Thursday, April 23, 2020

ಚೆಂದವ ನೋಡಿದಿರಾ, ಗೂಬೆಯ ಅಂದವ ನೋಡಿದಿರಾ?

ಚೆಂದವ ನೋಡಿದಿರಾ, ಗೂಬೆಯ ಅಂದವ ನೋಡಿದಿರಾ?
(ಇದು ಸುವರ್ಣ ನೋಟ)
ಗೂಬೆ,  ಗೂಮೆ, ಗೂಗೆ, ಘೂಕ, ದಿವಾಂಧ,  ಉಲೂಕ, ಗೂಬ – ಹೀಗೆ ವಿವಿಧ ಭಾಷೆಗಳಲ್ಲಿ ಹಲವಾರು ರೀತಿಯಲ್ಲಿ ಕರೆಯಲ್ಪಡುವ ಗೂಬೆಯನ್ನು ಕಂಡವರು ಕಡಿಮೆಯೆಂದೇ ಹೇಳಬಹುದು.  ಏಕೆಂದರೆ ಹಗಲು ಕಣ್ಣು ಕಾಣಿಸದ ಈ ಹಕ್ಕಿ ನಿಶಾಚರಿ. ರಾತ್ರಿಯಾದರೆ ಸಾಕು ಸಂಚಾರ ಹೊರಡುತ್ತದೆ. ಹೀಗಾಗಿ ಮನುಷ್ಯರ ಕಣ್ಣಿಗೆ ಬೀಳುವುದು ಬಲು ಅಪರೂಪ.
ವಂಶಾಭಿವೃದ್ಧಿ ಸಮಯ ಹೊರತು ಪಡಿಸಿದರೆ ಏಕಾಂಗಿ. ಬೇಟೆಗಾರ ಹಕ್ಕಿ  ಇದು.  ಬೇರೆ ಹಕ್ಕಿಗಳಲ್ಲಿ ಕಾಣದ, ಸಪಾಟು ಮುಖದಲ್ಲಿ ಮುಂದೆ ನೋಡುವಂತಿರುವ ಎರಡು ದೊಡ್ಡ ಕಣ್ಣುಗಳು  ಗೂಬೆಗೆ  ನೋಟವನ್ನು  ಒದಗಿಸುತ್ತವೆ. ಕುತ್ತಿಗೆಯನ್ನು ಉದ್ದನೆಯ ಸಡಿಲ ಗರಿಗಳು ಆವರಿಸಿರುವುದರಿಂದ ಕತ್ತು ನೀಳವಾಗಿದ್ದರೂ ಗಿಡ್ಡವಾಗಿದ್ದಂತೆ ಕಾಣುತ್ತದೆ. ದೊಡ್ಡ ತಲೆ, ದೀರ್ಘ ವೃತ್ತಾಕಾರದ ಅಥವಾ ಹೃದಯಾಕಾರದ ಮುಖ. ಗುಂಡಾದ ಹಕ್ಕಿ. ನಿಗರಿದ ಕಿವಿಯಂತೆ ಕಾಣುವ ಕೊಂಬಿನಂತಹ ಗರಿ. ಬಲವಾದ ಸಣ್ಣ ಕೊಕ್ಕು, ಗರಿ ಆವೃತ್ತ ಕಾಲು, ಮೊನಚಾದ ಕಾಲುಗುರು. ಕಣ್ಣಿನ ಮೇಲಿನ ದೊಡ್ಡ ರೆಪ್ಪೆ, ಕೊಕ್ಕಿನ ಬುಡದಲ್ಲಿನ ಸಣ್ಣ ಗರಿಗಳು ಮೀಸೆಯಂತೆ ಕಾಣುತ್ತವೆ.

 ಹೆಣ್ಣು ಗೂಬೆಗಳು ಗಾತ್ರ ಮತ್ತು ತೂಕದಲ್ಲಿ ಗಂಡಿಗಿಂತ ದೊಡ್ಡವು. ಗೂಬೆಗಳು ಆಹಾರದ ಕೊರತೆ ಉಂಟಾಗದ ವಿನಃ  ಗೂಬೆಗಳು ತಮ್ಮ ವಾಸ ಸ್ಥಳಗಳನ್ನು ಬಿಟ್ಟು ಬೇರೆಡೆ ಹೋಗುವುದಿಲ್ಲ. ಹೀಗಾಗಿ ತಮ್ಮ ನೆಲೆಯಲ್ಲಿ, ರಾತ್ರಿಯ ಆಹಾರದ ಹುಡುಕಾಟದ ಹಾರಾಟದ ಸಮಯದಲ್ಲಿ ನೆನಪಿನಿಂದ- ಗಿಡ, ಮರ, ಮನೆ, ಕಂಬ ಎಲ್ಲೆಲ್ಲಿ ಏನೇನು ಇದೆಯೆಂಬ ಸ್ಪಷ್ಟ ಅರಿವು ಹೊಂದಿರುತ್ತದೆ ಎಂದು ಅಧ್ಯಯನಗಳು ಹೇಳಿವೆ.

 ಹಗಲು ಹೊತ್ತಿನಲ್ಲಿ ಹೊಸದಾಗಿ ಆಗಮಿಸಿದ ಯಾವುದಾದರೂ ಗೂಬೆ ಮರದಲ್ಲಿರುವುದು ಗೊತ್ತಾದರೆ ಅಲ್ಲಿ ನೆಲೆಸಿರುವ ಹಕ್ಕಿಗಳು ಕೂಗುತ್ತಾಕರೆಯುತ್ತಾ ಮಿಕ್ಕೆಲ್ಲಾ ಹಕ್ಕಿಗಳ ಗುಂಪು ಕಟ್ಟಿ ದಾಳಿ ನಡೆಸಿಆಗಂತುಕ ಗೂಬೆಯನ್ನು ಓಡಿಸಲು ಶತ ಪ್ರಯತ್ನ ನಡೆಸುತ್ತವೆ.
ದೊಡ್ಡ ಕಲ್ಲು ಬಂಡೆಗಳ ಮರೆ, ಬಿದುರು ಮೆಳೆ, ಪೊದೆಗಳ ಕೆಳಗೆ, ವಿರಳ ಕಾಡು, ತೋಪು, ದೊಡ್ಡ ಮರಗಳು, ಹೊಲ-ಗದ್ದೆ-ಹುಲ್ಲುಗಾವಲುಗಳ ಅಂಚಿನಲ್ಲಿ, ಮರದ/ಗೋಡೆಗಳ ಪೊಟರೆ - ಬಿರುಕು, ಕಡಿದಾದ ನದಿ, ಕಾಲುವೆಗಳ ದಂಡೆ, ಉಪಯೋಗಿಸಿ ಬಿಟ್ಟ ಗಣಿಗಳು, ಯಾವಾಗಲೂ ನೀರಿನಲ್ಲಿರುವ ಎತ್ತರದ ಸೇತುವೆಗಳು, ಪಾಳು ಬಿದ್ದ ಕಟ್ಟಡಗಳು - ಕೋಟೆ ಕೊತ್ತಲು, ದೇವಸ್ಥಾನ ಸಂಕೀರ್ಣ, ಕೊಳ-ನದಿ-ಸರೋವರಗಳ ಬಳಿ ಸಾಮಾನ್ಯವಾಗಿ ಗೂಬೆಗಳ ವಾಸ.
ಹೊಲ-ಗದ್ದೆಯಲ್ಲಿ ಬೆಳೆ ಗಟ್ಟಿ ಕಾಳಾಗುವ ಸಮಯದಲ್ಲಿ ಇಲಿಗಳು ಲಗ್ಗೆ ಇಟ್ಟು ಸಾಕಷ್ಟು ಹಾನಿ ಮಾಡುವ ನಿಶಾಚರಿ ಇಲಿಗಳು ಗೂಬೆಗಳಿಗೆ ಸಾಮಾನ್ಯ ಆಹಾರ. ಹೀಗಾಗಿ ಪ್ರಕೃತಿಯಲ್ಲಿ ಮಾನವರಿಗೆ ತೊಂದರೆ ಕೊಡುವ ಇಲಿಗಳನ್ನು ಕೊಲ್ಲುವುದರಿಂದ ಗೂಬೆಗಳು ರೈತರ ಪಾಲಿಗೆ ಉಪಕಾರಿಗಳು.
ಉಗ್ರಾಣಗಳಲ್ಲಿ ಸಹ, ಸಂಗ್ರಹಿಸಿದ  ದವಸ ಧಾನ್ಯಗಳನ್ನು ಸಹ ತಿಂದು, ಹಾಳು ಮಾಡುವ ಇಲಿ, ಸುಂಡಿಲಿ, ಹೆಗ್ಗಣಗಳಂತಹ ದಂಶಕಗಳನ್ನು  ಕೂಡಾ ಗೂಬೆಗಳು ಬೇಟೆಯಾಡುತ್ತವೆ. ಜೊತೆಗೆ ಕಾಡುಗಳಲ್ಲಿನ ಮರ ಇಲಿ, ಮೂಗಿಲಿಗಳನ್ನು ಯಶಸ್ವಿಯಾಗಿ ಬೇಟೆಯಾಡಿ ಅವುಗಳ ಸಂಖ್ಯೆಯನ್ನು ನಿಯಂತ್ರಿಸುತ್ತವೆ.

ಬೆಳೆಗಳಿಗೆ ಲಗ್ಗೆ ಇಡುವ ಜಿರಳೆಯನ್ನು ಒಳಗೊಂಡ ವಿವಿಧ ಕೀಟಗಳು, ಜೇಡ; ಕಪ್ಪೆ, ಓತಿಕ್ಯಾತ, ಹಲ್ಲಿ, ಹಾವು; ಸಣ್ಣ ಹಕ್ಕಿಯಿಂದ ಹಿಡಿದು ಬೆಳವ, ನೀಲಕಂಠ, ಬಿಜ್ಜು, ಗೌಜಲು, ನವಿಲುಗಳಂತಹ ದೊಡ್ಡ ಹಕ್ಕಿಗಳು; ಚಿಟ್ಟಳಿಲು, ಮಲೆನಾಡ ದೊಡ್ಡ ಅಳಿಲು, ಬಾವಲಿ, ಮೊಲದಂತಹ ಪ್ರಾಣಿಗಳು; ಮೀನು, ಮತ್ತು ಏಡಿ ಸಹ ಗೂಬೆಗಳಿಗೆ ಆಹಾರವೇ.
ಗೂಬೆಯ ದರ್ಶನ ಅಥವಾ ಕೂಗು ಅಪಶಕುನ ಎಂಬುದು ಹಲವರ ಭಾವನೆ.  ಗೂಬೆ ಎಂಬುದು ಮನುಷ್ಯರು ಬಳಸುವ ಒಂದು ಬೈಗುಳದ ಪದವೂ ಹೌದು. ಆದರೆ  ಗೂಬೆ ಅಪಶಕುನ  ಎಂಬದಕ್ಕೆ  ಅರ್ಥವಿಲ್ಲ. ಬಹುಶಃ ನಿಶಾಚರಿ; ಮನುಷ್ಯರ ಒಡಾಟವಿರದ ಊರ ಹೊರಗಿನ ಪಾಳುಬಿದ್ದ ಜಾಗಗಳಲ್ಲಿ ರಹಸ್ಯವಾಸ ನಡೆಸುವುದರಿಂದ ಅಥವಾ ನೀರವ ರಾತ್ರಿಯಲ್ಲಿ ಎದೆ ನಡುಗಿಸುವ ಕೂಗು, ಹಲವೊಮ್ಮೆ ಮನುಷ್ಯನ ಧ್ವನಿಯಂತಿರುವ ಕೂಗುವ ಹವ್ಯಾಸ ಗೂಬೆಗೆ ಇರುವುದರಿಂದ  ಈ ತಪ್ಪು ತಿಳುವಳಿಕೆ ಬಂದಿರಬಹುದು.

ಪುರಾತನ ಗ್ರೀಸ್ ನಲ್ಲಿ ವಿವೇಕ, ಬುದ್ದಿವಂತಿಕೆ ಮತ್ತು ಜ್ಞಾನದ ಲಾಂಛನ,  ವಿದ್ಯೆಯ ದೇವತೆ ಗೂಬೆ. ನಮ್ಮಲ್ಲೂ ಗೂಬೆಯ ದರ್ಶನ ಶುಭ ಸಂಕೇತ ಎನ್ನುವವರಿದ್ದಾರೆ.  ಗೂಬೆಗಳು  ಗುಂಪುಗೂಡುವುದು ಅತಿ ವಿರಳ,  ಹೀಗಾಗಿ ಗೂಬೆಗಳ ಕೂಟ ಕಂಡರೆ ಅದನ್ನು ‘ಪಾರ್ಲಿಮೆಂಟ್’  ಎನ್ನುತ್ತಾರೆ.

ಕರ್ನಾಟಕದಲ್ಲಿ ೧೫, ಭಾರತದಲ್ಲಿ ೩೬ ಹಾಗೂ ವಿಶ್ವದಾದ್ಯಂತ ೨೧೬ ಪ್ರಭೇದಗಳ ಗೂಬೆಗಳಿವೆ. ದಕ್ಷಿಣ ಧ್ರುವ, ಗ್ರೀನ್ ಲ್ಯಾಂಡ್ ನಂತಹ ಪ್ರದೇಶವನ್ನು ಹೊರತು ಪಡಿಸಿ ಭೂಮಿಯ ಎಲ್ಲೆಡೆ, ಎಲ್ಲಾ ತರಹದ ನೆಲೆಗಳಲ್ಲಿ ಗೂಬೆಗಳು ಬದುಕಿ ಬಾಳುತ್ತಿವೆ.

ಆದರೆ ಮೊದಲೇ ಹೇಳಿದ ಹಾಗೆ ನಿಶಾಚರಿ ಗೂಬೆಯನ್ನು ಕಂಡವರು ಕಡಿಮೆ.  ಕಂಡರೂ ಅದು ಮರದ ಪೊಟರೆಯಲ್ಲೋ, ಬಂಡೆಯಲ್ಲೋ  ಚಟುವಟಿಕೆಯೇ ಇಲ್ಲದೆ ಕುಳಿತ ದೃಶ್ಯವಷ್ಟೇ.  ಆದರೆ ಹಾರುವಾಗ ಗೂಬೆ ಚೆಂದದಲ್ಲಿ  ಇತರ ಪಕ್ಷಿಗಳಿಗಿಂತೆ ಕಡಿಮೆ ಏನಿಲ್ಲ ಎಂಬುದನ್ನು ತಿಳಿಯಲು ಹಾರುವಾಗಿನ  ಅದರ ಸೊಬಗನ್ನೇ ನೋಡಬೇಕು. ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅಂತರ್ ದೃಷ್ಟಿಗೆ  ಗೂಬೆಗಳ ಸೊಬಗು ಕಂಡದ್ದು ಹೀಗೆ.
ಸಮೀಪ ದೃಶ್ಯದ ಅನುಭವಕ್ಕೆ ಫೊಟೋ ಗಳನ್ನು ಕ್ಲಿಕ್ಕಿಸಿ.

No comments:

Advertisement