Tuesday, April 14, 2020

ಭೀಮಾ –ಕೋರೆಗಾಂವ್: ಪ್ರೊ. ಆನಂದ ತೇಲ್ತುಂಬ್ಡೆ ಶರಣಾಗತಿ

ಭೀಮಾ ಕೋರೆಗಾಂವ್: ಪ್ರೊ. ಆನಂದ ತೇಲ್ತುಂಬ್ಡೆ ಶರಣಾಗತಿ
ಮುಂಬೈ: ಭೀಮಾ- ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದಲಿತ ಚಿಂತಕ ಪ್ರೊಫೆಸರ್ ಆನಂದ್ ತೇಲ್ತುಂಬ್ಡೆ ಅವರು 2020 ಏಪ್ರಿಲ್ 14ರ ಮಂಗಳವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮುಂದೆ ಶರಣಾಗತರಾದರು.

ಎಲ್ಗಾರ್ ಪರಿಷದ್- ಮಾವೋವಾದಿಗಳ ಜೊತೆಗಿನ ನಂಟು ಪ್ರಕರಣದಲ್ಲಿ ತೇಲ್ತುಂಬ್ಡೆ ಅವರನ್ನು ವಿಶೇಷ ಎನ್‌ಐಎ ನ್ಯಾಯಾಲಯವು ಏಪ್ರಿಲ್ ೧೮ರವರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ ವಶಕ್ಕೆ ಒಪ್ಪಿಸಿ ಆದೇಶ ನೀಡಿತು.

ಭಾರತದ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ೧೨೯ನೇ ಜನ್ಮದಿನದಂದೇ ತೇಲ್ತುಂಬ್ಡೆ ಅವರು ಸಿಐಎ ಮುಂದೆ ಶರಣಾಗತರಾಗಿದ್ದಾರೆ.

ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ  ಪ್ರೊಫೆಸರ್ ತೇಲ್ತುಂಬ್ಡೆ ಎನ್‌ಐಎ ಮುಂದೆ ಶರಣಾಗಿದ್ದಾರೆ ಎಂದು ಅವರ ವಕೀಲ ಮಿಹಿರ್ ದೇಸಾಯಿ ಹೇಳಿದರು. ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ (ಯುಪಿಪಿಎ) ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

೨೦೧೮ ಜನವರಿ ೧ರಂದು ಸಂಭವಿಸಿದ್ದ ಭೀಮಾ-ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಎನ್‌ಐಎ ಮಂದಿ ಮಾನವ ಹಕ್ಕು ಹೋರಟಗಾರರನ್ನು ಮತ್ತು ನಾಗರಿಕ ಹಕ್ಕು ಹೋರಾಟಗಾರರನ್ನು ಹಿಂದೆಯೇ ಬಂಧಿಸಿತ್ತು.

ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು  ಹತ್ಯೆ ಮಾಡಿದ ರೀತಿಯಲ್ಲಿಯೇ ಸಿಪಿಐ (ಮಾವೋವಾದಿ) ಸಂಘಟನೆ ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲು ಸಂಚು ಹೂಡಿತ್ತು ಎಂಬ ಆರೋಪದ ಬಗ್ಗೆಯೂ ಎನ್‌ಐಎ ತನಿಖೆ ನಡೆಸುತ್ತಿತ್ತು.

ತೇಲ್ತುಂಬೆ ಅವರು ಅಂಬೇಡ್ಕರ್ ಅವರ ಮೊಮ್ಮಗ ಹಾಗೂ ಮೂರು ಬಾರಿ ಸಂಸದರಾಗಿದ್ದ ವಂಚಿತ್ ಬಹುಜನ್ ಅಘಾಡಿಯ ಪ್ರಕಾಶ್ ಅಂಬೇಡ್ಕರ್ ಅವರ ಸೋದರ ಮಾವನಾಗಿದ್ದಾರೆ. ಪ್ರೊಫೆಸರ್ ತೇಲ್ತಂಬ್ಡೆ ಅವರ ಕಿರಿಯ ಸಹೋದರ ಮಿಲಿಂದ್  ತೇಲ್ತುಂಬ್ಡೆ ಸಿಪಿಐ (ಮಾವೋವಾದಿ) ಮಹಾರಾಷ್ಟ್ರ ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿದ್ದು, ಇವರು ಹಲವು ವರ್ಷಗಳಿಂದ ಭೂಗತರಾಗಿದ್ದು, ನಕ್ಸಲ್ ಚಟುವಟಿಕೆ ಸಂಬಂಧಿ ಪ್ರಕರಣಗಳಲ್ಲಿ ಪೊಲೀಸರು ಇವರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಬಾಂಬೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮೆಟ್ಟಿಲೇರುವ ಎಲ್ಲ ಸಾಧ್ಯತೆಗಳು ಮುಚ್ಚಿದ ಬಳಿಕ ತೇಲ್ತುಂಬ್ಡೆ ಶರಣಾಗತರಾಗಿದ್ದಾರೆ ಎಂದು ಹೇಳಲಾಗಿದೆ. ಪ್ರೊಫೆಸರ್ ತೇಲ್ತುಂಬ್ಡೆ ಅವರು ಕುಂಬಾಲಾ ಹಿಲ್ಸ್ ನಲ್ಲಿ ಇರುವ  ಎನ್‌ಐಎ ಕಚೇರಿಗೆ ಹಾಜರಾಗಿ ಶರಣಾಗಿದ್ದಾರೆ. ವೇಳೆಯಲ್ಲಿ ಅವರ ಜತೆ ಪತ್ನಿ ರಮಾ ಮತ್ತು  ಪ್ರಕಾಶ್  ಅಂಬೇಡ್ಕರ್ ಜೊತೆಗೆ ಇದ್ದರು ಎಂದು ವರದಿಗಳು ಹೇಳಿವೆ.

ಪ್ರೊಫೆಸರ್ ತೇಲ್ತುಂಬ್ಡೆ ಅವರು ವಿಶ್ವೇಶ್ವರಯ್ಯ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ,  ಐಐಎಂ ಅಹಮದಾಬಾದಿನಿಂದ ಎಂಬಿಎ ಮತ್ತು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಸೈಬರ್ನೆಟಿಕ್ ಮಾಡೆಲಿಂಗಿನಲ್ಲಿ ಪಿಎಚ್ ಡಿಯನ್ನೂ ಪಡೆದಿದ್ದಾರೆ.

ಪ್ರೊಫೆಸರ್ ತೇಲ್ತುಂಬ್ಡೆ  ಅವರು ಭಾರತ್ ಪೆಟ್ರೋಲಿಯಂ ಸಂಸ್ಥೆಯಲ್ಲಿ ಹಿರಿಯ ಕಾರ್ಯನಿರ್ವಾಹಕ ಮತ್ತು ಪೆಟ್ರೊನೆಟ್ ಇಂಡಿಯಾ ಲಿಮಿmಡ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಅವರು ಖರಗಪುರ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದು ಬಳಿಕ   ಗೋವಾ ಇನ್‌ಸ್ಟಿಟ್ಯೂಟ್  ಆಫ್ ಮ್ಯಾನೇಜ್‌ಮೆಂಟಿನಲ್ಲಿ ಹಿರಿಯ ಪ್ರೊಫೆಸರ್ ಆಗಿದ್ದರು.

No comments:

Advertisement