Wednesday, April 22, 2020

ಸುಗ್ರೀವಾಜ್ಞೆ: ಆರೋಗ್ಯ ಕಾರ್ಯಕರ್ತರಿಗೆ ಕೇಂದ್ರ ರಕ್ಷಣೆ

ಸುಗ್ರೀವಾಜ್ಞೆ:  ಆರೋಗ್ಯ ಕಾರ್ಯಕರ್ತರಿಗೆ  ಕೇಂದ್ರ  ರಕ್ಷಣೆ
 ಹಲ್ಲೆಗೆ ರೂ. ಲಕ್ಷ ದಂಡ, ವರ್ಷ ಜೈಲಿನ ಕಠಿಣ ಶಿಕ್ಷೆ
ನವದೆಹಲಿ: ಹಲ್ಲೆ ಪ್ರಕರಣಗಳಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ರಕ್ಷಣೆಗಾಗಿ ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಿದ್ದು ಇಂತಹ ಹಲ್ಲೆಗಳನ್ನು ಜಾಮೀನು ರಹಿತ ಅಪರಾಧವನ್ನಾಗಿ ಮಾಡಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ ಜಾವಡೇಕರ್  2020 ಏಪ್ರಿಲ್ 22ರ ಬುಧವಾರ ಇಲ್ಲಿ ತಿಳಿಸಿದರು.

ಸುಗ್ರೀವಾಜ್ಞೆಯ ಮೂಲಕ ಸಾಂಕ್ರಾಮಿಕ ರೋಗಗಳ ಕಾಯ್ದೆಗೆ ತರಲಾಗಿರುವ ತಿದ್ದುಪಡಿಗೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದೆ. ರಾಷ್ಟ್ರಪತಿಯವರ ಅಂಗೀಕಾರದೊಂದಿಗೆ ಸುಗ್ರೀವಾಜ್ಞೆಯನ್ನು ಅನುಷ್ಠಾನಗೊಳಿಸಲಾಗುವುದು. ಅಪರಾಧಗಳನ್ನು ಜಾಮೀನು ರಹಿತ ಮತ್ತು ದಂಡಾಧಿಕಾರಿಯ ಅಪ್ಪಣೆ ಇಲ್ಲದೆ ಬಂಧಿಸಬಹುದಾದ ಅಪರಾಧವನ್ನಾಗಿ ಮಾಡಲಾಗುವುದು ಎಂದು ಸಚಿವರು ನುಡಿದರು.

ತನಿಖೆಗಳು ೩೦ ದಿನದಲ್ಲಿ ಮುಕ್ತಾಯಗೊಳ್ಳುವುವು. ಲಕ್ಷ ರೂಪಾಯಿಗಳವರೆಗಿನ ದಂಡ ಸೇರಿದಂತೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಗಂಭೀರ ಪ್ರಕರಣಗಳಲ್ಲಿ ಶಿಕ್ಷೆಯು ಏಳು ವರ್ಷಗಳವರೆಗಿನ ಸೆರೆವಾಸ ಮತ್ತು ಐದು ಲಕ್ಷ ರೂಪಾಯಿಗಳ ದಂಡದವರೆಗೂ ವಿಸ್ತರಿಸಲ್ಪಡುತ್ತದೆಎಂದು ಸಚಿವರು ಹೇಳಿದರು.
ಸಂದೇಶ ಸ್ಪಷ್ಟವಾಗಿದೆ. ಆರೋಗ್ಯ ಸಿಬ್ಬಂದಿ ಮತ್ತು ವೈದ್ಯರ ಮೇಲಿನ ದಾಳಿಗಳನ್ನು ಸಹಿಸಲಾಗುವುದಿಲ್ಲಎಂದು ಜಾವಡೇಕರ್ ನುಡಿದರು.

ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಮೇಲೆ, ನಿರ್ದಿಷ್ಟವಾಗಿ ಕೊರೋನಾ ಕಾಳಜಿ ವಹಿಸುತ್ತಿರುವ ಸಿಬ್ಬಂದಿ ಮೇಲೆ ಹಲ್ಲೆಗಳನ್ನು ನಡೆಸಿದ ಬಗ್ಗೆ ಹಲವಾರು ದೂರುಗಳು ಸರ್ಕಾರಕ್ಕೆ ಬಂದಿವೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಜೊತೆಗಿನ ಸಭೆಯಲ್ಲಿ ರಾಷ್ಟ್ರದ ವಿವಿಧ ಭಾಗಗಳಲ್ಲಿ ಆರೋಗ್ಯ ಕಾರ್ಯಕರ್ತರ ಮೇಲೆ ದಾಳಿಗಳು ನಡೆದಿರುವ ವರದಿಗಳ ಹಿನ್ನೆಲೆಯಲ್ಲಿ ಸುರಕ್ಷತೆ ಒದಗಿಸುವ ಬಗ್ಗೆ ಸರ್ಕಾರವು ವೈದ್ಯರಿಗೆ ಭರವಸೆ ನೀಡಿದ ಕೆಲವೇ ಗಂಟೆಗಳಲ್ಲಿ ಕೇಂದ್ರ ಸಚಿವ ಸಂಪುಟವು ಸುಗ್ರೀವಾಜ್ಞೆ ಹೊರಡಿಸುವ ನಿಧಾರಕ್ಕೆ ಒಪ್ಪಿಗೆ ನೀಡಿತು.

ಆರೋಗ್ಯ ಕಾರ್ಯಕರ್ತರ ವಿರುದ್ಧದ ಹಿಂಸಾಚಾರ ನಿಗ್ರಹಕ್ಕೆ ಕೇಂದ್ರ ಸರ್ಕಾರವು ಕಾಯ್ದೆ ರೂಪಿಸದೇ ಇದ್ದಲ್ಲಿ ಏಪ್ರಿಲ್ ೨೩ರಂದುಕರಾಳ ದಿನಆಚರಿಸುವುದಾಗಿ ಭಾರತೀಯ ವೈದ್ಯಕಿಯ ಸಂಘವು (ಐಎಂಎ) ಸೋಮವಾರ ಹೇಳಿತ್ತು.

ವಿವಿಧ ಸಂಘಟನೆಗಳಿಗೆ ಸೇರಿದ ವೈದ್ಯರು ತಮ್ಮ ವಿರುದ್ಧದ ಹಲ್ಲೆಗಳನ್ನು ಜಾಮೀನುರಹಿತ ಅಪರಾಧವನ್ನಾಗಿ ಮಾಡಿ ಕಾನೂನು ತರುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು.

ಕೊರೋನಾವೈರಸ್ ಸೋಂಕು ಕಂಡು ಬಂದ ವ್ಯಕ್ತಿಗಳು ಅಥವಾ ಕೊರೋನಾವೈರಸ್ ರೋಗಿಗಳ ಬಂಧುಗಳನ್ನು ಕ್ವಾರಂಟೈನ್ಗೆ ಕಳುಹಿಸುವ ಸಲುವಾಗಿ ಹೋದಾಗ ವಿವಿಧ ಕಡೆಗಳಲ್ಲಿ ವೈದ್ಯಕೀಯ ವೃತ್ತಿ ನಿರತರು, ನಿರ್ದಿಷ್ಟವಾಗಿ ಕೊರೋನಾ ಕಾಳಜಿ ಸೇವಾ ನಿರತರ ಮೇಲೆ ಹಲ್ಲಗಳು ನಡೆದಿದ್ದವು.

ಇದಲ್ಲದೆ ಬಾಡಿಗೆ ಮನೆಗಳಲ್ಲಿ ಇರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರಿಗೆ ಅವರು ಕೋರೋನಾ ಸೋಂಕಿನ ವಾಹಕರಾಗಬಹುದು ಎಂಬ ಭೀತಿಯಿಂದ ಬಾಡಿಗೆಗೆ ಮುಂದುವರೆಸಲು ಒಪ್ಪದ ಮನೆಗಳ ಮಾಲೀಕರು ತೀವ್ರ ಕಿರುಕುಳ ನೀಡಿದ ಪ್ರಕರಣಗಳೂ ವರದಿಯಾಗಿದ್ದವು.

ಕೊರೋನಾ ನಿಯಂತ್ರಣ ಚಟುವಟಿಕೆಗೆ ೧೫,೦೦೦ ಕೋಟಿ ರೂ.
ಕೊರೋನಾ ನಿಯಂತ್ರಣ ಸಂಬಂಧಿತ ಕೆಲಸಗಳಿಗಾಗಿ ೧೫,೦೦೦ ಕೋಟಿ ರೂಪಾಯಿ ನೀಡಲು ಕೇಂದ್ರ ಸಚಿವ ಸಂಪುಟ ಸಭೆಯು  ಬುಧವಾರ  ಒಪ್ಪಿಗೆ ನೀಡಿತು.

ಪ್ರಧಾನಿ ನರೇಂದ್ರ ಮೋದಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊರೋನಾ ತುರ್ತು ಸ್ಪಂದನೆಗೆ, ಆರೋಗ್ಯ ವ್ಯವಸ್ಥೆ ಸಿದ್ಧಗೊಳಿಸಲು ೧೫,೦೦೦ ಕೋಟಿ ರೂಪಾಯಿ ನೀಡಲು ಒಪ್ಪಿಗೆ ನೀಡಲಾಯಿತು. ಹಣವನ್ನು ಮೂರು ಹಂತಗಳಲ್ಲಿ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಲಾಯಿತು.

ತುರ್ತಾಗಿ ೭೭೭೪ ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಿದ್ದು ಉಳಿದ ಹಣವನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಬಿಡುಗಡೆ ಮಾಡಲಾಗುವುದು. ಆಸ್ಪತ್ರೆ ಮೂಲಸೌಕರ್ಯ ನಿರ್ಮಾಣಕ್ಕೆ ಹಣವನ್ನು ಬಳಕೆ ಮಾಡಲಾಗುವುದು.

ಅದೇ ರೀತಿ ಪೋಷಕಾಂಶಗಳ ರಸಗೊಬ್ಬರ ಸಬ್ಸಿಡಿಗೆ ೨೨,೧೮೬ ಕೋಟಿ ರೂಪಾಯಿ ನೀಡಲು ಕೂಡಾ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

No comments:

Advertisement