Wednesday, April 15, 2020

ಕೇಂದ್ರದಿಂದ ಪರಿಷ್ಕೃತ ದಿಗ್ಬಂಧನ ಮಾರ್ಗಸೂಚಿ ಪ್ರಕಟಣೆ

ಕೇಂದ್ರದಿಂದ ಪರಿಷ್ಕೃತ ದಿಗ್ಬಂಧನ ಮಾರ್ಗಸೂಚಿ ಪ್ರಕಟಣೆ
ಏಪ್ರಿಲ್ 20ರ ಬಳಿಕ ಕೃಷಿ, ಉತ್ಪಾದನೆ, ನಿರ್ಮಾಣ ಚಟುವಟಿಕೆಗಳಿಗೆ ಅವಕಾಶ
ನವದೆಹಲಿ: ’ಸಾರ್ವಜನಿಕರಿಗೆ ಆಗುತ್ತಿರುವ ಕಷ್ಟಗಳನ್ನು ನಿವಾರಿಸುವ ಸಲುವಾಗಿ ಎರಡನೇ ಹಂತಹ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ)  ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರವು 2020 ಏಪ್ರಿಲ್ 15ರ ಬುಧವಾರ ಬಿಡುಗಡೆ ಮಾಡಿದ್ದು ಏಪ್ರಿಲ್ ೨೦ರ ಬಳಿಕ ಕೃಷಿ, ಇ-ಕಾಮರ್ಸ್, ಉತ್ಪಾದನೆ ಮತ್ತು ಐಟಿ ಸೇವಾ ಕ್ಷೇತ್ರಗಳ ಚಟುವಟಿಕೆಗಳಿಗೆ ಅವಕಾಶ ನೀಡಿತು.

ರಾಷ್ಟ್ರವ್ಯಾಪಿ ದಿಗ್ಬಂಧನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೇ ೩ರ ವರೆಗೆ ವಿಸ್ತರಿಸಿದ ಒಂದು ದಿನದ ಬಳಿಕ ಗೃಹ ಸಚಿವಾಲಯವು ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ. ಮಾರ್ಗದರ್ಶಿ ಸೂತ್ರಗಳ ಪ್ರಕಾರ ಸರ್ಕಾರವು  ಹಂತ ಹಂತವಾಗಿ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ಸಲುವಾಗಿ ಎಂನರೇಗಾ ಅಡಿಯಲ್ಲಿ ನಿರ್ಮಾಣ ಮತ್ತು ಗ್ರಾಮೀಣ ಕೆಲಸಗಳನ್ನು ಪುನಾರಂಭಿಸಲು ಅವಕಾಶ ನೀಡಿತು.

 ’ಪರಿಷ್ಕೃತ, ಒಗ್ಗೂಡಿಸಲಾಗಿರುವ ಮಾರ್ಗದರ್ಶಿ ಸೂತ್ರಗಳು ಗ್ರಾಮೀಣ ಭವಿಷ್ಯ ಮತ್ತು ಕೃಷಿ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ನಿರ್ಣಾಯಕವಾದ ವಲಯಗಳ ಕಾರ್‍ಯ ನಿರ್ವಹಣೆಯನ್ನು ಉದ್ದೇಶಿಸಿದೆ. ರಾಷ್ಟ್ರದಲ್ಲಿ ಕೋವಿಡ್-೧೯ ಹರದಂತೆ ನೋಡಿಕೊಳ್ಳುವ ಪ್ರಮುಖ ಉದ್ದೇಶದ ಸುರಕ್ಷತಾ ಕ್ರಮವು ಅಗ್ರಪ್ರಾಶಸ್ತ್ಯದ ಕೆಲಸವಾಗಿದ್ದು ಅದಕ್ಕೆ ಸಂಬಂಧಿಸಿದ ಶಿಷ್ಟಾಚಾರಗಳ ಪಾಲನೆಯ ಜೊತೆಗೇ ನಿರ್ದಿಷ್ಟ ವಲಯಗಳಲ್ಲಿ ಚಟುವಟಿಕೆ ಆರಂಭಕ್ಕೆ ಮಾರ್ಗದರ್ಶಿ ಸೂತ್ರಗಳ ಅಡಿಯಲ್ಲಿ ಅವಕಾಶ ನೀಡಲಾಗಿದೆ ಎಂದು ಸರ್ಕಾರೀ ಪ್ರಕಟಣೆ ತಿಳಿಸಿತು.

ಕಳೆದ ಬಾರಿಯ ವಿನಾಯ್ತಗಳ ಪಟ್ಟಿಗೆ ಹೊಸ ವಿನಾಯ್ತಿಗಳನ್ನು ಸೇರಿಸಿದ ಸರ್ಕಾರ, ಕೃಷಿ ಉತ್ಪನ್ನಗಳ ದಾಸ್ತಾನು, ಅಧಿಸೂಚಿತ ಮಂಡಿಗಳ ಮೂಲಕ ಕೃಷಿ ಮಾರುಕಟ್ಟೆ ಸೇರಿದಂತೆ ಎಲ್ಲ ಕೃಷಿ ಚಟುವಟಿಕೆUಳಿಗೆ ಅನುಮತಿ ನೀಡಲಾಗುವುದು ಎಂದು ಪ್ರಕಟಣೆ ಹೇಳಿದೆ. ಹಾಲು, ಹಾಲಿನ ಉತ್ಪನ್ನಗಳು, ಕೋಳಿಸಾಕಣೆ ಮತ್ತು ಪಶು ಸಂಗೋಪನೆ, ಚಹಾ, ಕಾಫಿ ಮತ್ತು ರಬ್ಬರ್ ತೋಟಗಾರಿಕಾ ಸರಬರಾಜು ಸರಪಳಿಯೂ ಆರಂಭವಾಗಲಿದೆ.

ರಾಷ್ಟ್ರದ ಶ್ರಮಿಕ ಬಲದಲ್ಲಿ ಶೇಕಡಾ ೧೨ರಷ್ಟು ಮಂದಿಗೆ ಉದ್ಯೋಗ ಒದಗಿಸುವ ಮತು ಭಾರತದ ಸಮಗ್ರ ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಶೇಕಡಾ ೧೭ರಷ್ಟು ಕಾಣಿಕೆ ನೀಡುವ ವಲಯವಾಗಿರುವ ಉತ್ಪಾದನಾ ಘಟಕಗಳಿಗೆ ಲಾಕ್‌ಡೌನ್ ಸಡಿಲಿಕೆ ನೀಡಲಾಯಿತು.

ಈ ಹಿಂದೆ, ಕೇವಲ ಔಷಧಗಳು ಮತ್ತು ಪಾರ್ಮಾಸ್ಯೂಟಿಕಲ್ಸ್ ಹಾಗೂ ಆಹಾರ ಸಂಸ್ಕರಣಾ ಘಟಕಗಳಿಗೆ ಮಾತ್ರವೇ ಕಾರ್‍ಯ ನಿರ್ವಹಿಸಲು ಅನುಮತಿ ನೀಡಲಾಗಿತ್ತು, ಆದರೆ ಈಗ ಗ್ರಾಮೀಣ ಪ್ರದೇಶಗಳ ಕೈಗಾರಿಕೆಗಳು,  ವಿಶೇಷ ಆರ್ಥಿಕ ವಲಯಗಳು, (ಎಸ್‌ಇಝಡ್) ಮತ್ತು ರಫ್ತು ಆಧಾರಿತ ಘಟಕUಳು, (ಇಒಯು), ಕೈಗಾರಿಕಾ ಎಸ್ಟೇಟ್‌ಗಳು ಮತ್ತು ಕೈಗಾರಿಕಾ ಟೌನ್‌ಶಿಪ್‌ಗಳಿಗೂ ಇದನ್ನು ವಿಸ್ತರಿಸಲಾಗಿದೆ.

ಐಟಿ ಹಾರ್ಡ್‌ವೇರ್ ಉತ್ಪಾದನೆ ಮತ್ತು ಕಲ್ಲಿದ್ದಲು, ಸೆಣಬು, ತೈಲ ಮತ್ತು ಪ್ಯಾಕೇಜಿಂಗ್ ವಸ್ತುಗಳ ಉತ್ಪಾದನಾ ಘಟಕಗಳು ಕೂಡಾ ಕಾರ್‍ಯಾರಂಭ ಮಾಡಬಹುದು. ತೈಲ ಮತ್ತು ಅನಿಲಶೋಧ/ ಸಂಸ್ಕರಣಾಗಾರಗಳೂ ಕಾರ್‍ಯ ನಿರ್ವಹಿಸಬಹುದು.

ಎಲೆಕ್ಟ್ರೀಷಿಯನ್‌ಗಳು, ಪ್ಲಂಬರುಗಳು, ಐಟಿ ರಿಪೇರಿಗಳು, ಬಡಗಿಗಳು ಮತ್ತು ಮೋಟಾರು ಮೆಕ್ಯಾನಿಕ್‌ಗಳು ಒದಗಿಸುವ ಸೇವೆಗಳಿಗೂ ಸರ್ಕಾರ ಅನುಮತಿ ಕೊಟ್ಟಿದೆ.

ಮುನಿಸಿಪಲ್ ಪ್ರದೇಶಗಳಲ್ಲಿ (ನಗರ ಪ್ರದೇಶ) ನಿರ್ಮಾಣ ಚಟುಟಿಕೆಗಳಿಗೆ ಅನುಮತಿ ನೀಡಲಾಗುವುದು ಆದರೆ ಘಟಕಗಳಲ್ಲಿನ ಕಾರ್ಮಿಕರು ಸ್ಥಳದಲ್ಲೇ ವಾಸವಾಗಿರಬೇಕು, ಮುನಿಸಿಪಲ್ ವ್ಯಾಪ್ತಿಯಿಂದ ಹೊರಗೆ ವಾಸಿಸಿರಬಾರದು ಎಂದು ಆದೇಶ ಹೇಳಿದೆ. ರಸ್ತೆ ನಿರ್ಮಾಣ, ನೀರಾವರಿ ಯೋಜನೆಗಳು, ಕಟ್ಟಡಗಳಿಗೂ ಗ್ರಾಮೀಣ ಪ್ರದೇಶದಲ್ಲಿ ಅವಕಾಶ ನೀಡಲಾಗಿದೆ.

ಅದಾಗ್ಯೂ, ರಾಜ್ಯಗಳು ಮತು ಕೇಂದ್ರಾಡಳಿತ ಪ್ರದೇಶಗಳು ಸಾಮಾಜಿಕ ಅಂತರ ಪಾಲನೆಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ಕ್ರಮಗಳನ್ನು ಕೈಗೊಂಡರೆ ಮಾತ್ರ ಈ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದು ಎಂದು ಆದೇಶ ಸ್ಪಷ್ಟ ಪಡಿಸಿದೆ.

‘ಹಾಲಿ ಲಾಕ್‌ಡೌನ್ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಅನುಷ್ಠಾನಗೊಳಿಸಿದ್ದನ್ನು ಆಧರಿಸಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ ಈ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದು ಎಂದು ಕೇಂದ್ರ ಗೃಹ ಕಾರ್‍ಯದರ್ಶಿ ಅಜಯ್ ಭಲ್ಲಾ ಹೊರಡಿಸಿರುವ ಆದೇಶವು ಹೇಳಿದೆ.

ಕಾರ್ಖಾನೆಗಳು, ಕೆಲಸದ ಸ್ಥಳಗಳು ಚಟುವಟಿಕೆಗಳನ್ನು ಆರಂಭಿಸಲು ಕೈಗೊಳ್ಳಬೇಕಾದ ಕ್ರಮಗಳ ವಿಸ್ತೃತ ಪಟ್ಟಿಯನ್ನು ಕೂಡಾ ಸರ್ಕಾರ ಬಿಡುಗಡೆ ಮಾಡಿದೆ. ಲಿಫ್ಟ್‌ಗಳು, ಮೆಟ್ಟಿಲುಗಳು, ವಾಶ್ ರೂಂ, ಕೆಲಸದ ಸ್ಥಳಗಳ ಶುಚೀಕರಣವನ್ನೂ ಅದೇಶದಲ್ಲಿ ತಿಳಿಸಲಾಗಿದೆ.

ಹೊರಗಿನಿಂದ ಬಂದ ಕಾರ್ಮಿಕರಿಗೆ ವಿಶೇಷ ಸಾಗಣೆ ವ್ಯವಸ್ಥೆಯನ್ನು ಮಾಡಬೇಕು ಮತ್ತು ವಾಹನಗಳನ್ನು ಶುಚಿಗೊಳಿಸಬೇಕು. ಕೆಲಸಗಾರರಿಗೆ ವೈದ್ಯಕೀಯ ವಿಮೆ ಮಾಡಿಸುವುದು ಕಡ್ಡಾಯ ಎಂದೂ ಆರೋಗ್ಯ ವ್ಯವಹಾರಗಳ ಸಚಿವಾಲಯ ಹೇಳಿದೆ.

ಕೆಲಸದ ಸ್ಥಳಗಳಲ್ಲಿ ಪಾಳಿಗಳ ಮಧ್ಯೆ ಒಂದು ಗಂಟೆಯ ಅಂತರ ಇರಬೇಕು ಮತ್ತು ಸಾಮಾಜಿಕ ಅಂತರ ಪಾಲನೆಯ ಸಲವಾಗಿ ಊಟಕ್ಕೆ ಬೇರೆ ಬೇರೆ ಸಮಯಗಳಲ್ಲಿ ಅವಕಾಶ ಕಲ್ಪಿಸಬೇಕು ಎಂದು ಆದೇಶ ಹೇಳಿದೆ.

ಗುಟ್ಕಾ ಮತ್ತು ತಂಬಾಕು ಮೇಲಿನ ನಿಷೇಧವನ್ನು ಸರ್ಕಾರ ಪುನರುಚ್ಚರಿಸಿದೆ ಮತ್ತು ಕಾರ್‍ಯ ಆರಂಭಕ್ಕೆ ಮುನ್ನ ಕೋವಿಡ್-೧೯ ಚಿಕಿತ್ಸೆ ಪಡೆದುಕೊಳ್ಳಲು ಸಮೀಪದ ಆಸ್ಪತ್ರೆಯನ್ನು ಗುರುತಿಸುವಂತೆ ಸಂಸ್ಥೆಗಳಿಗೆ ಸರ್ಕಾರ ಸೂಚಿಸಿದೆ.

ವಿಮಾನ, ರೈಲು ಮತ್ತು ರಸ್ತೆ ಮೂಲಕ ಎಲ್ಲ ಪಯಣ, ಶೈಕ್ಷಣಿಕ ಮತ್ತು ತರಬೇತಿ ಸಂಸ್ಥಗಳು, ಆತಿಥ್ಯ ಸೇವೆಗಳು, ಚಿತ್ರ ಮಂದಿರಗಳು ಮತ್ತು ಶಾಪಿಂಗ್ ಕಾಂಪ್ಲೆಕ್ಸ್‌ಗಳು ಈ ಹಿಂದಿನಂತೆಯೇ ಮುಚ್ಚಿರುತ್ತವೆ. ಎಲ್ಲ ಸಾಮಾಜಿಕ ಮತ್ತು ಇತರ ಸಭೆ ಸಮಾರಂಭಗಳು, ಧಾರ್ಮಿಕ ಸ್ಥಳಗಳು ದಿಗ್ಬಂಧನ ಜಾರಿಯಲ್ಲಿ ಇರುವವರೆಗೂ ಮುಚ್ಚಿರುತ್ತವೆ ಎಂದ ಸರ್ಕಾರ ಹೇಳಿದೆ.

ಹಂತ ಹಂತದ ಆರ್ಥಿಕ ಪುನಶ್ಚೇತನಕ್ಕಾಗಿ ಹೊರಡಿಸಲಾಗಿರುವ ಪರಿಷ್ಕೃತ ಮಾರ್ಗದರ್ಶಿ ಸೂತ್ರಗಳು ಏಪ್ರಿಲ್ ೧೦ರಿಂದ ಜಾರಿಗೆ ಬರಲಿವೆ.

ಸರ್ಕಾರವು ನಿಷೇಧಿಸಿದ ಮತ್ತು ಅನುಮತಿ ನೀಡಿರುವ ಚಟುವಟಿಕೆಗಳ ಪಟ್ಟಿ ಹೀಗಿದೆ:

ಯಾವುದೆಲ್ಲ ನಿಷೇಧಿತ?
ಪ್ರಯಾಣಿಕರ ಎಲ್ಲ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಯಾನ.
ಭದ್ರತಾ ಉದ್ದೇಶಗಳನ್ನು ಹೊರತು ಪಡಿಸಿ ಎಲ್ಲ ರೈಲುಗಳಲ್ಲಿ ಪ್ರಯಾಣಿಕರ ಪಯಣ.
ಸಾರ್ವಜನಿಕ ಸಾರಿಗೆಗಾಗಿ ಬಸ್ಸುಗಳು.
ಮೆಟ್ರೋ ರೈಲು ಸೇವೆಗಳು.
ವೈದ್ಯಕೀಯ ಕಾರಣಗಳು ಅಥವಾ ಈ ಮಾರ್ಗದರ್ಶಿ ಸೂತ್ರಗಳ ಅಡಿಯಲ್ಲಿ ಅನುಮತಿ ನೀಡಲಾದ ಚಟುವಟಿಕೆಗಳನ್ನು ಹೊರತು ಪಡಿಸಿದ ವ್ಯಕ್ತಿಗಳ ಅಂತರ ಜಿಲ್ಲೆ ಮತ್ತು ಅಂತರ ರಾಜ್ಯ ಚಲನವಲನ.
ಎಲ್ಲ ಶೈಕ್ಷಣಿಕ, ತರಬೇತಿ, ಬೋಧನಾ ಸಂಸ್ಥೆಗಳು.
ಎಲ್ಲ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳು (ಈ ಮಾರ್ಗದರ್ಶಿ ಸೂತ್ರಗಳ ಅಡಿಯಲ್ಲಿ ಅನುಮತಿ ನೀಡಲಾದ ನಿರ್ದಿಷ್ಟ ಚಟುವಟಿಕೆ ಹೊರತುಪಡಿಸಿ).
ಆತಿಥ್ಯ/ ಸತ್ಕಾರ ಸೇವೆಗಳು (ಈ ಮಾರ್ಗದರ್ಶಿ ಸೂತ್ರಗಳಲ್ಲಿ ನಿರ್ದಿಷ್ಟವಾಗಿ ಅನುಮತಿ ನೀಡಿದ ಚಟುವಟಿಕೆಯನ್ನು ಹೊರತು ಪಡಿಸಿ).
ಎಲ್ಲ ಧಾರ್ಮಿಕ ಸ್ಥಳಗಳು, ಪೂಜೆ/ ಪ್ರಾರ್ಥನಾ ಸ್ಥಳಗಳು, ಧಾರ್ಮಿಕ ಸಮಾವೇಶಗಳು.
ಹಾಟ್ ಸ್ಪಾಟ್ ಎಂಬುದಾಗಿ ಗುರುತಿಸಲಾಗಿರುವ ಪ್ರದೇಶಗಳಿಗೆ ಹೊರಗಿನಿಂದ ಯಾರ ಪ್ರವೇಶಕ್ಕೂ ಅನುಮತಿ ಇಲ್ಲ. ಈ ಪ್ರದೇಶದಲ್ಲಿ ಕಾನೂನು ಕಠಿಣವಾಗಿರಲಿದ್ದು, ಮಾಲಿನ್ಯಕ್ಕೆ ಕಾರಣವಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಸಾಮಾಜಿಕ, ರಾಜಕೀಯ, ಕ್ರೀಡೆ, ಸಾಂಸ್ಕೃತಿಕ, ಧಾರ್ಮಿಕ ಸೇರಿದಂತೆ ಎಲ್ಲಾ ರೀತಿಯ ಸಾರ್ವಜನಿಕ ಸಮಾರಂಭಗಳು.
ಚಿತ್ರ ಮಂದಿರಗಳು, ಮಾಲ್‌ಗಳು, ಶಾಪಿಂಗ್ ಕಾಂಪ್ಲೆಕ್ಸಗಳು, ಈಜುಕೊಳ ಸೇರಿದಂತೆ ಎಲ್ಲಾ ಕ್ರೀಡಾ ಮತ್ತು ಮನರಂಜನಾ ಕ್ಷೇತ್ರಗಳು.
ಈ ಅವಧಿಯಲ್ಲಿ ಎಲ್ಲೇ ಯಾರೇ ಮೃತರಾದರೂ ೨೦ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ.
ಟ್ಯಾಕ್ಸಿ, ರಿಕ್ಷಾ, ಸೈಕಲ್ ರಿಕ್ಷಾ, ಕ್ಯಾಬ್ ಸೇರಿದಂತೆ ಯಾವುದೇ ಖಾಸಗಿ ವಾಹನ ಸಾರಿಗೆಗೆ ಅವಕಾಶ ಇಲ್ಲ.

ಯಾವುದಕ್ಕೆ ನಿಷೇಧ ಇಲ್ಲ?
ಎಲ್ಲಾ ಆಸ್ಪತ್ರೆಗಳು, ಎಲ್ಲಾ ರೀತಿಯ ರೋಗಿಗಳಿಗೂ ಸೂಕ್ತ ಚಿಕಿತ್ಸೆ.
ಆಸ್ಪತ್ರೆಗೆ ಸಂಬಂಧಿಸಿದ ಎಲ್ಲಾ ರೀತಿಯ ಪ್ರಯೋಗಾಲಯ, ಔಷಧದ ಅಂಗಡಿಗಳು.
ರೈತರು ಕೃಷಿ ಮತ್ತು ತೋಟಗಾರಿಕೆಯಲ್ಲಿ ಸಂಪೂರ್ಣವಾಗಿ ತೊಡಗಲು ಅನುಮತಿ.
ರೈತರಿಗೆ ಪೂರಕವಾಗಿ ಗೊಬ್ಬರ, ಬೀಜ ಮತ್ತು ಕೃಷಿ ಸಲಕರಣೆಗಳನ್ನು ಮಾರಾಟ ಮಾಡುವ ಕಂಪೆನಿಗಳ ಕಾರ್‍ಯ ನಿರ್ವಹಣೆ.
ಆಹಾರದ ಸರಪಳಿ ತುಂಡರಿಯದಂತೆ ನೋಡಿಕೊಳ್ಳುವ ಸಲುವಾಗಿ ರೈತರಿಂದ ಪದಾರ್ಥಗಳನ್ನು ಕೊಂಡು ಮಾರುಕಟ್ಟೆಗೆ ಸಾಗಿಸುವ ಎಲ್ಲಾ ಮಾದರಿಯ ಸಂಪರ್ಕ.
ಗ್ರಾಮೀಣ ಭಾಗದಲ್ಲಿ ಎಂನರೇಗಾ (ಎಂಎನ್‌ಆರ್‌ಇಜಿಎ) ಕೆಲಸUಳು. ತನ್ಮೂಲಕ ಮೂಲಕ ಕೃಷಿ ಕೂಲಿಗಳಿಗೆ ಕೆಲಸ.
ಅಡಿಗೆ ಅನಿಲ ಪೂರೈಕೆ, ನೀರು ಸರಬರಾಜು ಹಾಗೂ ಶುಚಿ ಕೆಲಸದಲ್ಲಿ ತೊಡಗಿರುವರ ಚಟುವಟಿಕೆಗಳು.
ಗೂಡ್ಸ್ ರೈಲು ಸಂಚಾರ.
ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳು.
ಐಟಿ ಉದ್ಯಮ ಶೇ.೫೦ ರಷ್ಟು ಉದ್ಯೋಗಿಗಳ ಜೊತೆಗೆ ಕಚೇರಿಯಲ್ಲಿ ಎಂದಿನಂತೆ ನಿರ್ವಹಣೆ.
ಗ್ರಾಮ ಪಂಚಾಯತಿ ಮಟ್ಟದ ಸರ್ಕಾರಿ ಕಚೇರಿಗಳ ಕಾರ್‍ಯ ನಿರ್ವಹಣೆ.
ವಿಶೇಷ ಆರ್ಥಿಕ ವಲಯದ ಅಡಿಯಲ್ಲಿ ಬರುವ ಎಲ್ಲಾ ಕೈಗಾರಿಕೆಗಳು ಹಾಗೂ ಆಹಾರ ಸಂರಕ್ಷಣಾ ಘಟಕಗಳು ಎಂದಿನಂತೆ ಕೆಲಸ ಮಾಡಬಹುದು. ಆದರೆ, ಉದ್ಯೋಗಿಗಳನ್ನು ಸಾಮಾಜಿಕ ಅಂತರದ ನಿಮಯಮಗಳಿಗೆ ಅನುಸಾರವಾಗಿ ಕೈಗಾರಿಕೆಗಳಿಗೆ ಕರೆತರಬೇಕು. ಉತ್ತಮ ಸಾರಿಗೆ ವ್ಯವಸ್ಥೆ ನೀಡಬೇಕು.
ರಸ್ತೆ, ನೀರಾವರಿ, ಕಟ್ಟಡ ಸೇರಿದಂತೆ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಚಟುವಟಿಕೆಗಳು.
ಆರೋಗ್ಯ ಸೇವೆ ಸೇರಿದಂತೆ ತುರ್ತು ಸಂದರ್ಭದಲ್ಲಿ ಮಾತ್ರ ಖಾಸಗಿ ವಾಹನಗಳ ಓಡಾಟ.
ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ರಕ್ಷಣಾ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆಹಾರ ಇಲಾಖೆಗಳ ಕಾರ್‍ಯ ನಿರ್ವಹಣೆ.
ರಾಜ್ಯ ಸರ್ಕಾರದ ಪೊಲೀಸ್ ಇಲಾಖೆ, ಗೃಹ ರಕ್ಷಕ ದಳ, ಜಿಲ್ಲಾಡಳಿತ, ಖಜಾನೆ ಇಲಾಖೆಗಳ ಕಾರ್‍ಯ ನಿರ್ವಹಣೆ.
 ಈ ಮೇಲಿನ ಎಲ್ಲವೂ ಮುಂದಿನ ೧೯ ದಿನಗಳ ಅವಧಿಯಲ್ಲಿ ಸಾರ್ವಜನಿಕರು ಏನು ಮಾಡಬೇಕು? ಏನು ಮಾಡುವಂತಿಲ್ಲ? ಮತ್ತು ಏನೆಲ್ಲಾ ಲಭ್ಯ-ಅಲಭ್ಯ ಎಂಬ ಬಗೆಗಿನ ಮಾಹಿತಿಯಾಗಿದೆ. ಒಂದು ವೇಳೆ ಸಾರ್ವಜನಿಕರು ಈ ಎಲ್ಲಾ ನಿಯಮಗಳನ್ನು ಮೀರಿ ನಡೆದರೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

No comments:

Advertisement