರದಲ್ಲಿರುವ ಪ್ರತಿಯೊಬ್ಬರೂ ಕೊರೋನಾ ವಿರುದ್ಧದ ಹೋರಾಟಕ್ಕೆ ತಮಗೆ ಸಾಧ್ಯವಿರುವ ಯತ್ನಗಳನ್ನು ಮಾಡುವುದು ಕಂಡು ಬರುತ್ತಿದೆ. ೧೩೦ ಕೋಟಿ ಜನರು ಇರುವ ದೇಶದಲ್ಲಿ ಇದು ದೊಡ್ಡ ವಿಷಯ. ನಾವೆಲ್ಲರೂ ಒಂದೇ ಎಂಬುದಾಗಿ ರಾಷ್ಟಪಿತ ಮಹಾತ್ಮ ಗಾಂಧಿಯವರು ಹೇಳುತ್ತಿದ್ದುದು ಇಂದು ನಮ್ಮ ದೈನಂದಿನ ಜೀವನದಲ್ಲಿ ಅಚ್ಚೊತ್ತಿ ನಿಂತಿರುವುದನ್ನು ನಾವು ಕಾಣುತ್ತಿದ್ದೇವೆಎಂದು ಮೋದಿ ನುಡಿದರು.

ಇಡೀ ಜಗತ್ತೇ ಬಿಕ್ಕಟ್ಟು ಎದುರಿಸುತ್ತಿದೆ ಎಂದೂ ಪ್ರಧಾನಿ ವಿವರಿಸಿದರು. ’ಅತ್ಯಂತ ಸಂಪದ್ಭರಿತ ರಾಷ್ಟಗಳು ಮತ್ತು ಅತ್ಯಾಧುನಿಕ ವ್ಯವಸ್ಥೆಗಳು ಮಾರಣಾಂತಿಕ ವೈರಾಣುವಿನ ಕಾಲಬುಡದ ಮುಂದೆ ಕುಸಿದು ಬಿದ್ದಿವೆ. ಏಕಾಂಗಿಯಾಗಿ ಹೋರಾಡಬಲ್ಲ ಯಾವ ರಾಷ್ಟವೂ ಇಲ್ಲ. ಸಂಪನ್ಮೂಲಗಳ ಮೇಲೆ ಅತಿಯಾದ ಒತ್ತಡ ಬೀಳಲು ಇದೇ ಕಾರಣಎಂದು ಪ್ರಧಾನಿ ಹೇಳಿದರು.

ನಾವು ಕ್ಷಿಪ್ರ ನಿರ್ಧಾರಗಳನ್ನು ಕೈಗೊಳ್ಳಲು ಯತ್ನಿಸುತ್ತಿದ್ದೇವೆ. ಕೊರೋನಾವೈರಸ್ ಹರಡದಂತೆ ಇನ್ನೂ ನಿಯಂತ್ರಣದಲ್ಲಿ ಇಟ್ಟುಕೊಂಡಿರುವ ವಿಶ್ವದ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಪ್ರತಿದಿನವೂ ಪರಿಸ್ಥಿತಿ ಬದಲಾಗುತ್ತಿದೆ ಎಂಬುದನ್ನೂ ನಾವು ಗಮನದಲ್ಲಿ ಇಟ್ಟುಕೊಂಡಿದ್ದೇವೆ. ಆದ್ದರಿಂದ ಎಲ್ಲ ರಾಷ್ಟ್ರಗಳೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ದಿಗ್ಬಂಧನ ಕ್ರಮಗಳಿಗೆ ಮೊರೆ ಹೋಗಿವೆ. ಕೊರೋನಾವನ್ನು ನಿಭಾಯಿಸಲು ಇರುವ ಮಾರ್ಗಗಳು ಇವೆರಡು ಮಾತ್ರಎಂದು ಮೋದಿ ನುಡಿದರು.

No comments:

Advertisement