ಚೀನೀ ಹೆಲಿಕಾಪ್ಟರುಗಳಿಂದ ಭಾರತದ ವಾಯುಸೀಮೆ ಉಲ್ಲಂಘನೆ
ಲಡಾಖ್‌ನತ್ತ ಧಾವಿಸಿದ ಸುಖೋಯ್ ಯುದ್ಧ ವಿಮಾನ
ನವದೆಹಲಿ: ಪೀಪಲ್ಸ್ ಲಿಬರೇಷನ್ ಆರ್ಮಿಗೆ ಸೇರಿದ ಎರಡು ಚೀನೀ ಹೆಲಿಕಾಪ್ಟರುಗಳು
ಪೂರ್ವ ಲಡಾಖ್ ಪ್ರದೇಶದಲ್ಲಿ ಮೇ ೫ರ ಮಧ್ಯಾಹ್ನ ಭಾರತೀಯ ವಾಯುಪ್ರದೇಶವನ್ನು ಉಲ್ಲಂಘಿಸಿದ ಘಟನೆ ಘಟಿಸಿದೆ.
ಹಿರಿಯ ಸೇನಾ ಅಧಿಕಾರಿಯೊಬ್ಬರು ಲಡಾಖ್‌ನತ್ತ ವಿಮಾನದಲ್ಲಿ ತೆರಳಿದ್ದ ವೇಳೆಯಲ್ಲೇ ಈ ಘಟನೆ ಸಂಭವಿಸಿದೆ
ಎಂದು ಮೂಲಗಳು 2020 ಮೇ 12ರ ಮಂಗಳವಾರ ಹೇಳಿವೆ.
ಚೀನೀ ವರ್ತನೆಗೆ ಪ್ರತಿಕ್ರಿಯೆಯಾಗಿ ಭಾರತೀಯ ವಾಯುಪಡೆಯು ತನ್ನ ಸುಖೋಯ್ ಯುದ್ಧ ವಿಮಾನಗಳನ್ನು ಲೇಹ್ ವಾಯುನೆಲೆಯಿಂದ ಲಡಾಖ್ ಕಡೆಗೆ ಪಹರೆಯ ಸಲುವಾಗಿ ಕಳುಹಿಸಿದೆ ಎಂದು ಮೂಲಗಳು ಮಂಗಳವಾರ ತಿಳಿಸಿದವು.
ಆದಾಗ್ಯೂ, ಇವೆಲ್ಲವೂ ನಿಯಮಿತ ತರಬೇತಿಯ ಕವಾಯತುಗಳೇ ಹೊರತು, ಬೇರೇನಲ್ಲ,
ವಾಯುಪ್ರದೇಶದ ಯಾವುದೇ ಉಲ್ಲಂಘನೆ ಆಗಿಲ್ಲ ಎಂದು ವಾಯುಪಡೆ ಹೇಳಿದೆ.
ಮೂಲಗಳ ಪ್ರಕಾರ, ಅದೇ ದಿನ ಸಂಜೆ ೨೫೦ ಮಂದಿ ಭಾರತೀಯ ಮತ್ತು ಚೀನೀ
ಸೈನಿಕರು ಲಡಾಖ್‌ನ ನೈಜ ನಿಯಂತ್ರಣ ರೇಖೆಯ ಸಮೀಪ ಪರಸ್ಪರ ಘರ್ಷಿಸಿದ್ದರು. ಘರ್ಷಣೆ ಹಿಂಸಾತ್ಮಕವಾಗಿತ್ತು
ಮತ್ತು ೭೦ರಿಂದ ೮೦ ಮಂದಿ ಭಾರತೀಯ ಯೋಧರು ಗಾಯಗೊಂಡಿದ್ದರು ಎಂದು ಮೂಲಗಳು ಹೇಳಿದವು.
ಈ ಘಟನೆಯ ಬಳಿಕ, ಉಭಯ ಕಡೆಗಳಲ್ಲೂ ಹೆಚ್ಚುವರಿ ಪಡೆಗಳನ್ನು ಜಮಾಯಿಸಲಾಯಿತು
ಎಂದೂ ಮೂಲಗಳು ಹೇಳಿದವು.
ಶನಿವಾರ ಭಾರತ ಮತ್ತು ಚೀನಾದ ಹಲವಾರು ಯೋಧರು ಉತ್ತರ ಸಿಕ್ಕಿಂನ ಭಾರತ-ಚೀನಾ
ಗಡಿಯಲ್ಲಿ ಪ್ರಕ್ಷುಬ್ದ ಸನ್ನಿವೇಶವನ್ನು ಎದುರಿಸಿದ್ದರು ಎಂದು ಗುರುತು ಹೇಳಲು ಇಚ್ಛಿಸದ ಇಬ್ಬರು
ಹಿರಿಯ ಅಧಿಕಾರಿಗಳು ನುಡಿದರು.
ಉಭಯ ಪಡೆಗಳ ಮಧ್ಯೆ, ೫೦೦೦ ಮೀಟರುಗಳಿಗೂ ಹೆಚ್ಚು ಎತ್ತರದಲ್ಲಿರುವ ನಾಕು ಲಾ ಸೆಕ್ಟರ್ (ಮುಗುಥಂಗ್ ಗೆ ಮುನ್ನ) ಕಣಿವೆಯ ಸಮೀಪ
ಘರ್ಷಣೆ ನಡೆದಿತ್ತು. ಪರಸ್ಪರ ಹೊಡೆದಾಡಿಕೊಂಡ ಪರಿಣಾಮವಾಗಿ ಈ ಘರ್ಷಣೆಯಲ್ಲಿ ಹಲವಾರು ಸೈನಿಕರು ಗಾಯಗೊಂಡಿದ್ದರು
ಎಂದು ಅಧಿಕಾರಿಯೊಬ್ಬರು ನುಡಿದರು.
‘ನಾಲ್ವರು ಭಾರತೀಯ ಯೋಧರು ಮತ್ತು ಏಳು ಮಂದಿ ಚೀನೀ ಸೈನಿಕರು ಘರ್ಷಣೆಯಲ್ಲಿ
ಗಾಯಗೊಂಡಿದ್ದರು. ಹೋರಾಟದ ಗುಂಪಿನಲ್ಲಿ ಸುಮಾರು ೧೫೦ ಸೈನಿಕರಿದ್ದರು ಎಂದು ಇನ್ನೊಬ್ಬ ಅಧಿಕಾರಿ ಹೇಳಿದರು.
ಸ್ಥಳೀಯ ಮಟ್ಟದಲ್ಲೇ ಮುಖಾಮುಖಿಯನ್ನು ನಿವಾರಿಸಿಕೊಳ್ಳಲಾಯಿತು ಎಂದು
ಅವರು ನುಡಿದರು.
ನಾಕು ಲಾ ಪ್ರದೇಶವು ಪರಂಪರಾಗತವಾಗಿ ಮುಖಾಮುಖಿ ಸಂಭವಿಸುವ ಸ್ಥಳವಲ್ಲ
ಎಂದು ನಿವೃತ್ತ ಉನ್ನತ ಕಮಾಂಡರ್ ಒಬ್ಬರು ಹೇಳಿದರು.
೨೦೧೯ರಲ್ಲಿ ಭಾರತ ಮತ್ತು ಚೀನೀ ಸೈನಿಕರ ಮಧ್ಯೆ ಪೂರ್ವ ಲಡಾಖ್‌ನ ಪ್ಯಾಂಗಾಂಗ್ ಟ್ಸೊ ಲೇಕ್ ದಂಡೆಯಲ್ಲಿ ಘರ್ಷಣೆ ಸಂಭವಿಸಿತ್ತು. ಉಭಯ ಸೇನೆಗಳ ನಡುವಣ ಮಾತುಕತೆಗಳ ಮೂಲಕ ಈ ಬಿಕ್ಕಟ್ಟನ್ನು ಇತ್ಯರ್ಥ ಪಡಿಸಿಕೊಳ್ಳಲಾಗಿತ್ತು.
ಸಿಕ್ಕಿಮ್‌ಗೆ ಸಮೀಪದ ಡೊಕ್ಲಾಮ್‌ನಲ್ಲಿ ೨೦೧೭ರ ಜೂನ್ ೧೬ರಿಂದ ೭೩ ದಿನಗಳ ಕಾಲ ಭಾರತ ಮತ್ತು ಚೀನೀ ಪಡೆಗಳು ಅತೀ ದೀರ್ಘ ಕಾಲ ಮುಖಾಮುಖಿಯಾಗಿದ್ದವು. ಚೀನೀ ಸೇನೆಯು ವಿವಾದಿತ ಸ್ಥಳದಲ್ಲಿ ನಿರ್ಮಿಸುತ್ತಿದ್ದ ರಸ್ತೆಯನ್ಹು ಭಾರತೀಯ ಪಡೆಗಳು ತಡೆದಾಗ ಈ ಘರ್ಷಣೆ ನಡೆದಿತ್ತು. ಬಳಿಕ ಆಗಸ್ಟ್ ೨೮ರಂದು ಈ ಬಿಕ್ಕಟ್ಟು ಇತ್ಯರ್ಥಗೊಂಡಿತ್ತು.
No comments:
Post a Comment