Saturday, May 30, 2020

‘ಇಂಡಿಯಾ’ ಅಲ್ಲ ‘ಭಾರತ’ ಅಥವಾ ‘ಹಿಂದೂಸ್ಥಾನ’

ಇಂಡಿಯಾ ಅಲ್ಲ ಭಾರತ ಅಥವಾ ಹಿಂದೂಸ್ಥಾನ

ಸುಪ್ರೀಂನಲ್ಲಿ ಸಂವಿಧಾನ ತಿದ್ದುಪಡಿ ಕೋರಿಕೆ ಅರ್ಜಿ

ನವದೆಹಲಿ: ಇಂಡಿಯಾ ಪದದ ಬದಲಿಗೆ ಭಾರತ ಅಥವಾ ಹಿಂದೂಸ್ಥಾನ ಪದವನ್ನು ಬಳಸಲು ಸಂವಿಧಾನ ತಿದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂಬುದಾಗಿ ಕೋರಿದ ಅರ್ಜಿಯೊಂದನ್ನು ಸುಪ್ರೀಂಕೋರ್ಟ್  ಜೂನ್ ೨ರಂದು ಆಲಿಸಲಿದೆ.

ಇಂಡಿಯಾ ಬದಲಿಗೆ ಭಾರತ ಅಥವಾ ಹಿಂದೂಸ್ಥಾನ ಪದ ಬಳಕೆಯು ನಮ್ಮ ರಾಷ್ಟ್ರೀಯತೆ ಬಗ್ಗೆ ಹೆಮ್ಮೆಯನ್ನು ಸ್ಫುರಿಸುತ್ತದೆ ಎಂದು ಅರ್ಜಿ ಪ್ರತಿಪಾದಿಸಿದೆ.

ಹೆಸರು ಮತ್ತು ಒಕ್ಕೂಟದ ಪ್ರದೇಶದ ಜೊತೆ ವ್ಯವಹರಿಸುವ ಸಂವಿಧಾನದ ೧ನೇ ಪರಿಚ್ಛೇದಕ್ಕೆ ತಿದ್ದುಪಡಿ ತರಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಮತ್ತು ತನ್ಮೂಲಕ, ಇಂಡಿಯಾ ಪದ ಉಲ್ಲೇಖವಾಗುವ ಎಲ್ಲ ಕಡೆ ಅದರ ಬದಲಿಗೆ ಭಾರತ ಅಥವಾ ಹಿಂದೂಸ್ಥಾನ ಪದ ಬಳಕೆಯಾಗಬೇಕು ಎಂದು ಅರ್ಜಿ ಹೇಳಿದೆ.

ಅರ್ಜಿಯು ನಗರದಲ್ಲಿ 2020 ಮೇ  29ರ ಶುಕ್ರವಾರ ವಿಚಾರಣೆಗಾಗಿ ಪಟ್ಟಿಯಾಗಿತ್ತು. ಆದರೆ ಭಾರತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎಸ್ ಬೋಬ್ಡೆ ಅವರು ಲಭ್ಯರಿಲ್ಲದ ಕಾರಣ ಅದನ್ನು ಪಟ್ಟಿಯಿಂದ ಕಿತ್ತು ಹಾಕಲಾಯಿತು.

ಸುಪ್ರೀಂಕೋರ್ಟಿನ ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿರುವ ನೋಟಿಸ್ ಪ್ರಕಾರ ಇದೀಗ ವಿಷಯವನ್ನು ಜೂನ್ ೨ರಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರು ಇರುವ ಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡಲಾಗುವುದು.

ದೆಹಲಿ ಮೂಲದ ವ್ಯಕ್ತಿಯೊಬ್ಬರು ಅರ್ಜಿಯನ್ನು ಸಲ್ಲಿಸಿದ್ದು, ತಿದ್ದುಪಡಿಯು ನಾಗರಿಕರಿಗೆ ವಸಾಹತುಶಾಹಿ ಭೂತಕಾಲದಿಂದ ರಾಷ್ಟವು ಹೊರಕ್ಕೆ ಬಂದಿದೆ ಎಂದು ನಾಗರಿಕರಿಗೆ ಖಾತರಿ ನೀಡುವುದು ಎಂದು ಪ್ರತಿಪಾದಿಸಿದ್ದಾರೆ.

ಇಂಗ್ಲಿಷ್ ಹೆಸರನ್ನು ಕಿತ್ತು ಹಾಕುವುದು ಸಾಂಕೇತಿಕವಾಗಿದ್ದರೂ, ಅದು ವಿಶೇಷವಾಗಿ ಭವಿಷ್ಯದ ತಲೆಮಾರುಗಳಿಗೆ ನಮ್ಮ ರಾಷ್ಟ್ರೀಯತೆಯ ಬಗ್ಗೆ ಹೆಮ್ಮೆಯನ್ನು ಮೂಡಿಸುವುದು. ವಾಸ್ತವವಾಗಿ ಇಂಡಿಯಾ ಪದದ ಬಳಕೆಯ ಬದಲು ಭಾರತ ಪದ ಬಳಕೆಯು ನಮ್ಮ ಪೂರ್ವಜರು ನಡೆಸಿದ ಸ್ವಾತಂತ್ರ್ಯ ಹೋರಾಟಕ್ಕೆ ನ್ಯಾಯ ಒದಗಿಸುತ್ತದೆ ಎಂದು ಅರ್ಜಿ ಪ್ರತಿಪಾದಿಸಿದೆ.

ಆಗಿನ ಸಂವಿಧಾನದ  ಕರಡಿನ ಪರಿಚ್ಛೇದ ೧ಕ್ಕೆ ಸಂಬಂಧಿಸಿದಂತೆ ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಯನ್ನು ಉಲ್ಲೇಖಿಸಿದ ಅರ್ಜಿ, ಕಾಲದಲ್ಲಿ ಕೂಡಾ ದೇಶಕ್ಕೆ ಭಾರತ ಅಥವಾ ಹಿಂದೂಸ್ಥಾನ ಎಂಬುದಾಗಿ ಹೆಸರು ಇರಿಸಬೇಕೆಂಬ ಪ್ರಬಲ ಅಲೆ ಇತ್ತು ಎಂದು ಹೇಳಿದೆ.

ಆದಾಗ್ಯೂ, ವಿಶೇಷವಾಗಿ ಭಾರತೀಯ ಸಂಸ್ಕೃತಿಯ ಸ್ಫೂರ್ತಿಗೆ ಅನುಗುಣವಾಗಿ ನಮ್ಮ ನಗರಗಳ ಮರುನಾಮಕರಣ ಮಾಡುತ್ತಿರುವ ನಾವು, ದೇಶದ ಮೂಲ ಮತ್ತು ಅಧಿಕೃತ ಹೆಸರಾಗಿರುವ ಭಾರvವನ್ನು ಇರಿಸುವ ಮೂಲಕ ರಾಷ್ಟ್ರವನ್ನು ಗುರುತಿಸಲು ಇದು ಸಕಾಲವಾಗಿದೆ ಎಂದೂ ಅರ್ಜಿ ಹೇಳಿದೆ.


No comments:

Advertisement