Thursday, April 2, 2020

ಮದ್ಯ ಮಾರಾಟಕ್ಕೆ ದಿಗ್ಬಂಧನ ಸಡಿಲು: ಕೇರಳ ಸರ್ಕಾರಕ್ಕೆ ಹೈಕೋರ್ಟ್ ತಡೆ


ಮದ್ಯ ಮಾರಾಟಕ್ಕೆ ದಿಗ್ಬಂಧನ ಸಡಿಲು: ಕೇರಳ ಸರ್ಕಾರಕ್ಕೆ ಹೈಕೋರ್ಟ್ ತಡೆ
ತಿರುವನಂತಪುರಂ: ವೈದ್ಯರು ಔಷಧ ಚೀಟಿ (ಪ್ರಿಸ್ಕ್ರಿಪ್ಷನ್) ಬರೆದುಕೊಟ್ಟರೆ ವ್ಯಸನಿಗಳಿಗೆ ಮದ್ಯ ಖರೀದಿಸಲು ಅವಕಾಶ ನೀಡುವ ರಾಜ್ಯ ಸರ್ಕಾರದ ಕ್ರಮಕ್ಕೆ ಕೇರಳ ಹೈಕೋರ್ಟ್ 2020 ಏಪ್ರಿಲ್ 02ರ ಗುರುವಾರ ತಡೆಯಾಜ್ಞೆ ನೀಡಿತು. ಇದರಿಂದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರ ಭಾರೀ ಮುಜುಗರ ಅನುಭವಿಸಿತು.

ನ್ಯಾಯಮೂರ್ತಿಗಳಾದ .ಕೆ.ಜಯಶಂಕರನ್ ನಂಬಿಯಾರ್ ಮತ್ತು ಶಾಜಿ ಪಿ ಚಾಲಿ ಅವರನ್ನೊಳಗೊಂಡ ಹೈಕೋರ್ಟ್ ನ್ಯಾಯಪೀಠವು ಸರ್ಕಾರದ ಆದೇಶವನ್ನು "ಗೊಂದಲದ" ಮತ್ತು "ವಿಪತ್ತಿನ ಪಾಕವಿಧಾನ" ಎಂದು ಬಣ್ಣಿಸಿತು.

ಸರ್ಕಾರದ ಆದೇಶದ ವಿರುದ್ಧ ಸಾಮಾಜಿಕ ಕಾರ್ಯಕರ್ತರು, ವೈದ್ಯರು ಮತ್ತು ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಘಟಕವು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬಳಿಕ ಪೀಠವು ಕ್ರಮಕ್ಕೆ ಮುಂದಾಯಿತು.

ಸರ್ಕಾರಿ ವೈದ್ಯರ ಶಿಫಾರಸಿನೊಂದಿಗೆ ಬಂದರೆ ಮದ್ಯ ಮಾರಾಟಗಾರರಿಗೆ, ವ್ಯಸನಿಗಳಿಗೆ ನಿಯಂತ್ರಿತ ಪ್ರಮಾಣದಲ್ಲಿ ಮದ್ಯವನ್ನು ಮಾರಾಟ ಮಾಡಲು ಕೇರಳದ ಅಬಕಾರಿ ಇಲಾಖೆಯು ಸೋಮವಾರ ಅನುಮತಿ ನೀಡಿತ್ತು.

ಬೆನ್ನಲ್ಲೇ, ಸರ್ಕಾರದ ಆದೇಶವು ವೈದ್ಯರು ಮತ್ತು ವಿರೋಧ ಪಕ್ಷಗಳ ತೀಕ್ಷ್ಣ ಟೀಕೆಗೆ ಗುರಿಯಾಗಿತ್ತು. ರಾಷ್ಟ್ರವ್ಯಾಪಿ ದಿಗ್ಬಂಧನದಿಂದಾಗಿ (ಲಾಕ್ ಔಟ್) ಮದ್ಯ ಸಿಗದ ಕಾರಣ ಎಂಟು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ  ಎಂದು ಹೇಳುವ ಮೂಲಕ ಪಿಣರಾಯಿ ವಿಜಯನ್ ಸರ್ಕಾರ ಆದೇಶವನ್ನು ಸಮರ್ಥಿಸಿಕೊಂಡಿತ್ತು.

ಸರ್ಕಾರವು ಗುರುವಾರ ನ್ಯಾಯಾಲಯದಲ್ಲಿಯೂ ಇದೇ ರೀತಿಯ ಪ್ರತಿವಾದವನ್ನು ಮಂಡಿಸಿತು. ಚಿಕಿತ್ಸೆಯ ಭಾಗವಾಗಿ ವ್ಯಸನಿಗಳಿಗೆ ಮಧ್ಯಮ ಪ್ರಮಾಣದಲ್ಲಿ ಮದ್ಯವನ್ನು ನೀಡಲಾಗುತ್ತದೆ ಎಂದು ರಾಜ್ಯದ ಕಾನೂನು ಅಧಿಕಾರಿ ವಿವರಿಸಲು ಪ್ರಯತ್ನಿಸಿದರು. ಆದರೆ ನ್ಯಾಯಮೂರ್ತಿಗಳಿಗೆ ಸರ್ಕಾರದ ಪ್ರತಿಪಾದನೆ ಸಮಾಧಾನ ನೀಡಲಿಲ್ಲ.

ಆಲ್ಕೋಹಾಲ್ ವಿದ್ಡ್ರಾವಲ್ ಸಿಂಡ್ರೋಮ್ನಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮದ್ಯ ನೀಡುವ ರಾಜ್ಯದ ಏಕಪಕ್ಷೀಯ ನಿರ್ಧಾರದ ಬಗ್ಗೆ ನ್ಯಾಯಮೂರ್ತಿಗಳು ಕಳವಳ ವ್ಯಕ್ತಪಡಿಸಿದರು, ವೈಜ್ಞಾನಿಕ ಅಧ್ಯಯನಗಳು ಬೆಂಬಲಿಸದ ಗೊಂದಲಕಾರೀ ನಿರ್ಧಾರ ಇದು ಎಂದು ನ್ಯಾಯಮೂರ್ತಿಗಳು ಕರೆದರು.

ಇದು ವಿಪತ್ತಿನ ಪಾಕವಿಧಾನವಾಗಿದೆ ಎಂದು ಟೀಕಿಸಿದ ಪೀಠ, ಮುಂದಿನ ಮೂರು ವಾರಗಳವರೆಗೆ ನಿರ್ಧಾರವನ್ನು ಕಾರ್ಯಗತಗೊಳಿಸದಂತೆ ಸರ್ಕಾರಕ್ಕೆ ಆದೇಶ ನೀಡಿತು.

ಸರ್ಕಾರವು ಮೊದಲಿಗೆ ಮದ್ಯದ ಮಾರಾಟವನ್ನು ಅಗತ್ಯ ಸೇವೆ ಎಂಬುದಾಗಿ ವರ್ಗೀಕರಿಸುವ ಮೂಲಕ ಮುಕ್ತವಾಗಿಡಲು ಪ್ರಯತ್ನಿಸಿತು. ಆದರೆ ಪ್ರತಿಪಕ್ಷಗಳ ದಾಳಿಯ ನಂತರ ಹಿಮ್ಮೆಟ್ಟಬೇಕಾಯಿತು.

ಸಾಮಾಜಿಕ ಅಂತರ ಪಾಲನೆಯ ನಿಯಮವನ್ನು ಉಲ್ಲಂಘಿಸುವುದಿಲ್ಲವಾದ್ದರಿಂದ ಆನ್ಲೈನ್ ಮದ್ಯ ಮಾರಾಟವೂ ಸರ್ಕಾರದ ಆದೇಶದ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿಸಲಾಗಿತ್ತು.

ದಿಗ್ಬಂಧನ ಆದೇಶಕ್ಕೆ ಮೊದಲು, ಸರ್ಕಾರಿ ಪಾನೀಯಗಳ ನಿಗಮವು ದಿನಕ್ಕೆ ಸರಾಸರಿ ೪೦ ರಿಂದ ೪೫ ಕೋಟಿ ರೂಪಾಯಿ ಮೌಲ್ಯದ ಮದ್ಯವನ್ನು ಮಾರಾಟ ಮಾಡುತ್ತಿತ್ತು. ೨೦೧೮-೧೯ರಲ್ಲಿ ನಿಗಮವು ೧೪,೫೦೮ ಕೋಟಿ ರೂ.ಮೌಲ್ಯದ ಮದ್ಯವನ್ನು ಮಾರಾಟ ಮಾಡಿತ್ತು. ರಾಜ್ಯದಲ್ಲಿ ಮದ್ಯದ ಮೇಲಿನ ಅಬಕಾರಿ ಸುಂಕವು ಶೇಕಡ ೩೦೦ ರಿಂದ ೫೦೦ ರಷ್ಟಿದೆ, ಅಂದರೆ ತಯಾರಿ ಘಟಕದಲ್ಲಿ ೧೦೦ ರೂಪಾಯಿ ಬೆಲೆಬಾಳುವ ರಮ್ ಬಾಟಲಿಗೆ ಮಾರುಕಟ್ಟೆಯಲ್ಲಿ ೪೦೦-೫೦೦ ರೂ.ಬೆಲೆಯಾಗುತ್ತದೆ.

No comments:

Advertisement