Thursday, April 30, 2020

ಬಾಲಿವುಡ್ ಹಿರಿಯ ನಟ ‘ಒರಿಜಿನಲ್ ಚಾಕೋಲೇಟ್ ಬಾಯ್’ ರಿಷಿ ಕಪೂರ್ ನಿಧನ

ಬಾಲಿವುಡ್  ಹಿರಿಯ  ನಟ  ಒರಿಜಿನಲ್  ಚಾಕೋಲೇಟ್ ಬಾಯ್’  ರಿಷಿ  ಕಪೂರ್   ನಿಧನ
ಮುಂಬೈ:  ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ಹಿರಿಯ ನಟ, ’ಒರಿಜಿನಲ್ ಚಾಕೋಲೇಟ್ ಬಾಯ್ ರಿಷಿ ಕಪೂರ್ (೬೭) ಅವರು   2020  ಏಪ್ರಿಲ್  30ರ  ಗುರುವಾರ ಬೆಳಗ್ಗೆ ಮುಂಬೈ  ಆಸ್ಪತ್ರೆಯಲ್ಲಿ ನಿಧನರಾದರು.

೨೦೧೮ರಲ್ಲಿ  ಕ್ಯಾನ್ಸರ್  ಬಾಧೆಗೆ  ಗುರಿಯಾದ  ರಿಷಿ  ಕಪೂರ್ ಅಮೆರಿಕಕ್ಕೆ ತೆರಳಿ ನ್ಯೂಯಾರ್ಕ್ನಲ್ಲಿ ಚಿಕಿತ್ಸೆ ಪಡೆದಿದ್ದರು.  ಬುಧವಾರ ಉಸಿರಾಟದ ಸಮಸ್ಯೆ ಕಂಡು ಬಂದಿದ್ದರಿಂದ  ಮುಂಬೈಯ ಸರ್ ಹೆಚ್. ಎನ್. ರಿಲಯನ್ಸ್ ಫೌಂಡೇಶನ್  ಆಸ್ಪತ್ರೆಗೆ ದಾಖಲಾಗಿದ್ದರು.

ರಿಷಿ ಕಪೂರ್ ನಿಧನದ ಸುದ್ದಿಯನ್ನು ಅವರ ಸಹೋದರ ರಣಧೀರ್ ಕಪೂರ್ ಖಚಿತಪಡಿಸಿದರು.

ಬುಧವಾರವಷ್ಟೇ ನಟ ಇರ್ಫಾನ್ ಖಾನ್ ಅವರನ್ನು ಕಳೆದುಕೊಂಡ ದುಃಖ ಮಾಸುವ ಮೊದಲೇ ಭಾರತೀಯ ಚಿತ್ರರಂಗದ ಮತ್ತೊಬ್ಬ ದಿಗ್ಗಜ ರಿಷಿ ಕಪೂರ್ ಇಂದು ನಮ್ಮನಗಲಿದರು.

ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಭಾರತಕ್ಕೆ ವಾಪಾಸಾದ ಬಳಿಕ, ಕಳೆದ ಫೆಬ್ರುವರಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ರಿಷಿ ಕಪೂರ್ ಎರಡು ಭಾರೀ  ಆಸ್ಪತ್ರೆಗೆ ದಾಖಲಾಗಿದ್ದರು.

ದೀಪಿಕಾ ಪಡುಕೋಣೆ ಜೊತೆ ಸಿನಿಮಾ ಮಾಡುವುದಾಗಿಯೂ ರಿಷಿ ಕಪೂರ್ ಇತ್ತೀಚೆಗಷ್ಟೇ ಘೋಷಣೆ ಕೂಡ ಮಾಡಿದ್ದರು.

ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದ ರಿಷಿ ಕಪೂರ್ ಟ್ವಿಟರ್ ಖಾತೆಯಿಂದ ಏಪ್ರಿಲ್ ೨ರ ನಂತರ ಯಾವುದೇ ಟ್ವೀಟ್ ಪ್ರಕಟವಾಗಿರಲಿಲ್ಲ.

ಖ್ಯಾತ ನಟ ರಾಜ್ ಕಪೂರ್ ಹಾಗೂ ಕೃಷ್ಣ ರಾಜ್ ಕಪೂರ್ ಪುತ್ರನಾದ ರಿಷಿ ಕಪೂರ್, ‘ಮೇರಾ ನಾಮ್ ಜೋಕರ್’ ಮೂಲಕ ೧೯೭೦ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಸಿನಿಮಾದಲ್ಲಿ ಬಾಲನಟನಾಗಿ ನಟಿಸಿದ್ದ ಅವರಿಗೆ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು.

ರಿಷಿ ಕಪೂರ್ ಅವರು ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ ಮೊದಲ ಸಿನಿಮಾ ಬಾಬಿ (೧೯೭೩). ಚಿತ್ರದಲ್ಲಿ ಡಿಂಪಲ್ ಕಪಾಡಿಯಾ ಅವರು ರಿಷಿಗೆ ನಾಯಕಿಯಾಗಿದ್ದರು. ಚಿತ್ರದಲ್ಲಿನ ನಟನೆಗಾಗಿ ರಿಷಿ ಕಪೂರ್ ೧೯೭೪ರಲ್ಲಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದರು. ನಂತರ ರಿಷಿ ನಟಿಸಿದ್ದ ಹಲವು ಸಿನಿಮಾಗಳು ಅವರ ಖ್ಯಾತಿಯನ್ನು ಹೆಚ್ಚಿಸುವಂತೆ ಮಾಡಿದ್ದವು.

ಅವರು ನಟಿಸಿದ್ದಹೀನಾ ಚಿತ್ರವನ್ನು ಸಹೋದರ ರಣಧೀರ್ ಕಪೂರ್ ಮತ್ತು ತಂದೆ ರಾಜ್ ಕಪೂರ್ ನಿರ್ದೇಶಿಸಿದ್ದರು. ಅಂತೆಯೇ, ‘ಪ್ರೇಮ್ ಗ್ರಂಥ್ ಸಿನಿಮಾವನ್ನು ಮೂವರು ಸಹೋದರರೇ (ರಿಷಿ ಕಪೂರ್, ರಣಧೀರ್ ಕಪೂರ್ ಮತ್ತು ರಾಜೀವ್ ಕಪೂರ್) ನಿರ್ಮಿಸಿದ್ದರು.

೧೯೮೦ರಲ್ಲಿ ಮೊದಲ ಸಾರಿ ಸಹೋದರ gಣಧೀರ್ ಕಪೂರ್ ಜೊತೆಖಜಾನ ಸಿನಿಮಾದಲ್ಲಿ ರಿಷಿ ನಟಿಸಿದ್ದರು.
೨೦೦೦ ನಂತರದ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಕಪೂರ್, ೨೦೧೨ರಲ್ಲಿ ಹೃತಿಕ್ ರೋಷನ್ ನಟಸಿದ್ದಅಗ್ನಿಪಥ್ ಸಿನಿಮಾದಲ್ಲಿ ಖಳನಟನಾಗಿ ಮಿಂಚಿದ್ದರು. ಇದು ರಿಷಿ ಕಪೂರ್ ತಮ್ಮ ವೃತ್ತಿ ಬದುಕಿನಲ್ಲಿ ಖಳನಟನಾಗಿ ಕಾಣಿಸಿಕೊಂಡ ಮೊದಲ ಸಿನಿಮಾ.

ಡೋಂಟ್ ಸ್ಟಾಪ್ ಡ್ರೀಮಿಂಗ್, ‘ಸಂಬಾರ್ ಸಾಲ್ಸಾನಂತಹ ಹಾಲಿವುಡ್ ಸಿನಿಮಾಗಳಲ್ಲಿಯೂ ಅವರು ನಟಿಸಿದ್ದರು.

ರಿಷಿ ಕಪೂರ್ ನಟಿಸಿದ ಕೊನೆಯ ಸಿನಿಮಾ, ‘೧೦೨ ನಾಟ್ಔಟ್.

ಪತ್ನಿ ನೀತು ಮತ್ತು ಪುತ್ರಿ ರಿದ್ಧಿಮಾ ಕಪೂರ್ ಸಾಹ್ನಿ, ಪುತ್ರ ರಣಬೀರ್ ಕಪೂರ್ ಅವರನ್ನು ರಿಷಿ ಕಪೂರ್ ಅಗಲಿದ್ದಾರೆ.

ಲ್ಯುಕೇಮಿಯಾ ಕಾಯಿಯೊಂದಿಗೆ ಎರಡು ವರ್ಷ ಹೋರಾಡಿದ್ದ ರಿಷಿ ಕಪೂರ್  ಕೊನೆಯ ಉಸಿರಿನವರೆಗೂ ನಮ್ಮನ್ನು ರಂಜಿಸಿದರು ಎಂದು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಪ್ರತಿಕ್ರಿಯಿಸಿದರು.

ಅತ್ಯಂತ ಸ್ನೇಹಪರರಾಗಿದ್ದ ರಿಷಿ ಕಪೂರ್, ಬದುಕನ್ನು ಸಂಪೂರ್ಣವಾಗಿ ಅನುಭವಿಸಬೇಕು ಎಂಬ ಮನಃಸ್ಥಿತಿ ಹೊಂದಿದ್ದರು. ಎರಡು ಖಂಡಗಳಲ್ಲಿ ಚಿಕಿತ್ಸೆ ಪಡೆದುಕೊಂಡರು. ಚಿಕಿತ್ಸೆಯ ಅವಧಿಯಲ್ಲಾಗಲಿ, ರೋಗ ಬಾಧೆಯಾಗಲಿ ತಮ್ಮ ಉತ್ಸಾಹವನ್ನು ಕಿತ್ತುಕೊಳ್ಳಲು ರಿಷಿ ಅವಕಾಶ ಕೊಡಲಿಲ್ಲ. ಕುಟುಂಬ, ಗೆಳೆಯರು, ಆಹಾರ ಮತ್ತು ಚಲನಚಿತ್ರಗಳು ಅವರ ಗಮನದ ಕೇಂದ್ರವಾಗಿದ್ದವು. ಕಾಯಿಲೆಯ ಅವಧಿಯಲ್ಲಿ ರಿಷಿಯನ್ನು ಭೇಟಿಯಾದವರೆಲ್ಲರೂ ಅವರ ಉತ್ಸಾಹ ಕಂಡು ಅಚ್ಚರಿಪಡುತ್ತಿದ್ದರು.

ವಿಶ್ವದ ವಿವಿಧೆಡೆಗಳಿಂದ ಅಭಿಮಾನಿಗಳು ಹರಿಸಿದ ಪ್ರೀತಿಗೆ ರಿಷಿ ಅಭಾರಿಯಾಗಿದ್ದರು. ತಮ್ಮನ್ನು ಅಭಿಮಾನಿಗಳು ಸದಾ ನಗುವಾಗಿ ನೆನಪಿಡಬೇಕು, ಕಣ್ಣೀರಾಗಿ ಅಲ್ಲ ಎನ್ನುವುದು ಅವರ ಆಸೆಯಾಗಿತ್ತು.

ವೈಯಕ್ತಿಕವಾಗಿ ನಮ್ಮ ಕುಟುಂಬಕ್ಕೆ ಇದು ಅತಿದೊಡ್ಡ ನಷ್ಟ. ಆದರೆ ಜಗತ್ತು ಇಂದು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದೆ. ಜನರು ಸೇರುವುದಕ್ಕೆ ಹಲವು ನಿರ್ಬಂಧಗಳಿವೆ. ಎಲ್ಲ ಅಭಿಮಾನಿಗಳು, ಗೆಳೆಯರು ಮತ್ತು ಹಿತೈಷಿಗಳು ನೆಲದ ಕಾನೂನನ್ನು ಮೊದಲು ಗೌರವಿಸಬೇಕೆಂದು ನಾವು ವಿನಂತಿಸುತ್ತೇವೆ.
ರಿಷಿ ಕಪೂರ್ ಅವರಿಗೂ ಕಾನೂನನ್ನು ಗೌರವಿಸುವುದು ಅತ್ಯಂತ ಇಷ್ಟದ ಕೆಲಸವಾಗಿತ್ತು. ಆದ್ದರಿಂದ ಎಲ್ಲ ಅಭಿಮಾನಿಗಳೂ ಕಾನೂನು ಮುರಿಯದೇ ಸಹಕರಿಸಬೇಕು ಎಂದು ರಿಷಿ ಕಪೂರ್ ಕುಟುಂಬ ಅಭಿಮಾನಿಗಳಿಗೆ ಮನವಿ ಮಾಡಿತು.

ರಿಷಿ ಕಪೂರ್ ನಿಧನಕ್ಕೆ ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ಅವರು ಹೊರಟರು. ನಾನು ಕಳೆದುಕೊಂಡೆ ಎಂದು ಭಾವುಕವಾಗಿ ಟ್ವೀಟ್ ಮಾಡುವ ಮೂಲಕ ಶೋಕ ವ್ಯಕ್ತ ಪಡಿಸಿದರು.

ಅಕ್ಷಯ್ ಕುಮಾರ್, ರಜನೀಕಾಂತ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರೂ ರಿಷಿ ಕಪೂರ್ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿದ್ದಾರೆ.

No comments:

Advertisement