ಕೊರೋನಾ ಲಾಕ್ಡೌನ್:
ರಾಹುಲ್- ಸಂತೋಷ್
ವಾಗ್ಯುದ್ಧ
ನವದೆಹಲಿ: ಮಾರಕ ಕೊರೋನಾವೈರಸ್ ಸೋಂಕನ್ನು ಹರಡದಂತೆ ತಡೆಯುವ ಸಲುವಾಗಿ ಜಾರಿಗೊಳಿಸಲಾಗಿರುವ ರಾಷ್ಟ್ರವ್ಯಾಪಿ ಲಾಕ್ಡೌನ್
ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ
ಬಿ.ಎಲ್. ಸಂತೋಷ್ ಅವರು 2020 ಏಪ್ರಿಲ್
16ರ ಗುರುವಾರ ವಾಕ್ ಸಮರ ನಡೆಸಿದರು.
ಕೋರೋನಾವೈರಸ್ ಸೋಂಕಿನ ವಿರುದ್ಧದ ಹೋರಾಟಕ್ಕೆ ಲಾಕ್ಡೌನ್
ಪರಿಹಾರವಲ್ಲ ಎಂಬುದಾಗಿ ರಾಹುಲ್ ಗಾಂಧಿಯವರು ಹೇಳಿದ ಬೆನ್ನಲ್ಲೇ ’ಹಾಗಾದರೆ ಕಾಂಗ್ರೆಸ್ ರಾಜ್ಯಗಳು ಏಕೆ ಮೊದಲು ಲಾಕ್ಡೌನ್
ವಿಸ್ತರಿಸಿದವು?’ ಎಂದು ಸಂತೋಷ್ ಅವರು ಕಾಂಗ್ರೆಸ್ ನಾಯಕನಿಗೆ ಪ್ರಖರ ತಿರುಗೇಟು ನೀಡಿದರು.
ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ ಸಂತೋಷ್, ‘ರಾಹುಲ್ ಗಾಂಧಿಯವರ ಪ್ರಕಾರ ಲಾಕ್ಡೌನ್ ಪರಿಹಾರವಲ್ಲ. ಹಾಗಿದ್ದರೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳೇಕೆ ಮೊದಲು ಲಾಕ್ ಡೌನ್ ವಿಸ್ತರಣೆ ಮಾಡಿದರು?’ ಎಂದು ಪ್ರಶ್ನಿಸಿದರು.
ಮಹಾರಾಷ್ಟ್ರದಲ್ಲಿನ ಕಾಂಗ್ರೆಸ್ ಮೈತ್ರಿ ಸರ್ಕಾರ ಮತ್ತು ಪಂಜಾಬ್ ಸರ್ಕಾರಗಳು ಹಿಂದಿನ ವಾರವೇ ಲಾಕ್ಡೌನ್
ಅವಧಿಯನ್ನು ವಿಸ್ತರಿಸಿದ್ದವು. ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ೨೧ ದಿನಗಳ ದಿಗ್ಬಂಧನ ಮುಗಿಯುವುದಕ್ಕೂ ಮುನ್ನವೇ ಈ ರಾಜ್ಯಗಳು ದಿಗ್ಬಂಧನ ಅವಧಿ ವಿಸ್ತರಿಸುವ ನಿರ್ಧಾರ ಕೈಗೊಂಡಿದ್ದವು.
ಏಪ್ರಿಲ್ ೧೫ರ ರಾತ್ರಿ ೯ ಗಂಟೆವರೆಗೆ ದೇಶದಲ್ಲಿ ೨,೭೪,೫೯೯ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ೫,೦೦೦ ಮತ್ತು ೧೦,೦೦೦ ಪ್ರಕರಣಗಳ ಮಾನದಂಡಗಳಲ್ಲಿ ಕ್ರಮವಾಗಿ ೧೧೪,೦೧೫ ಮತ್ತು ೨೧೭,೫೫೪ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಹಂತಗಳಲ್ಲಿ ಇಷ್ಟೊಂದು ಪ್ರಮಾಣದ ಪರೀಕ್ಷೆಯು ಅತ್ಯಂತ ದೊಡ್ಡದು. ಇದು ಅಮೆರಿಕ, ಬ್ರಿಟನ್ ಮತ್ತು ಇಟಲಿಯಲ್ಲಿ ನಡೆಸಿದ್ದಕ್ಕಿಂತಲೂ ದೊಡ್ಡದಾಗಿದೆ’
ಎಂದು ಇದೇ ವೇಳೆಗೆ ಬಿಜೆಪಿಯು ಅಧಿಕೃತ ಟ್ವಿಟರ್ ಖಾತೆಯ ಟ್ವೀಟ್ ಮೂಲಕ ಪ್ರತಿಪಾದಿಸಿದೆ.
ಇದಕ್ಕೂ ಮುನ್ನ ’ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಟಕ್ಕೆ ಲಾಕ್ಡೌನ್
ಪರಿಹಾರವಲ್ಲ. ನಿರ್ಬಂಧಗಳು ಸೋಂಕು ಹರಡುವ ಪ್ರಮಾಣವನ್ನು ಕಡಿಮೆ ಮಾಡಬಹುದು ಅಷ್ಟೇ. ಸರ್ಕಾರ ಪರೀಕ್ಷೆಗಳ ಪ್ರಮಾಣವನ್ನು ಯೋಜಿತ ರೀತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಸಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದರು.
ವಿಡಿಯೊ ಆಪ್ ಮೂಲಕ ಗುರುವಾರ ಪತ್ರಿಕಾಗೋಷ್ಟಿ ನಡೆಸಿದ ರಾಹುಲ್, ’ಹೇಗೆ ಯೋಚಿಸಿದರೂ ಕೊರೊನಾ ವೈರಾಣುವನ್ನು ಲಾಕ್ ಡೌನ್ ಮಣಿಸುತ್ತದೆ ಎಂದು ಅನಿಸುವುದಿಲ್ಲ. ಲಾಕ್ಡೌನ್ನಿಂದ ಕೆಲ ಸಮಯದವರೆಗೆ ವೈರಾಣು ಹರಡುವುದನ್ನು ತಡೆಯಬಹುದು ಅಷ್ಟೇ. ದೇಶದ ಸ್ಥಿತಿಗತಿ ಅರ್ಥವಾಗಲು ಪರೀಕ್ಷೆ (ಟೆಸ್ಟಿಂಗ್) ಪ್ರಮಾಣ ಹೆಚ್ಚಾಗಬೇಕು. ವೈರಾಣು ಸೋಂಕಿತರನ್ನು ಪತ್ತೆಹಚ್ಚಿ ಚಿಕಿತ್ಸೆಗೆ ನೀಡುವುದು ಸರ್ಕಾರದ ಆದ್ಯತೆಯಾಗಬೇಕು. ಕೇಂದ್ರ ಸರ್ಕಾರಕ್ಕೆ ಇದು ನನ್ನ ಸಲಹೆ’
ಎಂದು ಹೇಳಿದ್ದರು.
‘ಈಗಿನ ಸನ್ನಿವೇಶ ಗಮನಿಸಿದರೆ ಸರ್ಕಾರವು ವೈರಾಣುವನ್ನು ಬೆನ್ನತ್ತಿದಂತೆ ಕಾಣಿಸುತ್ತದೆ. ಇಂಥ ಕ್ರಮಗಳಿಂದ ಮಹಾ ಪಿಡುಗಿನ ಯಥಾಸ್ಥಿತಿಯ ಅರಿವು ಖಂಡಿತ ಆಗುವುದಿಲ್ಲ’
ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದರು.
‘ಪ್ರಸ್ತುತ ದೇಶದಲ್ಲಿ ಅತ್ಯಂತ ಕನಿಷ್ಠ ಮಟ್ಟದಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ಈ ಪ್ರಮಾಣವನ್ನು ದೊಡ್ಡಮಟ್ಟದಲ್ಲಿ ಹೆಚ್ಚಿಸಬೇಕು. ಯಾರನ್ನು ಪರೀಕ್ಷೆಗೆ ಒಳಪಡಿಸಬೇಕು ಎಂಬುದರ ಬಗ್ಗೆ ಸೂಕ್ತ ಕಾರ್ಯತಂತ್ರ ರೂಪಿಸಬೇಕು. ರಾಜ್ಯಗಳಿಗೆ ಸರಿಯಾದ ಮಾರ್ಗದರ್ಶನ ಬೇಕು’
ಎಂದು ರಾಹುಲ್ ಹೇಳಿದ್ದರು.
‘ದೇಶದ ಆರ್ಥಿಕ ಸ್ಥಿತಿಗತಿ ಮತ್ತು ಆರ್ಥಿಕ ಸಮಸ್ಯೆಗಳ ನಿರ್ವಹಣೆಗೆ ಒಂದು ಯೋಜನೆ ರೂಪಿಸಬೇಕು. ಬಡವರಿಗೆ ಅಗತ್ಯ ವಸ್ತುಗಳು ಕೈಗೆ ಸಿಗುವಂತೆ ಆಗಬೇಕು. ನೀವು ಅದನ್ನು ’ನ್ಯಾಯ್ ಯೋಜನೆ’
ಎನ್ನಬೇಕಾಗಿಲ್ಲ. ಆದರೆ ಬಡವರು ಹಸಿವಿನಿಂದ ಕಂಗೆಡದಂತೆ ನೋಡಿಕೊಳ್ಳಿ. ಇದನ್ನು ಟೀಕೆ ಎಂದುಕೊಳ್ಳಬೇಡಿ’
ಎಂದು ರಾಹುಲ್ ಹೇಳಿದ್ದರು.
ಪ್ರಧಾನಿಯವರೊಂದಿಗೆ ನನಗೆ ಹಲವು ವಿಚಾರಗಳ ಬಗ್ಗೆ ಭಿನ್ನಮತವಿದೆ. ಆದರೆ ಭಿನ್ನಮತದ ಬಗ್ಗೆ ಚರ್ಚಿಸಲು ಇದು ಸಮಯವಲ್ಲ. ನಾವೆಲ್ಲರೂ ಒಂದಾಗಿ ಮಹಾಪಿಡುಗಿನ ವಿರುದ್ಧ ಹೋರಾಡಬೇಕಾಗಿದೆ’
ಎಂದೂ ರಾಹುಲ್ ಹೇಳಿದ್ದರು.
‘ಹಿಂದೆ ಏನಾಯಿತು ಎಂಬುದನ್ನು ನಾನು ವಿಮರ್ಶಿಸುವುದಿಲ್ಲ. ನಾವು ಪರಸ್ಪರ ಬೈದಾಡಿಕೊಳ್ಳದೇ, ಒಂದಾಗಿ ಶ್ರಮಿಸೋಣ. ನಮ್ಮ ಸಂಪನ್ಮೂಲವನ್ನು ರಾಜ್ಯಗಳು ಮತ್ತು ಜಿಲ್ಲಾಡಳಿತಕ್ಕೆ ತಲುಪಿಸೋಣ’
ಎಂದು ರಾಹುಲ್ ಸಲಹೆ ಮಾಡಿದ್ದರು.
‘ಈಗಾಗಲೇ ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಆರ್ಥಿಕ ಸಮಸ್ಯೆಗಳು ತಲೆದೋರಬಹುದು. ಜೀವಗಳನ್ನು ಉಳಿಸಲು ಅರ್ಥ ವ್ಯವಸ್ಥೆಯನ್ನು ಹಾಳು ಮಾಡಲಾಗದು’
ಎಂದು ಕಾಂಗ್ರೆಸ್ ನಾಯಕ ಹೇಳಿದ್ದರು.
‘ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳ ಜೊತೆಗೆ ವಿವರಣಾತ್ಮಕ ಸಂವಾದ ನಡೆಸಬೇಕು. ಆದರೆ ಅವರ ಕಾರ್ಯವೈಖರಿಯೇ ವಿಭಿನ್ನವಾಗಿದೆ’
ಎಂದು ರಾಹುಲ್ ಗಾಂಧಿ ಹೇಳಿದ್ದರು.
No comments:
Post a Comment