Friday, May 22, 2020

ಪಶ್ಚಿಮ ಬಂಗಾಳಕ್ಕೆ 1000 ಕೋಟಿ ಮುಂಗಡ ಪರಿಹಾರ: ಪ್ರಧಾನಿ ಮೋದಿ ಘೋಷಣೆ

ಪಶ್ಚಿಮ ಬಂಗಾಳಕ್ಕೆ 1000 ಕೋಟಿ ಮುಂಗಡ ಪರಿಹಾರ:  ಪ್ರಧಾನಿ ಮೋದಿ ಘೋಷಣೆ
ನವದೆಹಲಿ/ ಕೋಲ್ಕತ: ಸಂಕಟ ಸಮಯದಲ್ಲಿ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದ ಜೊತೆ ನಿಲ್ಲುತ್ತದೆ ಮತ್ತು ೧೦೦೦ ಕೋಟಿ ರೂಪಾಯಿಗಳ ತತ್ಕ್ಷಣದ ಮುಂಗಡ ಪರಿಹಾರದ ಭರವಸೆ ನೀಡುತ್ತದೆ ಎಂದು ಪ್ರದಾನಿ ನರೇಂದ್ರ ಮೋದಿ ಅವರು 2020 ಮೇ 22ರ ಶುಕ್ರವಾರ ಘೋಷಿಸಿದರು.

ಅಂಫಾನ್ ಚಂಡಮಾರುತದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಪ್ರಧಾನಿ ಘೋಷಣೆ ಮಾಡಿದರು.ಸುಮಾರು ಮೂರು ತಿಂಗಳುಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೊರ ರಾಜ್ಯಕ್ಕೆ ನೀಡಿದ ಮೊದಲ ಭೇಟಿ ಇದು.

ಪ್ರಧಾನಿ ಮೋದಿಯವರನ್ನು ರಾಜ್ಯಪಾಲ ಜಗದೀಪ್ ಧನ್ಕರ್ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಮಾನನಿಲ್ದಾಣದಲ್ಲಿ ಬರಮಾಡಿಕೊಂಡರು. ರಾಜ್ಯದಲ್ಲಿ ಚಂಡಮಾರುತದಿಂದ ಬಹುತೇಕ ಹಾನಿಯಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿಯವರಿಗೆ ಮಮತಾ ಬ್ಯಾನರ್ಜಿ ಸಹಯೋಗ ನೀಡಿದರು. ಸಮೀಕ್ಷೆ ಬಳಿಕ ಕೋಲ್ಕತಾ ವಿಮಾನ ನಿಲ್ದಾಣದಿಂದ ೫೦ ಕಿಮೀ ದೂರದ ಬಶೀರತ್ನಲ್ಲಿ ಶಾಲೆಯೊಂದರ ಸಮೀಪದಲ್ಲಿ ಪ್ರಧಾನಿ ಬಂದಿಳಿದರು.

ಬಶೀರತ್ ಶಾಲೆಯಲ್ಲಿ ಪರಿಶೀಲನಾ ಸಭೆಯನ್ನು ನಡೆಸಿದ ಪ್ರಧಾನಿಯವರಿಗೆ ಜನರು ತಮ್ಮ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ಸಾಧ್ಯವಾಗುವಂತೆ ಜನತೆಗೆ ಕೇಂದ್ರದಿಂದ ಹೆಚ್ಚಿನ ನೆರವು ಬೇಕು ಎಂದು ಮಮತಾ ಬ್ಯಾನರ್ಜಿ ಮನವಿ ಮಾಡಿದರು. ಚಂಡಮಾರುತಕ್ಕೆ ಕನಿಷ್ಠ ೮೦ ಮಂದಿ ಬಲಿಯಾಗಿದ್ದಾರೆ, ಪೈಕಿ ಬಹುತೇಕ ಮಂದಿ ವಿದುತ್ ತಗುಲಿ ಸಾವನ್ನಪ್ಪಿದ್ದಾರೆ ಎಂದು ಮಮತಾ ವಿವರಿಸಿದರು.

ಸಭೆಯ ಬಳಿಕ ಮಾಧ್ಯಮಗಳಿಗೆ ಸಂಕ್ಷಿಪ್ತ ಹೇಳಿಕೆ ನೀಡಿದ ಪ್ರಧಾನಿ ಮೋದಿ ಜನರಿಗೆ ಸಾಧ್ಯವಿರುವ ಎಲ್ಲ ನೆರವು ಒದಗಿಸಲು ಕೇಂದ್ರ ಮತ್ತು ರಾಜ್ಯ ಜೊತೆಯಾಗಿ ಕೆಲಸ ಮಾಡಲಿವೆ ಎಂದು ಹೇಳಿದರು.

ಮರುವಸತಿ, ಪುನರ್  ನಿರ್ಮಾಣ ಸೇರಿದಂತೆ ಎಲ್ಲ ಅಂಶಗಳ ಬಗೆಗೂ ಗಮನ ಹರಿಸಲಾಗುವುದು. ನಾವೆಲ್ಲರೂ ಪಶ್ಚಿಮ ಬಂಗಾಳ ಮುಂದುವರೆಯಬೇಕು ಎಂದು ಬಯಸುತ್ತೇವೆ. ಇಂತಹ ಪರೀಕ್ಷಾ ಸಮಯಗಲ್ಲಿ ಕೇಂದ್ರವು ಯಾವಾಗಲೂ ಪಶ್ಚಿಮ ಬಂಗಾಳದ ಜೊತೆಗೆ ನಿಲ್ಲುವುದು ಎಂದು ಪ್ರಧಾನಿ ಹೇಳಿದರು.

ಚಂಡಮಾರುತ ಸ್ಥಿತಿಯನ್ನು ನಿಭಾಯಿಸಿದ ಪರಿಗಾಗಿ ಪ್ರಧಾನಿಯವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಶ್ಲಾಘಿಸಿದರು.

ರಾಜ್ಯದಲ್ಲಿ ಹಾಹಾಕಾರ ಸೃಷ್ಟಿಸಿರುವ ಚಂಡಮಾರುತವನ್ನು ರಾಷ್ಟ್ರೀಯ ವಿಪತ್ತು ಎಂಬುದಾಗಿ ಘೋಷಿಸುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾಡಿದ ಬೇಡಿಕೆ ಬಗ್ಗೆ ಪ್ರಧಾನಿ ಮೋದಿ ಅವರು ಮಾತನಾಡಲಿಲ್ಲ.

ವಾಸ್ತವಾಗಿ ಸರ್ಕಾರಿ ನಿಯಮಗಳಲ್ಲಿ ಇಂತಹ ಅಧಿಸೂಚನೆ ಹೊರಡಿಸಲು ಯಾವುದೇ ಅವಕಾಶಗಳು ಇಲ್ಲ. ಆದರೆ ಇಂತಹ ದುರಂತಗಳನ್ನು ಎದುರಿಸಿದ ರಾಜ್ಯಗಳಲ್ಲಿನ ರಾಜಕೀಯ ಪಕ್ಷಗಳು ಕೇಂದ್ರ ಸರ್ಕಾರದಿಂದ ವಿಪತ್ತು ನಿರ್ವಹಣಾ ನಿಯಮಗಳ ಅಡಿಯಲ್ಲಿ ಹೆಚ್ಚಿನ ನೆರವು ಪಡೆಯುವ ಸಲುವಾಗಿ ಇಂತಹ ಬೇಡಿಕೆಗಳನ್ನು ಮುಂದಿಡುತ್ತವೆ.

ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳಕ್ಕೆ ಸಾಕಷ್ಟು ನೆರವನ್ನು ಒದಗಿಸುತ್ತಿಲ್ಲ ಎಂದು ಮಮತಾ ಬ್ಯಾನರ್ಜಿ ಅವರು ಕೆಲವು ದಿನಗಳ ಹಿಂದೆ ದೂರಿದ್ದರು. ಕೋವಿಡ್ ೧೯ -ಸಾಂಕ್ರಾಮಿಕ ವಿರೋಧೀ ಹೋರಾಟಕ್ಕಾಗಿ ನಮಗೆ ಕೇಂದ್ರದಿಂದ ಒಂದಿಷ್ಟೂ ಹಣದ ನೆರವು ಬಂದಿಲ್ಲ ಎಂದು ವರದಿಗಾರರ ಜೊತೆ ಹೇಳಿದ್ದ ಮಮತಾ ಈಗ ಅಂಫಾನ್ ಚಂಡಮಾರುತವು ಅಪಾರ ಹಾನಿಯನ್ನು ಮಾಡಿದೆ ಎಂದು ಹೇಳಿದ್ದರು.

ನೆರವು ತ್ವರಿತವಾಗಿ ಬರಬೇಕು, ೫೦೦ ದಿನಗಳ ಬಳಿಕ ಅಲ್ಲ ಎಂದು ಮಮತಾ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಸಂದರ್ಭದಲ್ಲೇ ಅವರು ಚಂಡಮಾರುತದ ಹಾನಿಯನ್ನು ಕಣ್ಣಾರೆ ನೋಡುವ ಸಲುವಾಗಿ ರಾಜ್ಯಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮೋದಿ ಅವರನ್ನು ಕೋರಿದ್ದರು.

ಮಮತಾ ಬ್ಯಾನರ್ಜಿ ಅವರ ದೂರಿಗೆ ಸ್ಪಂದನೆಯಾಗಿ ಪ್ರಧಾನಿಯವರು ,೦೦೦ ಕೋಟಿ ರೂಪಾಯಿಗಳ ತತ್ ಕ್ಷಣದ ಮುಂಗಡ ನೆರವಿನ ಭರವಸೆ ನೀಡಿದ್ದಾರೆ.

ಚಂಡಮಾರುತದಲ್ಲಿ ಸಾವನ್ನಪ್ಪಿದವರ ಉತ್ತರಾಧಿಕಾರಿಗೆ ತಲಾ ಲಕ್ಷ ರೂಪಾಯಿಗಳನ್ನು ನೀಡಲಾಗುವುದು ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ತಲಾ ೫೦,೦೦೦ ರೂಪಾಯಿ ನೀಡಲಾಗುವುದು ಎಂದು ಪ್ರಧಾನಿ ಹೇಳಿದರು.

No comments:

Advertisement