ತಬ್ಲಿಘಿ ಜಮಾತ್ ನಾಯಕ ನಾಪತ್ತೆ, ಆಡಿಯೋ ಬಿಡುಗಡೆ
ಸ್ವಯಂ ಏಕಾಂತವಾಸ, ಸರ್ಕಾರದ ಜೊತೆ ಸಹಕರಿಸಲು ಕರೆ
ನವದೆಹಲಿ: ದೆಹಲಿಯ ನಿಜಾಮುದ್ದೀನ್ ಪ್ರದೇಶದ ತಬ್ಲಿಘಿ ಜಮಾತ್ ನಾಯಕ ಮೌಲಾನಾ ಸಾದ್ ಖಾಂಡ್ಲವಿ ಅವರು ನಾಪತ್ತೆಯಾಗಿದ್ದು, ಕೊರೋನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿ 2020 ಏಪ್ರಿಲ್ 02ರ ಗುರುವಾರ ಆಡಿಯೋ ಬಿಡುಗಡೆ ಮಾಡಿದರು.
ರಾಷ್ಟ್ರದ ರಾಜಧಾನಿಯ ನಿಜಾಮುದ್ದೀನ್ ಪ್ರದೇಶದ ಮರ್ಕಜ್ ಕಟ್ಟಡದಲ್ಲಿ ಧಾರ್ಮಿಕ ಸಮಾವೇಶ ಸಂಘಟಿಸಿದ್ದಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಾದ ಬಳಿಕ ಮೌಲಾನಾ ಸಾದ್ ನಾಪತ್ತೆಯಾಗಿ ಅಜ್ಞಾತವಾಸಕ್ಕೆ ಒಳಗಾಗಿದ್ದಾರೆ.
‘ನಾವು ಯಾವುದೇ ಸ್ಥಳಗಳಲ್ಲಿ ಸಭೆ ಸೇರುವುದನ್ನು ನಿವಾರಿಸಬೇಕು ಮತ್ತು ನಾವು ಏನು ಮಾಡಬೇಕು ಎಂದು ಸರ್ಕಾರ ಮತ್ತು ಕಾನೂನು ಬಯಸುತ್ತದೋ ಅದನ್ನು ಅನುಸರಿಸಬೇಕು. ಈ ಸಮಯದಲ್ಲಿ ಅವರಿಗೆ ಬೆಂಬಲ ನೀಡುವುದು ಮತ್ತು ನೆರವಾಗುವುದು ನಮ್ಮ ಕರ್ತವ್ಯ ಕೂಡಾ’ ಎಂದು ಖಾಂಡ್ಲವಿ ಜಮಾತ್ ಸದಸ್ಯರಿಗೆ ಮರ್ಕಜ್ನ ಯೂ ಟ್ಯೂಬ್ ಚಾನೆಲ್ನಲ್ಲಿ ಪ್ರಕಟಿಸಲಾಗಿರುವ ಆಡಿಯೋ ಸಂದೇಶದಲ್ಲಿ ಸೂಚಿಸಿದರು.
‘ನೀವು ಎಲ್ಲಿದ್ದೀರೋ ಅಲ್ಲೇ, ಸ್ವತಃ ಏಕಾಂಗಿವಾಸಕ್ಕೆ (ಕ್ವಾರಂಟೈನ್) ಒಳಗಾಗಿ. ಇದು ಇಸ್ಲಾಂ ಅಥವಾ ಷರಿಯಾಕ್ಕೆ ವಿರುದ್ಧವಲ್ಲ’ ಎಂದೂ ಅವರು ಸ್ಪಷ್ಟ ಪಡಿಸಿದರು.
ಖಾಂಡ್ಲವಿ ಅವರು ಅಜ್ಞಾತ ಸ್ಥಳದಲ್ಲಿ ಅಡಗಿದ್ದಾರೆ ಎಂದು ನಂಬಲಾಗಿದೆ. ಯೂ ಟ್ಯೂಬ್ ಮೂಲಕ ಪ್ರಕಟಗೊಂಡಿರುವ ಆಡಿಯೋದಲ್ಲಿ ಖಾಂಡ್ಲವಿ ಸ್ವತಃ ತಾವು ಸ್ವಯಂ ಏಕಾಂತವಾಸದಲ್ಲಿ ಇರುವುದಾಗಿ ಹೇಳಿದ್ದು ದಾಖಲಾಗಿದೆ.
‘ನಾನು ವೈದ್ಯರ ಸಲಹೆಯಂತೆ ದೆಹಲಿಯಲ್ಲೇ ಅಜ್ಞಾತಸ್ಥಳದಲ್ಲಿ ಸ್ವಯಂ ಏಕಾಂತವಾಸದಲ್ಲಿ ಇದ್ದೇನೆ ಮತ್ತು ಜಮಾತ್ನ ಎಲ್ಲರಿಗೂ ರಾಷ್ಟ್ರದಲ್ಲೇ ಎಲ್ಲಿದ್ದೀರೋ ಅಲ್ಲೇ ಕಾನೂನಿನ ನಿರ್ದೇಶನಗನ್ನು ಪಾಲಿಸಿ ಎಂದು ಮನವಿ ಮಾಡುತ್ತೇನೆ’ ಎಂದು ಖಾಂಡ್ಲವಿ ಆಡಿಯೋದಲ್ಲಿ ಹೇಳಿದರು.
ಖಾಂಡ್ಲವಿ ಪತ್ತೆಗಾಗಿ ದೆಹಲಿ ಪೊಲೀಸರ ಅಪರಾಧ ಶಾಖೆಯು ರಾಷ್ಟ್ರದ ರಾಜಧಾನಿ ಮತ್ತು ಉತ್ತರ ಪ್ರದೇಶದ ಹಲವೆಡೆಗಳಲ್ಲಿ 2020 ಏಪ್ರಿಲ್ 01ರ ಬುಧವಾರದಿಂದ ದಾಳಿಗಳನ್ನು ನಡೆಸುತಿದೆ. ದೆಹಲಿಯ ಝಾಕೀರ್ ನಗರ ಮತ್ತು ನಿಜಾಮುದ್ದೀನ್ನಲ್ಲಿನ ಅವರ ಮೂರು ನಿವಾಸಗಳಲ್ಲಿ ಈವರೆಗೆ ದಾಳಿಗಳನ್ನು ನಡೆಸಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಖಾಂಡ್ಲವಿ ಅವರು ಸುಮಾರು ೨೦೦ ರಾಷ್ಟ್ರಗಳಲ್ಲಿ ೧೦೦ ಕೋಟಿ ಅನುಯಾಯಿಗಳನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ.ಜಮಾತ್ನ ಕೇಂದ್ರ ಕಚೇರಿಯಾಗಿ ನಿಜಾಮುದ್ದೀನ್ ಮರ್ಕಜ್ ಕಾರ್ಯ ನಿರ್ವಹಿಸುತ್ತಿತ್ತು.
ಖಾಂಡ್ಲವಿ ಅವರ ಕುಟುಂಬದ ಮೂಲ ಪಶ್ಚಿಮ ಉತ್ತರಪ್ರದೇಶದ ಶಾಮ್ಲಿ ಸಮೀಪದ ಖಾಂಡ್ಲಾ ಹೆಸರಿನ ಸ್ಥಳ. ಇದು ದೆಹಲಿಯಿಂದ ಸುಮಾರು ೮೦ ಕಿಮೀ ದೂರದಲ್ಲಿದೆ.
ಮುಸ್ಲಿಮ್ ಜಗತ್ತಿನಲ್ಲಿ ಅತ್ಯಂತ ಪ್ರಭಾವಶಾಲಿ ಚಳವಳಿಗಳಲ್ಲಿ ಒಂದು ಎಂಬುದಾಗಿ ಪರಿಗಣಿತವಾಗಿರುವ ತಬ್ಲಿಘಿ ಜಮಾತ್ನ್ನು ಮೌಲಾನಾ ಸಾದ್ ಅವರ ಮುತ್ತಜ್ಜ ಮೌಲಾನಾ ಮುಹಮ್ಮದ್ ಇಲ್ಯಾಸ್ ಖಾಂಡ್ಲವಿ ಸ್ಥಾಪಿಸಿದ್ದರು. ತಬ್ಲಿಘಿ ಜಮಾತ್ ಚಳವಳಿಯು ದೇವಬಂದ್ ಚಳವಳಿಯ ಕವಲಾಗಿದ್ದು ಪ್ರವಾದಿ ಮೊಹಮ್ಮದರು ಬೋಧಿಸಿದ ನೈಜ ಇಸ್ಲಾಮ್ನ್ನು ಪುನರುಜ್ಜೀವನಗೊಳಿಸುವ ಗುರಿ ಹೊಂದಿದೆ.
No comments:
Post a Comment