ಬಿಎಸ್ ವೈ ದಾಖಲೆ ಮುರಿದರಂತೆ ಶಿವರಾಜ್ ಸಿಂಗ್ ಚೌಹಾಣ್
– ಹೇಗೆ?
ಭೋಪಾಲ್: ಮಧ್ಯಪ್ರದೇಶವು ಕೊರೋನಾವೈರಸ್ ಬಿಕ್ಕಟ್ಟಿನೊಂದಿಗೆ ಸಮರ ನಡೆಸುತ್ತಿರುವಾಗಲೇ ಬಿಜೆಪಿ ನೇತೃತ್ವದ ಸರ್ಕಾರ ರಚಿಸಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸಚಿವ ಸಂಪುಟ ರಹಿತ ಮುಖ್ಯಮಂತ್ರಿಯಾಗಿ ೨೫ ದಿನಗಳನ್ನು ಪೂರೈಸುವ ಮೂಲಕ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ದಾಖಲೆಯನ್ನು ಮುರಿದಿದ್ದು ಇದು ಈಗ ಮಧ್ಯಪ್ರದೇಶದಲ್ಲಿ ರಾಜಕೀಯ ಚರ್ಚೆಗೆ ಮುನ್ನುಡಿ ಬರೆದಿದೆ.
ಮಾಜಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರನ್ನು ಭೇಟಿ ಮಾಡಿ ತಮ್ಮ ನಿಕಟವರ್ತಿಗಳನ್ನು ಶಿವರಾಜ್ ಸಿಂಗ್ ಚೌಹಾಣ್ ಸಂಪುಟಕ್ಕೆ ಸೇರ್ಪಡೆ ಮಾಡುವಂತೆ ಕೋರಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಸಂಪುಟ ವಿಸ್ತರಣೆ ವಿಚಾರ ಇದೀಗ ಮುನ್ನೆಲೆಗೆ ಬಂದಿದೆ. ತಮ್ಮ ಜೊತೆಗೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ೬ ಮಂದಿಯನ್ನು ಚೌಹಾಣ್ ಸರ್ಕಾರಕ್ಕೆ ಸೇರ್ಪಡೆ ಮಾಡುವಂತೆ ಸಿಂಧಿಯಾ ಕೋರಿದ್ದಾರೆ ಎನ್ನಲಾಗಿದೆ.
ಕೊರೋನಾವೈರಸ್ ಸೋಂಕು ದೇಶದಲ್ಲಿ ವ್ಯಾಪಕಗೊಳ್ಳತೊಡಗಿದ್ದ ಹೊತ್ತಿನಲ್ಲೇ ಮಾರ್ಚ್ ೨೩ರಂದು ಸಂಕ್ಷಿಪ್ತ ಸಮಾರಂಭದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಚೌಹಾಣ್ ಅವರು ಇನ್ನೂ ತಮ್ಮ ಸಂಪುಟ ರಚನೆಯನ್ನು ಮಾಡಿಲ್ಲ. ಹೀಗೆ ಮಾಡುವ ಮೂಲಕ ಸಚಿವ ಸಂಪುಟ ರಹಿvರಾಗಿ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ದಾಖಲೆಯನ್ನು ಚೌಹಾಣ್ ಬರೆದಿದ್ದಾರೆ. ಚೌಹಾಣ್ ಅವರು ಗುರುವಾರ ಮುಖ್ಯಮಂತ್ರಿಯಾಗಿ ೨೫ ದಿನಗಳನ್ನು ಪೂರೈಸಿದ್ದಾರೆ.
ಈ ದಾಖಲೆ ಈವರೆಗೆ ಅಧಿಕಾರ ವಹಿಸಿಕೊಂಡ ೨೪ ದಿನಗಳ ಬಳಿಕ ಸಂಪುಟ ರಚಿಸಿದ್ದ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹೆಸರಿನಲ್ಲಿ ಇತ್ತು.
ಕಾಂಗ್ರೆಸ್ ರಾಜ್ಯಸಭಾ ಸದಸ್ಯ ವಿವೇಕ್ ಥಂಕಾ ಅವರು 2020 ಏಪ್ರಿಲ್ 17ರ ಶುಕ್ರವಾರ ಈ ಬೆಳವಣಿಗೆಯನ್ನು ನೆನಪಿಸಿದರು.
‘ಅಭಿನಂದನೆಗಳು ಶಿವರಾಜ್ ಜಿ. ಮಧ್ಯಪ್ರದೇಶದ ಗಾಡಾಂಧಕಾರದ ಮಧ್ಯೆ, ಸಚಿವ ಸಂಪುಟವಿಲ್ಲದೇ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ಭಾರತೀಯ ದಾಖಲೆ ನಿರ್ಮಿಸುವಲ್ಲಿ ನೀವು ಯಶಸ್ವಿಯಾಗಿದ್ದೀರಿ. ೨೪ ದಿನಗಳ ಹಿಂದಿನ ದಾಖಲೆ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅವರದಾಗಿತ್ತು. ಉಭಯರೂ ನಾಲ್ಕನೇ ಬಾರಿಗೆ ಮುಖ್ಮಮಂತ್ರಿಗಳಾಗಿದ್ದು ಪಕ್ಷಾಂತರದ ನೆರವಿನಿಂದ ಸರ್ಕಾರ ರಚಿಸಿದ್ದಾರೆ’ ಎಂದು ಥಂಕಾ ಟ್ವೀಟ್ ಮಾಡಿದ್ದಾರೆ.
ಕಮಲನಾಥ್ ಸರ್ಕಾರವನ್ನು ಅಕ್ರಮ ಮಾರ್ಗಗಳ ಮೂಲಕ ಉರುಳಿಸಲಾಯಿತು ಎಂದೂ ಥಂಕಾ ಬರೆದಿದ್ದಾರೆ.
ಹಿರಿಯ ಪತ್ರಕರ್ತರೊಬ್ಬರ ಟ್ವೀಟಿಗೆ ಉತ್ತರ ನೀಡುತ್ತಿದ್ದ ಥಂಕಾ, ’ತಮ್ಮ ಕಪಟ ಕೃತ್ಯಗಳ ಪರಿಣಾಮವಾಗಿ ಮಧ್ಯಪ್ರದೇಶವು ಹೇಗೆ ನಲುಗುತ್ತಿದೆ ಎಂಬುದನ್ನು ಅವರು (ಬಿಜೆಪಿ) ಈಗ ಅರ್ಥ ಮಾಡಿಕೊಂಡಿರಬಹುದು’ ಎಂದೂ ಬರೆದಿದ್ದಾರೆ.
’ಭೋಪಾಲ್ ೯೦ಕ್ಕೂ ಹೆಚ್ಚು ಪ್ರಕರಣಗಳಿಂದ ನಲುಗುತ್ತಿದ್ದೆ, ಇಂದೋರ್ ೮೦೦ಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣಗಳಿಂದ ನಲುಗುತ್ತಿದೆ. ದೇಶದಲ್ಲೇ ಅತ್ಯಂತ ಹೆಚ್ಚು ಸಾವುಗಳು ಸಂಭವಿಸಿದ್ದರೂ ಇದು ಬಿಜೆಪಿಯನ್ನು ಎಬ್ಬಿಸಿಲ್ಲ’ ಎಂದು ಹಿರಿಯ ವಕೀಲ ಟೀಕಿಸಿದ್ದಾರೆ.
ಸಂಪುಟ ರಚನೆ ವಿಳಂಬವಾಗಿರುವುದಕ್ಕಾಗಿ ಕಾಂಗ್ರೆಸ್ ನಾಯಕರು ನಿರಂತರವಾಗಿ ಚೌಹಾಣ್ ಅವರನ್ನು ಟೀಕಿಸುತ್ತಿದ್ದು, ಕೊರೋನಾವೈರಸ್ ಸಾಂಕ್ರಾಮಿಕದ ಮಧ್ಯೆ ಅಕ್ರಮ ಮಾರ್ಗಗಳ ಮೂಲಕ ಅಧಿಕಾರ ಹಿಡಿದಿದ್ದಾರೆ ಎಂದು ಆಪಾದಿಸಿದ್ದಾರೆ.
ಇದಕ್ಕೆ ಉತ್ತರ ನೀಡಿರುವ ಚೌಹಾಣ್, ’ಆಪ್ ಬಸ್ ರಾಜನೀತಿ ಕರೇಂ, ಮೈ ಬಸ್ ಕಾಮ್ ಕರ್ತಾ ರಹೂಂಗ. (ನೀವು ರಾಜಕೀಯ ಮಾಡುತ್ತಿರಿ, ನಾನು ಕೆಲಸ ಮಾಡುವುದನ್ನು ಮುಂದುವರೆಸುತ್ತೇನೆ) ಎಂದು ಹೇಳಿದ್ದರು.
No comments:
Post a Comment