ಗ್ರಾಹಕರ ಸುಖ-ದುಃಖ
My Blog List
Saturday, April 11, 2020
ಲಾಕ್ ಡೌನ್ ವಿಸ್ತರಣೆ ಬಗ್ಗೆ ಪರಿಶೀಲನೆ: ಪ್ರಧಾನಿ ಮೋದಿ
ಲಾಕ್ ಡೌನ್ ವಿಸ್ತರಣೆ ಬಗ್ಗೆ ಪರಿಶೀಲನೆ: ಪ್ರಧಾನಿ ಮೋದಿ
ನವದೆಹಲಿ: ದಿಗ್ಬಂಧನ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಮಹತ್ವವನ್ನು 2020 ಏಪ್ರಿಲ್ 11ರ ಶನಿವಾರ ಮುಖ್ಯಮಂತ್ರಿಗಳ ಜೊತೆಗಿನ ವಿಡಿಯೋ ಸಂವಹನದಲ್ಲಿ ಪುನಃ ಒತ್ತಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು ಈ ಕ್ರಮಗಳು ಜನರ ಜೀವಗಳನ್ನು ರಕ್ಷಿಸುತ್ತವೆ ಎಂದು ನುಡಿದರು.
ವಿಶ್ವಾದ್ಯಂತ ಸಹಸ್ರಾರು ಮಂದಿಯನ್ನು ಬಲಿ ಪಡೆದು, ಲಕ್ಷಾಂತರ ಮಂದಿಯನ್ನು ಬಾಧಿಸಿರುವ ಮಾರಕ ಸೋಂಕಿನಿಂದ ರಕ್ಷಿಸಿಕೊಳ್ಳಲು ಮನೆಯ ಒಳಗೇ ಸುರಕ್ಷಿತರಾಗಿ ಇರಬೇಕಾದುದರ ಮಹತ್ವವನ್ನು ಭಾರತೀಯ ನಾಗರಿಕರು ಅರ್ಥ ಮಾಡಿಕೊಂಡಿದ್ದಾರೆ ಎಂದೂ ಪ್ರಧಾನಿ ಶ್ಲಾಘಿಸಿದರು. ದಿಗ್ಬಂಧನ ವಿಸ್ತರಣೆ ಮನವಿಗಳನ್ನು ಪರಿಶೀಲಿಸುವುದಾಗಿ ಅವರು ಹೇಳಿದರು.
’ದಿಗ್ಬಂಧನದ ಬಗ್ಗೆ ಮಾತನಾಡುವಾಗ ಜೀವ ಇದ್ದರೆ, ಜಗತ್ತು ಇದೆ (ಜಾನ್ ಹೈ ತೊ ಜಹಾಂ ಹೈ) ಎಂದು ನಾನು ಹೇಳಿದ್ದೆ. ನಾನು ದೇಶಕ್ಕೆ ಈ ಸಂದೇಶವನ್ನು ನೀಡುವಾಗ, ಪ್ರಾರಂಭದಲ್ಲಿಯೇ ಪ್ರತಿಯೊಬ್ಬ ನಾಗರಿಕನ ಪ್ರಾಣ ರಕ್ಷಣೆಗೆ ದಿಗ್ಬಂಧನ (ಲಾಕ್ ಡೌನ್) ಮತ್ತು ಸಾಮಾಜಿಕ ಅಂತರ ಪಾಲನೆ ಅತ್ಯಂತ ಮತ್ವದ್ದು ಎಂದು ಹೇಳಿದ್ದೆ’ ಎಂದು ಮುಖ್ಯಮಂತ್ರಿಗಳ ಜೊತೆಗೆ ಮಾತನಾಡುತ್ತಾ ಪ್ರಧಾನಿ ನುಡಿದರು.
’ದೇಶದ ಬಹುತೇಕ ಮಂದಿ ತಮ್ಮ ಕರ್ತವ್ಯವನ್ನು ಅರಿತುಕೊಂಡಿದ್ದಾರೆ ಮತ್ತು ಮನೆಗಳ ಒಳಗೇ ಉಳಿದುಕೊಳ್ಳುವುದರ ಮಹತ್ವ ಅರ್ಥ ಮಾಡಿಕೊಂಡಿದ್ದಾರೆ. ಸರ್ಕಾರ ಕೂಡಾ ಈ ಮಂತ್ರವನ್ನು ಅನುಸರಿಸುವ ಮೂಲಕ ಜನರ ಜೀವ ರಕ್ಷಣೆಗೆ ಯತ್ನಿಸಿದೆ ಎಂದು ಮೋದಿ ಹೇಳಿದರು.
’ಈಗ ಭಾರತದ ಉಜ್ವಲ ಭವಿಷ್ಯಕ್ಕಾಗಿ, ಸಮೃದ್ಧ ಮತ್ತು ಆರೋಗ್ಯಶಾಲಿ ಭಾರತಕ್ಕಾಗಿ ಜೀವ ಮತ್ತು ಜೀವನ ಈ ಎರಡೂ ಅಂಶಗಳ ಬಗ್ಗೆ ಗಮನ ನೀಡುವುದು ಅತ್ಯಂತ ಅಗತ್ಯವಾಗಿದೆ. ಬದುಕು ಮತ್ತು ಜಗತ್ತು ಎರಡಕ್ಕೂ ಇದು ಅತ್ಯಗತ್ಯ’ ಎಂದು ಅವರು ನುಡಿದರು.
ಲಾಕ್ ಡೌನ್ ವಿಸ್ತರಣೆ, ಪ್ರಧಾನಿಗೆ ಕೇಜ್ರಿವಾಲ್ ಬೆಂಬಲ: ಈ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವಾಪಿ ಲಾಕ್ ಡೌನ್ ವಿಸ್ತರಿಸುವ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂಬುದಾಗಿ
ವಿಡಿಯೋ ಕಾನ್ಫರೆನ್ಸಿನ ಬಳಿಕ ಟ್ವೀಟ್ ಮಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ’ಪ್ರಧಾನಿಯವರ ಈ ನಿರ್ಧಾರವನ್ನು ನಾನು ಬೆಂಬಲಿಸಿದ್ದೇನೆ. ಏಕೆಂದರೆ ಲಾಕ್ ಡೌನ್ ಕ್ರಮವು ಭಾರತಕ್ಕೆ ಇತರ ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಉತ್ತಮ ರೀತಿಯಲ್ಲಿ ರೋಗವನ್ನು ನಿಭಾಯಿಸಲು ನೆರವಾಗಿದೆ ಎಂದು ಹೇಳಿದರು.
ಪ್ರಧಾನಿಯವರು ಸಮರ್ಪಕವಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಇಂದು ಭಾರತದ ಸ್ಥಿತಿಯು ಇತರ ಹಲವಾರು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಉತ್ತಮವಾಗಿದೆ ಏಕೆಂದರೆ ಭಾರತವು ಲಾಕ್ ಡೌನ್ ಕ್ರಮವನ್ನು ಬೇಗನೇ ಆರಂಭಿಸಿದೆ. ಈಗ ಅದನ್ನು ನಿಲ್ಲಿಸಿದರೆ, ಅದರಿಂದ ಲಭಿಸಿರುವ ಎಲ್ಲ ಲಾಭಗಳು ನಷ್ಟವಾಗಿ ಬಿಡುತ್ತವೆ. ಈ ಅನುಕೂಲಗಳನ್ನು ಇನ್ನಷ್ಟು ಗಟ್ಟಿಗೊಳಿಸಲು ದಿಗ್ಬಂಧನವನ್ನು ವಿಸ್ತರಿಸುವುದು ಅತ್ಯಂತ ಮಹತ್ವದ ಕ್ರಮ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದರು.
ಏನಿದ್ದರೂ, ಕೇಜ್ರಿವಾಲ್ ಅವರ ಟ್ವೀಟ್ ಪ್ರಕಟಗೊಂಡ ಬೆನ್ನಲ್ಲೇ ಭಾರತ ಸರ್ಕಾರದ ಮುಖ್ಯ ವಕ್ತಾರ ಹಾಗೂ ಕೇಂದ್ರ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋದ ಮುಖ್ಯ ಮಹಾನಿರ್ದೇಶಕ ಕೆಎಸ್ ದಾಟ್ವಾಲಿಯಾ ಅವರು ಲಾಕ್ ಡೌನ್ ವಿಸ್ತರಣೆಗೆ ಮುಖ್ಯಮಂತ್ರಿಗಳು ಮಾಡಿರುವ ಮನವಿಯನ್ನು ಪ್ರಧಾನಿಯವರು ಪರಿಶೀಲಿಸುತ್ತಿದ್ದಾರೆ ಎಂದು ಸ್ಪಷ್ಟ ಪಡಿಸಿದರು.
Subscribe to:
Post Comments (Atom)
No comments:
Post a Comment