೯೦೦೦ ತಬ್ಲಿಘಿ ಜಮಾತ್ ಕಾರ್ಯಕರ್ತರ ಪತ್ತೆ, ೯೬೦ ವಿದೇಶೀಯರು ಕಪ್ಪುಪಟ್ಟಿಗೆ, ವೀಸಾ ರದ್ದು
ನವದೆಹಲಿ: ದೇಶಾದ್ಯಂತ ೯೦೦೦ ಮಂದಿ ತಬ್ಲಿಘಿ ಜಮಾತ್ ಕಾರ್ಯಕರ್ತರು ಮತ್ತು ಅವರ ಜೊತೆಗೆ ಸಂಪರ್ಕ ಹೊಂದಿದ್ದವರನ್ನು ಪತ್ತೆ ಹಚ್ಚಲಾಗಿದ್ದು ಎಲ್ಲರನ್ನೂ ಏಕಾಂತವಾಸಕ್ಕೆ (ಕ್ವಾರಂಟೈನ್) ಕಳುಹಿಸಲಾಗಿದೆ. ಇವರ ಪೈಕಿ ೧೩೦೦ ಮಂದಿ ವಿದೇಶೀಯರು ಎಂದು ಗೃಹ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲಿಲ ಶ್ರೀವಾಸ್ತವ 2020 ಏಪ್ರಿಲ್ 02ರ ಗುರುವಾರ ಪ್ರಕಟಿಸಿದರು.
ತಬ್ಲಿಘಿ ಜಮಾತ್ಗೆ ಸಂಬಂಧಪಟ್ಟ ಕನಿಷ್ಠ ೯೬೦ ವಿದೇಶೀಯರನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಿ ಅವರ ವೀಸಾಗಳನ್ನು ರದ್ದು ಪಡಿಸಲಾಗಿದೆ ಎಂದೂ ಸರ್ಕಾರ ಪ್ರಕಟಿಸಿತು. ಈ ವ್ಯಕ್ತಿಗಳು ಜಮಾತ್ಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಪಾಲ್ಗೊಂಡದ್ದು ಕಂಡು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದ ಸರ್ಕಾರ ತಿಳಿಸಿತು.
ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಲಾದ ೯೬೦ ಮಂದಿ ವಿದೇಶೀಯರ ವಿರುದ್ದ ವಿದೇಶೀಯರ ಕಾಯ್ದೆ, ೧೯೪೬ರ ವಿಧಿಗಳನ್ನು ಮತ್ತು ೨೦೦೫ರ ವಿ ಪತ್ತು ನಿರ್ವಹಣಾ ಕಾಯ್ದೆಯ ವಿಧಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಗತ್ಯ ಕಾನೂನು ಕ್ರಮ ಜರುಗಿಸುವಂತೆ ಗೃಹ ವ್ಯವಹಾರಗಳ ಸಚಿವಾಲಯವು ದೆಹಲಿ ಪೊಲೀಸ್ ಮತ್ತು ಸಂಬಂಧಪಟ್ಟ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ನಿರ್ದೇಶನ ನೀಡಿತು.
ದಕ್ಷಿಣ ದೆಹಲಿಯ ನಿಜಾಮುದ್ದೀನ್ ಪ್ರದೇಶದ ತಬ್ಲಿಘಿ ಜಮಾತ್ ಸಮಾವೇಶವು ರಾಷ್ಟ್ರದಲ್ಲಿ ಕೊರೋನಾವೈರಸ್ ಹಾಟ್ ಸ್ಪಾಟ್ ಆಗಿ ಪರಿವರ್ತನೆಯಾದದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕೇಂದ್ರವು ಈ ಕ್ರಮ ಕೈಗೊಂಡಿತು.
ಇದೇ ವೇಳೆಗೆ ದೇಶಾದ್ಯಂತ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಕೊರೋನಾವೈರಸ್ ಸೋಂಕಿನ ೩೨೮ ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿತು.
೧೯೬೫ ಕೋವಿಡ್ -೧೯ ಪ್ರಕರಣಗಳ ಪೈಕಿ ೧,೭೬೪ ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿದ್ದು, ೧೫೦ ಪ್ರಕರಣಗಳಲ್ಲಿ ಜನರು ಗುಣಮುಖರಾಗಿದ್ದಾರೆ ಅಥವಾ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಒಬ್ಬ ವ್ಯಕ್ತಿ ವಿದೇಶಕ್ಕೆ ವಲಸೆ ಹೋಗಿದ್ದಾರೆ. ಸಚಿವಾಲಯದ ಮಾಹಿತಿ ಪ್ರಕಾರ ಮಹಾರಾಷ್ಟ್ರದಿಂದ ೪, ಮಧ್ಯಪ್ರದೇಶದಿಂದ ೩ ಮತ್ತು ಆಂಧ್ರಪ್ರದೇಶ ಹಾಗೂ ಪಂಜಾಬಿನಿಂದ ತಲಾ ಮೂರು ಸಾವುಗಳು ವರದಿಯಾಗಿವೆ.
ಕೋವಿಡ್ -೧೯ ಪರಿಣಾಮವಾಗಿ ಗುಜರಾತ್ ಮತ್ತು ಚಂಡೀಗಢದಲ್ಲಿ ಒಂದೊಂದು ಸಾವು ಸಂಭವಿಸಿದ ವರದಿ ಬಂದಿದ್ದು, ಅಸ್ಸಾಮ್, ಮತ್ತು ತೆಲಂಗಾಣದ ಸೇರಿದಂತೆ ಹಲವು ರಾಜ್ಯಗಳಲ್ಲಿ ನಿಜಾಮುದ್ದೀನಿನ ತಬ್ಲಿಘಿ ಜಮಾತ್ ಸಮಾವೇಶದ ಜೊತೆ ಸಂಪರ್ಕ ಹೊಂದಿದ ಪ್ರಕರಣಗಳ ಸಂಖ್ಯೆ ಏರುಮುಖವಾಗಿದೆ. ಸಮಾವೇಶದ ಪರಿಣಾಮವಾಗಿ ದೇಶದಲ್ಲಿ ೧೫೦ ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ ೧,೮೩೪ಕ್ಕೆ ಏರಿದೆ. ಇವುಗಳಲ್ಲಿ ೪೧ ಸಾವಿನ ಪ್ರಕರಣಗಳೂ ಸೇರಿವೆ.
ನಿಜಾಮುದ್ದೀನ್ ಪ್ರದೇಶದ ಮರ್ಕಜ್ ಪ್ರದೇಶದಿಂದ ತೆರವುಗೊಳಿಸಲಾದ ೨,೩೪೬ ಜನರ್ ಪೈಕಿ ೧,೮೧೦ ಜನರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದ್ದು ೫೩೬ ಮಂದಿಯನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಎಲ್ಲ ೨,೩೪೬ ಮಂದಿಯ ಪರೀಕ್ಷೆ ನಡೆಸಲಾಗಿದೆ. ಈ ಕಾರಣದಿಂದ ನಗರದಲ್ಲಿ ಕೋವಿಡ್-೧೯ ಪ್ರಕರಣಗಳು ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು.
ಮುಂಬೈಯ ಧಾರವಿಯಲ್ಲಿ ಸಾವು
ಮುಂಬೈಯ ಧಾರವಿಯಲ್ಲಿ ಕೊರೋನಾಸೋಂಕು ಪತ್ತೆಯಾದ ೫೬ರ ಹರೆಯದ ವ್ಯಕ್ತಿ ರೋಗ ಪತ್ತೆಯಾದ ೨೪ ಗಂಟೆಗಳ ಒಳಗಾಗಿ ಸಾವನ್ನಪ್ಪಿದ್ದು, ಅಧಿಕಾರಿಗಳು ಆತ ವಾಸವಾಗಿದ್ದ ಕಟ್ಟಡಕ್ಕೆ ಬೀಗಮುದ್ರೆ ಮಾಡಿದ್ದಾರೆ. ಬೃಹನ್ ಮುಂಬೈ ನಿಗಮದ (ಬಿಎಂಸಿ) ಸ್ವಚ್ಛತಾ ಕಾಮಿಕನಾಗಿದ್ದ ಈ ವ್ಯಕ್ತಿ ವರ್ಲಿಯ ನಿವಾಸಿಯಾಗಿದ್ದು ಧಾರವಿಯಲ್ಲಿ ಸ್ವಚ್ಛತಾ ಕರ್ತವ್ಯ ನಿರ್ವಹಿಸುತ್ತಿದ್ದ ಎಂದು ವರದಿಗಳು ಹೇಳಿವೆ.
ಮುಂಬೈಯ ಧಾರವಿಯಲ್ಲಿ ಕೊರೋನಾವೈರಸ್ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ನಿರ್ದಿಷ್ಟ ಕಾಲೋನಿಯ ಕಟ್ಟಡಕ್ಕೆ ಬೀಗ ಮುದ್ರೆ ಮಾಡಿ ಎಲ್ಲ ನಿವಾಸಿಗಳ ಗಂಟಲ ದ್ರವ ಮಾದರಿ ಸಂಗ್ರಹಿಸಲಾಯಿತು ಎಂದು ಆರೋಗಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಹೇಳಿದರು.
ಸಿಆರ್ ಪಿಎಫ್ ವೈದ್ಯನಿಗೆ ಸೋಂಕು
ದೆಹಲಿಯ ಸಾಕೇತ್ನ ಅಧಿಕಾರಿಗಳ ಮೆಸ್ನಲ್ಲಿ ವಾಸವಾಗಿರುವ ಮುಖ್ಯ ವೈದ್ಯಾಧಿಕಾರಿಯಾಗಿರುವ ಸಿಆರ್ ಪಿಎಫ್ ವೈದ್ಯರೊಬ್ಬರಿಗೆ ಗುರುವಾರ ಕೊರೋನಾವೈರಸ್ ಸೋಂಕು ತಗುಲಿದ್ದು ದೃಢಪಟ್ಟಿತು. ಈ ಹಿನ್ನೆಲೆಯಲ್ಲಿ ಮೆಸ್ನಲ್ಲಿ ವಾಸವಾಗಿರುವ ಎಲ್ಲ ಸಿಬ್ಬಂದಿ, ಅತಿಥಿಗಳು, ಅಧಿಕಾರಗಳನ್ನು ಕ್ವಾರಂಟೈನ್ಗೆ ಒಳಪಡಿಸಲಾಯಿತು. ಅಧಿಕಾರಿಯನ್ನು ಐಸೋಲೇಷನ್ ವಾರ್ಡಿಗೆ ಕಳುಹಿಸಲಾಯಿತು.
೨೦ ಹಾಟ್ ಸ್ಪಾಟ್ಗಳು
ಭಾರತದಲ್ಲಿ ಈವರೆಗೆ ಕೊರೋನಾವೈರಸ್ ಸೋಂಕಿನ ೧೯೬೫ ಪ್ರಕರಣಗಳು ವರದಿಯಾಗಿದ್ದು ಸಾವಿನ ಸಂಖ್ಯೆ ೫೦ಕ್ಕೆ ಏರಿದೆ. ಸರ್ಕಾರವು ಕೊರೋನಾವೈರಸ್ಸಿನ ಹಾಲಿ ’ಹಾಟ್ ಸ್ಪಾಟ್’ ಎಂಬುದಾಗಿ ೨೦ ಜಾಗಗಳನ್ನು ಗುರುತಿಸಿದ್ದು, ೨೨ ಸ್ಥಳಗಲಲ್ಲಿ ಸೋಂಕು ಹರಡದಂತೆ ತಡೆಯಬೇಕಾಗಿರುವ ಸಂಭಾವ್ಯ ಹಾಟ್ ಸ್ಪಾಟ್ಗಳು ಎಂಬುದಾಗಿ ಗುರುತಿಸಿದೆ.
ಭಾರತ ಗುರುತಿಸಿದ ಕೊರೋನಾ ಹಾಟ್’ಸ್ಪಾಟ್ ಹೀಗಿದೆ..
ಅಹಮದಾಬಾದ್, ಗುಜರಾತ್
ಇಂದೋರ್, ಮಧ್ಯಪ್ರದೇಶ
ನವಾನ್ಶಹರ್, ಪಂಜಾಬ್
ಪಥನಮತ್ತಟ್ಟ, ಕೇರಳ
ಕಾಸರಗೋಡು, ಕೇರಳ
ನೋಯ್ಡಾ, ಉತ್ತರ ಪ್ರದೇಶ
ದಿಲ್ಶಾದ್ ಗಾರ್ಡನ್, ದೆಹಲಿ
ನಿಜಾಮುದ್ದೀನ್, ದೆಹಲಿ
ಪುಣೆ, ಮಹಾರಾಷ್ಟ್ರ
ಬೆಂಗಳೂರು, ಕರ್ನಾಟಕ
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
ಈರೋಡ್, ತಮಿಳುನಾಡು
ಮೀರತ್, ಉತ್ತರ ಪ್ರದೇಶ
ಭಿಲ್ವಾರಾ, ರಾಜಸ್ಥಾನ
ಜೈಪುರ, ರಾಜಸ್ಥಾನ
ಮುಂಬೈ, ಮಹಾರಾಷ್ಟ್ರ
ಪ್ರಧಾನಿ ವಿಡಿಯೋ ಸಂದೇಶ
ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ ೦೩ರ ಶುಕ್ರವಾರ ಬೆಳಗ್ಗೆ ೯ ಗಂಟೆಗೆ ಭಾರತೀಯರ ಜೊತೆಗೆ ಒಂದು ಸಣ್ಣ ವಿಡಿಯೋ ಸಂದೇಶವೊಂದನ್ನು ಹಂಚಿಕೊಳ್ಳುವುದಾಗಿ ಗುರುವಾರ ಪ್ರಕಟಿಸಿದರು.
ಲಾಕ್ ಡೌನ್ ಉಲ್ಲಂಘಿಸಿದರೆ ಕ್ರಮ
ದಿಗ್ಬಂಧನ (ಲಾಕ್ ಡೌನ್) ಕ್ರಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದರು. ಡಿಎಂ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ವಿಧಿಗಳಿಗೆ ಅನುಗುಣವಾಗಿ ಕಾನೂನು ಅನುಷ್ಠಾನ ಅಧಿಕಾರಿಗಳು ಲಾಕ್ ಡೌನ್ ಕ್ರಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪತ್ರ ತಿಳಿಸಿದೆ.
ಇದೇ ವೇಳೆಗೆ ಗೃಹ ವ್ಯವಹಾರಗಳ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರಧಾನಮಂತ್ರಿ ಗರೀಬ ಕಲ್ಯಾಣಯೋಜನೆಯ ಫಲಾನುಭವಿಗಳಿಗೆ ೨೧ ದಿನಗಳ ಲಾಕ್ ಡೌನ್ ವೇಳೆಯಲ್ಲಿ ಸುಲಲಿತವಾಗಿ ಹಣ ವಿತರಣೆಯನ್ನು ಖಾತರಿ ಪಡಿಸಬೇಕು ಎಂದು ಸೂಚಿಸಿ ಪತ್ರ ಬರೆದಿದೆ.
ಕೃಷಿ ವಸ್ತುಗಳಿಗೆ ವಿನಾಯ್ತಿ
ದೇಶಾದ್ಯಂತ ಆಹಾರ ಮತ್ತು ಇತರ ಅಗತ್ಯ ವಸ್ತುಗಳು ಲಭ್ಯವಿರುವಂತೆ ನಾವು ಖಾತರಿ ಪಡಿಸುತ್ತಿದ್ದೇವೆ. ಕೃಷಿಯ ನಮ್ಮ ರಾಷ್ಟ್ರದ ಪ್ರಮುಖ ಚಟುವಟಿಕೆ, ಆದ್ದರಿಂದ ಕ್ರಿಮಿನಾಶಕ, ರಸಗೊಬ್ಬರ, ಬೀಜUಳಂತಹ ಸಂಬಂಧಿತ ವಸ್ತುಗಳ ಮಾರಾಟಕ್ಕೆ ಕೋವಿಡ್-೧೯ ಲಾಕ್ ಡೌನ್ ನಿಯಮಗಳಿಂದ ವಿನಾಯ್ತಿ ನೀಡಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್ ಹೇಳಿದರು.
ಆಟೋ, ಟ್ಯಾಕ್ಸಿ ಚಾಲಕರಿಗೆ ೫೦೦೦ ರೂ.
ದೆಹಲಿಯಲ್ಲಿ ಸಾರ್ವಜನಿಕ ಸೇವೆಗಾಗಿ ವಾಹನಗಳನ್ನು ಓಡಿಸುತ್ತಿರುವ ಆಟೋ, ಟ್ಯಾಕ್ಸಿ, ಇ-ರಿಕ್ಷಾ , ಆರ್ ಟಿವಿ ಮತ್ತು ಗ್ರಾಮೀಣ ಸೇವಾ ಚಾಲಕರಿಗೆ ತಲಾ ೫೦೦೦ ರೂಪಾಯಿಗಳನ್ನು ಖಾತೆಗೆ ವರ್ಗಾಯಿಸಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ಪ್ರಕಟಿಸಿದರು. ಈ ಯೋಜನೆ ಜಾರಿಗೆ ಒಂದು ವಾರದಿಂದ ೧೦ ದಿನಗಳು ಬೇಕಾಗಬಹುದು ಎಂದು ಅವರು ನುಡಿದರು.
ರಾಜಧಾನಿಯಲ್ಲಿ ಈವರೆಗೆ ಕೋವಿಡ್-೧೯ ಸೋಂಕು ತಗುಲಿದ ೨೧೯ ಪ್ರಕರಣಗಳು ವರದಿಯಾಗಿದ್ದು ಇವರಲ್ಲಿ ೧೦೮ ಮಂದಿ ನಿಜಾಮುದ್ದೀನ್ ಪ್ರದೇಶದ ಮರ್ಕಜ್ ಕಟ್ಟಡಕ್ಕೆ ಸೇರಿದವರು. ಒಟ್ಟು ೪ ಸಾವುಗಳು ಸಂಭವಿಸಿವೆ ಎಂದು ಅವರು ಹೇಳಿದರು.
ಏರ್ ಲೈನ್ಸ್ಗೆ ಸೂಚನೆ
ವಿಮಾನಯಾನ ಸಚಿವಾಲಯವು ಏರ್ ಲೈನ್ಸ್ ಸಂಸ್ಥೆಗಳಿಗೆ ಪ್ರಯಾಣಿಕರ ಮೇಲೆ ಯಾವುದೇ ಟಿಕೆಟ್ ರದ್ದುಪಡಿಸಿದ್ದಕ್ಕೆ ಕ್ಯಾನ್ಸಲೇಷನ್ ಶುಲ್ಕ ವಿಧಿಸದಂತೆ ಸೂಚನೆ ನೀಡಿತು.
ಮಹಾರಾಷ್ಟ್ರದಲ್ಲಿ ಕೋವಿಡ್ ಆಸ್ಪತ್ರೆಗಳು
ರಾಜ್ಯದ ೩೦ ಸರ್ಕಾರಿ ಆಸ್ಪತ್ರೆಗಳನ್ನು ಕೋವಿಡ್-೧೯ ಆಸ್ಪತ್ರೆಗಳು ಎಂಬುದಗಿ ಮಹಾರಾಷ್ಟ್ರ ಸರ್ಕಾರ ಗುರುವಾರ ಘೋಷಿಸಿತು. ಈ ೩೦ ಕೋವಿಡ್-೧೯ ಆಸ್ಪತ್ರೆಗಳಲ್ಲಿ ಒಟ್ಟು ೨೩೦೫ ಹಾಸಿಗೆಗಳು ಲಭ್ಯವಿವೆ ಎಂದು ಆರೋಗ್ಯ ಸಚಿವಾಲಯ ಹೇಳಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಬುಧವಾರ ೨೪ ಗಂಟೆಗಳ ಅವಧಿಯಲ್ಲಿ ೪೩೭ ಹೊಸ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿತ್ತು. ಇದು ಈವರೆಗಿನ ಸೋಂಕಿನ ಸಂಖ್ಯೆಗಳಲ್ಲೇ ಅತ್ಯಂತ ದೊಡ್ಡ ಸಂಖ್ಯೆಯಾಗಿತ್ತು. ಆದಾಗ್ಯೂ ಈ ಏರಿಕೆ ರಾಷ್ಟ್ರೀಯ ಪ್ರವೇತ್ತಿಯನ್ನು ಬಿಂಬಿಸುವುದಿಲ್ಲ. ದೆಹಲಿಯ ನಿಜಾಮುದ್ದೀನ್ ಸಮಾವೇಶಕ್ಕೆ ಹಾಜರಾzವರ ಅಸ್ವಸ್ಥತೆ ಕಾರಣವಷ್ಟೇ ಈ ಏರಿಕೆ ಕಂಡು ಬಂದಿದೆ ಎಂದು ಸಚಿವಾಲಯ ತಿಳಿಸಿತ್ತು.
ಸಾಮಾಜಿಕ ಅಂತರ ಮತ್ತು ದಿಗ್ಬಂಧನ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಮತ್ತು ಸಮಾವೇಶಗಳು ಹಾಗೂ ಧಾರ್ಮಿಕ ಸಭೆಗಳನ್ನು ನಿವಾರಿಸುವಂತೆ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಮನವಿ ಮಾಡಿದ್ದರು.
No comments:
Post a Comment