Wednesday, April 8, 2020

೪೦೦ ಜಿಲ್ಲೆಗಳಲ್ಲಿ ಕೋವಿಡ್ ಇಲ್ಲದಿರುವುದು ಆಶಾದಾಯಕ: ರಾಜೀವ ಕುಮಾರ್

೪೦೦ ಜಿಲ್ಲೆಗಳಲ್ಲಿ ಕೋವಿಡ್ ಇಲ್ಲದಿರುವುದು ಆಶಾದಾಯಕ: ರಾಜೀವ ಕುಮಾರ್
ನವದೆಹಲಿ: ಕೊರೋನಾವೈರಸ್ ಹರಡುವಿಕೆಯನ್ನು ತಡೆಯಲು ಭಾರತವು ತೀವ್ರ ಯತ್ನ ನಡೆಸಿರುವಂತೆಯೇ ಒಟ್ಟು ಸೋಂಕಿನ ಶೇಕಡಾ ೮೦ರಷ್ಟು ವ್ಯಾಪಿಸಿರುವ ೬೨ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರವು ದಿಗ್ಬಂಧನವನ್ನು (ಲಾಕ್ ಡೌನ್) ವಿಸ್ತರಿಸಬಹುದು ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ ಕುಮಾರ್ ಅವರು  2020 ಏಪ್ರಿಲ್ 08ರ ಬುಧವಾರ ಇಲ್ಲಿ ಹೇಳಿದರು.

ಕೆಲವು ರಾಜ್ಯಗಳು ದಿಗ್ಬಂಧನವನ್ನು ವಿಸ್ತರಿಸುವಂತೆ ಶಿಫಾರಸು ಮಾಡಿವೆ. ಆದರೆ ಯೋಗ್ಯ ಕಾರ್ಯತಂತ್ರವನ್ನು ವಾರಾಂತ್ಯದಲ್ಲಿ ರೂಪಿಸಲಾಗುವುದು ಎಂದು ಅವರು ನುಡಿದರು.
ಮುಂಬೈಯು ಭಾರತದ ಕೊರೋನಾವೈರಸ್ ಕೇಂದ್ರ ಸ್ಥಾನವಾಗಿ ಪರಿಣಮಿಸಿದ್ದರೂ, ೪೦೦ ಜಿಲ್ಲೆಗಳಲ್ಲಿ ಕೋವಿಡ್-೧೯ ಪ್ರಕರಣ ದಾಖಲಾಗಿಯೇ ಇಲ್ಲ ಎಂಬುದು ನಮ್ಮ ಪಾಲಿಗೆ ಆಶಾಕಿರಣ ಎಂದು ಕುಮಾರ್ ಹೇಳಿದರು.

ಏಪ್ರಿಲ್ ೧೪ರಂದು ಅಂತ್ಯಗೊಳ್ಳಬೇಕಾಗಿರುವ ದಿಗ್ಬಂಧನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಜೊತೆಗೆ ಮಾತುಕತೆ ನಡೆಸುತ್ತಿದೆ ಎಂದು ಅವರು ನುಡಿದರು.

ನಿರ್ಗಮನ ತಂತ್ರವನ್ನು ಬಹುತೇಕ ರಾಜ್ಯ ಸರ್ಕಾರಗಳೇ ವಿನ್ಯಾಸಗೊಳಿಸಬೇಕು ಮತ್ತು ಜಾರಿಗೊಳಿಸಬೇಕಾಗಿದೆ. ಜಿಲ್ಲಾ ಆಡಳಿತಗಳು ಯೋಜನೆ ಬಗ್ಗೆ ಗಮನ ಹರಿಸಬೇಕು, ಮಾರಕ ವೈರಸ್ಸನ್ನು ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಣ ಒಮ್ಮತ ಬಲು ಮುಖ್ಯ. ಅಧಿಕಾರಿಗಳು ಜೀವಗಳು ಮತ್ತು ಬದುಕಿನ ನಡುವೆ ಸಮತೋಲನ ಸಾಧಿಸಬೇಕು ಎಂದು ಕುಮಾರ್ ಹೇಳಿದರು.

ಮುಂಬೈ ದಿಗ್ಬಂಧನ ವಿಸ್ತರಣೆ ಖಚಿತ: ಮಧ್ಯೆ ಮುಂಬೈ ಮೆಟ್ರೋಪಾಲಿಟನ್ ಪ್ರದೇಶ ಮತ್ತು ಹೊರವಲಯಗಳಲ್ಲಿ ಕೊರೋನಾವೈರಸ್ ಸೋಂಕಿನ ಪ್ರಕರಣಗಳು ೭೮೨ಕ್ಕೆ ಏರಿದ್ದು, ಸಾವಿನ ಸಂಖ್ಯೆ ೫೦ ತಲುಪಿರುವ ಹಿನ್ನೆಲೆಯಲ್ಲಿ ಮುಂಬೈಯಲ್ಲಿ ದಿಗ್ಬಂಧನವು ಏಪ್ರಿಲ್ ೩೦ರವರೆಗೆ ವಿಸ್ತರಣೆ ಆಗುವುದು ಖಚಿತ ಎಂದು ಮೂವರು ಹಿರಿಯ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಮುಂಬೈಯಲ್ಲಿ ಪ್ರಕರಣಗಳು ಅತಿವೇಗದಲ್ಲಿ ಹೆಚ್ಚುತ್ತಿವೆ. ಕೇವಲ ೨೪ ಗಂಟೆಗಳಲ್ಲಿ ೧೦೦ ಪ್ರಕರಣಗಳು ವರದಿಯಾಗಿವೆ. ಪ್ರವೃತ್ತಿ ಅಪಾಯಕಾರಿ ಎಂದು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ನುಡಿದರು. ವೈರಸ್ ಹರಡದಂತೆ ತಡೆಯಲು ಕನಿಷ್ಠ ಇನ್ನೆರಡು ವಾರಗಳ ಕಾಲ ದಿಗ್ಬಂಧನ ವಿಸ್ತರಣೆ ಅತ್ಯಗತ್ಯ ಎಂದು ಅಧಿಕಾರಿಯನ್ನು ಉಲ್ಲೇಖಿಸಿದ ವರದಿ ಹೇಳಿತು.

No comments:

Advertisement