Wednesday, April 1, 2020

ವೈದ್ಯನಿಗೆ ಕೋವಿಡ್: ದೆಹಲಿ ಸ್ಟೇಟ್ ಕ್ಯಾನ್ಸರ್ ಆಸ್ಪತೆ ಬಂದ್

ವೈದ್ಯನಿಗೆ ಕೋವಿಡ್: ದೆಹಲಿ ಸ್ಟೇಟ್  ಕ್ಯಾನ್ಸರ್ ಆಸ್ಪತೆ ಬಂದ್
ನವದೆಹಲಿ: ದೆಹಲಿಯ ಸರ್ಕಾರಿ ಕ್ಯಾನ್ಸರ್ ಸಂಸ್ಥೆಯ ೩೫ರ ಹರೆಯದ ವೈದ್ಯರಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು ಖಚಿತವಾದ ಪರಿಣಾಮ, ಅಧಿಕಾರಿಗಳು ಶುಚೀಕರಣದ ಸಲುವಾಗಿ ಆಸ್ಪತ್ರೆಯ ಹೊರರೋಗಿ ಕ್ಲಿನಿಕ್ಗಳನ್ನು ಬುಧವಾರ ಮುಚ್ಚಿದರು.

ಸಂಸ್ಥೆಯ ಗ್ರಂಥಿ ವಿಜ್ಞಾನ ವಿಭಾಗದ ವೈದ್ಯರನ್ನು ರೋಹಿಣಿಯಲ್ಲಿನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ಮತ್ತು ಅವರ ಪತ್ನಿ ಮತ್ತು ಮಗುವನ್ನು ದೆಹಲಿ ಗೇಟ್ ಸಮೀಪದ ಲೋಕನಾಯಕ ಆಸ್ಪತ್ರೆಗೆ ಸೇರಿಸಲಾಗಿದೆ.

ವೈದ್ಯರ ಸೋಂಕಿನ ಮೂಲ ಅಸ್ಪಷ್ಟವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸದರಿ ವೈದ್ಯ ವಿದೇಶೀ ಪಯಣ ಮಾಡಿದ ಅಥವಾ ಕೋವಿಡ್-೧೯ ರೋಗಿಗಳಿಗೆ ಚಿಕಿತ್ಸೆ ನೀಡಿದ ಇತಿಹಾಸವಿಲ್ಲ. ಆದ್ದರಿಂದ ಸೋಂಕಿನ ಮೂಲ ಈಗಲೂ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿದೆಎಂದು ದೆಹಲಿ ಸರ್ಕಾರದ ಆರೋಗ್ಯ ಇಲಾಖಾ ಅಧಿಕಾರಿಯೊಬ್ಬರು ನುಡಿದರು.

ಸದರಿ ವೈದ್ಯರ ಸಹೋದರ ಮತ್ತು ಅತ್ತಿಗೆ ಫೆಬ್ರುವರಿಯಲ್ಲಿ ಇಂಗ್ಲೆಂಡಿಗೆ ಪಯಣಿಸಿದ್ದರು, ಆದರೆ ಅವರಿಗೆ ಕೊರೋನಾಸೋಂಕು ತಗುಲಿರಲಿಲ್ಲ ಎಂದು ಅಧಿಕಾರಿ ಹೇಳಿದರು.

ದಿಗ್ಬಂಧನದ (ಲಾಕ್ ಡೌನ್) ಕಾರಣ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ (ಒಪಿಡಿ) ೧೦೦-೧೫೦ ಮಂದಿ ರೋಗಿಗಳು ಬರುತ್ತಿದ್ದಾರೆ. ಇದಕ್ಕೆ ಮುನ್ನ ಪ್ರತಿದಿನ ೧೦೦೦-೧೫೦೦ ರೋಗಿಗಳು ಬರುತ್ತಿದ್ದರು.
ನಾವು ಅಪಾಯವನ್ನು ಆಹ್ವಾನಿಸಲಾಗದು. ಅತ್ಯಂತ ತುರ್ತಿನ ಕ್ಯಾನ್ಸರ್ ರೋಗಿಗಳು ಮಾತ್ರ ಈಗ ಆಸ್ಪತ್ರೆಗೆ ಬರುತಿದ್ದಾರೆ. ಆವರಣದ ಶುಚೀಕರಣದ ಸಲುವಾಗಿ ನಾವು ಒಪಿಡಿಯನ್ನು ಮುಚ್ಚಿದ್ದೇವೆಎಂದು ದೆಹಲಿ ಸರ್ಕಾರಿ ಕ್ಯಾನ್ಸರ್ ಸಂಸ್ಥೆಯ ನಿರ್ದೇಶಕ ಡಾ. ಬಿಎಲ್ ಶೆರ್ವಾಲ್ ಹೇಳಿದರು.

ರಾಜಧಾನಿಯಲ್ಲಿ ಕೊರೋನಾವೈರಸ್ ಸೋಂಕು ತಗುಲಿದ ನಾಲ್ಕನೇ ವೈದ್ಯ ಇವರಾಗಿದ್ದಾರೆ. ಇಬ್ಬರು ಮೊಹಲ್ಲಾ ಕ್ಲಿನಿಕ್ ವೈದ್ಯರು ಮತ್ತು ಒಬ್ಬ ಹರಿನಗರದ ಖಾಸಗಿ ವೈದ್ಯರಿಗೆ ಈವರೆಗೆ ಕೊರೋನಾವೈರಸ್ ಸೋಂಕು ತಟ್ಟಿದೆ.

ಈಶಾನ್ಯ ಪ್ರದೇಶದ ದೆಹಲಿ ಮೊಹಲ್ಲಾ ಕ್ಲಿನಿಕ್ಸ್ ವೈದ್ಯ ದಂಪತಿ ಜೋಡಿಗೆ ಮಂಗಳವಾರ ಕೊರೋನಾವೈರಸ್ ಸೋಂಕು ತಗುಲಿದ್ದು ಖಚಿತವಾಗಿತ್ತು.

ಮೌಜ್ಪುರದಲ್ಲಿ ಮೊಹಲ್ಲಾ ಕ್ಲಿನಿಕ್ನಲ್ಲಿ ಕೆಲಸ ಮಾಡುತ್ತಿದ್ದ ೪೯ರ ಹರೆಯದ ವೈದ್ಯರಿಗೆ ಮಾರ್ಚ್ ೨೧ರಂದು ಕೋವಿಡ್-೧೯ ಸೋಂಕು ತಗುಲಿತ್ತು. ಸೌದಿ ಅರೇಬಿಯಾದಿಂದ ಬಂದ ರೋಗಿಯೊಬ್ಬರಿಂದ ಅವರಿಗೆ ಸೋಂಕು ಹರಡಿತ್ತು.

ನೆರೆಯ ಬಾಬುರ್ ಪುರದ ಕ್ಲಿನಿಕ್ನಲ್ಲಿ ಕೆಲಸ ಮಾಡುತ್ತಿದ್ದ ೪೮ರ ಹರೆಯದ ವೈದ್ಯರ ಪತ್ನಿ ಮತ್ತು ೧೭ರ ಹರೆಯದ ಅವರ ಪುತ್ರಿಗೆ ಮಾರ್ಚ್ ೨೫ರಂದು ಸೋಂಕು ತಗುಲಿತ್ತು.

ವೈದ್ಯ ದಂಪತಿಯ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಪತ್ತೆ ಹಚ್ಚಲು ನಗರದ ಸಮಗ್ರ ರೋಗ ಕಣ್ಗಾವಲು ವ್ಯವಸ್ಥೆಯು ಕಾರ್ಯನಿರತವಾಗಿದೆ. ಜೊತೆಗೆ ಅವರಿಗೆ ರೋಗ ಹರಡಲು ಕಾರಣವಾದ ೩೮ರ ಹರೆಯದ ರೋಗಿಯ ಜೊತೆಗೆ ಸಂಪರ್ಕ ಇದ್ದವರ ಪತ್ತೆಗೂ ಯತ್ನಿಸಲಾಗುತ್ತಿದೆ.

ಸೌದಿ ಅರೇಬಿಯಾದಿಂದ ವಾಪಸಾಗಿದ್ದ ೩೮ರ ಹರೆಯದ ದಿಲ್ ಶಾದ್ ಗಾರ್ಡನ್ ನಿವಾಸಿಯಾದ ೩೮ರ ಹರೆಯದ ವ್ಯಕ್ತಿಯಿಂದ ಸೋಂಕಿಗೆ ಒಳಗಾದ ೧೦ ಜನರನ್ನು ಈವರೆಗೆ ಪತ್ತೆ ಮಾಡಲಾಗಿದೆ.
ವೈದ್ಯರ ಜೋಡಿ ಮತ್ತು ಎರಡು ಮೊಹಲ್ಲಾ ಕ್ಲಿನಿಕ್ಗಳಲ್ಲಿ ಚಿಕಿತ್ಸೆ ಪಡೆದ ಕನಿಷ್ಠ ೩೮೦೦ ಜನರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಾಗೆಯೇ ಸೌದಿ ಅರೇಬಿಯಾದಿಂದ ವಾಪಸಾಗಿದ್ದ ರೋಗಿಯ ಜೊತೆ ಸಂಪರ್ಕಕ್ಕೆ ಬಂದ ೧೨೦೦ ಮಂದಿಯನ್ನೂ ಪತ್ತೆ ಹಚ್ಚಲಾಗಿದ್ದು, ಅವರೆಲ್ಲರನ್ನು ಮನೆಗಳಲ್ಲೇ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಅವರಲ್ಲಿ ಏನಾದರೂ ರೋಗ ಲಕ್ಷಣ ಕಂಡು ಬಂದಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗುವುದು ಎಂದು ಅವರು ನುಡಿದರು.

ಭಾರತದಲ್ಲಿ ಕೊರೋನಾವೈರಸ್ ಸೋಂಕಿತರ ಸಂಖ್ಯೆ ೧೬೬೩ಕ್ಕೇ ಏರಿದ್ದು ರಾಜಧಾನಿಯಲ್ಲಿಯೇ ೧೨೧ ಮಂದಿ ಕೋವಿಡ್ -೧೯ ರೋಗಿಗಳು ಇದ್ದಾರೆ. ಕನಿಷ್ಠ ೫೦ ಜನರು ಸಾವನ್ನಪ್ಪಿದ್ದು, ೧೫೦ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರದ ಮಾಹಿತಿ ತಿಳಿಸಿದೆ.

No comments:

Advertisement