ಗ್ರಾಹಕರ ಸುಖ-ದುಃಖ
My Blog List
Saturday, April 4, 2020
ದುಬೈಯಿಂದ ಬಂದ ವ್ಯಕ್ತಿಯಿಂದ ಕುಟುಂಬದ ೧೧ ಮಂದಿಗೆ ಕೊರೋನಾ
ದುಬೈಯಿಂದ ಬಂದ ವ್ಯಕ್ತಿಯಿಂದ ಕುಟುಂಬದ ೧೧ ಮಂದಿಗೆ ಕೊರೋನಾ
ಮೊರೇನಾ (ಮಧ್ಯಪ್ರದೇಶ): ತನ್ನ ತಾಯಿಯ ಅಂತ್ಯ ಕ್ರಿಯೆ ನೆರವೇರಿಸುವ ಸಲುವಾಗಿ ಮಾರ್ಚ್ ೧೭ರಂದು ದುಬೈಯಿಂದ ಮಧ್ಯಪ್ರದೇಶದ ಮೊರೇನಾ ಜಿಲ್ಲೆಗೆ ಬಂದಿದ್ದ ವ್ಯಕ್ತಿಯೊಬ್ಬನಿಂದ ಆತನ ಕುಟುಂಬದ ೧೧ ಮಂದಿಗೆ ಕೊರೋನಾವೈರಸ್ ಸೋಂಕು ಹರಡಿದ ಘಟನೆ ಘಟಿಸಿದೆ.
ದುಬೈಯಿಂದ ವಾಪಸಾದ ಈ ವ್ಯಕ್ತಿ ಮತ್ತು ಆತನ ಪತ್ನಿಗೆ ಕೋವಿಡ್-೧೯ ಸೋಂಕು ತಗುಲಿದ್ದು ಬುಧವಾರ ಖಚಿತವಾಗಿತ್ತು. ಅವರ ಕುಟುಂಬ ಸದಸ್ಯರಿಗೂ ವ್ಯಾಧಿಯ ಸೋಂಕು ಅಂಟಿರುವುದು ಶುಕ್ರವಾರ ಸಂಜೆ ಖಚಿತ ಪಟ್ಟಿತು. ಮುಂಜಾಗರೂಕತಾ ಕ್ರಮವಾಗಿ ಪರೀಕ್ಷೆಗೆ ಕರೆದೊಯ್ದಾಗ ಸದರಿ ವ್ಯಕ್ತಿಯ ಕುಟುಂಬ ಸದಸ್ಯರಿಗೂ ಕೊರೋನಾವೈರಸ್ ಬಾಧಿಸಿದ್ದು ಗೊತ್ತಾಯಿತು.
’ಮೊದಲೇ ಸೋಂಕು ತಗುಲಿದ್ದ ವ್ಯಕ್ತಿಯಿಂದ ಕುಟುಂಬದ ಇತರ ೧೦ ಸದಸ್ಯರಿಗೆ ಹೊಸದಾಗಿ ಕೊರೋನಾವೈರಸ್ ಸೋಂಕು ತಗುಲಿದೆ. ನಾವು ಕುಟುಂಬ ಸದಸ್ಯರು ಸೇರಿದಂತೆ ಆತನ ಜೊತೆ ಸಂಪರ್ಕಕ್ಕೆ ಬಂದ ೨೮ ಜನರನ್ನು ಪರೀಕ್ಷೆಗೆ ಒಳಪಡಿಸಿದ್ದೇವೆ’ ಎಂದು ಮೊರೇನಾ ಜಿಲ್ಲಾಧಿಕಾರಿ ಪ್ರಿಯಂಕಾ ದಾಸ್ ಹೇಳಿದರು.
ಇದು ಬಡ ಕುಟುಂಬವಾಗಿದ್ದು, ಸಣ್ಣ ಇಕ್ಕಟ್ಟಾದ ಗುಡಿಸಲಿನಲ್ಲಿ ಎಲ್ಲರೂ ವಾಸವಾಗಿದ್ದಾರೆ. ಕೊರೋನಾ ಇತರ ಸದಸ್ಯರಿಗೂ ಹರಡಲು ಇದೇ ಕಾರಣ. ಪರೀಕ್ಷೆ ನಡೆಸಲಾದ ಇತರ ೧೮ ಮಂದಿಗೆ ಸೋಂಕು ತಗುಲಿಲ್ಲ ಎಂದು ವರದಿ ಹೇಳಿದೆ ಎಂದು ಜಿಲ್ಲಾಧಿಕಾರಿ ನುಡಿದರು.
ದುಬೈಯಿಂದ ತಾಯಿ ಅಂತ್ಯಕ್ರಿಯೆ ಸಲುವಾಗಿ ಬಂದ ವ್ಯಕ್ತಿ ದುಬೈ ಮೂಲದ ಹೋಟೆಲಿನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದು, ಆತ ತನ್ನ ಕುಟುಂಬ ಸದಸ್ಯರು ಮತ್ತು ಇತರ ಬಂಧು ಬಾಂಧವರನ್ನೂ ಅಂತ್ಯಕ್ರಿಯೆಗೆ ಆಹ್ವಾನಿಸಿದ್ದ. ಈ ವ್ಯಕ್ತಿ ಮತ್ತು ಆತನ ಪತ್ನಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು ಖಚಿತವಾದ ಬಳಿಕ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಇತರರನ್ನೂ ಏಕಾಂತವಾಸಕ್ಕೆ ಒಳಪಡಿಸಲಾಗಿದೆ.
ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಕುಟುಂಬ ಸದಸ್ಯರಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು ಖಚಿತವಾದ ಬಳಿಕ ಆಡಳಿತವು ವಾರ್ಡ್ ನಂಬರ್ ೨೭ನ್ನು ’ಕಂಟೋನ್ಮೆಂಟ್ ಪ್ರದೇಶ’ ಎಂಬುದಾಗಿ ಘೋಷಿಸಿ, ಸಮಸ್ಯೆಗೆ ಒಳಗಾದ ಎಲ್ಲರನ್ನೂ ಆಸ್ಪತ್ರೆಗಳಲ್ಲಿನ ಐಸೋಲೇಷನ್ ವಾರ್ಡುಗಳಿಗೆ ಸ್ಥಳಾಂತರಿಸಿತು.
Labels:
Coronavirus,
Flash News,
India,
Madhya Pradesh,
Nation,
News,
ಕೊರೋನಾವೈರಸ್,
ರಾಷ್ಟ್ರೀಯ,
ಸುದ್ದಿ
Subscribe to:
Post Comments (Atom)
No comments:
Post a Comment